ಸನ್ಯಾಸ ದೀಕ್ಷೆ ಪಡೆಯಲಿದ್ದಾರಂತೆ ಮಂಡ್ಯದ ಅಪರ ಜಿಲ್ಲಾಧಿಕಾರಿ, ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕ ಸಾಧ್ಯತೆ; ಯಾರಿವರು ನಾಗರಾಜು?
Dec 03, 2024 07:49 PM IST
ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ತಮ್ಮ ಸರಕಾರಿ ಹುದ್ದೆ ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
- ಮಂಡ್ಯದ ಕೆಎಎಸ್ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ತಮ್ಮ ಸರಕಾರಿ ಹುದ್ದೆ ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇವರು ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ.
ಬೆಂಗಳೂರು: ಮಂಡ್ಯದ ಕೆಎಎಸ್ ಅಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ಅವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ ಎಂಬ ವದಂತಿಯಿದೆ.. ಮಂಡ್ಯ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಹದಿಮೂರು ವರ್ಷಗಳ ಬಳಿಕ ಇವರು ಮತ್ತೆ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವತ್ತ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಅಧ್ಯಾತ್ಮದ ಕಡೆಗೆ ಹೆಚ್ಚಿನ ಒಲವು ಹೊಂದಿರುವ ಇವರು 2011ರಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಸಮಯದಲ್ಲೇ ಆದಿ ಚುಂಚನಗಿರಿ ಮಠದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಇದೀಗ ಮತ್ತೆ ಸನ್ಯಾಸದತ್ತ ಮುಖ ಮಾಡಿದ್ದಾರೆ. 2021ರಲ್ಲಿ ಇವರು ಸನ್ಯಾಸ ದೀಕ್ಷೆ ಪಡೆದ ಸಮಯದಲ್ಲಿ ನಿಶ್ಚಲಾನಂದನಾಥ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಬಳಿಕ ಸಾರ್ವಜನಿಕರು, ಆಪ್ತರು, ಕುಟುಂಬದವರ ಒತ್ತಡದಿಂದ ಮತ್ತೆ ಸರ್ಕಾರಿ ಹುದ್ದೆಗೆ ಮರಳಿದ್ದರು.
ಕನ್ನಡ ಏಷ್ಯಾನೆಟ್ ನ್ಯೂಸ್ ವರದಿ ಪ್ರಕಾರ ವಿಶ್ವ ಒಕ್ಕಲಿಗ ಮಠದ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಅನಾರೋಗ್ಯ ಕಾರಣದಿಂದ ಪೀಠವನ್ನು ತ್ಯಜಿಸುತ್ತಿದ್ದಾರೆ. ಇವರ ಸ್ಥಾನವನ್ನು ಡಾ. ಹೆಚ್ ಎಲ್ ನಾಗರಾಜು ತುಂಬುವ ಸೂಚನೆ ಇದೆ ಎನ್ನಲಾಗಿದೆ. ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರೊಂದಿಗೆ ನಾಗರಾಜು ಅವರು ನಿರಂತರ ಸಂಪರ್ಕ ದಲ್ಲಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಹುದ್ದೆಗೆ ರಾಜೀನಾಮೆ ನೀಡದೆ, ಸ್ವಯಂ ನಿವೃತ್ತಿ ಪಡೆಯುವ ಸೂಚನೆ ಇದೆ ಎಂದು ಹೇಳಲಾಗಿದೆ.
ಸಚಿವ ಎನ್ ಚಲುವರಾಯಸ್ವಾಮಿ ಏನಂದ್ರು?
ಜಿಲ್ಲಾಧಿಕಾರಿ ಆಗಬೇಕಿದ್ದ ಅಧಿಕಾರಿ ಸನ್ಯಾಸಿ ಆಗುತ್ತಿರುವ ವಿಚಾರದ ಕುರಿತು ಸಚಿವ ಎನ್ ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ. ಅದು ಅವರ ವೈಯುಕ್ತಿಕ ವಿಚಾರ. ಅವರು ದೀಕ್ಷೆ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅವರು ಹಿಂದೆಯೇ ದೀಕ್ಷೆ ಪಡೆಯಲು ಮುಂದಾಗಿದ್ದರು. ಅನುಯಾಯಿಗಳ ಒತ್ತಾಯದ ಮೇರೆಗೆ ವಾಪಸ್ಸಾಗಿದ್ದರು. ಇನ್ನ ಎರಡ್ಮೂರು ದಿನಗಳಲ್ಲಿ ರಜೆ ಕೇಳಿದ್ದಾರೆ. ರಜೆ ಮುಗಿದ ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಬಹುದು ಎಂದು ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಯಾರಿವರು ಡಾ. ಹೆಚ್. ಎಲ್. ನಾಗರಾಜು?
ಡಾ. ಹೆಚ್. ಎಲ್. ನಾಗರಾಜು ಅವರು ತುಮಕೂರು ಜಿಲ್ಲೆಯ ಕುಣಿಗಲ್‌ನ ಹೊನ್ನೇನಹಳ್ಳಿ ಗ್ರಾಮದವರು ಮತ್ತು ಲಿಂಗಯ್ಯ ಮತ್ತು ಹೊನ್ನಮ್ಮ ದಂಪತಿಗೆ ಜನಿಸಿದರು. 2005ರ ಬ್ಯಾಚ್ ಕೆಎಎಸ್ ಅಧಿಕಾರಿಯಾಗಿದ್ದಾರೆ. ಇವರು ಜುಲೈ 16, 2011 ರಂದು ಸನ್ಯಾಸ ದೀಕ್ಷೆ ಪಡೆದಿದ್ದರು. ಆ ಸಮಯದಲ್ಲಿ ಸರಕಾರಿ ಉದ್ಯೋಗಕ್ಕೆ ರಜೆ ಮಾಡಿದ್ದರು. ಬಳಿಕ ಎಲ್ಲರ ಒತ್ತಾಯದ ಮೇರೆಗೆ ಸರಕಾರಿ ಉದ್ಯೋಗಕ್ಕೆ ವಾಪಸ್ಸಾಗಿದ್ದರು. 15 ದಿನಗಳ ರಜೆಯ ಕಾಲ ಇವರು ಸನ್ಯಾಸ ದೀಕ್ಷೆ ಪಡೆದಿದ್ದರು. ಅಧ್ಯಾತ್ಮದ ಕುರಿತು ಸಾಕಷ್ಟು ಒಲವು ಹೊಂದಿರುವ ಇವರು ಮತ್ತೆ ಸನ್ಯಾಸ ದೀಕ್ಷೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಮಂಡ್ಯದ ಕೆಎಎಸ್ ಅಧಿಕಾರಿ ಡಾ. ಹೆಚ್ ಎಲ್ ನಾಗರಾಜು ತಮ್ಮ ಕಾರ್ಯವೈಖರಿಯಿಂದ ಎಲ್ಲರ ಗಮನ ಸೆಳೆದಿದ್ದರು. ಜನ ಸ್ನೇಹಿ ಅಧಿಕಾರಿ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದರು. ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮುಂತಾದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮೈಷುಗರ್ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 7ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರು ಹಾಗೂ ಹಣಕಾಸು ಸಮಿತಿಯ ಜವಾಬ್ದಾರಿಯೂ ಇವರಿಗಿದೆ. ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡುವ ಇವರು ಜನಸ್ನೇಹಿ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.