ತಮ್ಮ ಮಗಳಿಗೆ ಮದುವೆ ಮಾಡಿಸಿರುವ ಸದ್ಗುರು ಬೇರೆ ಮಹಿಳೆಯರು ಸನ್ಯಾಸಿಯಂತೆ ಬದುಕಲು ಪ್ರೇರೇಪಿಸೋದು ಯಾಕೆ; ಹೈಕೋರ್ಟ್ ಪ್ರಶ್ನೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ತಮ್ಮ ಮಗಳಿಗೆ ಮದುವೆ ಮಾಡಿಸಿರುವ ಸದ್ಗುರು ಬೇರೆ ಮಹಿಳೆಯರು ಸನ್ಯಾಸಿಯಂತೆ ಬದುಕಲು ಪ್ರೇರೇಪಿಸೋದು ಯಾಕೆ; ಹೈಕೋರ್ಟ್ ಪ್ರಶ್ನೆ

ತಮ್ಮ ಮಗಳಿಗೆ ಮದುವೆ ಮಾಡಿಸಿರುವ ಸದ್ಗುರು ಬೇರೆ ಮಹಿಳೆಯರು ಸನ್ಯಾಸಿಯಂತೆ ಬದುಕಲು ಪ್ರೇರೇಪಿಸೋದು ಯಾಕೆ; ಹೈಕೋರ್ಟ್ ಪ್ರಶ್ನೆ

ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ತಮ್ಮ ಮಗಳಿಗೆ ಮದುವೆ ಮಾಡಿಸಿ, ಇತರ ಮಹಿಳೆಯರು ಮಾತ್ರ ಸನ್ಯಾಸಿ ಜೀವನಶೈಲಿಯನ್ನು ಉತ್ತೇಜಿಸಿದ್ದಾರೆ ಎಂಬ ವಿಚಾರವಾಗಿ ತಮಿಳುನಾಡಿನ ಮದ್ರಾಸ್ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಬೇಕಾಗಿ ಬಂದಿದೆ. ಈ ಸಂಬಂಧ ಧ್ವನಿಯೆತ್ತಿರುವ ನ್ಯಾಯಾಲಯ ಮಹಿಳೆಯರ ಸ್ವಾತಂತ್ರ್ಯ ಹಾಗೂ ಬುದ್ಧಿವಂತಿಕೆಯ ನಿರ್ಧಾರ ಕುರಿತು ಒತ್ತಿ ಹೇಳಿದೆ.

ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್

ವಯಸ್ಸಿಗೆ ಬಂದ ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಂಡು ತಮಗೆ ಇಷ್ಟವಾದ ಮಾರ್ಗಗಳನ್ನು ಆಯ್ಕೆ ಮಾಡುಕೊಳ್ಳಬಹುದು ಎಂದು ಮದ್ರಾಸ್ ಹೈಕೋರ್ಟ್ ಉದ್ಘರಿಸಿದೆ. ವಯಸ್ಕರ “ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆ” ಕುರಿತು ಒತ್ತಿ ಹೇಳಿರುವ ಘನ ನ್ಯಾಯಾಲಯ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಯುವತಿಯರು ತಮ್ಮ ತಲೆ ಬೋಳಿಸಿಕೊಂಡು, ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸಿಗಳಂತೆ ಬದುಕಲು ಸದ್ಗುರು ಪ್ರೋತ್ಸಾಹಿಸುತ್ತಿರುವುದು ಯಾಕೆ ಎಂದು ಪ್ರಶ್ನಿಸಿದೆ.

ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರೊಬ್ಬರು, ತಮ್ಮ ಇಬ್ಬರು ಸುಶಿಕ್ಷಿತ ಹೆಣ್ಣು ಮಕ್ಕಳಿಗೆ ಇಶಾ ಯೋಗ ಕೇಂದ್ರದಲ್ಲಿ ಶಾಶ್ವತವಾಗಿ ಉಳಿಯುವಂತೆ ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಮೂರ್ತಿಗಳಾದ ಎಸ್ಎಂ ಸುಬ್ರಮಣ್ಯಂ ಮತ್ತು ವಿ ಶಿವಜ್ಞಾನಂ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ ದ್ವಿಸದಸ್ಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಮ್ಮ ಹೆಣ್ಣುಮಕ್ಕಳನ್ನು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ನಿವೃತ್ತ ಪ್ರೊಫೆಸರ್‌ ಎಸ್ ಕಾಮರಾಜ್ ಅರ್ಜಿ ಸಲ್ಲಿಸಿದ್ದರು.

ಕಾಮರಾಜ್ ಅವರ 42 ವರ್ಷ ಹಾಗೂ 39 ವರ್ಷದ ಇಬ್ಬರು ಹೆಣ್ಣುಮಕ್ಕಳು ಸದ್ಯ ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲೇ ಇದ್ದಾರೆ. ಸೆಪ್ಟೆಂಬರ್‌ 30ರ ಸೋಮವಾರ ಇವರಿಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತಾವಿಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಇಶಾ ಫೌಂಡೇಶನ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ತಮ್ಮನ್ನು ಯಾರೂ ಬ್ರೈನ್‌ ವಾಶ್‌ ಮಾಡಿ ಉಳಿಸಿಕೊಂಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದರು.

ಈ ಪ್ರಕರಣಕ್ಕೆ ದಶಕಗಳೇ ಕಳೆದಿದೆ. ಆಗ ಈ ಇಬ್ಬರು ಮಹಿಳೆಯರ ಪೋಷಕರು ಆರೋಪ ಮಾಡಿದ್ದರು. ಮಕ್ಕಳು ತಮ್ಮಿಂದ ದೂರವಾದ ನಂತರ ಅವರ ಜೀವನವು ನರಕವಾಗಿ ಮಾರ್ಪಟ್ಟಿದೆ ಎಂದು ವರ್ಷಗಳ ಹಿಂದೆ ಹೆತ್ತವರು ಇದೇ ರೀತಿಯ ಸಾಕ್ಷ್ಯಗಳನ್ನು ನೀಡಿದ್ದರು. ಆ ಸಂದರ್ಭದಲ್ಲಿ ನ್ಯಾಯಾಧೀಶರು ಪ್ರಕರಣದ ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಿದರು. ಅಲ್ಲದೆ ಇಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಸಂಗ್ರಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

ತಮ್ಮ ಮಗಳಿಗೆ ಮದುವೆ, ಬೇರೆ ಮಕ್ಕಳಿಗೆ ಮಾತ್ರ ಏಕೆ ಸನ್ಯಾಸ?

“ತಮ್ಮ ಮಗಳಿಗೆ ಮದುವೆ ಮಾಡಿಕೊಟ್ಟು ಜೀವನದಲ್ಲಿ ಖುಷಿಯಿಂದ ಬದುಕುವಂತೆ ಮಾಡಿರುವ ವ್ಯಕ್ತಿಯು (ಸದ್ಗುರು), ಇತರರ ಹೆಣ್ಣುಮಕ್ಕಳು ಮಾತ್ರ ತಲೆಬೋಳಿಸಿಕೊಂಡು ಸನ್ಯಾಸಿಯ ಜೀವನ ನಡೆಸಲು ಪ್ರೋತ್ಸಾಹಿಸುವುದು ಏಕೆ” ಎಂದು ನ್ಯಾಯಮೂರ್ತಿ ಶಿವಜ್ಞಾನಂ ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಹೇಳಿಕೆಗೆ ಉತ್ತರ ನೀಡಿರುವ ಇಶಾ ಫೌಂಡೇಶನ್ ಮಹಿಳೆಯರು ಸ್ವಯಂಪ್ರೇರಣೆಯಿಂದ ತಮ್ಮೊಂದಿಗೆ ಇರುವ ಆಯ್ಕೆ ಮಾಡುತ್ತಾರೆ ಎಂದು ಪ್ರತಿಪಾದಿಸಿದೆ. “ವಯಸ್ಕರು ತಮಗೆ ಬೇಕದ ನಿರ್ಧಾರಕ್ಕೆ ಬರುವ, ಸೂಕ್ತ ಮಾರ್ಗಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಮತ್ತು ಬುದ್ಧಿವಂತಿಕೆ ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ನಾವು ಯಾರಿಗೂ ಮದುವೆ ಅಥವಾ ಸನ್ಯಾಸತ್ವವನ್ನು ಹೇರುವುದಿಲ್ಲ. ಏಕೆಂದರೆ ಇವು ಅವರವರ ವೈಯಕ್ತಿಕ ಆಯ್ಕೆಗಳು. ಬ್ರಹ್ಮಚರ್ಯ ಅಥವಾ ಸನ್ಯಾಸ ಸ್ವೀಕರಿಸಿದ ಕೆಲವರೊಂದಿಗೆ ಸನ್ಯಾಸಿಗಳಲ್ಲದ ಸಾವಿರಾರು ಜನರಿಗೆ ಇಶಾ ಯೋಗ ಕೇಂದ್ರವು ಸ್ಥಳಾವಕಾಶ ಕಲ್ಪಿಸುತ್ತದೆ” ಎಂದು ಫೌಂಡೇಶನ್ ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.