logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 24 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾಂಗ್ರೆಸ್; ಬಹುತೇಕ ರಾಜಕಾರಣಿಗಳ ಕುಟುಂಬದವರಿಗೆ ಟಿಕೆಟ್

ಕರ್ನಾಟಕದ 24 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾಂಗ್ರೆಸ್; ಬಹುತೇಕ ರಾಜಕಾರಣಿಗಳ ಕುಟುಂಬದವರಿಗೆ ಟಿಕೆಟ್

Raghavendra M Y HT Kannada

Mar 22, 2024 10:47 AM IST

google News

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಅಭ್ಯರ್ಥಿಗಳ ಸಭೆ ನಡೆಯಿತು.

    • ಕಾಂಗ್ರೆಸ್‌ನಲ್ಲಿ ಸಚಿವರ ಬದಲಾಗಿ ಅವರ ಕುಟುಂಬದವರಿಗೆ ಲೋಕಸಭೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ ಅನ್ನೋದರ ವಿವರ ಇಲ್ಲಿದೆ. (ವರದಿ: ಎಚ್ ಮಾರುತಿ)
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಅಭ್ಯರ್ಥಿಗಳ ಸಭೆ ನಡೆಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧದ ಸಿದ್ದತೆಗಳನ್ನು ತೀವ್ರಗೊಳಿಸುವ ಸಂಬಂಧ ಸಚಿವರು, ಹಿರಿಯ ಶಾಸಕರು ಮತ್ತು ಅಭ್ಯರ್ಥಿಗಳ ಸಭೆ ನಡೆಯಿತು.

ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಎರಡೂ ಪಟ್ಟಿ ಸೇರಿಸಿ ಒಟ್ಟು 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇವರಲ್ಲಿ ಆರು ಮಹಿಳೆಯರಿಗೆ ಟಿಕೆಟ್ ನಿಡಿರುವುದು ಈ ಬಾರಿಯ ವಿಶೇಷ. ಗುರುವಾರ (ಮಾರ್ಚ್ 21) ಬಿಡುಗಡೆ ಮಾಡಿರುವ 17 ಕ್ಷೇತ್ರಗಳ ಪಟ್ಟಿಯಲ್ಲಿ ಐವರು ಮಹಿಳೆಯರಿಗೆ ಟಿಕೆಟ್ ಪ್ರಕಟಿಸಲಾಗಿದೆ. ಈ ಸಂಖ್ಯೆಯಲ್ಲಿ ಮಹಿಳೆಯರನ್ನು ಗುರುತಿಸಿರುವ ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ಮೆಚ್ಚಲೇಬೇಕು. ಒಂದು ವೇಳೆ ಸಾಮಾನ್ಯ ಮಹಿಳಾ ಕಾರ್ಯಕರ್ತೆಯರಿಗೆ ಟಿಕೆಟ್ ನೀಡಿದ್ದರೆ ಪ್ರಜಾಪ್ರಭುತ್ವಕ್ಕೆ ಮತ್ತಷ್ಟು ಶೋಭೆ ಬರುತ್ತಿತ್ತು. ಆದರೆ ಇವರ್ಯಾರು ಸಾಮಾನ್ಯ ಕಾರ್ಯಕರ್ತರಲ್ಲ. ಎಲ್ಲರೂ ಪ್ರಭಾವಿಗಳ ಕುಟುಂಬಗಳಿಗೆ ಸೇರಿದವರೇ ಆಗಿದ್ದಾರೆ. ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಗೀತಾ ಶಿವರಾಜಕುಮಾರ್ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರಿ ಮತ್ತು ಖ್ಯಾತ ನಟ ಶಿವರಾಜ ಕುಮಾರ್ ಅವರ ಪತ್ನಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಹೋದರಿಯ ಬೆನ್ನಿಗೆ ನಿಂತಿದ್ದಾರೆ.

ಬಾಗಲಕೋಟೆಯಿಂದ ಕಣಕ್ಕಿಳಿದಿರುವ ಸಂಯುಕ್ತಾ ಪಾಟೀಲ್ ಅವರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ. ಚಿಕ್ಕೋಡಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ ಸಚಿವ ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಮತ್ತು ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾಜಿ ಶಾಸಕಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇವರ ತಂದೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾಗಿದ್ದರು.

ಹೇಗೆ ದೇಶದ ಸಂಪತ್ತು ಶೇ.1 ರಷ್ಟು ಜನಸಂಖ್ಯೆಯ ಕೈಯಲ್ಲಿದೆ ಎಂಬ ವರದಿ ಇತ್ತೀಚೆಗಷ್ಟೇ ವರದಿಯಾಗಿತ್ತು. ಈಗ ರಾಜಕಾರಣವೂ ಕೆಲವೇ ಕುಟುಂಬಗಳ ಹಿಡಿತಕ್ಕೆ ಜಾರುತ್ತಿದೆ. ದಶಕದ ಹಿಂದೆ ದೇಶದ ಉದ್ದಗಲಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬವನ್ನು ಮಾತ್ರ ಕುಟುಂಬ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಲಾಗುತ್ತಿತ್ತು. ಇದೀಗ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಇಂತಹ ಟೀಕೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುವ ನೈತಿಕ ಹಕ್ಕಿಲ್ಲ. ಎಲ್ಲ ಪಕ್ಷಗಳೂ ನೈತಿಕೆಯನ್ನು ಕಳೆದುಕೊಂಡು ಬಿಟ್ಟಿವೆ.

ತಮ್ಮ ಕುಟುಂಬದ ಸದಸ್ಯರನ್ನು ಆರಿಸಿ ತರಲು ನಡೆಸುವ ಪ್ರಯತ್ನವನ್ನು ಸಾಮಾನ್ಯ ಕಾರ್ಯಕರ್ತರನ್ನೂ ಗೆಲ್ಲಿಸಿಕೊಂಡು ಬರುವ ತಾಕತ್ತನ್ನು ಏಕೆ ಯಾವ ರಾಜಕಾರಣಿಯೂ ತೋರಿಸುತ್ತಿಲ್ಲ ಅಥವಾ ಏಕೆ ಮತದಾರ ಪ್ರಶ್ನಿಸುತ್ತಿಲ್ಲ? ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳು ಒಂದು ಕುಟುಂಬದ ಜಹಗೀರಾಗಬೇಕೆ? ಅವರ ಕುಟುಂದ ಪತ್ನಿ, ಪುತ್ರಿ, ಸೊಸೆ, ಸಹೋದರ ಸಹೋದರಿಯರು ಮಾತ್ರ ಶಾಸನಸಭೆಗಳನ್ನು ಪ್ರವೇಶಿಸಬೇಕೇ? ಕಟ್ಟ ಕಡೆಯ ಕಾರ್ಯಕರ್ತರಿಗೆ ಸಾಮರ್ಥ್ಯ ಇರುವುದಿಲ್ಲವೇ? ಹೀಗೆ ಪ್ರಶ್ನಿಸುತ್ತಾ ಹೋದರೆ ಅಭ್ಯರ್ಥಿ ಸೇರಿದಂತೆ ಅವರ ಪೋಷಕರು ಪಲಾಯನ ಮಾಡದೆ ವಿಧಿ ಇಲ್ಲ. ಆದರೆ ರಾಜಕೀಯ ಪಕ್ಷಗಳ ಧೈರ್ಯ ನೋಡಿದರೆ ಪ್ರಶ್ನಿಸುವ ನೈತಿಕತೆಯನ್ನೇ ಮತದಾರ ಕಳೆದುಕೊಂಡು ಬಿಟ್ಟಿದ್ದಾನೆ ಎಂಬ ಆತಂಕ ಉಂಟಾಗುತ್ತದೆ. ಇನ್ನು ಲಿಂಗಭೇದವನ್ನು ಮರೆತು ನೋಡಿದರೆ ಕುಟುಂಬ ರಾಜಕಾರಣ ಮತ್ತಷ್ಟು ಕಣ್ಣಿಗೆ ರಾಚುತ್ತದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರ ಮೃಣಾಲ್ ಹೆಬ್ಬಾಳ್ಕರ್‌ಗೆ ಬೆಳಗಾವಿಯಿಂದ ಮತ್ತು ಬೀದರ್ ಕ್ಷೇತ್ರದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಮ್ಮ ಪುತ್ರ ಸಾಗರ್ ಖಂಡ್ರೆಗೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎನ್ನುವುದು ಮುಖ್ಯವಲ್ಲ. ಸೋತರೂ ಗೆದ್ದರೂ ಈ ಕ್ಷೇತ್ರ ಇವರಿಗೆ ಮೀಸಲಾಗಿ ಬಿಡುತ್ತದೆ. ಸಹಜವಾಗಿಯೇ 5 ವರ್ಷಗಳ ನಂತರ ಎದುರಾಗುವ ಚುನಾವಣೆಯಲ್ಲಿ ಮತ್ತೆ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ. ಈ ಪಿಡುಗು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹಬ್ಬಿದೆ ಎಂದು ಭಾವಿಸಬೇಕಿಲ್ಲ. ಬಿಜೆಪಿ, ಜೆಡಿಎಸ್ ಪಕ್ಷಗಳನ್ನೂ ಬಿಟ್ಟಿಲ್ಲ. ಈ ಬಾರಿ 28 ಲೋಕಸಭಾ ಸದಸ್ಯರ ಪೈಕಿ ಕನಿಷ್ಠ 20 ಸದಸ್ಯರು ರಾಜಕೀಯ ಕುಟಂಬಗಳಿಗೆ ಸೇರಿರುವವರೇ ಆಗಿರುತ್ತಾರೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವ ವಿಷಯವಂತೂ ಅಲ್ಲವೇ ಅಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ