logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು

Umesh Kumar S HT Kannada

Oct 28, 2024 08:06 AM IST

google News

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನ ಭಾಗವತರು ಇವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಕುಮಾರ್ ಮೊಗೆಬೆಟ್ಟು,ಕೊಳಗಿ ಕೇಶವ ಹೆಗಡೆ, ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಪುತ್ತಿಗೆ ರಘುರಾಮ ಹೊಳ್ಳ, ಸುರೇಶ್ ಶೆಟ್ಟಿ ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ.

  • ನವೆಂಬರ್ ತಿಂಗಳು ಯಕ್ಷರಂಗದ ಮಟ್ಟಿಗೆ ಬಹುವಿಶೇಷ. ಇದೇ ತಿಂಗಳಲ್ಲಿ ಯಕ್ಷಗಾನ ತಿರುಗಾಟಕ್ಕೆ ಚಾಲನೆ ಸಿಗುವುದು. ದಿನವೂ ಚೆಂಡೆ, ಮದ್ದಳೆ ಸದ್ದು ಕೇಳುವುದು. ಇರಲಿ, ಈಗ 

    ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಕಡಲತೀರದ ಹೆಮ್ಮೆ ಎಂಬಂತೆ ಇರುವ ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರ ಪರಿಚಯ ಮಾಡಿಕೊಟ್ಟಿದ್ದಾರೆ ಮಂಗಳೂರಿನ ಪತ್ರಕರ್ತ ಹರೀಶ್ ಮಾಂಬಾಡಿ.

ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನ ಭಾಗವತರು ಇವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಕುಮಾರ್ ಮೊಗೆಬೆಟ್ಟು,ಕೊಳಗಿ ಕೇಶವ ಹೆಗಡೆ, ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಪುತ್ತಿಗೆ ರಘುರಾಮ ಹೊಳ್ಳ, ಸುರೇಶ್ ಶೆಟ್ಟಿ ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ.
ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಹತ್ತು ಯಕ್ಷಗಾನ ಭಾಗವತರು ಇವರು. ಸಿರಿಬಾಗಿಲು ರಾಮಕೃಷ್ಣ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ದಿನೇಶ್ ಅಮ್ಮಣ್ಣಾಯ, ಪ್ರಸಾದ್ ಕುಮಾರ್ ಮೊಗೆಬೆಟ್ಟು,ಕೊಳಗಿ ಕೇಶವ ಹೆಗಡೆ, ಪಟ್ಲ ಸತೀಶ ಶೆಟ್ಟಿ, ರಾಘವೇಂದ್ರ ಮಯ್ಯ ಹಾಲಾಡಿ, ಪುತ್ತಿಗೆ ರಘುರಾಮ ಹೊಳ್ಳ, ಸುರೇಶ್ ಶೆಟ್ಟಿ ಶಂಕರನಾರಾಯಣ, ರವಿಚಂದ್ರ ಕನ್ನಡಿಕಟ್ಟೆ.

ಮಂಗಳೂರು: ಕರ್ನಾಟಕ ಕರಾವಳಿಯ ಕಡಲತೀರದಲ್ಲಿ ನವೆಂಬರ್ ಬಂತೆಂದರೆ ದಿನವೂ ಚೆಂಡೆ, ಮದ್ದಳೆ ಸದ್ದು. ಸುಶ್ರಾವ್ಯವಾದ ಭಾಗವತಿಕೆಗೆ ಮಾರುಹೋದವರು ಹಲವರು. ಯಕ್ಷಗಾನದಲ್ಲಿ ದಕ್ಷಿಣ ಭಾಗಕ್ಕೆ ತೆಂಕು, ಉತ್ತರ ಭಾಗಕ್ಕೆ ಬಡಗು ಎಂಬ ತಿಟ್ಟುಗಳಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಭಯ ತಿಟ್ಟುಗಳಿಗೂ ಅಭಿಮಾನಿಗಳಿದ್ದಾರೆ. ಪ್ರಸಿದ್ಧಿ ಪಡೆದ ಈ ತಲೆಮಾರಿನ ಭಾಗವತರ ಪೈಕಿ ಹಲವರಿದ್ದಾರೆ. ಕರ್ನಾಟಕ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ನಮ್ಮ ಇತಿಮಿತಿಯೊಳಗೆ ಆಯ್ದ ವೃತ್ತಿಪರರು ಮತ್ತು ಈಗಲೂ ಭಾಗವತಿಕೆ ಮಾಡುತ್ತಿರುವ 10 ಭಾಗವತರ ಪರಿಚಯವನ್ನಷ್ಟೇ ಇಲ್ಲಿ ಕೊಡಲಾಗಿದೆ.

ದಿನೇಶ್ ಅಮ್ಮಣ್ಣಾಯ

ತೆಂಕುತಿಟ್ಟಿನ ರಸರಾಗಚಕ್ರವರ್ತಿ ಯಾರೆಂದು ಕೇಳಿದರೆ, ಅಭಿಮಾನಿಗಳು ದಿನೇಶ್ ಅಮ್ಮಣ್ಣಾಯರಲ್ಲದೆ ಮತ್ತಿನ್ಯಾರು ಎಂದು ಹೇಳುತ್ತಾರೆ. ಹಿರಿಯರು, ಕಿರಿಯರೆನ್ನದೆ ಸರ್ವವರ್ಗಗಳ ಅಭಿಮಾನಿಗಳನ್ನು ಹೊಂದಿರುವ ದಿನೇಶ್ ಅಮ್ಮಣ್ಣಾಯರು ತುಳು ಪ್ರಸಂಗಗಳ ವಿಜೃಂಭಣೆಯ ಸಂದರ್ಭ ಇವರೂ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ತೆಂಕುತಿಟ್ಟಿನ ತುಳು ಯಕ್ಷಗಾನ ಪರಂಪರೆಯನ್ನು ಬೆಳೆಸಿರುವ ದಾಮೋದರ ಮಂಡೆಚ್ಚರ ಶಿಷ್ಯರಾಗಿರುವ ಅಮ್ಮಣ್ಣಾಯ, ಯಕ್ಷಗಾನ ಕಲಾಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ. ಪುತ್ತೂರು ಮೇಳದಲ್ಲಿ ಚಂಡೆ, ಮದ್ದಳೆ ವಾದಕರಾಗಿ ಸೇರಿ, ಅಲ್ಲೇ ಭಾಗವತರಾಗಿ ಮಿಂಚಿ ಬಳಿಕ ಕರ್ನಾಟಕ ಮೇಳ ಸೇರಿ ತುಳು ಪ್ರಸಂಗಗಳನ್ನು ಮೆರೆಸಿದರು. ಕಾಡಮಲ್ಲಿಗೆ, ಕಚ್ಚೂರ ಮಾಲ್ದಿ, ಪಟ್ಟದ ಪದ್ಮಲೆ ಪ್ರಸಂಗಗಳು ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಸೂಪರ್ ಹಿಟ್ ಆಗಿದ್ದವು. ಪೌರಾಣಿಕ ಪ್ರಸಂಗವಾದ ಮಾನಿಷಾದ ಪ್ರಸಂಗವನ್ನು ಮನೆಮಾತಾಗಿಸಿದರು. ಅಕ್ಷಯಾಂಬರ ಪ್ರಸಂಗವಿದ್ದರೆ, ಅಮ್ಮಣ್ಣಾಯರು ಬೇಕೇ ಬೇಕು. ಸತ್ಯಹರಿಶ್ಚಂದ್ರ ಪ್ರಸಂಗದ ಹಾಡುಗಳು ಅಮ್ಮಣ್ಣಾಯರ ಧ್ವನಿಗೆ ಹೊಂದಿಕೊಳ್ಳುತ್ತವೆಯೋ ಎಂಬಂತಿದೆ. ಹೀಗೆ ಹಲವು ಅನುಭವಿಗಳೊಂದಿಗೆ ವೇದಿಕೆ ಹಂಚಿಕೊಂಡ ಅಮ್ಮಣ್ಣಾಯರು ಹಲವು ಮೇಳಗಳಲ್ಲಿ ತಿರುಗಾಟ ನಡೆಸಿ, ಇದೀಗ ಹವ್ಯಾಸಿಯಾಗಿ ಭಾಗವತಿಕೆ ಮಾಡುತ್ತಿದ್ದಾರೆ.

ಮಾನಿಷಾದ ಪ್ರಸಂಗದ ಹಾಡನ್ನು ಆಲಿಸುವಿರಾದರೆ ಇಲ್ಲಿದೆ ದಿನೇಶ್ ಅಮ್ಮಣ್ಣಾಯ ಅವರ ಅದ್ಭುತ ಸಿರಿಕಂಠದ ಹಾಡು..

ಪುತ್ತಿಗೆ ರಘುರಾಮ ಹೊಳ್ಳ

ತೆಂಕುತಿಟ್ಟಿನ ಭಾಗವತಹಂಸ ಎಂದೇ ಖ್ಯಾತರಾಗಿರುವ ಪುತ್ತಿಗೆ ರಘುರಾಮ ಹೊಳ್ಳರು ಸುದೀರ್ಘ ಕಾಲ ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ಮಿಂಚಿದವರು. ಈಗ ಹವ್ಯಾಸಿಯಾಗಿ ಭಾಗವತಿಕೆ ಮಾಡುತ್ತಿದ್ದಾರೆ. ತಂದೆ ಪುತ್ತಿಗೆ ರಾಮಕೃಷ್ಣ ಜೋಯಿಸರು ಶ್ರೀ ಧರ್ಮಸ್ಥಳ ಮೇಳವನ್ನು ನಾಲ್ಕು ವರ್ಷಗಳ ಕಾಲ ನಡೆಸಿದವರು. ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ವ್ಯವಸಾಯ ಮಾಡುವ ಅವಕಾಶ ರಘುರಾಮ ಹೊಳ್ಳರಿಗೆ ದೊರೆಯಿತು. ಕದ್ರಿ ಮೇಳದಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟ, ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹಾಗೂ ಹಿರಿಯ ಕಲಾವಿದರ ಒಡನಾಟದಿಂದ ತನ್ನದೇ ಶೈಲಿಯ ಸಾಂಪ್ರದಾಯಿಕ ಭಾಗವತಿಕೆಯಿಂದ ಗುರುತಿಸಲ್ಪಟ್ಟ ಹೊಳ್ಳರು, ಎಳವೆಯಲ್ಲಿ ಸಂಗೀತ ಕಲಿತಿದ್ದರು. ಕದ್ರಿ ಮೇಳದ ತಿರುಗಾಟದಲ್ಲಿ ಗೆಜ್ಜೆದ ಪೂಜೆ ಪ್ರಸಂಗದ ಹಾಡುಗಳು ರಘುರಾಮ ಹೊಳ್ಳರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ಕಳೆದ 29 ವರ್ಷಗಳಿಂದ ವ್ಯವಸಾಯ ಮಾಡಿದ್ದರು. ಮೊದಲು ಕಡತೋಕಾ ಶ್ರೀ ಮಂಜುನಾಥ ಭಾಗವತರ ಜತೆ ತಿರುಗಾಟ ನಡೆಸಿ, ಅವರ ನಿವೃತ್ತಿಯ ನಂತರ ಮುಖ್ಯ ಭಾಗವತರಾಗಿದ್ದರು.

ಗೆಜ್ಜೆದ ಪೂಜೆ ಪ್ರಸಂಗದಲ್ಲಿ ರಘುರಾಮ ಹೊಳ್ಳರ ಭಾಗವತಿಕೆಯ ಸಿರಿವಂತಿಕೆ ನೀವೂ ನೋಡಿ.

ಸಿರಿಬಾಗಿಲು ರಾಮಕೃಷ್ಣ ಮಯ್ಯ

1967ರಲ್ಲಿ ಕಾಸರಗೋಡು ಜಿಲ್ಲೆಯ ಮಾಯಿಪ್ಪಾಡಿ ಸಮೀಪದ ಸಿರಿಬಾಗಿಲು ವೆಂಕಪ್ಪಯ್ಯ ಮತ್ತು ಪಾರ್ವತಿ ಅಮ್ಮ ದಂಪತಿಗಳಿಗೆ ಪುತ್ರರಾಗಿ ಜನಿಸಿದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಪರಂಪರೆಯನ್ನು ಉಳಿಸಿಕೊಂಡು ಯಕ್ಷಗಾನವನ್ನು ಮುನ್ನಡೆಸುತ್ತಿರುವ ಭಾಗವತ. ಪ್ರಸ್ತುತ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಪ್ರಧಾನ ಭಾಗವತರಾಗಿದ್ದಾರೆ. ತಂದೆ ಹೆಸರಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಮೂಲಕ ಹಲವು ಯಕ್ಷಗಾನ ಸಂಬಂಧಿ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಸೋದರಮಾವನಾದ ಖ್ಯಾತ ಭಾಗವತಪುತ್ತಿಗೆ ರಘುರಾಮ ಹೊಳ್ಳ ಅವರ ಸೂಚನೆಯಂತೆ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಾಸ ಮಾಡಿದರು. ಕಟೀಲು, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಸುಮಾರು 30 ವರ್ಷಗಳಿಂದ ಧರ್ಮಸ್ಥಳ ಮೇಳದ ಭಾಗವತರಾಗಿದ್ದಾರೆ. ಯಾವುದೇ ಪೌರಾಣಿಕ ಪ್ರಸಂಗವನ್ನು ಆಡಿಸುವ ಸಾಮರ್ಥ್ಯ ಅವರಿಗಿದೆ. ಹಿರಿಯ ತಲೆಮಾರಿನಿಂದ ಹಿಡಿದು ಯುವ ಪ್ರೇಕ್ಷಕರೆಲ್ಲರ ಅಭಿಮಾನವನ್ನು ಗಳಿಸಿಕೊಂಡ ಕೆಲವೇ ಕಲಾವಿದರಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಒಬ್ಬರು.

ಪಟ್ಲ ಸತೀಶ ಶೆಟ್ಟಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ನೂರಾರು ಕಲಾವಿದರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿರುವ ಹಿಮ್ಮೇಳ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಅವರು ಹೊಸ ತಲೆಮಾರಿನ ಸ್ಟಾರ್ ಭಾಗವತರೆನಿಸಿಕೊಂಡಿದ್ದಾರೆ. ಇತ್ತೀಚೆಗೆ ಅಮೆರಿಕಾ ನೆಲದಲ್ಲಿ ಯಶಸ್ವಿ ಪ್ರವಾಸ ಮುಗಿಸಿ ಯಕ್ಷಗಾನದ ಛಾಪು ಮೂಡಿಸಿದ ಹಿರಿಮೆ ಹೊಂದಿರುವ ಪಟ್ಲ, ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ 1978ರಲ್ಲಿ ಪಟ್ಲ ಗುತ್ತು ಮಹಾಬಲ ಶೆಟ್ಟಿ ಮತ್ತು ಲಲಿತ ದಂಪತಿಗಳ ಪುತ್ರನಾಗಿ ಜನಿಸಿದರು. ಪ್ರಸಿದ್ಧ ಹಿಮ್ಮೇಳ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಬಳಿ ಹಿಮ್ಮೇಳ ಭಾಗವತಿಕೆ ಅಭ್ಯಸಿಸಿ ಬಳಿಕ ಕಟೀಲು ಮೇಳ ಸೇರಿ ಬಲಿಪ ನಾರಾಯಣ ಭಾಗವತರ ಮಾರ್ಗದರ್ಶನ ಪಡೆದ ಪಟ್ಲರು, ಹಲವು ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿ ತನ್ನ ವಿಶಿಷ್ಠ ಶೈಲಿಯ ಗಾಯನದ ಮೂಲಕ ಯುವಮನಸ್ಸುಗಳನ್ನು ಯಕ್ಷಗಾನದತ್ತ ತಂದವರು. ಇದೀಗ ಪಾವಂಜೆ ಮೇಳವನ್ನು ನಡೆಸುತ್ತಿದ್ದಾರೆ. ಹಲವಡೆಗಳಲ್ಲಿ ಅಭಿಮಾನಿಗಳಿಂದ ಸನ್ಮಾನಕ್ಕೆ ಭಾಜನರಾದ ಪಟ್ಲ ಸತೀಶ್ ಶೆಟ್ಟಿ, ಯಕ್ಷಗಾನ ಕಲಾವಿದರಿಗೆ ಕೊರೊನಾ ಸಂದರ್ಭ ನೆರವಾದವರು. ಗುಂಪುವಿಮೆ, ವಿದ್ಯಾರ್ಥಿವೇತನ, ಅಶಕ್ತ ಕಲಾವಿದರಿಗೆ ಗೃಹನಿರ್ಮಾಣ ಮೂಲಕ ಕಲಾವಿದರಿಗೆ ನೆರವಾಗುತ್ತಿರುವ ಪಟ್ಲ ಬಹುಬೇಡಿಕೆಯ ಭಾಗವತರೂ ಹೌದು.

ಕೊಳಗಿ ಕೇಶವ ಹೆಗಡೆ

ಉತ್ತರ ಕನ್ನಡದ ಸಿದ್ದಾಪುರ ಸಮೀಪದ ಕೊಳಗಿ ಎಂಬ ಗ್ರಾಮದವರಾದ ಕೇಶವ ಹೆಗಡೆ ಅವರು 1964ರ ಮಾರ್ಚ್‌ 29ರಂದು ಅನಂತ ಹೆಗಡೆ ಹಾಗೂ ಅರುಂಧತಿ ಹೆಗಡೆ ಅವರ ಪುತ್ರರಾಗಿ ಜನಿಸಿದರು. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ ಅವರು,ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದಲ್ಲಿ ಮೂರು ವರ್ಷ ಅಧ್ಯಯನ ಮಾಡಿದರು. ನಾರ್ಣಪ್ಪ ಉಪ್ಪೂರು ಹಾಗೂ ಕೆ.ಪಿ.ಹೆಗಡೆ ಅವರಲ್ಲಿ ಭಾಗವತಿಕೆ ಕಲಿತು ಬಳಿಕ ಕಮಲಶಿಲೆ, ಮುಲ್ಕಿ, ಪಂಚಲಿಂಗ, ಶಿರಸಿ, ಬಚ್ಚಗಾರ, ಸಾಲಿಗ್ರಾಮ, ಕೊಂಡದಕುಳಿ, ಯಾಜಿ ಯಕ್ಷಮಿತ್ರ ಮಂಡಳಿ, ವೀರಾಂಜನೇಯ ಮೇಳದಲ್ಲಿ ತಿರುಗಾಟ ಮಾಡಿ ಪ್ರಧಾನ ಭಾಗವತರಾದರು.

ಕೊಳಗಿ ಶೈಲಿಯನ್ನು ಕಟ್ಟಿಕೊಟ್ಟ ಅವರು. ಯಕ್ಷಗಾನದ ಹಿರಿಯ ಕಲಾವಿದರಾದ ದೇವರು ಹೆಗಡೆ, ಪಿ.ವಿ.ಹಾಸ್ಯಗಾರ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ, ಎಂ.ಎಲ್‌.ಸಾಮಗ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣ ಯಾಜಿ ಸಹಿತ ಹಿರಿಯ ಕಿರಿಯ ಕಲಾವಿದರೊಂದಿಗೆ ಕೆಲಸ ಮಾಡಿದ್ದಾರೆ. ಅವರಿಗೆ ಕರಾವಳಿ ಕೋಗಿಲೆ, ಗಾನ ಗಂಧರ್ವ, ಯಕ್ಷ ಬಸವ, ಗಾನ ಗಂಧರ್ವ, ಯಕ್ಷ ಸಂಗೀತ ಕಲಾಶ್ರೀ, ಕರಾವಳಿ ರತ್ನಾಕರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಸನ್ಮಾನ, ಪ್ರಶಸ್ತಿ, ಗೌರವಗಳು ಸಂದಿವೆ. ಅನಂತ ಹೆಗಡೆ ಕೊಳಗಿ ಯಕ್ಷ ಪ್ರತಿಷ್ಠಾನವನ್ನು ನಡೆಸುತ್ತಿದ್ದಾರೆ.

ರಾಘವೇಂದ್ರ ಮಯ್ಯ ಹಾಲಾಡಿ

ರಾಘವೇಂದ್ರ ಮಯ್ಯ ಹಾಲಾಡಿ ಬಡಗುತಿಟ್ಟಿನ ಯಕ್ಷಗಾನದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಕಾಳಿಂಗ ನಾವಡರ ನೆನಪಿನಲ್ಲಿ ಯಕ್ಷಗಾನ ಕಲೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲಿಯೇ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದರು.

ಹಿರಿಯ ಯಕ್ಷಗಾನ ಕಲಾವಿದ ನಾರಣಪ್ಪ ಉಪ್ಪೂರ್ ಅವರ ಪ್ರತಿಭೆ ಅವರನ್ನು ಆಕರ್ಷಿಸಿತು. 9ನೇ ತರಗತಿಯಲ್ಲಿರುವಾಗಲೇ ಅವರು ಉಪ್ಪೂರಿನಲ್ಲಿ ಯಕ್ಷಗಾನ ತರಬೇತಿ ಪಡೆದರು. ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತರು. ಅವರು ಉಪ್ಪೂರ ರೊಂದಿಗೆ ಅಮೃತೇಶ್ವರ ಮೇಳದಲ್ಲಿ ಸಂಗೀತಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಅವರು ಮಿಂಚಿದ್ದು, ಬಡಗಿನ ಜನಪ್ರಿಯ ಭಾಗವತರಾಗಿ ಗುರುತಿಸಿಕೊಂಡಿದ್ದಾರೆ.

ರಾಘವೇಂದ್ರ ಆಚಾರ್ಯ ಜನ್ಸಾಲೆ

1983ರಲ್ಲಿ ಜನಿಸಿದ ರಾಘವೇಂದ್ರ ಆಚಾರ್ಯ ಜನ್ಸಾಲೆ ಬಾಲ್ಯದಲ್ಲೇ ಕಾಳಿಂಗ ನಾವಡರ ಹಾಡುಗಳಿಗೆ, ಸ್ವರಕ್ಕೆ ಮಾರುಹೋದವರು. 9ನೇ ತರಗತಿವರೆಗೆ ಶಾಲಾ ಶಿಕ್ಷಣ ಮಾಡಿದ ಬಳಿಕ ಉಡುಪಿಯಲ್ಲಿ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ ಅವರಲ್ಲಿ ನಾಟ್ಯಾಭ್ಯಾಸ ಕಲಿತು, ಗೋರ್ಪಾಡಿ ವಿಠಲ ಪಾಟೀಲರಲ್ಲಿ ತಾಳಗತಿ, ಹಾಡುಗಾರಿಕೆ ಕಲಿತರು. ಹಾರ್ಯಾಡಿ ಸತೀಶ ಕೆದ್ಲಾಯರಿಂದ ಸಭಾ ಲಕ್ಷಣ, ಪೂರ್ವರಂಗವನ್ನು ಕಲಿತರು. ಮುಂದೆ ಎರಡು ವರ್ಷ ಹವ್ಯಾಸಿ ಭಾಗವತರಾಗಿ ಸೇವೆ ಸಲ್ಲಿಸಿ, ಮಾರಣಕಟ್ಟೆ ಮೇಳದಲ್ಲಿ ಸಂಗೀತಗಾರರಾಗಿ, ಸಹಭಾಗವತರಾಗಿ, ಪ್ರಧಾನ ಭಾಗವತರಾಗಿ ತಿರುಗಾಟ ಮಾಡಿದರು. ಬಳಿಕ ಪೆರ್ಡೂರು ಮೇಳದಲ್ಲಿ ತಿರುಗಾಟ ಆರಂಭಿಸಿ ಜನಮೆಚ್ಚುಗೆ ಗಳಿಸಿದರು. ಯಕ್ಷಗಾನ ರಂಗದಲ್ಲಿ 25 ವರ್ಷಗಳ ತಿರುಗಾಟ ಮಾಡಿರುವ ಜನ್ಸಾಲೆ, ಗಾನವೈಭವ ಮೂಲಕ ಜನಪ್ರಿಯ. ತಮ್ಮದೇ ಆದ ಅಭಿಮಾನ ಬಳಗವನ್ನು ಹೊಂದಿರುವ ಜನ್ಸಾಲೆ ಕಂಠಸಿರಿಯನ್ನೇ ಕೇಳಲು ಪ್ರದರ್ಶನಕ್ಕೆ ಬರುವವರಿದ್ದಾರೆ.

ಪ್ರಸಾದ್ ಕುಮಾರ್ ಮೊಗೆಬೆಟ್ಟು

ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿರುವ ಪ್ರಸಾದ್ ಕುಮಾರ್ ಮೊಗೆಬೆಟ್ಟು ಬಡಗುತಿಟ್ಟಿನ ಶಾಸ್ತ್ರೀಯ ಶೈಲಿಯ ಭಾಗವತರಾಗಿ, ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಭಾಗವತರಾಗಿ ಮಿಂಚಿದ ಹಿರಿಮೆಯುಳ್ಳವರು. ಯಕ್ಷರಂಗದ ಸವ್ಯಸಾಚಿಯಾಗಿರುವ ಇವರು, ಯಕ್ಷಗುರು, ಯಕ್ಷಕವಿ, ಪ್ರಸಂಗಕರ್ತ, ನಿರ್ದೇಶಕ ಭಾಗವತರಾಗಿ ಪ್ರಸಿದ್ಧರು. ತಂದೆ ಮೊಗೆಬೆಟ್ಟು ಹರಿಯ ನಾಯ್ಕ ಪ್ರೇರಣೆ, ಕಂದಾವರ ರಘುರಾಮ ಶೆಟ್ಟರ ಪ್ರಸಂಗಗಳ ಪ್ರಭಾವಗಳಿಂದ ಪದ್ಯರಚನೆ, ಕಾಳಿಂಗ ನಾವಡರ ಪದ್ಯರಚನೆ, ಪ್ರಸಂಗಗಳೂ ಪ್ರೇರಣೆಯಾಗಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಇಂದು ಬಹುಬೇಡಿಕೆಯ ಪ್ರಸಂಗಕರ್ತರೂ ಆಗಿದ್ದಾರೆ. 1998ರಲ್ಲಿ ಡಾ. ಶಿವರಾಮ ಕಾರಂತ ನಿರ್ದೇಶನದ ಯಕ್ಷರಂಗ ಹೆಸರಿನ ಯಕ್ಷಗಾನ ಬ್ಯಾಲೆಯಲ್ಲಿ ಭಾಗವತರಾಗಿ, ವೇಷಧಾರಿಯಾಗಿ ಭಾಗವಹಿಸಿದವರು.

ಸುರೇಶ್ ಶೆಟ್ಟಿ ಶಂಕರನಾರಾಯಣ

ಬಡಗು ತಿಟ್ಟಿನ ಪ್ರಮುಖ ಭಾಗವತರಲ್ಲಿ ಓರ್ವರಾದ ಸುರೇಶ್ ಶೆಟ್ಟಿ ಶಂಕರನಾರಾಯಣ ರಸಗಾನವಿಶಾರದ ಎನಿಸಿಕೊಂಡವರು. 1967ರಲ್ಲಿ ಶಿವರಾಮ ಶೆಟ್ಟಿ, ಕುಸುಮಾವತಿ ದಂಪತಿ ಪುತ್ರನಾಗಿ ಜನಿಸಿದ ಸುರೇಶ್ ಶೆಟ್ಟಿ ಬಾಲ್ಯದಲ್ಲಿ ವೇಷ ಮಾಡುತ್ತಿದ್ದರೆ, ಬಳಿಕ ಭಾಗವತರಾದರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಹಲವು ದಿಗ್ಗಜರ ಬಳಿ ಅಭ್ಯಾಸ ಮಾಡಿ, ಐರೋಡಿ ಸದಾನಂದ ಹೆಬ್ಬಾರ ನಿರ್ದೇಶನದಲ್ಲಿ ಕೆ.ಪಿ.ಹೆಗಡೆ ಬಳಿ ಭಾಗವತಿಕೆ ಅಭ್ಯಸಿಸಿದರು. ನಂತರ ಕಮಲಶಿಲೆ, ಸಾಲಿಗ್ರಾಮ, ಹಾಲಾಡಿ, ಪೆರ್ಡೂರು ಮೇಳದಲ್ಲಿ ತಿರುಗಾಟ ಮಾಡಿದರು. ಬಳಿಕ ಹಲವು ವರ್ಷ ಅತಿಥಿ ಕಲಾವಿದರಾಗಿ ತಿರುಗಾಟ ಮಾಡುತ್ತಿದ್ದಾರೆ. ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.

ರವಿಚಂದ್ರ ಕನ್ನಡಿಕಟ್ಟೆ

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಗಾನಸುರಭಿ ಎಂಬ ಬಿರುದಿನೊಂದಿಗೆ ಹನುಮಗಿರಿ ಮೇಳದ ಪ್ರಧಾನ ಭಾಗವತರಾಗಿ ಮಿಂಚುತ್ತಿರುವವರು ರವಿಚಂದ್ರ ಕನ್ನಡಿಕಟ್ಟೆ. 20ನೇ ವರ್ಷದಲ್ಲಿ ಭಾಗವತರಾದ ಅವರು ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆಯಲ್ಲಿ ಧರ್ಮಣ್ಣ ಸಾಲ್ಯಾನ್, ಸುಶೀಲಾ ದಂಪತಿ ಪುತ್ರರಾಗಿ 1980ರಲ್ಲಿ ಜನಿಸಿದರು. ಮೊದಲು ಯಕ್ಷಗಾನ ವೇಷ ಹಾಕುತ್ತಿದ್ದವರು, ಶಾಲಾ ಶಿಕ್ಷಕ ಅನಂತಪದ್ಮನಾಭ ಹೊಳ್ಳರ ಬಳಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿತು, ವೇಣೂರು ಸದಾಶಿವ ಕುಲಾಲ್ ಅವರ ಬಳಿ ಹೆಚ್ಚಿನ ನಾಟ್ಯಾಭ್ಯಾಸ ಮಾಡಿದರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸಬ್ಬಣಕೋಡಿ ಕೃಷ್ಣ ಭಟ್ ಬಳಿ ನಾಟ್ಯದ ಪರಿಪೂರ್ಣತೆ ಪಡೆದು, ಸುರತ್ಕಲ್ ಮೇಳಕ್ಕೆ ವೇಷಧಾರಿಯಾಗಿ ಸೇರಿದರು. ಅವರ ಕಂಠವನ್ನು ಗುರುತಿಸಿದ ಸುರತ್ಕಲ್ ಮೇಳದ ಭಾಗವತ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಭಾಗವತಿಕೆ ಕಲಿಸಿ, ಪೂರ್ಣಪ್ರಮಾಣದ ಭಾಗವತರನ್ನಾಗಿಸಿದರು. ಬಳಿಕ ಕನ್ನಡಿಕಟ್ಟೆಯವರು ಪದ್ಯಾಣ ಅವರ ಜೊತೆ ಗುರುತಿಸಿಕೊಂಡು ಪ್ರಸಿದ್ಧರಾದರು. ಹಲವು ಪುರಸ್ಕಾರಗಳು ಅವರಿಗೆ ಸಂದಿವೆ. ತನ್ನ ಮಧುರ ಕಂಠದಿಂದ ಕನ್ನಡಿಕಟ್ಟೆಯವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

(ಲೇಖನ- ಹರೀಶ್ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ