Riots in Brussels: ಮೊರಾಕೊ ವಿರುದ್ಧ ಬೆಲ್ಜಿಯಂಗೆ ಸೋಲು; ರೊಚ್ಚಿಗೆದ್ದ ಹುಚ್ಚು ಅಭಿಮಾನಿಗಳಿಂದ ಕಾರು, ಬೈಕ್ ಗೆ ಬೆಂಕಿ ಹಚ್ಚಿ ದಾಂಧಲೆ
ಫಿಫಾ ವಿಶ್ವಕಪ್‌ನಲ್ಲಿ ಮೊರಾಕೊ ವಿರುದ್ಧ ಬೆಲ್ಜಿಯಂ ಸೋಲನ್ನು ಅರಗಿಸಿಕೊಳ್ಳಲಾಗದೆ ಬ್ರೆಲ್ಜಿಯಂನಲ್ಲಿ ಫುಟ್ಬಾಲ್ ಅಭಿಮಾನಿಗಳು ಬ್ರಸೆಲ್ಸ್ ನ ಬೀದಿಗಿಳಿದು ಹಿಂಸಾಚಾರ ನಡೆಸಿದ್ದಾರೆ. ಸಿಕ್ಕ ಸಿಕ್ಕ ಕಾರುಗಳು, ಬೈಕ್ ಗಳಿಗೆ ಹಾನಿ ಮಾಡಿದ್ದಾರೆ.
ಕತಾರ್ ನಲ್ಲಿ ನಡೆಯುತ್ತಿರುವ 2022 ರ ಫಿಫಾ ವಿಶ್ವಕಪ್‌ನಲ್ಲಿ ಅನಿರೀಕ್ಷಿತ ಫಲಿತಾಂಶಗಳ ಸರಣಿ ಮುಂದುವರೆದಿದೆ. ಹೈವೋಲ್ಟೇಜ್ ಪಂದ್ಯಗಳು ಕೂಡ ರೋಚಕ ತಿರುವು ಪಡೆಯುತ್ತಿವೆ. ಈ ನಡುವೆ ನಿನ್ನೆ ನಡೆದ ಮೊರಾಕೊ ವಿರುದ್ಧದ ಪಂದ್ಯದಲ್ಲಿ ಬೆಲ್ಜಿಯಂ 2-0 ಅಂತರದಿಂದ ಸೋಲು ಕಂಡಿದೆ. ತಮ್ಮ ನೆಚ್ಚಿನ ತಂಡ ಸೋಲುತ್ತಿದ್ದಂತೆ ರೊಚ್ಚಿಗೆದ್ದ ಬೆಲ್ಜಿಯಂ ತಂಡದ ಅಭಿಮಾನಿಗಳು ತವರಲ್ಲಿ ದಾಂಧಲೆ ನಡೆಸಿದ್ದಾರೆ.
ಬ್ರಸೆಲ್ಸ್ ನಲ್ಲಿ ಹುಚ್ಚು ಅಭಿಮಾನಿಗಳು ಪಂದ್ಯ ಮುಗಿಯುವ ಮುನ್ನವೇ ರಸ್ತೆಗಿಳಿದ ಹುಚ್ಚು ಅಭಿಮಾನಿಗಳು ಸಿಕ್ಕ ಸಿಕ್ಕ ವಾಹನಗಳಿಗೆ ಹಾನಿ ಮಾಡಿದ್ದಾರೆ. ಮಾತ್ರವಲ್ಲದೆ, ಅಂಗಡಿಗಳ ಕಿಟಕಿಗಳಿಗೂ ಹಾನಿ ಮಾಡಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಹುಚ್ಚುತನವನ್ನು ಪ್ರದರ್ಶಿಸಿದ್ದಾರೆ.
ವಿದ್ಯುತ್ ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಬೆಲ್ಜಿಯಂ ತಂಡದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಕೋಲುಗಳು ಮತ್ತು ರಾಡ್‌ಗಳನ್ನು ಹಿಡಿದು ಬ್ರಸೆಲ್ಸ್‌ನ ಬೀದಿಗಳಲ್ಲಿ ಓಡಾಡಿ. ಕೈ ಸಿಕ್ಕ ಸಿಕ್ಕ ವಸ್ತುಗಳನ್ನು ಹಿಂದೆ ಮುಂದೆ ನೋಡದೆ ನಾಶಮಾಡಿದ್ದಾರೆ. ಈ ಘಟನೆಯಲ್ಲಿ ಪತ್ರಕರ್ತರೊಬ್ಬರು ಗಾಯಗೊಂಡಿದ್ದಾರೆಂದು ಎಂದು ಹೇಳಲಾಗಿದೆ.
ಬ್ರಸೆಲ್ಸ್‌ನಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂರಾರು ಪೊಲೀಸರು ರಸ್ತೆಗಿಳಿದು ಬ್ಯಾರಿಕೇಡ್ ಹಾಕಿದ್ದಾರೆ. ಹಿಂಸಾಚಾರ ಸೃಷ್ಟಿಸುತ್ತಿದ್ದವರನ್ನು ನಿಯಂತ್ರಿಸುವ ಪ್ರಯತ್ನ ನಡೆದಿದೆ. ನೀರಿನ ಫಿರಂಗಿಗಳನ್ನು ಬಳಸಿದ್ದಾರೆ. ಹಿಂಸಾಚಾರ ಸಂಬಂಧ ಪೊಲೀಸರು ಇದುವರೆಗೆ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಯ ನಂತರ ಬ್ರಸೆಲ್ಸ್ ನಲ್ಲಿ ಪರಿಸ್ಥಿತಿ ಸ್ವಲ್ಪ ಉದ್ವಿಗ್ನಗೊಂಡಿತು. ಜನರು ಮನೆಯಿಂದ ಹೊರಗೆ ಬರದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಘಟನೆಯನ್ನು ಖಂಡಿಸುತ್ತೇನೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಅಭಿಮಾನಿಗಳಿಗೆ ನಗರದಲ್ಲಿ ತಿರುಗಾಡದಂತೆ ಸಲಹೆ ನೀಡುತ್ತೇನೆ. ಜನರು ಮನೆಯಲ್ಲಿಯೇ ಇರಿ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ. ಘಟನೆಗೆ ಕಾರಣರಾದವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದೇನೆ ಎಂದು ಬ್ರಸೆಲ್ಸ್ ಮೇಯರ್ ಫಿಲಿಪ್ ಕ್ಲೋಸ್ ಟ್ವೀಟ್ ಮಾಡಿದ್ದಾರೆ.