logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ನಾಯಕರೇ ವಿಜೃಂಭಿಸುತ್ತಾರೆ; ಡಾ ನರಹಳ್ಳಿ ಬಾಲಸುಬ್ರಮಣ್ಯ ಬೇಸರ

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ನಾಯಕರೇ ವಿಜೃಂಭಿಸುತ್ತಾರೆ; ಡಾ ನರಹಳ್ಳಿ ಬಾಲಸುಬ್ರಮಣ್ಯ ಬೇಸರ

Rakshitha Sowmya HT Kannada

Nov 21, 2024 10:27 PM IST

google News

ಇಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಾ ನರಹಳ್ಳಿ ಬಾಲಸುಬ್ರಮಣ್ಯ

  • Mandya Kannada Sahitya sammelana: ಡಿಸೆಂಬರ್‌ 20, 21, 22 ರಂದು 3 ದಿನಗಳ ಕಾಲ ನಡೆಯಲಿರುವ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಸುಮಾರು 58 ಎಕರೆ ಜಾಗವನ್ನು ಗುರುತಿಸಿದೆ. ಈಗಿನ ಸಮ್ಮೇಳನಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಮಣ್ಯ ಸಮ್ಮೇಳನಗಳ ಸ್ವರೂಪ ಬದಲಾಗಬೇಕು ಎಂದಿದ್ದಾರೆ. 

ಇಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಾ ನರಹಳ್ಳಿ ಬಾಲಸುಬ್ರಮಣ್ಯ
ಇಂದಿನ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಡಾ ನರಹಳ್ಳಿ ಬಾಲಸುಬ್ರಮಣ್ಯ

Mandya Kannada Sahitya sammelana: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಮಂಡ್ಯದಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ. ಡಿಸೆಂಬರ್‌ 20, 21, 22 ರಂದು 3 ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಕನ್ನಡ ಹಬ್ಬಕ್ಕೆ ಜಿಲ್ಲಾಡಳಿತ ಎಲ್ಲಾ ತಯಾರಿ ಮಾಡಿಕೊಂಡಿದೆ. ಈ ಬಾರಿಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊರುಚ (ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ) ಆಯ್ಕೆಯಾಗಿದ್ದಾರೆ.

ಸಾಹಿತ್ಯ ಸಮ್ಮೇಳನ ಪ್ರತಿನಿಧಿಗಳು, ಗಣ್ಯರಿಗೆ ಬೆಲ್ಲ

ಸಾಹಿತ್ಯ ಸಮ್ಮೇಳನಕ್ಕಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸುಮಾರು 58 ಎಕರೆ ಜಾಗವನ್ನು ಜಿಲ್ಲಾಡಳಿತ ಗುರುತು ಮಾಡಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದೆ. ಕೊಡಗು, ಉಡುಪಿ, ಧಾರವಾಡ, ಹುಬ್ಬಳ್ಳಿ, ಚಾಮರಾಜನಗರ ಸೇರಿದಂತೆ ಎಲ್ಲಾ ಜಿಲ್ಲೆಗಳನ್ನೂ ರಥಯಾತ್ರೆಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಗುತ್ತಿದೆ. ನಂತರ ವಿವಿಧ ಕಾರ್ಯಕ್ರಮದ ಆಯೋಜಿಸಿ, ತಾಲೂಕಿನ ಗಡಿ ಭಾಗಗಳಲ್ಲಿ ಬೀಳ್ಕೊಡಲಾಗುತ್ತಿದೆ. ಇನ್ನು ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗಾಗಿ ಪಕ್ಕಾ ಮಂಡ್ಯ ಶೈಲಿಯಲ್ಲಿ ಆಹಾರ ತಯಾರಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಗಿಮುದ್ದೆ, ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ, ಬೆಲ್ಲದ ಕೊಬ್ಬರಿ ಮಿಠಾಯಿ, ಬೆಲ್ಲದ ಮೈಸೂರು ಪಾಕ್, ಕಜ್ಜಾಯ, ರವೆ ಹುಂಡೆ, ಚಪಾತಿ, ಶೇಂಗಾ ಚಟ್ನಿ, ಒಬ್ಬಟ್ಟು, ಪೊಂಗಲ್, ಪುಳಿಯೋಗರೆ, ಜೋಳದ ರೊಟ್ಟಿ, ಹುರುಳಿ ಕಾಳು ಬಸ್ಸಾರು, ಮೊಳಕೆ ಕಾಳು ಸಾರು, ಮಸಪ್ಪಿನ ಸಾರು, ಉಪ್ಸಾರು, ಕಾಳು ಒಗ್ಗರಣೆ ಸೇರಿದಂತೆ ಬಾಯಲ್ಲಿ ನೀರೂರಿಸು ಭಕ್ಷ್ಯವನ್ನು ತಯಾರಿಸಲಾಗುತ್ತಿದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ಧೇಗೌಡ ಮಾಹಿತಿ ನೀಡಿದ್ದಾರೆ.

ಮಂಡ್ಯ ಸೊಗಡಿನ ಊಟ ಉಣಬಡಿಸಲು ಸಕಲ ತಯಾರಿ

ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಮಂಡ್ಯ ಸೊಗಡಿನ ಊಟದ ರುಚಿ ನೋಡುವ ಭಾಗ್ಯ ದೊರೆತರೆ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗುವವರಿಗೆ ಹಾಗೂ ಗಣ್ಯರಿಗೆ ಜಿಲ್ಲೆಯ ಸವಿ ನೆನಪಿಗಾಗಿ ಅರ್ಧ ಕಿಲೋ ಬೆಲ್ಲವನ್ನು ನೀಡುವುದಾಗಿ ಜಿಲ್ಲಾಧಿಕಾರಿ ಕುಮಾರ್‌ ತಿಳಿಸಿದ್ದಾರೆ. ನವೆಂಬರ್‌ 20 ರಂದು ಜಿಲ್ಲಾಧಿಕಾರಿ ಕುಮಾರ್‌, ಕಚೇರಿ ಸಭಾಂಗಣದಲ್ಲಿ ಬೆಲ್ಲ ತಯಾರಿಕಾ ರೈತ ಉತ್ಪಾದಕ ಸಂಸ್ಥೆ ಘಟಕಗಳ ಸಭೆ ನಡೆಸಿ ಮಾತನಾಡಿದರು. ಸಮ್ಮೇಳದಲ್ಲಿ ಸುಮಾರು 10 ಸಾವಿರ ಪ್ರತಿನಿಧಿಗಳು ನೋಂದಣೆ ಆಗುವ ನಿರೀಕ್ಷೆ ಇದ್ದು ಸುಮಾರು 7-8 ಸಾವಿರ ಕಿಲೋ ಬೆಲ್ಲ ಬೇಕಾಗಬಹುದು. ಆದ್ದರಿಂದ ಬೆಲ್ಲ ತಯಾರಿಕಾ ಘಟಕಗಳು ಚೆನ್ನಾಗಿ ಪ್ಯಾಕ್‌ ಮಾಡಿ, ಅದರ ಮೇಲೆ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಮುದ್ರಿಸಿ ಕೊಡಬೇಕಾಗಿ ಸೂಚಿಸಿದರು.

ಸಮ್ಮೇಳನದ ಸ್ವರೂಪ ಬದಲಾಗಬೇಕು ಎಂದ ಡಾ. ನರಹಳ್ಳಿ ಬಾಲಸುಬ್ರಮಣ್ಯ

ಬುಧವಾರ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ವಾರದ ಅತಿಥಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ. ನರಹಳ್ಳಿ ಬಾಲಸುಬ್ರಮಣ್ಯ, ನಾನು ಅನೇಕ ಸಾಹಿತ್ಯ ಸಮ್ಮೇಳದನದಲ್ಲಿ ಭಾಗವಹಿಸಿದ್ದೇನೆ. ಸಾಹಿತ್ಯ ಪರಿಷತ್ತಿಗೆ ಒಂದು ದೊಡ್ಡ ಪರಂಪರೆ, ಘನತೆ ಇದೆ. ನಾನು ಅಧ್ಯಯನ ಮಾಡಿರುವ ಪ್ರಕಾರ ನಮ್ಮ ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ಕನ್ನಡ ಸಮ್ಮೇಳನ ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕೀಯ ನಾಯಕರೇ ವಿಜೃಂಭಿಸುತ್ತಾರೆ. ಸಾಹಿತ್ಯದ ಹೆಸರಿನಲ್ಲಿ ಏಕೆ ಅತ್ಯಾಚಾರ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈಗಿನ ಸಾಹಿತ್ಯ ಸಮ್ಮೇಳನ ನಮಗೆ ಬೇಕು, ಆದರೆ ಅದರ ಸ್ವರೂಪ ಬದಲಾಗಬೇಕು.

ಮಹಾರಾಷ್ಟ್ರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು ಮಾತ್ರ ವೇದಿಕೆ ಮೇಲೆ ಇರುತ್ತಾರೆ. ಆ ರಾಜ್ಯದ ಮುಖ್ಯಮಂತ್ರಿ ಬಂದರೂ ವೇದಿಕೆ ಬಳಿ ಇರುವ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ನೋಡಿ ಹೋಗುತ್ತಾರೆ ಹೊರತು ವೇದಿಕೆ ಮೇಲೇರುವುದಿಲ್ಲ. ಆದರೆ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳನ್ನು ಬಿಟ್ಟು ಉಳಿದವರು ವಿಜೃಂಭಿಸುತ್ತಾರೆ, ಇದು ನನಗೆ ಆಶ್ಚರ್ಯ ಎನಿಸುತ್ತದೆ. ಇದು ಬದಲಾಗಬೇಕು ಸಾಹಿತ್ಯವನ್ನು ಕೇಂದ್ರೀಕರಿಸಿ ನಾವು ಈ ಉತ್ಸವ ಮಾಡಬೇಕೇ ಹೊರತು, ಸಾಹಿತ್ಯವನ್ನು ಪಕ್ಕಕ್ಕೆ ಇಟ್ಟು ಸಮ್ಮೇಳನ ನಡೆಸಬಾರದು ಎಂದು ಡಾ.ನರಹಳ್ಳಿ ಬಾಲಸುಬ್ರಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ