logo
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ 2024; ಕೈತಪ್ಪಿದ್ದ ದಕ್ಷಿಣ ಕನ್ನಡಕ್ಕೆ ಗ್ಯಾರಂಟಿ ಅಸ್ತ್ರ, ಕೇಸರಿಕೋಟೆ ಉಳಿಸುವ ಹೊಣೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಗಲಿಗೆ

ಲೋಕಸಭಾ ಚುನಾವಣೆ 2024; ಕೈತಪ್ಪಿದ್ದ ದಕ್ಷಿಣ ಕನ್ನಡಕ್ಕೆ ಗ್ಯಾರಂಟಿ ಅಸ್ತ್ರ, ಕೇಸರಿಕೋಟೆ ಉಳಿಸುವ ಹೊಣೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೆಗಲಿಗೆ

Umesh Kumar S HT Kannada

Mar 16, 2024 11:23 AM IST

ಲೋಕಸಭೆ ಚುನಾವಣೆ 2024; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣದಲ್ಲಿದ್ದಾರೆ. (ಎಡ ಚಿತ್ರ ಕೆಳಭಾಗದ್ದು), ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್‌ (ಬಲ ಚಿತ್ರ ಕೆಳಭಾಗದ್ದು) ಹೆಸರು ಚಾಲ್ತಿಯಲ್ಲಿದೆ. ಮೇಲಿನ ಸಾಲಿನಲ್ಲಿರುವುದು ಎಡದಿಂದ ಬಲಕ್ಕೆ - ಅರುಣ್‌ ಪುತ್ತಿಲ, ಸತ್ಯಜಿತ್ ಸುರತ್ಕಲ್‌, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌, ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ.

  • ಲೋಕಸಭಾ ಚುನಾವಣೆ 2024ರ ಹಣಾಹಣಿಗೆ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರ ಸಜ್ಜಾಗತೊಡಗಿದೆ. ದಶಕಗಳ ಹಿಂದೆ ಕೈ ತಪ್ಪಿದ್ದ ದಕ್ಷಿಣ ಕನ್ನಡಕ್ಕೆ ಗ್ಯಾರಂಟಿ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಸಜ್ಜಾಗಿದೆ. ಕೇಸರಿಕೋಟೆ ಉಳಿಸುವ ಹೊಣೆ ಕ್ಯಾಪ್ಟನ್ ಹೆಗಲಿಗೇರಿದೆ. ಇದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವಿಶ್ಲೇಷಣೆ. (ರಾಜಕೀಯ ವಿಶ್ಲೇಷಣೆ: ಹರೀಶ ಮಾಂಬಾಡಿ, ಮಂಗಳೂರು)

ಲೋಕಸಭೆ ಚುನಾವಣೆ 2024; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣದಲ್ಲಿದ್ದಾರೆ. (ಎಡ ಚಿತ್ರ ಕೆಳಭಾಗದ್ದು), ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್‌ (ಬಲ ಚಿತ್ರ ಕೆಳಭಾಗದ್ದು) ಹೆಸರು ಚಾಲ್ತಿಯಲ್ಲಿದೆ. ಮೇಲಿನ ಸಾಲಿನಲ್ಲಿರುವುದು ಎಡದಿಂದ ಬಲಕ್ಕೆ - ಅರುಣ್‌ ಪುತ್ತಿಲ, ಸತ್ಯಜಿತ್ ಸುರತ್ಕಲ್‌, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌, ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ.
ಲೋಕಸಭೆ ಚುನಾವಣೆ 2024; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣದಲ್ಲಿದ್ದಾರೆ. (ಎಡ ಚಿತ್ರ ಕೆಳಭಾಗದ್ದು), ಕಾಂಗ್ರೆಸ್ ಪಕ್ಷದಿಂದ ಪದ್ಮರಾಜ್‌ (ಬಲ ಚಿತ್ರ ಕೆಳಭಾಗದ್ದು) ಹೆಸರು ಚಾಲ್ತಿಯಲ್ಲಿದೆ. ಮೇಲಿನ ಸಾಲಿನಲ್ಲಿರುವುದು ಎಡದಿಂದ ಬಲಕ್ಕೆ - ಅರುಣ್‌ ಪುತ್ತಿಲ, ಸತ್ಯಜಿತ್ ಸುರತ್ಕಲ್‌, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌, ರಮಾನಾಥ ರೈ, ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಂಗಳೂರು: ಪ್ರವಾಸೋದ್ಯಮ, ಕೃಷಿ, ಮೀನುಗಾರಿಕೆ, ಧಾರ್ಮಿಕ ಹಿನ್ನೆಲೆ, ಕಡಲತೀರದ ವೈಶಿಷ್ಟ್ಯಗಳ ಮೂಲಕ ದೇಶ, ವಿದೇಶಗಳ ಗಮನ ಸೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಆವರಿಸಿಕೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಳೆದ 33 ವರ್ಷಗಳಿಂದ ಬಿಜೆಪಿ ಪಾರಮ್ಯ ಸಾಧಿಸಿದೆ. ಅದನ್ನು ಬಗ್ಗುಬಡಿದು ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪರ್ಧೆಗಿಳಿಯುವ ಹುಮ್ಮಸ್ಸಿನಲ್ಲಿದ್ದರೂ ಹೈಕಮಾಂಡ್ ಟಿಕೆಟ್ ನಿರಾಕರಿಸಿ, ಹೊಸಮುಖವಾದ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ಸ್ಪರ್ಧೆಗಿಳಿಸಿದೆ. ಕಾಂಗ್ರೆಸ್ ನ್ಯಾಯವಾದಿ, ಬಿಲ್ಲವ ಮುಖಂಡ ಆರ್.ಪದ್ಮರಾಜ್ ಅವರಿಗೆ ಟಿಕೆಟ್ ನೀಡುವ ನಿರೀಕ್ಷೆಯಲ್ಲಿದೆ. ಹೀಗಾಗಿ ಅಚ್ಚರಿಯ ಫಲಿತಾಂಶ ನೀಡುವ ನಿರೀಕ್ಷೆಯಲ್ಲಿದೆ.

ಬಂಟ, ಬಿಲ್ಲವ ಸಮುದಾಯದವಷ್ಟೇ ಅಲ್ಲ, ಇತರ ಹಿಂದುಳಿದ ಸಮುದಾಯದ ಮತಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಬಿಜೆಪಿ ನರೇಂದ್ರ ಮೋದಿ, ಹಿಂದುತ್ವ, ರಾಮಮಂದಿರ ಹಾಗೂ ಕೇಂದ್ರ ಸರಕಾರದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆಯುವ ಹುಮ್ಮಸ್ಸಿನಲ್ಲಿದ್ದರೆ, ಕಾಂಗ್ರೆಸ್ ಸಾಂಪ್ರದಾಯಿಕ ಮತಗಳನ್ನು ಕಳೆದುಕೊಳ್ಳದೆ, ಬಿಜೆಪಿಯ ಒಳಬೇಗುದಿಯ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಅಲ್ಲದೆ ರಾಜ್ಯ ಸರಕಾರದ ಸಾಧನೆ, ಗ್ಯಾರಂಟಿಗಳು ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕವಾಗಿರುವ ಗ್ಯಾರಂಟಿ ಫಲಾನುಭವಿಗಳ ಬಳಿ ಮತ ಕೇಳುವ ಮೂಲಕ ಕಾಂಗ್ರೆಸ್ ಮತ್ತೆ ಗತಕಾಲದ ವೈಭವವನ್ನು ಮರುಕಳಿಸುವುದಾಗಿ ಹೇಳುತ್ತಿದೆ.

ಥಂಡಾ ಆದಂತಿಲ್ಲ ಬಿಜೆಪಿ ಬಂಡಾಯ

ಬಿಜೆಪಿಯಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತೆ ಸ್ಪರ್ಧೆ ಬಯಸಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಬ್ರಿಜೇಶ್ ಚೌಟ ಟಿಕೆಟ್ ಆಕಾಂಕ್ಷಿಯಾಗಿದ್ದರು. ನಳಿನ್ ಅವರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಹಿಂದು ಮುಖಂಡರಾದ ಸತ್ಯಜಿತ್ ಸುರತ್ಕಲ್ ಮತ್ತು ಅರುಣ್ ಕುಮಾರ್ ಪುತ್ತಿಲ ಅವರೂ ಬಿಜೆಪಿಯಿಂದ ಟಿಕೆಟ್ ಬಯಸಿದ್ದು, ಸಿಗದೇ ಇದ್ದರೆ, ಪ್ರತ್ಯೇಕ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದ್ದರು.

ಇದೀಗ ಬೃಜೇಶ್ ಚೌಟ ಟಿಕೆಟ್ ಪಡೆದ ಬಳಿಕವೂ ಬಿಜೆಪಿಯೊಳಗಿನ ಬಂಡಾಯ ಥಂಡಾ ಆದಂತಿಲ್ಲ. ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆ ಸುದ್ದಿ ಹರಡಿತ್ತಾದರೂ, ಪುತ್ತೂರಲ್ಲೇ ಅವರ ಸೇರ್ಪಡೆಗೆ ವಿರೋಧ ವ್ಯಕ್ತವಾಗಿದೆ. ಸತ್ಯಜಿತ್ ಸುರತ್ಕಲ್ ಅವರ ನಡೆ ಇನ್ನೂ ನಿಗೂಢವಾಗಿದೆ.

ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಅಥವಾ ಯುವ ನ್ಯಾಯವಾದಿ ಆರ್. ಪದ್ಮರಾಜ್ ಕಣಕ್ಕಿಳಿಯುವ ಸಾಧ್ಯತೆ ಇದ್ದು, ಎಲ್ಲರ ಚಿತ್ತ ಉಭಯ ಪಕ್ಷಗಳ ಹೈಕಮಾಂಡ್ ನಲ್ಲಿದೆ. ಇವರ ಪೈಕಿ ಆರ್. ಪದ್ಮರಾಜ್ ಹೆಸರು ಮುಂಚೂಣಿಯಲ್ಲಿದೆ. ಬಿಲ್ಲವ ಸಮುದಾಯದ ಪದ್ಮರಾಜ್ ಕಣಕ್ಕಿಳಿದರೆ, ಬಿಜೆಪಿಯಲ್ಲಿರುವ ಆ ಸಮುದಾಯದ ಮತಗಳ ವಿಭಜನೆಯಾದರೆ, ಟಫ್ ಫೈಟ್ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ.

ಕಳೆದ 5 ವರ್ಷಗಳಲ್ಲಿ ನಳಿನ್ ಸಾಧನೆ, ಪ್ಲಸ್ ಮತ್ತು ಮೈನಸ್

ಕಳೆದ ಬಾರಿ ನಳಿನ್ ಕುಮಾರ್ ಕಟೀಲ್ ಸ್ಪರ್ಧಿಸಿದ್ದ ಸಂದರ್ಭ ಮಂಗಳೂರಿನ ಪಂಪ್ ವೆಲ್ ಸೇತುವೆ ಸುದೀರ್ಘ ಕಾಲ ನಿರ್ಮಾಣವಾಗದೆ ಕುಂಟುತ್ತಾ ಸಾಗಿದ್ದು ಹಲವು ಟ್ರೋಲ್ ಗಳಿಗೆ ಗುರಿಯಾಗಿತ್ತು. ಆದಾಗ್ಯೂ ನಳಿನ್ ಟಿಕೆಟ್ ಗಿಟ್ಟಿಸಿಕೊಂಡು ದೊಡ್ಡ ಅಂತರದಲ್ಲಿ ವಿಜಯ ಸಾಧಿಸಿ, ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇದೀಗ ತನ್ನ ಸಾಧನೆಗಳ ಪಟ್ಟಿಯಲ್ಲಿ ಪಂಪ್ ವೆಲ್ ಸೇತುವೆ ನಿರ್ಮಾಣವಷ್ಟೇ ಅಲ್ಲ, ಮಂಗಳೂರು ಬೆಂಗಳೂರು ರಸ್ತೆಯಲ್ಲಿ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ನಿರ್ಮಾಣದ ಪ್ರಗತಿಯನ್ನೂ ಸೇರಿಸಿದ್ದಾರೆ. ಈ ರಸ್ತೆ ನಿರ್ಮಾಣ ಸಂದರ್ಭ ಆಗುವ ಸಂದರ್ಭ ತೊಂದರೆಗಳ ವಿಚಾರದಲ್ಲಿ ನಳಿನ್ ವಿರೋಧಿಗಳ ಟೀಕೆಗಳಿಗೆ ಗುರಿಯಾಗಿದ್ದಾರೆ. ಕೊನೆಯ ವರ್ಷ ಮಂಗಳೂರು ಮಡಗಾಂವ್ ವಂದೇ ಭಾರತ್ ರೈಲು ಆರಂಭಿಸಿದ್ದು, ಕಾಸರಗೋಡಿನವರೆಗೆ ಬರುತ್ತಿದ್ದ ವಂದೇ ಭಾರತ್ ರೈಲನ್ನು ಮಂಗಳೂರಿನವರೆಗೆ ವಿಸ್ತರಣೆ ಮಾಡಲು ಪ್ರಯತ್ನಿಸಿದ್ದಾರೆ. ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ಮಂಗಳೂರಿಗೆ ಬರಲಿದೆ. ಮಂಗಳೂರಿನ ಮನೆ ಮನೆಗಳಲ್ಲಿ ಗ್ಯಾಸ್ ಪೈಪ್ ಲೈನ್ ನಲ್ಲಿ 75ಸಾವಿರ ಮನೆಗಳಿಗೆ ಪೈಪ್ ಲೈನ್ ಮೂಲಕ ಸಂಪರ್ಕ ನಳಿನ್ ಸಾಧನೆಗಳಲ್ಲೊಂದು.

ಇದುವರೆಗೂ ಸಂಸತ್ ಸದಸ್ಯರಾದವರು ಇವರು

1951- ಬಿ.ಶಿವರಾವ್ (ಕಾಂಗ್ರೆಸ್), 1957 – ಕೆ.ಆರ್.ಆಚಾರ್ (ಕಾಂಗ್ರೆಸ್), 1962- ಎ.ಶಂಕರ ಆಳ್ವ (ಕಾಂಗ್ರೆಸ್), 1967 – ಸಿ.ಎಂ.ಪೂಣಚ್ಚ (ಕಾಂಗ್ರೆಸ್), 1971 – ಕೆ.ಕೆ.ಶೆಟ್ಟಿ (ಕಾಂಗ್ರೆಸ್), 1977, 1980, 1984, 1989 – ಬಿ.ಜನಾರ್ದನ ಪೂಜಾರಿ (ಕಾಂಗ್ರೆಸ್), 1991, 1996, 1998, 1999 – ವಿ.ಧನಂಜಯ ಕುಮಾರ್ (ಬಿಜೆಪಿ), 2004 – ಡಿ.ವಿ.ಸದಾನಂದ ಗೌಡ (ಬಿಜೆಪಿ), 2009, 2014, 2019 – ನಳಿನ್ ಕುಮಾರ್ ಕಟೀಲ್ (ಬಿಜೆಪಿ). ಇಲ್ಲಿ ನಳಿನ್ ಕುಮಾರ್ ಕಟೀಲ್ 3 ಬಾರಿ, ವಿ.ಧನಂಜಯ ಕುಮಾರ್ ಮತ್ತು ಜನಾರ್ದನ ಪೂಜಾರಿ 4 ಬಾರಿ ಗೆಲುವು ಸಾಧಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಮತ್ತು ಜನಾರ್ದನ ಪೂಜಾರಿ ಒಟ್ಟು 14 ವರ್ಷಗಳ ಕಾಲ ಸತತವಾಗಿ ಲೋಕಸಭಾ ಸದಸ್ಯರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರನ್ನು 1999 ಮತ್ತು 2004ರಲ್ಲಿ ಕಣಕ್ಕಿಳಿಸಿದರೂ ಅವರು ಸೋಲು ಕಂಡರು. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿದ್ದ ಜನಾರ್ದನ ಪೂಜಾರಿ ಅವರು ನಾಲ್ಕು ಬಾರಿ ಗೆದ್ದಿದ್ದರೂ, ಧನಂಜಯ ಕುಮಾರ್ ಅವರಿಂದ ಮೂರು ಬಾರಿ, ನಳಿನ್ ಕುಮಾರ್ ಕಟೀಲ್ ಅವರಿಂದ ಎರಡು ಬಾರಿ ಸೋಲು ಕಂಡರು. 1991ರಲ್ಲಿ ಖಾತೆ ತೆರೆದ ಬಿಜೆಪಿ ಮೂರು ಬಾರಿ ಅಭ್ಯರ್ಥಿಗಳನ್ನು ಬದಲಾಯಿಸಿದರೂ ಪಕ್ಷ ಗೆಲುವು ತಂದುಕೊಡಲು ಇಲ್ಲಿ ಹಿಂದುತ್ವದ ಅಲೆ ಕಾರಣ ಎನ್ನುತ್ತಾರೆ ವಿಶ್ಲೇಷಕರು.

ಹಿಂದೆ ಕೊಡಗು ಸೇರಿತ್ತು

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಹಿಂದೆ ಸೌತ್ ಕೆನರಾ (ಸೌತ್) ಕ್ಷೇತ್ರವಾಗಿತ್ತು. ಬಳಿಕ ಅದು ಮಂಗಳೂರು ಆಗಿ ಪರಿವರ್ತಿತವಾಯಿತು. ಕ್ಷೇತ್ರ ಪುನರ್ವಿಂಗಡಣೆ ವೇಳೆ ದಕ್ಷಿಣ ಕನ್ನಡ ಕ್ಷೇತ್ರ ಎಂಬ ಮತ್ತೆ ಹೆಸರು ಬಂತು. ಪುನರ್ವಿಂಗಡಣೆ ಮೊದಲು ಕೊಡಗು ಜಿಲ್ಲೆ ಮಂಗಳೂರು ಕ್ಷೇತ್ರದೊಳಗಿತ್ತು. ಹೀಗಾಗಿ ಕೊಡಗು ಸಿಎಂ ಆಗಿದ್ದ ಸಿ.ಎಂ. ಪೂಣಚ್ಚ ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ವಿಜಯಿಯಾಗಿದ್ದರು. ಕೊಡಗಿನ ನ್ಯಾಯವಾದಿಯಾಗಿದ್ದ ಎ.ಕೆ.ಸುಬ್ಬಯ್ಯ ಜನತಾ ಪಾರ್ಟಿ ಚಿಹ್ನೆಯಲ್ಲಿ ಸ್ಪರ್ಧೆಗಿಳಿಸಿದ್ದರು.

ರಾಮಮಂದಿರ ಹೋರಾಟದ ಬಳಿಕ ಬಿಜೆಪಿ ವಶಕ್ಕೆ ಬಂದ ಕ್ಷೇತ್ರ

1951ರಿಂದ ಸತತ 40 ವರ್ಷಗಳ ಕಾಲ ದೇಶದಲ್ಲಿ ಸರಕಾರ ಬದಲಾದರೂ ಕಾಂಗ್ರೆಸ್ ಪಕ್ಷವನ್ನು ಬಿಡದ ದಕ್ಷಿಣ ಕನ್ನಡ ಕಾಂಗ್ರೆಸ್ ನ ಭದ್ರಕೋಟೆಯೇ ಆಗಿತ್ತು. ಈಗ ಬಿಜೆಪಿಯ ಸ್ಥಿತಿ ಆಗ ಕಾಂಗ್ರೆಸ್ ಗಿತ್ತು. ಆದರೆ ಯಾವಾಗ ಅಯೋಧ್ಯೆ ರಾಮಮಂದಿರ ಚಳವಳಿ ತೀವ್ರವಾಯಿತೋ ಆಗ ಆರೆಸ್ಸೆಸ್, ವಿಶ್ವಹಿಂದು ಪರಿಷತ್ ನ ಶಕ್ತಿಕೇಂದ್ರವಾಗಿ ಮಂಗಳೂರು ಬದಲಾಯಿತು. ಇದರ ಪರಿಣಾಮವಾಗಿ ದೇಶದಾದ್ಯಂತ ಕಾಂಗ್ರೆಸ್ ಪರ ಅಲೆ ಇದ್ದಾಗಲೂ 1991ರಲ್ಲಿ ಬಿಜೆಪಿಯ ಧನಂಜಯ ಕುಮಾರ್ ಜಯಗಳಿಸಿದರು. ಅಲ್ಲಿಂದ ಇಂದಿನವರೆಗೂ ಬಿಜೆಪಿಯ ವಶದಲ್ಲೇ ಈ ಕ್ಷೇತ್ರವಿದೆ.

(ರಾಜಕೀಯ ವಿಶ್ಲೇಷಣೆ: ಹರೀಶ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ