KSRTC Strike: ಡಿ 31 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಸಾರಿಗೆ ನಿಗಮ ನೌಕರರು, ಬಾಕಿಯಿದೆ ಶಕ್ತಿ ಯೋಜನೆಯ 1,800 ಕೋಟಿ
ಒಂದು ಕಡೆ ಸರ್ಕಾರ ಶಕ್ತಿ ಯೋಜನೆಯ ಬಾಕಿ ನೀಡುತ್ತಿಲ್ಲ. ಮತ್ತೊಂದು ಕಡೆ ಬಸ್ ಪ್ರಯಾಣ ದರವನ್ನೂ ಏರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದ ಮತ್ತೊಂದು ಕಡೆ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ನೌಕರರಿಗೂ ಸಂಬಳ ನೀಡಲು ಸಾರಿಗೆ ನಿಗಮಗಳು ಹೆಣಗಾಡುತ್ತಿವೆ.
ಬೆಂಗಳೂರು: ಕರ್ನಾಟಕ ಸರ್ಕಾರವು ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ ನಂತರ ರಾಜ್ಯ ಸರ್ಕಾರ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಸುಮಾರು 1,800 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. 2023-2024 ನೇ ಸಾಲಿನ 1,180.62 ಕೋಟಿ ರೂ ಮತ್ತು ಪ್ರಸಕ್ತ ಸಾಲಿನ ನವೆಂಬರ್ ತಿಂಗಳವರೆಗಿನ 579.19 ಕೋಟಿ ರೂ ಬಾಕಿ ಉಳಿದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) 452.61 ಕೋಟಿ ರೂ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 205.43 ಕೋಟಿ ರೂ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 283.65 ಕೋಟಿ ರೂ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 238.65 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
2023 ರ ಜೂನ್ 11 ರಂದು ಶಕ್ತಿ ಯೋಜನೆ ಆರಂಭವಾಗಿದೆ. ಈವರೆಗೆ 350 ಕೋಟಿ ಫಲಾನುಭವಿ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿದ್ದಾರೆ. ಕೆಎಸ್‌ಆರ್‌ಟಿಸಿ 2023 ರ ಏಪ್ರಿಲ್‌ನಿಂದ 2024 ರ ಮಾರ್ಚ್‌ವರೆಗೆ 3995.77 ಕೋಟಿ ರೂ, ಬಿಎಂಟಿಸಿ 2035.46 ಕೋಟಿ ರೂ, ವಾಯುವ್ಯ ಸಾರಿಗೆ ನಿಗಮ 2,342.01 ಕೋಟಿ ರೂ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ 2,291.84 ಕೋಟಿ ರೂ. ಆದಾಯ ಸಂಗ್ರಹಿಸಿವೆ. ಒಟ್ಟಾರೆ ಈ ನಾಲ್ಕೂ ನಿಗಮಗಳು 10,665.08 ಕೋಟಿ ರೂ ಆದಾಯ ಗಳಿಸಿವೆ. ಒಂದು ಕಡೆ ಸರ್ಕಾರ ಶಕ್ತಿ ಯೋಜನೆಯ ಬಾಕಿ ನೀಡುತ್ತಿಲ್ಲ. ಮತ್ತೊಂದು ಕಡೆ ಬಸ್ ಪ್ರಯಾಣ ದರವನ್ನೂ ಏರಿಕೆ ಮಾಡಲೂ ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದ ಮತ್ತೊಂದು ಕಡೆ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ನೌಕರರಿಗೂ ಸಂಬಳ ನೀಡಲು ಸಾರಿಗೆ ನಿಗಮಗಳು ಹೆಣಗಾಡುತ್ತಿವೆ.
ಮುಷ್ಕರದ ನಿರ್ಧಾರಕ್ಕೆ ಬಂದ ಸಾರಿಗೆ ನೌಕರ
ಸಂಬಳ ಹೆಚ್ಚಿಸಬೇಕು ಮತ್ತು 38 ತಿಂಗಳ ಬಾಕಿ ನೀಡುವಂತೆ ನೌಕರರು ಡಿಸೆಂಬರ್ 31 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ. ಆದರೆ ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿರುವಂತೆ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಪ್ರಕಾರವೇ ಸಾರಿಗೆ ನಿಗಮಗಳು ಸರ್ಕಾರ ಬಿಡುಗಡೆ ಮಾಡಿದಾಗ ಅನುದಾನ ಪಡೆದುಕೊಳ್ಳಬೇಕು ಎಂದು ನಿರೀಕ್ಷಿಸುತ್ತಿದೆ. ಇದರಿಂದ ನಿಗಮಗಳಿಗೆ ಕಷ್ಟವಾಗುತ್ತಿದೆ. ಸಾರಿಗೆ ನಿಗಮಗಳಲ್ಲಿ ಪ್ರಯಾಣಿಸುವವರ ಸಂಖ್ಯೆ 85 ಲಕ್ಷದಿಂದ 1.16 ಕೋಟಿಗೆ ಹೆಚ್ಚಳವಾಗಿದೆ. ಡೀಸೆಲ್ ಸೇರಿದಂತೆ ಇತರ ಹೆಚ್ಚುವರಿ ವೆಚ್ಚಗಳಿಲ್ಲದೆ ಸಾರಿಗೆ ನಿಗಮಗಳು ಹೆಚ್ಚು ಟ್ರಿಪ್‌ಗಳನ್ನು ಮಾಡುತ್ತಿವೆ ಮತ್ತು ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತಿವೆ. ಹೆಚ್ಚುವರಿ ವೆಚ್ಚವನ್ನು ಪಡೆದುಕೊಳ್ಳಲು ಫಾರ್ಮುಲಾವೊಂದನ್ನು ರೂಪಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 5,800 ಕೋಟಿ ರೂ ಒದಗಿಸಲಾಗಿದೆ ಮತ್ತು ಪ್ರತಿ ತಿಂಗಳೂ ಪಾವತಿ ಮಾಡಲಾಗುತ್ತಿದೆ. ಸ್ಮಾರ್ಟ್ ಕಾರ್ಡ್‌ಗಳನ್ನು ಜಾರಿಗೊಳಿಸಿರುವುದರಿಂದ ಸೋರಿಕೆಯನ್ನು ತಡೆಗಟ್ಟಬಹುದಾಗಿದೆ. ಇದರಿಂದ ಎಷ್ಟು ವೆಚ್ಚವಾಗಬಹುದು ಎಂದು ನಿರ್ಧಿಷ್ಟ ಅಂಕಿ ಅಂಶಗಳು ಲಭ್ಯವಾಗುತ್ತವೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಶಕ್ತಿ ಯೋಜನೆ ಅನುದಾನದ ಮೂಲ
ಶಕ್ತಿ ಯೋಜನೆಗೆ ಸರ್ಕಾರ ಮೂರು ಮೂಲಗಳಿಂದ ಅನುದಾನ ಒದಗಿಸುತ್ತಿದೆ. ಸಾಮಾನ್ಯ ನಿಧಿ, ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಿಂದ ಅನುದಾನ ಒದಗಿಸಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿರುವ ಅನುದಾನ ಸಾಕಾಗುವುದಿಲ್ಲ ಎನ್ನಲಾಗುತ್ತಿದೆ. ಹೆಚ್ಚಿನ ಅನುದಾನ ಕೇಳಲಾಗಿದೆ. ಅದಕ್ಕಾಗಿ ಮುಂದಿನ ಬಜೆಟ್ ವರೆಗೆ ಕಾಯಲೇಬೇಕು ಎಂದೂ ಅವರು ಹೇಳುತ್ತಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಶಕ್ತಿ ಯೋಜನೆಯನ್ನು ಅನ್ವಯಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಸ್ತಾಪಿಸಿದ್ದರಾದರೂ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟಿದೆ.
ವರದಿ: ಮಾರುತಿ ಎಚ್.