ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ; ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ ಸಿಎನ್‌ ಮಂಜುನಾಥ್‌ ಹೊಸ ಇನ್ನಿಂಗ್ಸ್; ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಎದುರಾಳಿ

ಲೋಕಸಭಾ ಚುನಾವಣೆ; ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ ಸಿಎನ್‌ ಮಂಜುನಾಥ್‌ ಹೊಸ ಇನ್ನಿಂಗ್ಸ್; ಕಾಂಗ್ರೆಸ್ ಸಂಸದ ಡಿ ಕೆ ಸುರೇಶ್ ಎದುರಾಳಿ

Lok Sabha Election 2024: ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಡಾ ಸಿಎನ್‌ ಮಂಜುನಾಥ್‌ ಹೊಸ ಇನ್ನಿಂಗ್ಸ್ ಶುರುಮಾಡಿದ್ದಾರೆ. ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಎದುರಾಳಿಯಾಗಿದ್ದು, ಎರಡು ಪ್ರತಿಷ್ಠಿತ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಯ ಕಡೆಗೊಂದು ಕಿರುನೋಟ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್‌ (ಎಡ ಚಿತ್ರ) vs ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಡಿಕೆ ಸುರೇಶ್ ( ಬಲ ಚಿತ್ರ)
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಬಿಜೆಪಿ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್‌ (ಎಡ ಚಿತ್ರ) vs ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಡಿಕೆ ಸುರೇಶ್ ( ಬಲ ಚಿತ್ರ)

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಅಳಿಯ, ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಅವರನ್ನು ಬಿಜೆಪಿ ಘೋಷಿಸಿದೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎರಡು ಪ್ರಬಲ ಒಕ್ಕಲಿಗ ಕುಟುಂಬಗಳ ರಾಜಕೀಯ ಕದನ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಇದುವರೆಗೂ ಡಾ. ಮಂಜುನಾಥ್ ಅವರ ಆಯ್ಕೆ ಕುರಿತು ಉಂಟಾಗಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಹುದ್ದೆಯಿಂದ ಇತ್ತೀಚೆಗಷ್ಟೇ ಅವರು ನಿವೃತ್ತಿ ಹೊಂದಿದ್ದರು. ನಿರ್ದೇಶಕರಾಗಿ 17 ವರ್ಷ ಸೇವೆ ಸಲ್ಲಿಸಿದ್ದರು.

ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಏರ್ಪಟ್ಟ ನಂತರ ಈ ಕ್ಷೇತ್ರದಿಂದ ಕಣಕ್ಕಿಳಿಯಲು ವಿಧಾನ ಪರಿಷತ್ ಸದಸ್ಯ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ಬಯಸಿದ್ದರು. ಇದೇ ಕಾರಣಕ್ಕೆ ರಾಜಕೀಯ ದ್ವೇಷ ಮರೆತು ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಒಡನಾಟ ಆರಂಭಿಸಿದ್ದರು. ದುಬೈ ಸೇರಿದಂತೆ ಹಲವು ದೇಶಗಳಿಗೆ ಒಟ್ಟಿಗೆ ಪ್ರವಾಸಕ್ಕೂ ತೆರಳಿದ್ದರು. ಯೋಗೇಶ್ವರ್ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.

ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾದ ಡಾ. ಮಂಜುನಾಥ್ ಅವರ ಹೆಸರು ಕ್ಷೇತ್ರದಲ್ಲಿ ಕೇಳಿ ಬರತೊಡಗಿತು. ಆರಂಭದಲ್ಲಿ ರಾಜಕೀಯ ಪ್ರವೇಶ ಕುರಿತು ನಿರಾಕರಿಸಿದ್ದ ಡಾ. ಮಂಜುನಾಥ್, ವೈದ್ಯಕಿಯ ಕ್ಷೇತ್ರದಲ್ಲಿ ಮುಂದುವರೆಯುವುದಾಗಿ ಉತ್ತರಿಸುತ್ತಿದ್ದರು.

ನಂತರ ಹಂತ ಹಂತವಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳತೊಡಗಿದರು. ಹಾಗೆಯೇ ಅವರ ಹೆಸರು ಮುನ್ನೆಲೆಗೆ ಬರತೊಡಗಿತು. ಈ ಮಧ್ಯೆ ಯೋಗೇಶ್ವರ್ ಆಸೆ ಕಮರಿ ಹೋಯಿತು.

ಅಭ್ಯರ್ಥಿ ಆಯ್ಕೆ ಕುರಿತು ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ನಡೆದ ಬಿಜೆಪಿ ಜೆಡಿಎಸ್ ಮುಖಂಡರ ಸಭೆಯಲ್ಲಿ ಯೋಗೇಶ್ವರ್ ಪರ ಒಲವು ಕೇಳಿ ಬಂದಿತ್ತು. ಟಿಕೆಟ್ ಪಕ್ಕಾ ಮಾಡಿಕೊಳ್ಳಲು ಯೋಗೇಶ್ವರ್ ದೆಹಲಿಗೆ ಹೋದಾಗ ತಿರುವು ಪಡೆದುಕೊಂಡಿತು.

ಸ್ವತಃ ಯೋಗೇಶ್ವರ್ ಅವರೇ ಡಾ.ಮಂಜುನಾಥ್ ಅವರೇ ಸ್ಪರ್ಧಿಸಲಿದ್ದಾರೆ. ನಾನು ಅವರ ಮನವೊಲಿಸುವೆ ಎಂದು ಹೇಳಬೇಕಾಯಿತು. ಇತ್ತ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್‌ ಮುಖಂಡರ ಸಭೆ ನಡೆಸಿ ತಮ್ಮ ಭಾವ ಡಾ. ಮಂಜುನಾಥ್ ಅವರನ್ನು ಚುನಾವಣಾ ಕಣಕ್ಕೆ ಇಳಿಯುವಂತೆ ಮನವೊಲಿಸಿದ್ದರು. ಈ ಸಭೆ ನಡೆದ ಎರಡು ದಿನಗಳ ಬಳಿಕ ಡಾ. ಸಿಎನ್‌ ಮಂಜುನಾಥ್ ಅವರ ಹೆಸರನ್ನು ಬಿಜೆಪಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಎರಡು ಪ್ರತಿಷ್ಠಿತ ಕುಟುಂಬಗಳ ರಾಜಕೀಯ ಜಿದ್ದಾಜಿದ್ದಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಾಕ್ಷಿಯಾಗಲಿದೆ. ಡಾ.ಮಂಜುನಾಥ್ ಹೆಸರಿಗೆ ಮಾತ್ರ ಬಿಜೆಪಿ ಅಭ್ಯರ್ಥಿಯಾದರೂ ಅವರ ಗೆಲುವಿನ ಹೊಣೆ ದೇವೇಗೌಡರ ಕುಟುಂಬದ ಮೇಲಿದೆ. ಶತ್ರುವಿನ ಶತ್ರು ಮಿತ್ರ ಎಂಬ ನಾಣ್ಣುಡಿ ಯಂತೆ ಡಿಕೆ ಸುರೇಶ್ ಸೋಲಿಸಲು ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಕೈ ಜೋಡಿಸಿದ್ದಾರೆ.

ಈ ಮೂಲಕ ಈ ಕ್ಷೇತ್ರ ದೇಶದ ಗಮನ ಸೆಳೆಯುವುದರಲ್ಲಿ ಅಚ್ಚರಿಯಿಲ್ಲ. ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನು ಸೆಳೆಯುವಲ್ಲಿ ಡಿಕೆ ಬ್ರದರ್ಸ್ ಯಶಸ್ವಿಯಾಗಿದ್ದಾರೆ. ಮಂಜುನಾಥ್ ಜನಾನುರಾಗಿ ವೈದ್ಯ ಎಂಬ ಕಾರಣಕ್ಕೆ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಲೂಬಹುದು. ಬೆಂಗಳೂರು ಗ್ರಾಮಾಂತರ ನಾಳೆಯಿಂದ ದಿನದಿಂದ ದಿನಕ್ಕೆ ರಂಗು ಪಡೆಯಲಿದೆ. ಡಾ.ಮಂಜುನಾಥ್ ಗೆದ್ದರೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗುವ ಭಾಗ್ಯ ಲಭಿಸಲಿದೆ ಎಂಬ ಮಾತುಗಳೂ ಮೈತ್ರಿ ಕೂಟದಲ್ಲಿ ಕೇಳಿ ಬರುತ್ತಿವೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point