logo
ಕನ್ನಡ ಸುದ್ದಿ  /  ಕರ್ನಾಟಕ  /  Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Mandya News: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ಗಲಾಟೆ, 52 ಜನರನ್ನುಬಂಧೀಸಿದ ಪೊಲೀಸರು; ಪರಿಸ್ಥಿತಿ ನಿಯಂತ್ರಣ

Umesha Bhatta P H HT Kannada

Sep 12, 2024 12:04 PM IST

google News

ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

    • Nagamangala Ganeshotsav Riots ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಈವರೆಗೂ ಘಟನೆಯಲ್ಲಿ 52 ಮಂದಿಯನ್ನು ಬಂಧಿಸಲಾಗಿದೆ.
ಮಂಡ್ಯ ಜಿಲ್ಲೆ  ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗುರುವಾರವೂ ಉದ್ವಿಗ್ನ ಸ್ಥಿತಿಯಿದ್ದು. ಪೊಲೀಸ್‌ ಭದ್ರತೆ ಹಾಕಲಾಗಿದೆ.

ಮಂಡ್ಯ/ ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಬುಧವಾರ ರಾತ್ರಿ ಗಣೇಶನ ವಿಸರ್ಜನೆ ಮೆರವಣಿಗೆ ವೇಳೆ ಭಾರೀ ಗಲಾಟೆ, ಹಿಂಸಾಚಾರ ನಡೆದಿದ್ದು, ಹಲವರಿಗೆ ಗಾಯಗಳಾಗಿವೆ. ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸ್‌ ಸಿಬ್ಬಂದಿಯೂ ಸೇರಿ ಹಲವರಿಗೆ ಗಾಯಗಳಾಗಿದ್ದು, ಇಡೀ ನಾಗಮಂಗಲದಲ್ಲಿ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡಂದಂತಿದೆ. ಎರಡು ಸಮುದಾಯಗಳ ನಡುವೆ ಗಣೇಶ ವಿಸರ್ಜನೆ ಮೆರವಣಿಗೆ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದ ಆರೋಪದ ಮೇಲೆ 52 ಜನರನ್ನು ಬಂಧಿಸಿರುವ ಮಂಡ್ಯ ಪೊಲೀಸರು ಇನ್ನೂ ಹಲವರನ್ನು ಬಂಧಿಸಲು ಸಿದ್ದತೆ ಮಾಡಿಕೊಂಡಿದೆ. ನಾಗಮಂಗಲದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಪೊಲೀಸ್‌ ಭದ್ರತೆ ಹಾಕಲಾಗಿದೆ.

ಬುಧವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಹೊರಟಿದ್ದಾಗ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ಆರಂಭವಾಗಿದೆ. ಈ ವೇಳೆ ಕೆಲವರು ಬೆಂಕಿ ಹಚ್ಚಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೂಡಲೇ ಪೊಲೀಸರು ಧಾವಿಸಿದರೂ ಅವರ ಮೇಲೂ ಕಲ್ಲುಗಳು ಬಿದ್ದಿವೆ.

ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ಅಲ್ಲಿದ್ದವರನ್ನು ಚದುರಿಸಲು ಹರಸಾಹಸ ಪಟ್ಟರು. ಕೂಡಲೇ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜನ ಸೇರದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು.

ಗುರುವಾರ ಬೆಳಿಗ್ಗೆಯೂ ನಿಷೇಧಾಜ್ಞೆ ಮುಂದುವರೆದಿದ್ದು, ಪಟ್ಟಣದಲ್ಲಿ ಶಾಲಾ ಕಾಲೇಜು ರಜೆ ಘೋಷಿಸಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್‌ ಗಸ್ತು ಹೆಚ್ಚಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸಿ ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದ್ದು, ಎಡಿಜಿಪಿ ಹಿತೇಂದ್ರ, ಡಿಐಜಿ ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು.

ಗೃಹ ಸಚಿವರ ಸೂಚನೆ

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಗಲಾಟೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಘಟನೆ ಆಗಬಾರದಿತ್ತು. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಅಂತ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಘಟನೆಯನ್ನು ಪೊಲೀಸರು ಕೂಡಲೇ ನಿಯಂತ್ರಣಕ್ಕೆ ತಂದಿದ್ದಾರೆ. ದೊಡ್ಡ ಗಲಾಟೆ ಎಂದರು.

ಮೆರವಣಿಗೆ ವೇಳೆ ಕಲ್ಲು ತೂರಾಟವಾದಾಗ ಒಬ್ಬರಿಗೊಬ್ಬರಿಗೆ ಘರ್ಷಣೆ ಮಾಡಿಕೊಂಡಿದ್ದಾರೆ. ಆನಂತರ ಎಲ್ಲವೂ ಸರಿ ಹೋಯ್ತು ಅಂತ ವಾಪಸ್ ಹೋಗುವಾಗ, ಕೆಲವರು ವಾಹನಗಳಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟರೊಳಗೆ ಪೊಲೀಸರು ಎಚ್ಚೆತ್ತುಕೊಂಡು ಹತೋಟಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರು, ಐಜಿಪಿ, ಕೆಎಸ್‌ಆರ್‌ಪಿ ತುಕಡಿ ಸ್ಥಳದಲ್ಲಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದೇನೆ. ಘರ್ಷಣೆ ಮಾಡಿಕೊಂಡಿದ್ದಾರೆ, ಈ ಘಟನೆಯನ್ನು ಕೋಮು ಗಲಭೆ ಅಂತ ಹೇಳಲಾಗುವುದಿಲ್ಲ. ಇದನ್ನು ಹೆಚ್ಚು ಬೆಳೆಯಲು ಬಿಡುವುದಿಲ್ಲ, ಪೊಲೀಸರು ಬಿಟ್ಟಿಲ್ಲ. ಹೆಚ್ಚು ಪ್ರಚಾರ ನೀಡುವುದು ಬೇಡ ಎಂದು ಮನವಿ ಮಾಡಿದರು.

ಘಟನೆಯಲ್ಲಿ ಹೆಚ್ಚು ಜನರಿಗೆ ಗಾಯಗಳಾಗಿಲ್ಲ. ಗಲಭೆಗೆ ಸಂಬಂಧಿಸಿದಂತೆ ಎರಡು ಗುಂಪಿನ ಒಟ್ಟು 52 ಜನರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅದನ್ನು ಆಧರಿಸಿ ಯಾರೆಲ್ಲ ಕಲ್ಲು ತೂರಿದ್ದಾರೆ, ಬೆಂಕಿ ಹಾಕಿದ್ದಾರೆ ಅವರೆಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪೊಲೀಸರಿಗು ಕಲ್ಲು ಏಟು ಬಿದ್ದಿದ್ದು, ಓರ್ವ ಏಸ್ಐ ಗಾಯಗೊಂಡಿದ್ದಾರೆ. ಇದರಲ್ಲಿ ರಾಜಕೀಯ ಪ್ರಚೋದನೆ ರೀತಿ ಕಾಣುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಘಟನೆಗೆ ಅತಿಯಾದ ಓಲೈಕೆಯೇ ಕಾರಣ ಎಂದಿರುವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಅವರು ಈ ಹಿಂದೆ ಯಾವ ರೀತಿ ಓಲೈಕೆ ಮಾಡುತ್ತಿದ್ದರೋ ಗೊತ್ತಿಲ್ಲ ಎಂದರು.

ಇದರಲ್ಲಿ ರಾಜಕೀಯ ಮಾಡುವುದು ಬೇಡ. ಪೊಲೀಸರಿಗೆ ಬಿಟ್ಟರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ಕಾನೂನು ಸಲಹೆ ಕೊಡುವುದಾದರೆ ಸ್ವಾಗತ ಮಾಡುತ್ತೇನೆ. ಘಟನೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ