Simultaneous Elections: ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಬಿಜೆಪಿಯ ಪ್ರಬಲ ಪ್ರತಿಪಾದನೆಗೆ ಏನು ಕಾರಣ, ವಿರೋಧ ಯಾಕೆ-india news simultaneous elections report one nation one election why bjp is pushing for it and why it is opposed uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Simultaneous Elections: ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಬಿಜೆಪಿಯ ಪ್ರಬಲ ಪ್ರತಿಪಾದನೆಗೆ ಏನು ಕಾರಣ, ವಿರೋಧ ಯಾಕೆ

Simultaneous Elections: ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಬಿಜೆಪಿಯ ಪ್ರಬಲ ಪ್ರತಿಪಾದನೆಗೆ ಏನು ಕಾರಣ, ವಿರೋಧ ಯಾಕೆ

ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ ಸದ್ಯ ಚಾಲ್ತಿಯಲ್ಲಿರುವ ಪ್ರಮುಖ ವಿಚಾರ. ಲೋಕಸಭೆ ಚುನಾವಣೆ ಹೊಸ್ತಿರಲಲ್ಲಿ ಈ ಏಕಕಾಲದ ಚುನಾವಣೆಗಳ ವಿಚಾರದಲ್ಲಿ ಬಿಜೆಪಿಯ ಪ್ರಬಲ ಪ್ರತಿಪಾದನೆಗೆ ಏನು ಕಾರಣ, ವಿರೋಧ ಯಾಕೆ- ಇಲ್ಲಿದೆ ವಿವರ.

ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಸಮಿತಿ ಸಲ್ಲಿಸಿದ ಏಕಕಾಲದ ಚುನಾವಣೆಗಳು ಕುರಿತಾದ ವರದಿಯ ನೋಟ.
ಒಂದು ದೇಶ ಒಂದು ಚುನಾವಣೆ ಪರಿಕಲ್ಪನೆ; ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಸಮಿತಿ ಸಲ್ಲಿಸಿದ ಏಕಕಾಲದ ಚುನಾವಣೆಗಳು ಕುರಿತಾದ ವರದಿಯ ನೋಟ.

ಲೋಕಸಭಾ ಚುನಾವಣೆ (Lok Sabha Election 2024) ದಿನಾಂಕ, ವೇಳಾಪಟ್ಟಿ ಘೋಷಣೆಯಾಗುವ ಸಂದರ್ಭದಲ್ಲಿ ಬಹಳ ಚರ್ಚೆಯಲ್ಲಿರುವ ಇನ್ನೊಂದು ಗಂಭೀರ ವಿಚಾರ ಒಂದು ದೇಶ ಒಂದು ಚುನಾವಣೆ (One Nation One Election). ಏಕಕಾಲದ ಚುನಾವಣೆ (Simultaneous Elections) ಗೆ ಸಂಬಂಧಿಸಿದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ಅದರ ಸಾಧಕ ಬಾಧಕ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದು ಈ ವಿಷಯ ಮುನ್ನೆಲೆಗೆ ಬರಲು ಕಾರಣ.

ಏಕಕಾಲದ ಚುನಾವಣೆ ವಿಚಾರ ಹೊಸದೇನಲ್ಲ. 80ರ ದಶಕದ ಆರಂಭದಲ್ಲಿ ಪ್ರಸ್ತಾಪವಾಗಿದೆ. ಇನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆಗಳನ್ನು ಜಾರಿಗೆ ತರಲು ಶಿಫಾರಸುಗಳನ್ನು ನೀಡುವುದಕ್ಕಾಗಿ ಸಮಿತಿಯನ್ನು ರಚಿಸಲಾಗಿತ್ತು.

ಇದಾದ ನಂತರ, ಕೋವಿಂದ್‌ ಸಮಿತಿಯು ಬಿಜೆಪಿ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐ, ಸಿಪಿಐ(ಎಂ), ಎಐಎಂಐಎಂ, ಆರ್‌ಪಿಐ, ಅಪ್ನಾ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಈ ಪಕ್ಷದ ಪ್ರತಿನಿಧಿಗಳು ತಮ್ಮ ಸಲಹೆಗಳನ್ನು ಲಿಖಿತವಾಗಿ ಸಮಿತಿಗೆ ಸಲ್ಲಿಸಿದರು. ಇದಲ್ಲದೆ, ಸಮಿತಿಯು ಸಾರ್ವಜನಿಕ ಅಭಿಪ್ರಾಯವನ್ನು ಸಹ ಆಹ್ವಾನಿಸಿತ್ತು. ಕಳೆದ ಗುರುವಾರ ಈ ವರದಿ ಸಲ್ಲಿಕೆಯಾಗಿದೆ.

ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಬಿಜೆಪಿ ಆಗ್ರಹಿಸುತ್ತಿರುವುದೇಕೆ

ಚುನಾವಣಾ ಆಯೋಘ, ಕಾನೂನು ಆಯೋಗ ಮತ್ತು ಸಂಸದೀಯ ಸಮಿತಿಗಳು ಸೇರಿದಂತೆ ವಿವಿಧ ಘಟಕಗಳು ಈ ಹಿಂದೆ ಹಲವಾರು ಸಂದರ್ಭಗಳಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಕಡೆಗೆ ಬೆಳಕು ಚೆಲ್ಲುತ್ತ ಬಂದಿವೆ. ಅಲ್ಲದೆ, ಅದರ ಸಾಧಕ ಬಾಧಕಗಳ ಅಧ್ಯಯನವನ್ನೂ ಮಾಡುತ್ತಿವೆ. ಬಿಜೆಪಿ ಈ ವಿಚಾರವನ್ನು ತನ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿ ಮಾಡಿದೆ. ಆದರೆ, ರಾಜಕೀಯ ಪಕ್ಷಗಳ ನಡುವೆ ಏಕಕಾಲದ ಚುನಾವಣೆ ವಿಚಾರವಾಗಿ ಒಮ್ಮತ ಮೂಡಿಲ್ಲ.

ಚುನಾವಣಾ ಆಯೋಗವು ಮೊದಲ ಬಾರಿಗೆ 1983 ರಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆಯನ್ನು ಅನ್ವೇಷಿಸಲು ಸಲಹೆ ನೀಡಿತು. ಭಾರತದ ಕಾನೂನು ಆಯೋಗವು 1999 ರಲ್ಲಿ ತನ್ನ 170 ನೇ ವರದಿಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವಂತೆ ಪ್ರತಿಪಾದಿಸಿತು. 2015 ರಲ್ಲಿ, ಸಂಸದೀಯ ಸ್ಥಾಯಿ ಸಮಿತಿಯು ಏಕಕಾಲಿಕ ಮತದಾನದ ಕಾರ್ಯಸಾಧ್ಯತೆಯ ಬಗ್ಗೆ ವರದಿಯನ್ನು ಸಿದ್ಧಪಡಿಸಿತು. ಕಡಿಮೆ ವೆಚ್ಚಗಳು ಮತ್ತು ಸುಧಾರಿತ ಆಡಳಿತ ದಕ್ಷತೆಯಂತಹ ಸಂಭಾವ್ಯ ಪ್ರಯೋಜನಗಳನ್ನು ಈ ವರದಿ ಎತ್ತಿತೋರಿಸಿತು.

ಅದೂ ಅಲ್ಲದೆ, ಇದನ್ನು ಕಾರ್ಯಸಾಧುವನ್ನಾಗಿಸಲು ಅಸೆಂಬ್ಲಿಗಳ ಅವಧಿಯನ್ನು 170 ದಿನಗಳವರೆಗೆ ವಿಸ್ತರಿಸಲು ಮತ್ತು 599 ದಿನಗಳವರೆಗೆ ಅವಧಿಯನ್ನು ಮೊಟಕುಗೊಳಿಸಲು ಸಮಿತಿಯು ಸಲಹೆ ನೀಡಿತ್ತು. ಇದನ್ನು 2016 ಅಥವಾ ಮುಂದಿನ 10 ವರ್ಷದ ತನಕ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂದು ವರದಿ ವಿವರಿಸಿತ್ತು.

ಒಂದು ದೇಶ ಒಂದು ಚುನಾವಣೆ ಬೇಕು ಎನ್ನುವ ಪ್ರತಿಪಾದನೆ

ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂಬುದು ಬಿಜೆಪಿಯ ಪರಿಕಲ್ಪನೆ. ಇದು ಅದರ ಬಹುಕಾಲದ ಕನಸು ಕೂಡ ಹೌದು. ಹಿರಿಯ ನಾಯಕ ಎಲ್‌ಕೆ ಅಡ್ವಾಣಿಯವರು ಇದನ್ನು ಅನುಮೋದಿಸಿದ್ದರು. ಎಲ್ಲಾ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಬಳಸುವ ಆಲೋಚನೆಯೂ ಬಿಜೆಪಿಯ ಕಾರ್ಯಸೂಚಿಯಲ್ಲಿ ಬಹಳ ಹಿಂದಿನಿಂದಲೂ ಇದೆ. ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು, ಜೆಡಿ (ಎಸ್), ಎಸ್‌ಎಡಿ ಮತ್ತು ಬಿಜೆಡಿ ಈ ಕಲ್ಪನೆಯನ್ನು ಬೆಂಬಲಿಸಿವೆ. ನ್ಯಾಷನಲ್ ಕಾನ್ಫರೆನ್ಸ್ ಈ ಕಲ್ಪನೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ.

ಪ್ರತಿ ವರ್ಷ 200 ರಿಂದ 300 ದಿನಗಳು ಚುನಾವಣೆಗೆ ಬಳಕೆಯಾಗುತ್ತಿರುವ ಕಾರಣ ಸರ್ಕಾರದ ಆಡಳಿತ ಯಂತ್ರವನ್ನು ಅಭಿವೃದ್ಧಿ ಮತ್ತು ಇತರೆ ಆಡಳಿತ ವ್ಯವಸ್ಥೆಗೆ ಬಳಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಒಂದಾದರೆ, ಆರ್ಥಿಕ ಹೊರೆ ಇನ್ನೊಂದು. ದೀರ್ಘಾವಧಿಯ ಯೋಜನೆಗಳನ್ನು ಕೈಗೊಂಡು ಪೂರ್ಣಗೊಳಿಸುವುದಕ್ಕೂ ಕಷ್ಟ ಎಂಬ ಕಾರಣಕ್ಕೆ ಏಕಕಾಲದ ಚುನಾವಣೆಯನ್ನು ಬಿಜೆಪಿ ಮತ್ತು ಇತರೆ ಪಕ್ಷಗಳು ಪ್ರತಿಪಾದಿಸುತ್ತಿವೆ. ಇದಕ್ಕೆ ಅಧಿಕಾರಿಗಳ ವಲಯ, ಉದ್ಯಮಿಗಳ ವಲಯದಿಂದಲೂ ಬಹುತೇಕ ಬೆಂಬಲ ವ್ಯಕ್ತವಾಗಿದೆ.

ಒಂದು ದೇಶ ಒಂದು ಚುನಾವಣೆ ಬೇಡ ಎನ್ನುವ ಪ್ರತಿಪಾದನೆ

ಬಿಜೆಪಿಗೆ ಪ್ರಬಲ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಒಂದು ದೇಶ ಒಂದು ಚುನಾವಣೆ ಬೇಡ ಎನ್ನುತ್ತಿದೆ. ಇದೇ ಪ್ರತಿಪಾದನೆಯನ್ನು ಮಾಡುತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು ಕೋವಿಂದ್ ನೇತೃತ್ವದ ಸಮಿತಿಗೆ ರಾಜೀನಾಮೆ ನೀಡಿದ್ದರು. ಏಕಕಾಲದ ಚುನಾವಣೆಗಳಿಗೆ ಸಂಬಂಧಿಸಿದ ಸಮಿತಿಯು ಸಮಸ್ಯೆಯ ಸಾಧಕ-ಬಾಧಕಗಳನ್ನು ಕಂಡುಹಿಡಿಯುವುದಲ್ಲ ಎಂದು ಅವರು ದೂಷಿಸಿದ್ದರು. ಆದರೆ ಏಕಕಾಲದಲ್ಲಿ ಚುನಾವಣೆಗಳನ್ನು ಜಾರಿಗೊಳಿಸುವ ಮಾರ್ಗಗಳನ್ನು ಸೂಚಿಸಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳಾದ ಟಿಎಂಸಿ, ಡಿಎಂಕೆ ಮತ್ತು ಎಎಪಿ ಮುಂದಾಗಿಲ್ಲ. ವಿರೋಧ ಮಾತ್ರ ಮಾಡುತ್ತಿವೆ.

ಏಕಕಾಲದ ಚುನಾವಣೆಯ ಪರಿಕಲ್ಪನೆಯ ವಿರುದ್ಧದ ಮುಖ್ಯ ವಾದವೆಂದರೆ ಅದರಲ್ಲಿ ಪ್ರಾದೇಶಿಕ ಮತ್ತು ಸ್ಥಳೀಯ ಕಾಳಜಿಗಳನ್ನು ಕಡೆಗಣಿಸಲಾಗಿದೆ ಎಂಬುದು. ಏಕಕಾಲದ ಚುನಾವಣೇ ನಡೆಸಿದರೆ, ರಾಷ್ಟ್ರ ಮಟ್ಟದ ಸಮಸ್ಯೆಗಳ ನಡುವೆ ಸ್ಥಳೀಯ, ಪ್ರಾದೇಶಿಕ ಸಮಸ್ಯೆಗಳು ನಿರ್ಲಕ್ಷಿಸಲ್ಪಡುತ್ತವೆ ಎಂಬುದು ಈ ಪಕ್ಷಗಳ ನಾಯಕರ ವಾದ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.