logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಸೌಮ್ಯಾ ರೆಡ್ಡಿ ಎದುರಾಳಿ; ಬಿಜೆಪಿಯ ಭದ್ರ ಕೋಟೆ ಭೇದಿಸುವರೇ ಕೈ ಅಭ್ಯರ್ಥಿ?

ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯಗೆ ಸೌಮ್ಯಾ ರೆಡ್ಡಿ ಎದುರಾಳಿ; ಬಿಜೆಪಿಯ ಭದ್ರ ಕೋಟೆ ಭೇದಿಸುವರೇ ಕೈ ಅಭ್ಯರ್ಥಿ?

Raghavendra M Y HT Kannada

Mar 22, 2024 08:38 PM IST

google News

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸೌಮ್ಯ ರೆಡ್ಡಿ ಅವರು ಕಣಕ್ಕಿಳಿದಿದ್ದಾರೆ.

    • ಬಿಜೆಪಿಯ ಭದ್ರ ಕೋಟೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಸಂಸದ ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. (ವರದಿ: ಎಚ್‌. ಮಾರುತಿ)
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸೌಮ್ಯ ರೆಡ್ಡಿ ಅವರು ಕಣಕ್ಕಿಳಿದಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರ ವಿರುದ್ಧ ಕಾಂಗ್ರೆಸ್‌ನಿಂದ ಸೌಮ್ಯ ರೆಡ್ಡಿ ಅವರು ಕಣಕ್ಕಿಳಿದಿದ್ದಾರೆ.

ಬೆಂಗಳೂರು: ಮಾಜಿ ಶಾಸಕಿ ಸೌಮ್ಯಾ ರೆಡ್ಡಿ (Soumya Reddy) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರ ಪುತ್ರಿ. 1983 ರಲ್ಲಿ ಜನಿಸಿದ ಇವರು ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿಗಳಿಸಿ ನಂತರ ನ್ಯೂಯಾರ್ಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪರಿಸರ ತಂತ್ರಜ್ಞಾನ ವಿಷಯದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. 2014ರಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ ಇವರು ತಂದೆಯ ಹಾಗೆ ರಾಜಕೀಯದ ಹಾದಿ ಹಿಡಿದರು. 2016 ರಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, 2017ರಲ್ಲಿ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಅನುಭವ ಗಳಿಸಿದ ಸೌಮ್ಯ 2019ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2023ರ ಚುನಾವಣೆಯಲ್ಲಿ ಕೇವಲ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಿ.ಕೆ. ರಾಮಮೂರ್ತಿ ಎದುರು ಪರಾಭವಗೊಂಡರು. ತಮ್ಮ ಸೋಲು ಕುರಿತು ಮರು ಎಣಿಕೆ ನಡೆಸುವಂತೆ ಹೈ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ.

ಪರಿಸರವಾದಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ

ಸಾರ್ವಜನಿಕ ಜೀವನದಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ಸಂಶೋಧನೆ, ಮಹಿಳಾ ಹಕ್ಕುಗಳು, ಶಿಕ್ಷಣ, ಪ್ರಾಣಿಗಳ ಕಲ್ಯಾಣ, ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಪರಿಸರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ಲಾಸ್ಟಿಕ್ ಬಳಕೆ ವಿರುದ್ದ ಧ್ವನಿ ಎತ್ತಿದ್ದಾರೆ. ವಿಶೇಷವಾಗಿ ಮರಗಳನ್ನು ಬೆಳೆಸಿ ಹಸಿರನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ.

ಇವರ ವಿವಾಹವೂ ಪರಿಸರ ಸ್ನೇಹಿ

2015 ರಲ್ಲಿ ನಡೆದ ಇವರ ವಿವಾಹ ಕುರಿತು ಹೇಳಲೇಬೇಕು. ಶೂನ್ಯ ತ್ಯಾಜ್ಯ ಇವರ ಮದುವೆಯ ವಿಶೇಷ. ಯಾವುದೇ ಮಾಲಿನ್ಯ ಉಂಟಾಗಲು ಅವಕಾಶ ನೀಡಿರಲಿಲ್ಲ. ಇದಕ್ಕಾಗಿ ಬೆಂಗಳೂರಿನ ಹಸಿರು ದಳದ 150 ಸ್ವಯಂ ಸೇವಕರನ್ನು ನಿಯೋಜಿಸಿದ್ದರು. ಎಲ್ಲ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡಿದ್ದರು. ಉಳಿದಿದ್ದ ಆಹಾರ ಪದಾರ್ಥಗಳನ್ನು ಮಾಗಡಿ ರಸ್ತೆಲ್ಲಿರುವ ಜೈವಿಕ ನಿರ್ವಹಣಾ ಮತ್ತು ಘನ ತ್ಯಾಜ್ಯವನ್ನು ಘನ ತ್ಯಾಜ್ಯ ನಿರ್ವಹಣಾ ಕೇಂದ್ರಗಳಿಗೆ ಕಳುಹಿಸಿದ್ದರು.

ಆಹಾರ, ಕೊಡುಗೆ, ಅಲಂಕಾರ ಎಲ್ಲವೂ ಪರಿಸರ ಸ್ನೇಹಿಯಾಗಿತ್ತು. ಹಾಲು ತುಪ್ಪಕ್ಕೆ ಬದಲಾಗಿ ಎಳೆನೀರು, ಸೋಯಾ ಹಾಲು ಬಳಸಿದ್ದರು. ಕಾಫಿ ಟೀ ಗೂ ಸೋಯಾ ಹಾಲು ಬಳಸಲಾಗಿತ್ತು. ಪ್ಲಾಸ್ಟಿಕ್ ಕಪ್‌ಗಳಿಗೆ ಬದಲಾಗಿ ಸ್ಟೀಲ್ ಲೋಟ ತಟ್ಟೆಗಳನ್ನು ಬಳಸಿದ್ದರು. ವಿವಾಹಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ 5 ಸಾವಿರಕ್ಕೂ ಹೆಚ್ಚು ವಿವಿಧ ರೀತಿಯ ಸಸಿಗಳನ್ನು ವಿತರಿಸಲಾಗಿತ್ತು.

ಆಹ್ವಾನ ಪತ್ರಿಕೆ ಮುದ್ರಣಕ್ಕೆ ಪುನರ್ ಬಳಕೆಯ ಪೇಪರ್ ಬಳಸಲಾಗಿತ್ತು. ಯಾವುದೇ ಸಂಬಂಧಿಕರಿಗೆ ರೇಷ್ಮೆ, ಉಣ್ಣೆ ಅಥವಾ ಚರ್ಮದ ಉಡುಗೊರೆಗಳನ್ನು ನೀಡಿರಲಿಲ್ಲ. ಸ್ವತಃ ಸೌಮ್ಯ ಅವರು ತಮ್ಮ ಅಲಂಕಾರಕ್ಕೆ ಕಾಸ್ಮೆಟಿಕ್ ಬಳಸಿರಲಿಲ್ಲ ಎನ್ನುವುದು ಅನುಕರಣೀಯ ಸಂಗತಿ. ಪರಿಸರ ಸ್ನೇಹಿ ಮದುವೆ ಇವರದ್ದು.

ತೇಜಸ್ವಿ ಸೂರ್ಯ, ಸೌಮ್ಯ ರೆಡ್ಡಿ ಮುಖಾಮುಖಿ

ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ. ಪಕ್ಷದಿಂದ ಯಾರನ್ನೇ ನಿಲ್ಲಿಸಿದರೂ ಗೆಲ್ಲಿಸುವ ಶಕ್ತಿ ಸಂಘಟನೆಗೆ ಇದೆ. ಇದೇ ಕಾರಣಕ್ಕೆ 2019 ರಲ್ಲಿ ತೇಜಸ್ವಿ ಸೂರ್ಯ ಗೆದ್ದಿದ್ದರು. ಈಗ ತೇಜಸ್ವಿ ಸೂರ್ಯ ಮತ್ತು ಸೌಮ್ಯ ರೆಡ್ಡಿ ಮುಖಾಮುಖಿಯಾಗಿದ್ದಾರೆ. ಆರಂಭದಲ್ಲಿ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿಯ ಸ್ಪರ್ಧೆಗೆ ಒಪ್ಪಿರಲಿಲ್ಲ. ಇಲ್ಲಿ ಕಣಕ್ಕಿಳಿಯಲು ಯಾರೂ ಒಪ್ಪದ ಕಾರಣ ಸೌಮ್ಯ ರೆಡ್ಡಿ ಅಭ್ಯರ್ಥಿಯಾಗಲು ಒಪ್ಪಿದ್ದಾರೆ.

ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಗೆದ್ದಿದ್ದರೆ ಗೋವಿಂದರಾಜ ನಗರ, ವಿಜಯನಗರ, ಬಿಟಿಎಂ ಲೇ ಔಟ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

2019ರ ಚುನಾವಣೆಯಲ್ಲಿ (Lok Sabha Election) ಬಿಜೆಪಿಯ ತೇಜಸ್ವಿ ಸೂರ್ಯ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ವಿರುದ್ದ 3,31,192 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಅಭ್ಯರ್ಥಿ ಗೌಣ. ಪ್ರಧಾನಿ ಮೋದಿ ನಾಮಬಲ ಹೆಚ್ಚು ಕೆಲಸ ಮಾಡುತ್ತದೆ. ಜಾತಿ ಮರೆತು ಯುವಕರು ಬಿಜೆಪಿ ಬೆನ್ನಿಗೆ ನಿಲ್ಲುವುದು ಎದ್ದು ಕಾಣುತ್ತಿದೆ.

1996 ರಿಂದ 2014 ರವರೆಗೆ ನಡೆದ ಆರು ಚುನಾವಣೆಗಳಲ್ಲಿ ಅನಂತಕುಮಾರ್‌ ಗೆಲುವು ಸಾಧಿಸುತ್ತಾ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಅವರ ನಿಧನದ ಬಳಿಕ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಗೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ಸೌಮ್ಯ ಅವರ ನೆರವಿಗೆ ಬರಲಿವೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನೇರ ಪೈಪೋಟಿ ಯಂತೂ ಇದ್ದೇ ಇರುತ್ತದೆ. (ವರದಿ: ಎಚ್‌. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ