ಲೋಕಸಭೆ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಇಂದು ಘೋಷಣೆ; ಚುನಾವಣಾ ಆಯೋಗದ ಸುದ್ದಿಗೋಷ್ಠಿ ನೇರ ಪ್ರಸಾರಕ್ಕೆ ಇಲ್ನೋಡಿ
ಲೋಕಸಭೆ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಇಂದು ಘೋಷಣೆಯಾಗಲಿದೆ. ಇಂದು (ಮಾರ್ಚ್ 16) ಮಧ್ಯಾಹ್ನ ನಂತರ ನಡೆಯಲಿರುವ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಈ ವಿವರಗಳೆಲ್ಲ ಪ್ರಕಟವಾಗಲಿದೆ. ಈ ಪತ್ರಿಕಾಗೋಷ್ಠಿ ನೇರಪ್ರಸಾರವಾಗಲಿದ್ದು, ಈ ಕುರಿತ ವಿವರ ಈ ವರದಿಯಲ್ಲಿದೆ.
ನವದೆಹಲಿ: ಲೋಕಸಭೆ ಚುನಾವಣೆ 2024ರ (General Election 2024) ದಿನಾಂಕ, ವೇಳಾಪಟ್ಟಿ ಮತ್ತು ಇತರೆ ವಿವರಗಳನ್ನು ಭಾರತದ ಚುನಾವಣಾ ಆಯೋಗ ಇಂದು (ಮಾರ್ಚ್ 16) ಮಧ್ಯಾಹ್ನ ನಂತರ 3 ಗಂಟೆಗೆ ಪ್ರಕಟಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಈ ವಿವರಗಳನ್ನು ಪ್ರಕಟಿಸಲಿದ್ದಾರೆ.
ನವದೆಹಲಿಯಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದ್ದು, ಲೋಕಸಭೆಯ 543 ಸ್ಥಾನಗಳ ಚುನಾವಣೆ (Lok Sabha Election 2024) ದಿನಾಂಕ, ಫಲಿತಾಂಶ ಪ್ರಕಟವಾಗುವ ದಿನ ಸೇರಿದ ವೇಳಾಪಟ್ಟಿ ಪ್ರಕಟವಾಗಲಿದೆ. ಲೋಕಸಭೆ ಚುನಾವಣೆಯ ಜೊತೆಗೆ ಕೆಲವು ವಿಧಾನಸಭೆ ಚುನಾವಣೆಗಳೂ ನಡೆಯಲಿವೆ.
ಈ ಪತ್ರಿಕಾಗೋಷ್ಠಿಯನ್ನು ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುವುದು ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.
ಲೋಕಸಭೆ ಚುನಾವಣೆ 2024ರ ದಿನಾಂಕ ವೇಳಾಪಟ್ಟಿ; ಚುನಾವಣಾ ಆಯೋಗ ಸುದ್ದಿಗೋಷ್ಠಿ ನೇರ ಪ್ರಸಾರ
ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿಯ ವಿವರ ನೀಡುವುದಕ್ಕಾಗಿ ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರಾದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರ ಸುದ್ದಿಗೋಷ್ಠಿ, ಆಯೋಗದ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಪ್ರಸಾರವಾಗಲಿದೆ. ಅದರ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು.
ಭಾರತದ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಇಂದು (ಮಾರ್ಚ್ 15) ಮಧ್ಯಾಹ್ನ ನಂತರ 3 ಗಂಟೆಗೆ ನಡೆಯಲಿದೆ. ಅದರ ನೇರ ಪ್ರಸಾರವನ್ನು ಚುನಾವಣಾ ಆಯೋಗದ ವೆಬ್‌ಸೈಟ್, ಸೋಷಿಯಲ್ ಮೀಡಿಯಾ ತಾಣಗಳಲ್ಲಿ ವೀಕ್ಷಿಸಬಹುದು ಎಂದು ಆಯೋಗ ಟ್ವೀಟ್ ಮಾಡಿದೆ.
ಕಳೆದ ಬಾರಿ ಲೋಕಸಭೆ ಚುನಾವಣೆ ದಿನಾಂಕ 2019ರ ಮಾರ್ಚ್ 10ಕ್ಕೆ ಘೋಷಣೆ
ಭಾರತದ ಚುನಾವಣಾ ಆಯೋಗವು ಕಳೆದ ಬಾರಿ ಲೋಕಸಭೆ ಚುನಾವಣೆಯ ದಿನಾಂಕ ಮತ್ತು ವೇಳಾಪಟ್ಟಿಯನ್ನು 2019ರ ಮಾರ್ಚ್ 10 ರಂದು ಪ್ರಕಟಿಸಿತ್ತು. ಏಳು ಹಂತಗಳಲ್ಲಿ ಚುನಾವಣೆ ನಡೆದು, ಏಪ್ರಿಲ್ 11 ರಿಂದ ಮೇ19 ತನಕ ಮತದಾನ ನಡೆಯಿತು. ಮೇ 23 ರಂದು ಫಲಿತಾಂಶ ಪ್ರಕಟವಾಯಿತು.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ 2019ರ ಏಪ್ರಿಲ್ 18 ಮತ್ತು 23 ರಂದು ತಲಾ 14 ಕ್ಷೇತ್ರಗಳ ಮತದಾನ ನಡೆಯಿತು. ಕರ್ನಾಟಕದ 28 ಕ್ಷೇತ್ರಗಳ ಪೈಕಿ 25 ಬಿಜೆಪಿ ಗೆದ್ದರೆ, ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್, 1ರಲ್ಲಿ ಜೆಡಿಎಸ್ ಗೆಲುವು ಕಂಡಿತ್ತು.
ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿ
ಲೋಕಸಭೆ ಚುನಾವಣೆ 2024ರ ದಿನಾಂಕ, ವೇಳಾಪಟ್ಟಿ ಘೋಷಣೆಯಾದ ತಕ್ಷಣ ದೇಶಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಚುನಾವಣಾ ಸಮಯದ ಭಾಷಣಗಳು, ಘೋಷಣೆಗಳು, ಚುನಾವಣಾ ಪ್ರಣಾಳಿಕೆಗಳು ಮತ್ತು ಸಾಮಾನ್ಯ ನಡವಳಿಕೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸರ್ಕಾರ ಮತ್ತು ಅಧಿಕಾರದಲ್ಲಿರುವ ಪಕ್ಷಕ್ಕೆ ಚುನಾವಣಾ ಆಯೋಗವು ನೀಡುವ ಮಾರ್ಗಸೂಚಿ ಇದಾಗಿದೆ. ಪ್ರಸ್ತುತ ಲೋಕಸಭೆಯ ಅವಧಿಯು ಜೂನ್ 16 ರಂದು ಕೊನೆಗೊಳ್ಳುತ್ತಿದ್ದು, ಅದಕ್ಕೂ ಮುನ್ನ ಹೊಸ ಲೋಕಸಭೆ ರಚನೆಯಾಗಬೇಕು. ಹೀಗಾಗಿ ಈ ಚುನಾವಣೆಯನ್ನು ನಡೆಸಲಾಗುತ್ತಿದೆ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)