ಮಂಡ್ಯ ನಗರ ಸಭೆ ಆಡಳಿತ ಚುಕ್ಕಾಣಿ ಜೆಡಿಎಸ್‌ಗೆ, ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ರಾಜಕೀಯ ಹೈಡ್ರಾಮಾದಲ್ಲಿ ಕುಮಾರಸ್ವಾಮಿಗೆ ಮೇಲುಗೈ
Aug 28, 2024 05:43 PM IST
ಮಂಡ್ಯ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ರಾಜಕೀಯ ಹೈಡ್ರಾಮಾದಲ್ಲಿ ಕುಮಾರಸ್ವಾಮಿಗೆ ಮೇಲುಗೈಯಾಗಿದೆ. ಸಚಿವ ಚಲುವರಾಯಸ್ವಾಮಿಗೆ ಹಿನ್ನಡೆಯಾಗಿದೆ.
Mandya News; ಮಂಡ್ಯ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಿತ್ರ ಪಕ್ಷ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾದರು. ರಾಜಕೀಯ ಜಿದ್ದಾ ಜಿದ್ದಿನ ಕಣವಾಗಿದ್ದ ಚುನಾವಣಾ ತಂತ್ರಗಾರಿಕೆಯ ವಿವರ ಇಲ್ಲಿದೆ.
ಮಂಡ್ಯ: ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ನಗರ ಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಸಚಿವ ಚಲುವರಾಯಸ್ವಾಮಿ ನಡುವಿನ ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರಿಕೆ ಗಮನಸೆಳೆದಿತ್ತು. ಇದರಲ್ಲಿ ಕುಮಾರಸ್ವಾಮಿಗೆ ಗೆಲುವಾಗಿದೆ.
ಪ್ರತಿಷ್ಠೆಯ ಚುನಾವಣೆಯಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಿತ್ರ ಪಕ್ಷ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾದರು. ಮಂಡ್ಯ ನಗರಸಭೆಗೆ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಇದಾಗಿತ್ತು.
ಮಂಡ್ಯ ನಗರಸಭೆ ಆವರಣದಲ್ಲಿ ರಾಜಕೀಯ ಹೈಡ್ರಾಮಾ, ಆಪರೇಷನ್ ರಾಜಕಾರಣ
ಮಂಡ್ಯ ನಗರ ಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲು ಇಂದು ಚುನಾವಣೆ ನಡೆದ ಸಂದರ್ಭದಲ್ಲಿ ಭಾರಿ ರಾಜಕೀಯ ಹೈಡ್ರಾಮಾವೇ ನಡೆಯಿತು. ಆಪರೇಷನ್ ರಾಜಕಾರಣ ಮತ್ತೊಮ್ಮೆ ಗಮನಸೆಳೆಯಿತು.
ಮಂಡ್ಯ ನಗರ ಸಭೆಯ ಒಟ್ಟು ಸದಸ್ಯ ಬಲ 35. ಇದರಲ್ಲಿ, ಜೆಡಿಎಸ್ 18 ಸದಸ್ಯರು. ಬಿಜೆಪಿಯ 2 ಸದಸ್ಯರು. ಕಾಂಗ್ರೆಸ್‌ನ 10 ಸದಸ್ಯರು. 5 ಪಕ್ಷೇತರ ಸದಸ್ಯರು. ಇನ್ನು, ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಮತದಾರರ ವಿಚಾರಕ್ಕೆ ಬಂದರೆ ಒಬ್ಬ ಶಾಸಕ, ಸಂಸದರೂ ಮತದಾರರು. ಹೀಗಾಗಿ ಮತದಾರರ ಸಂಖ್ಯೆ 37. ಸರಳ ಬಹುಮತಕ್ಕೆ 19 ಮತ ಬೇಕು.
ಸದಸ್ಯ ಬಲದ ಲೆಕ್ಕಾಚಾರ ಹಾಕಿ ನೋಡಿದರೆ ಜೆಡಿಎಸ್ ಬಿಜೆಪಿ ಮೈತ್ರಿಗೇ ಅಧಿಕಾರ ಸಿಗಬೇಕು. ಆದಾಗ್ಯೂ, ಮತದಾನದ ವೇಳೆ ಚಿತ್ರಣ ಬದಲಾಗಿ ಹೋಯಿತು. ಜೆಡಿಎಸ್‌ನ ಮೂವರು ಕಾಂಗ್ರೆಸ್ ಕಡೆಗೆ ತಿರುಗಿದರು. ಕಾಂಗ್ರೆಸ್ ಪಕ್ಷದ ಒಬ್ಬರು ಜೆಡಿಎಸ್ ಕಡೆಗೆ ಹೋದರು. ಇದೆಲ್ಲವೂ ಆಪರೇಷನ್ ರಾಜಕಾರಣದ ಭಾಗವಾಗಿ ನಡೆಯಿತು. ಎಚ್ ಡಿ ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ರಾಜಕೀಯ ತಂತ್ರಗಾರಿಕೆ ಇದರ ಹಿಂದಿತ್ತು.
ರಾಜಕೀಯ ಹೈಡ್ರಾಮಾದ ಬಳಿಕ ಬಂದ ಚುನಾವಣಾ ಫಲಿತಾಂಶ ಹೀಗಿತ್ತು
ಜೆಡಿಎಸ್‌ನ 15 ಸದಸ್ಯರ, ಬಿಜೆಪಿಯ ಇಬ್ಬರು, ಕಾಂಗ್ರೆಸ್‌ನ ಒಬ್ಬ ಮತ್ತು ಸಂಸದ ಹೆಚ್ಡಿ ಕುಮಾರಸ್ವಾಮಿ ಅವರ ಮತ ಸೇರಿ 19 ಮತಗಳು ಜೆಡಿಎಸ್‌ಗೆ ಬಂದಿವೆ. ಸರಳವಾಗಿ ಹೇಳಬೇಕು ಎಂದರೆ ಜೆಡಿಎಸ್ 15 + ಬಿಜೆಪಿ 2 + ಕಾಂಗ್ರೆಸ್‌ನಿಂದ ಅಪರೇಷನ್ 1 + ಸಂಸದ 1 = ಜೆಡಿಎಸ್ 19
ಇನ್ನು ಕಾಂಗ್ರೆಸ್ ಪಾಳಯ ಗಮನಿಸಿದರೆ, ಕಾಂಗ್ರೆಸ್‌ನ 9 ಸದಸ್ಯರ, ಪಕ್ಷೇತರ 5, ಜೆಡಿಎಸ್‌ನ 3 ಮತ್ತು ಶಾಸಕ ಗಣಿಗ ರವಿಯ ಮತ ಸೇರಿ ಕಾಂಗ್ರೆಸ್ಗೆ ಒಟ್ಟು 18 ಮತಗಳು ಬಂದಿವೆ. ಸರಳವಾಗಿ ಹೇಳಬೇಕು ಎಂದರೆ ಕಾಂಗ್ರೆಸ್ 9 + ಪಕ್ಷೇತರ 5 + ಜೆಡಿಎಸ್‌ನಿಂದ ಅಪರೇಷನ್ 3 + ಶಾಸಕ 1 = ಕಾಂಗ್ರೆಸ್ 18.
ಅಲ್ಲಿಗೆ ಕಾಂಗ್ರೆಸ್ ಪಕ್ಷದ ಆಪರೇಷನ್ ಪ್ರಯತ್ನಕ್ಕೆ ಸೋಲಾಯಿತು. ಇದರ ಬೆನ್ನಿಗೆ ಜೆಡಿಎಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿತ್ತು.
ಈ ನಡುವೆ, ಶಾಸಕ ಗಣಿಗ ರವಿ ಅವರು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿದರು ಎಂದು ಹೇಳಿಕೆ ನೀಡಿದರು. ಇದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಶಾಸಕರ ಪ್ರಕಾರ ವಾಮಮಾರ್ಗದ ಅರ್ಥವೇನು? ಮತದಾನದ ವೇಳೆಯೂ ಕಣ್ಸನ್ನೇ, ಕೈಸನ್ನೇ ಮೂಲಕವೂ ಹಣದ ಆಮೀಷ ಒಡ್ಡಿದ್ದಾರೆ. ನನ್ನ ಜೀವನದಲ್ಲಿ ಮೊದಲ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಹಾಕಲು ಬಂದಿದ್ದೇನೆ. ಕಳೆದ 20 ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆ ಗಮನಿಸಿ ನಾನು ಬರಬೇಕಾಯ್ತು ಎಂದು ಹೇಳಿದರು.