ಅಂದು ಮಂಡ್ಯ ಸಾಹಿತ್ಯ ಸಮ್ಮೇಳನ ಸಂಘಟಕ, ಈಗ ಮಂಡ್ಯದಲ್ಲೇ ಸಮ್ಮೇಳನಾಧ್ಯಕ್ಷ: 95 ವಯಸ್ಸಿನಲ್ಲೂ ಸಕ್ರಿಯ, ಇದು ಗೊರುಚ ಪರಿಚಯ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಮರ್ಥವಾಗಿ ಕನ್ನಡದ ಕೆಲಸ ಮಾಡಿ ಜನಪದ, ಶರಣಸಾಹಿತ್ಯ, ಸಂಘಟನೆಯಲ್ಲೂ ಗಟ್ಟಿಯಾಗಿ ತೊಡಗಿಸಿಕೊಂಡ ಗೊರುಚ ಅವರನ್ನು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಪರಿಚಯ ಇಲ್ಲಿದೆ.
ಕನ್ನಡ ಸಾಹಿತ್ಯ ವಲಯದಲ್ಲಿ ಚುಟುಕು ಹೆಸರುಗಳಿಂದ ಜನಜನಿತರಾದ ಹಲವು ಸಾಹಿತಿಗಳಲ್ಲಿ ಪ್ರಮುಖ ಹೆಸರು ಗೊರುಚ. ಅಂದರೆ ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ. ಅವರ ಹೆಸರನ್ನು ಗೊರುಚ ಎಂದ ತಕ್ಷಣ ಹತ್ತು ಹಲವು ಆಯಾಮಗಳಲ್ಲಿ ಗುರುತಿಸಲಾಗುತ್ತದೆ. ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾದವರಾಗಿ, ಕನ್ನಡದ ಸಾಹಿತಿಯಾಗಿ. ಜನಪದ ವಿದ್ವಾಂಸರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ದಿಕ್ಸೂಚಿಯಾಗಿ., ಅತ್ಯುತ್ತಮ ಶಿಕ್ಷಕರಾಗಿ, ಸಂಘಟಕರಾಗಿ ಹೀಗೆ ಎಲ್ಲಾ ಆಯಾಮದಲ್ಲೂ ಗಟ್ಟಿತನ ತೋರಿ ತಮ್ಮದೇ ಛಾಪು ಮೂಡಿಸಿದವರು. ಕನ್ನಡ, ನಾಡು ನುಡಿಯ ಸೇವೆ ಎನ್ನುವ ವಿಚಾರ ಬಂದಾಗ ಅವರು ಎಂದು ದಣಿದವರೇ ಅಲ್ಲ. ದಣಿವರಿಯದೇ ಕೆಲಸ ಮಾಡುವ ಗೊರುಚ ಅವರಿಗೆ ಈಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಅರ್ಹ ಆಯ್ಕೆ. ಅದೂ ಮೂರು ದಶಕದ ಹಿಂದೆ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನವನ್ನು ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಂಘಟಿಸಿದ್ದರು. ಈಗ ಅವರಿಗೆ ಕನ್ನಡ ತೇರು ಎಳೆಯುವ ದೊಡ್ಡ ಹೊಣೆಗಾರಿಕೆ. ಇದು ನಿಜಕ್ಕೂ ಸಾಹಿತಿಯೊಬ್ಬರಿಗೆ ದೊರೆತ ಅರ್ಹ ಗೌರವವೇ.
ಬಾಲ್ಯದ ಪ್ರಭಾವ
ಗೊರುಚ ಅವರಿಗೆ ಈಗ ವಯಸ್ಸಾಗಿರಬಹುದು. ಆದರೆ ಮನಸಿನಲ್ಲಿ ಈಗಲೂ ಆಗಿನ ದೃಢತೆಯೇ ಇದೆ. ಏನಾದರೂ ಜವಾಬ್ದಾರಿ ವಹಿಸಿಕೊಂಡರೆ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ, ಇತರರಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಅವರದ್ದು. ಅದನ್ನು ಸತತ ಆರೇಳು ದಶಕದಿಂದಲೂ ಸಾಬೀತುಪಡಿಸಿಕೊಂಡು ಬಂದಿದ್ಧಾರೆ. ಮಲೆನಾಡಿನ ಮಣ್ಣಿನ ಗುಣವೇ ಅಂತಹದ್ದು.
ಗೊರುಚ ಅವರು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆ ಹಿಂದಿನ ತರೀಕೆರೆ, ಈಗಿನ ಅಜ್ಜಂಪುರ ತಾಲೂಕಿನ ಗೋಂಡೇದಹಳ್ಳಿ ಗ್ರಾಮದಲ್ಲಿ. 1930ರ ಮೇ 18 ರಂದು. ತಂದೆ ರುದ್ರಪ್ಪ, ತಾಯಿ ಅಕ್ಕಮ್ಮ. ಗೊರುಚ ಜನಿಸಿದಾಗ ಸ್ವಾತಂತ್ರ್ಯ ಹೋರಾಟದ ಪ್ರಭಾವ ಜೋರಾಗಿತ್ತು. ಬಾಲಕ ಚನ್ನಬಸಪ್ಪ ಅವರ ಮೇಲೆ ಇದರ ಪ್ರಭಾವವೂ ಬೀರಿತ್ತು.ಅವರು ತಮ್ಮ ಸುತ್ತಮುತ್ತಲಿನ ಊರಿನಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದರು. ಸ್ವಾತಂತ್ರ್ಯ ಲಭಿಸಿದಾಗ ಚನ್ನಬಸಪ್ಪ ಅವರು ನವ ತರುಣ. ಆಗಲೇ ಮೆಟ್ರಿಕ್ ಪಾಸಾಗಿ 18 ನೇ ವಯಸ್ಸಿನಲ್ಲಿಯೇ ಶಿಕ್ಷಕರ ವೃತ್ತಿಯನ್ನು ಆರಿಸಿಕೊಂಡರು. ಅವರಿಗೆ ಅದು ಪ್ರೀತಿಯ ಕಾಯಕವೂ ಆಗಿತ್ತು. ಗಾಂಧೀಜೀ ಅವರ ಪ್ರಭಾವಕ್ಕೆ ಒಳಗಾಗಿದ್ದ ಚನ್ನಬಸಪ್ಪ ಅವರು ಸಮಾಜ ಶಿಕ್ಷಣವನ್ನು ಗಾಂಧೀ ಗ್ರಾಮದಲ್ಲಿ ಪಡೆದುಕೊಂಡರು.
ಗೊರುಚ ಅವರು ಹೀಗೆ ಸಮಾಜದ ಹಲವು ಆಯಾಮಗಳಲ್ಲಿ ತೊಡಗಿಸಿಕೊಳ್ಳಲು ಗ್ರಾಮ ಸ್ವರಾಜ್ಯ ಚಿಂತನೆಯೂ ಪ್ರೇರಣೆಯಾಯಿತು. ಗೊರುಚ ಅವರು ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಲ್ಲಿ ಕೆಲಸ ಮಾಡಿದರು.
ಕನ್ನಡಮ್ಮನ ಸೇವೆ
ಸಾಹಿತ್ಯದಡೆಗೂ ಆಕರ್ಷಿತರಾಗಿ ಓದುವ ಅಭ್ಯಾಸವನ್ನು ರೂಢಿಸಿಕೊಂಡರು. ಬರವಣಿಗೆಯೂ ಅವರಿಗೆ ರೂಡಿಸಿತು.ಜನಪದ ವಲಯವೂ ಅವರ ಮತ್ತೊಂದು ಆಸಕ್ತಿಯ ವಲಯವಾಗಿತ್ತು. ಎರಡರ ಸಂಯೋಜನೆಯೊಂದಿಗೆ ಗೊರುಚ ಅವರು ಹೆಚ್ಚು ಕೆಲಸ ಮಾಡಿದರು.ಕನ್ನಡಕ್ಕೆ ಪೂರಕವಾದ ಹೆಚ್ಚು ಕೆಲಸಗಳು ಅವರಿಂದ ಆದವು.
ಅದರಲ್ಲೂ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮಾಡಿದ ಮೂರು ವರ್ಷದ ಕೆಲಸ ಮೂರು ದಶಕದ ನಂತರವೂ ಮರೆಯಲಾರದಂತವು.
1992ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ (1993), ಮಂಡ್ಯ (1994 ), ಬಾಗಲಕೋಟೆಯ ಮುಧೋಳಗಳಲ್ಲಿ (1995) 62, 63 , 64ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರ ಅವಧಿಯಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟವಾಗಿವೆ.
ಕೆಲವು ನೂತನ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದರ ಜತೆಗೆ ಪರಿಷತ್ತಿನ ಆರ್ಥಿಕ ಭದ್ರತೆಗೆ ವಿಶೇಷ ಗಮನವನ್ನು ಕೊಟ್ಟಿದ್ದು ಗೊರುಚ ಅವರ ಅಧಿಕಾರಾವಧಿಯಲ್ಲಿ ಗಮನಿಸುವ ವಿಚಾರ.
ಪರಿಷತ್ತಿನಲ್ಲೇ ಹೆಚ್ಚು ವೇಳೆ ಇದ್ದು ರಜಾ ದಿನಗಳಲ್ಲೂ ಪರಿಷತ್ತಿನಲ್ಲಿ ಕಾರ್ಯ ನಿರ್ವಹಣೆ ಮಾಡಿದಂಥ ಕಾರ್ಯನಿಷ್ಠ ಕ್ರಿಯಾಶಾಲಿ ಅಧ್ಯಕ್ಷರಲ್ಲಿ ಒಬ್ಬರು ಗೊರುಚ ಅವರು. ಎಷ್ಟೋ ವೇಳೆ ಅನಾರೋಗ್ಯವನ್ನೂ ಲೆಕ್ಕಿಸದೆ ಪರಿಷತ್ತಿನ ಕಾರ್ಯ ನಿರ್ವಹಣೆಯಲ್ಲಿ ಭಾಗವಹಿಸಿರುವುದು ಅವರ ವೈಶಿಷ್ಟ್ಯವಾಗಿದೆ. ಜಿ. ನಾರಾಯಣರಂತೆ ತ್ರೈಮಾಸಿಕ ಯೋಜನೆಯನ್ನು ಸಿದ್ಧಪಡಿಸಿ ಪರಿಷತ್ತಿನ ಸೇವೆಗೆ ಅವರು ಕಾರ್ಯಪ್ರವೃತ್ತರಾಗಿದ್ದದ್ದು ಗಮನಾರ್ಹಸಂಗತಿ ಎಂದು ಕಸಾಪದ ಪ್ರತಿನಿಧಿಗಳು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
ಕೃತಿಗಳು ಹಲವು
ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವ ಗೊರುಚ ಅವರಿಗೆ ಹಲವಾರು ಪ್ರಶಸ್ತಿಗಳೂ ಬಂದಿವೆ. ಕರ್ನಾಟಕ ಪ್ರಗತಿಪಥ, ಸಾಕ್ಷಿಕಲ್ಲು, ಬಾಗೂರು ನಾಗಮ್ಮ, ಗ್ರಾಮಗೀತೆಗಳು, ಕರ್ನಾಟಕ ಜನಪದ ಕಲೆಗಳು, ಹೊನ್ನ ಬಿತ್ತೇವು ನೆಲಕೆಲ್ಲ, ಇತ್ಯಾದಿ.ಜಾನಪದ ಜಗತ್ತು’, `ಪಂಚಾಯತ್ ರಾಜ್ಯ’, `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಮೊದಲಾದ ಪತ್ರಿಕೆಗಳಿಗೆ ಸಂಪಾದಕರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ.
ಶರಣ ಸಾಹಿತ್ಯಕ್ಕೆ ಬಲ
ಕರ್ನಾಟಕದಲ್ಲಿ ಜನಪದ ಕ್ಷೇತ್ರದಲ್ಲಿ ಅಗಾಧ ಕೆಲಸ ಮಾಡಿರುವ ಗೊರುಚ ಅವರು ಪ್ರತ್ಯೇಕ ಜನಪದ ವಿಶ್ವವಿದ್ಯಾನಿಲಯ ಆರಂಭಕ್ಕೂ ಪ್ರೇರಕ ಶಕ್ತಿಯಾದವರು. ಇದಲ್ಲದೇ ಶರಣ ಸಾಹಿತ್ಯ ಪರಿಷತ್ ಸಂಘಟಿಸಿ ವಚನಗಳನ್ನು ಮನೆ ಮನೆಗೂ ತಲುಪಿಸುವ ಕೆಲಸದಲ್ಲಿ ನಿರತಾದವರು ಗೊರುಚ. ಕರ್ನಾಟಕದಲ್ಲಿ ಶರಣ ಸಾಹಿತ್ಯ ಪರಿಷತ್ ಇಷ್ಟು ಸಕ್ರಿಯವಾಗಿರುವ, ಸಂಘಟನಾತ್ಮಕವಾಗಿ ಬೆಳೆದಿರುವ ಹಿಂದೆ ಇರುದ ಧೀಶಕ್ತಿಯೇ ಗೊರುಚ.