logo
ಕನ್ನಡ ಸುದ್ದಿ  /  ಕರ್ನಾಟಕ  /  Melkote Navratri 2024: ಮೇಲುಕೋಟೆಯಲ್ಲಿ ವಿಜಯದಶಮಿಯಂದು ಚೆಲುವನಾರಾಯಣನಿಗೆ ಮೈಸೂರು ಮಹಾರಾಜರ ಅಲಂಕಾರ, ಏನಿದರ ವಿಶೇಷ

Melkote Navratri 2024: ಮೇಲುಕೋಟೆಯಲ್ಲಿ ವಿಜಯದಶಮಿಯಂದು ಚೆಲುವನಾರಾಯಣನಿಗೆ ಮೈಸೂರು ಮಹಾರಾಜರ ಅಲಂಕಾರ, ಏನಿದರ ವಿಶೇಷ

Umesha Bhatta P H HT Kannada

Oct 09, 2024 02:00 PM IST

google News

ವಿಜಯದಶಮಿಯಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಡೆಯುವ ಕುದುರೆವಾಹನೋತ್ಸವ. ಮೇಲುಕೋಟೆ ಕಲ್ಯಾಣನಾಯಕಿ ಅಮ್ಮನವರ ಬಂಗಾರದ ಶೇಷವಾಹನೋತ್ಸವ ಸಡಗರ.

    • ಮಂಡ್ಯ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲೂ ನವರಾತ್ರಿ ಅಂಗವಾಗಿ ವಿಶೇಷ ಅಲಂಕಾರವೂ ಇರಲಿದೆ. ವಿಜಯದಶಮಿ ದಿನ ಮೈಸೂರು ಮಹಾರಾಜರ ಅಲಂಕಾರ ವಿಶೇಷ ಆಕರ್ಷಣೆಯಾಗಲಿದೆ.
ವಿಜಯದಶಮಿಯಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಡೆಯುವ ಕುದುರೆವಾಹನೋತ್ಸವ. ಮೇಲುಕೋಟೆ ಕಲ್ಯಾಣನಾಯಕಿ ಅಮ್ಮನವರ ಬಂಗಾರದ ಶೇಷವಾಹನೋತ್ಸವ ಸಡಗರ.
ವಿಜಯದಶಮಿಯಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಡೆಯುವ ಕುದುರೆವಾಹನೋತ್ಸವ. ಮೇಲುಕೋಟೆ ಕಲ್ಯಾಣನಾಯಕಿ ಅಮ್ಮನವರ ಬಂಗಾರದ ಶೇಷವಾಹನೋತ್ಸವ ಸಡಗರ.

ಮೇಲುಕೋಟೆ : ಹೊಯ್ಸಳರ ಆರಾಧ್ಯದೈವ ಹಾಗೂ ಮೈಸೂರು ಅರಸರ ಕುಲದೈವ ಶ್ರೀ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದಿವ್ಯಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 3ರಿಂದ ಆರಂಭವಾಗಿ ಅ.11 ರ ಮಹಾನವಮಿಯವರೆಗೆ ನಡೆಯಲಿದೆ. 12 ರಂದು ವಿಜಯದಶಮಿ ಅದ್ದೂರಿಯಾಗಿ ನಡೆಯಲಿದೆ. ಇದರ ಭಾಗವಾಗಿಯೇ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ವಿಜಯದಶಮಿಯಂದೇ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ. ಈ ಪರಂಪರೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ವರ್ಷದ ನವರಾತ್ರಿ ಚಟುವಟಿಕೆಗಳು ಈಗಾಗಲೇ ಮೇಲುಕೋಟೆಯಲ್ಲಿ ಆರಂಭಗೊಂಡಿದ್ದು, ಪ್ರತಿನಿತ್ಯ ಅಲಂಕಾರ ಮಾಡಲಾಗುತ್ತಿದೆ. ದಸರಾ ಕೊನೆಯ ಅಲಂಕಾರ ವಿಶೇಷವಾಗಿರಲಿದೆ.

ಮೇಲುಕೋಟೆ ನವರಾತ್ರಿ-ವಿಜದಶಮಿಯ ಹತ್ತು ದಿನಗಳ ಉತ್ಸವಕ್ಕೆ (ದಸರೆಗೆ) ಸಾವಿರವರ್ಷಗಳ ಇತಿಹಾಸವಿದ್ದು ಅಕ್ಟೋಬರ್ 11ರವರೆಗೆ ನವರಾತ್ರಿ ನೆರವೇರಲಿದೆ ಮೈಸೂರು ಅರಸರ ಕುಲದೈವವೂ ಆದ ಚೆಲುವನಾರಾಯಣಸ್ವಾಮಿಗೆ ಅ.12ರ ವಿಜಯದಶಮಿಯಂದು ಮಹಾರಾಜರ ಅಲಂಕಾರ ನೆರವೇರಿಸಲಾಗುತ್ತದೆ. ಸಂಜೆ ಜಂಬೂಸವಾರಿ ಬನ್ನೀಪೂಜೆ ಸಹ ನಡಯುತ್ತಾ ಬಂದಿದೆ.

ಅಂದು ವಿಶೇಷವಾಗಿ ಅಲಂಕಾರ ಮಾಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅಂದು ದಸರಾ ಇರುವುದರಿಂದ ರಾಜವಂಶಸ್ಥರು ಬರುವುದು ಕಡಿಮೆ. ಆದರೆ ರಾಜವಂಶಸ್ಥರ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಬಂದು ಪೂಜೆ ನೆರವೇರಿಸುವುದೂ ಇದೆ.

ಆ ದಿನದ ಪೂಜೆ ಹಾಗೂ ಅಲಂಕಾರವನ್ನು ಮೈಸೂರು ಸಂಸ್ಥಾನದವರಿಗೆ ಮೀಸಲಿಟ್ಟಿರುವುದರಿಂದ ಅದನ್ನು ಮಹಾರಾಜರ ಅಲಂಕಾರ ಎಂದು ಕರೆಯಲಾಗುತ್ತದೆ. ಎಲ್ಲಾ ದಿನಗಳಿಗಿಂತ ವಿಜಯದಶಮಿ ದಿನ ಅಲಂಕಾರ ಕೊಂಚ ಭಿನ್ನವಾಗಿರಲಿದೆ ಎಂದು ಮೇಲುಕೋಟೆ ದೇಗುಲದ ಪ್ರತಿನಿಧಿಗಳು ಹೇಳುತ್ತಾರೆ.

ಏನೇನು ಚಟುವಟಿಕೆ

ವಿಜಯದಶಮಿಯಂದು ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದೊಡೆಯ ಯೋಗಾನರಸಿಂಹಸ್ವಾಮಿಗೆ ಮಹಾರಾಜರ ಅಲಂಕಾರ ಇರಲಿದೆ. ಸಂಜೆ ಸ್ವಾಮಿಗೆ ಅಶ್ವವಾಹನದ ಜಂಬೂಸವಾರಿ ಬನ್ನೀಪೂಜೆ, ನಂತರ ವಿಜಯೋತ್ಸವ ಮೆರವಣಿಗೆ ನಡೆಯಲಿದೆ.

ಅಂಗಡಿಬೀದಿ ವೃತ್ತದದಿಂದ ಚೆಲುವನಾರಾಯಣಸ್ವಾಮಿ ಅಶ್ವವಾಹನೋತ್ಸವ ಮತ್ತು ಕಲ್ಯಾಣನಾಯಕಿ ಅಮ್ಮನವರ ದೊಡ್ಡಶೇಷವಾಹನದ ಎದುರು ಸೇವೆ ಉತ್ಸವ ವೈಭವದಿಂದ ನಡೆಯಲಿದೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅ.3 ರಿಂದ ಆರಂಭವಾಗಿರುವ ನವರಾತ್ರಿ 11 ರವರೆಗೆ ನಡೆಯಲಿದ್ದು ಮಹಾಲಕ್ಷ್ಮಿ ಕಲ್ಯಾಣನಾಯಿಕಿ ಅಮ್ಮನವರಿಗೆ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಬಂಗಾರದ ಶೇಷವಾಹನೋತ್ಸವ ನಡೆಯಲಿದೆ. 11 ರಂದು ಮಹಾನವಮಿ ಉತ್ಸವ ನಡೆಯಲಿದೆ.

ನವರಾತ್ರಿ ಶುರು

ಮಹಾಲಕ್ಷ್ಮಿ ಕಲ್ಯಾಣನಾಯಕಿ ಅಮ್ಮನವರಿಗೆ ಬಂಗಾರದ ಶೇಷವಾಹನೋತ್ಸವ ವೈಭವದಿಂದ ನಡೆಯುವುದರೊಂದಿಗೆ ನವರಾತ್ರಿ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ.

ನವರಾತ್ರಿ ಅಂಗವಾಗಿ ಪ್ರತಿದಿನ ಬೆಳಿಗ್ಗೆ 7-30ಕ್ಕೆ ನಿತ್ಯಪೂಜಾಕೈಂಕರ್ಯಗಳನ್ನು ಆರಂಭಿಸಿ 11ಗಂಟೆಗೆ ಕಲ್ಯಾಣನಾಯಕಿ ಅಮ್ಮನವರಿಗೆ ಪುಷ್ಪಾಲಂಕೃತ ಬೆಳ್ಳಿಯ ಪಲ್ಲಕ್ಕಿಯಲ್ಲಿ ಉತ್ಸವ ನಡೆಯುತ್ತಿದೆ.

ನಂತರ ವಿಶೇಷ ಪುಷ್ಪಹಾರದೊಂದಿಗೆ ಅಲಂಕೃತಳಾದ ಕಲ್ಯಾಣಿತಾಯಿಗೆ ಬಂಗಾರದ ಶೇಷವಾಹನೋತ್ಸವ ದಿವ್ಯಪ್ರಬಂಧ ಪಾರಾಯಣ ಹಾಗೂ ಮಂಗಳ ವಾದ್ಯಗಳೊಂದಿಗೆ ನಾಲ್ಕೂ ಉತ್ಸವ ಬೀದಿಗಳಲ್ಲಿ ವೈಭವದಿಂದ ನಡೆಯಲಿದೆ.

ಉತ್ತೇಜನ ಸಿಗಲಿ

ಮೇಲುಕೋಟೆ ನವರಾತ್ರಿ-ವಿಜಯದಶಮಿ ಮಹೋತ್ಸವ ಸಹ ಜನಾಕರ್ಷಣೆಯ ಐತಿಹಾಸಿಕ ಉತ್ಸವವಾಗಿದ್ದು ಮೈಸೂರು ದಸರಾಮಹೋತ್ಸವ ಅನುದಾನದಲ್ಲೇ ಎರಡು ಮೂರು ಲಕ್ಷರೂ ನೀಡಿದರೂ ನವರಾತ್ರಿ ವಿಜಯದಶಮಿಗೆ ವಿಶೇಷ ಆಕರ್ಷಣೆ ನೀಡಬಹುದು. ಇದರಿಂದ ಪ್ರವಾಸೋದ್ಯಮ ಚಟುವಟಿಕೆ ಸಹ ಉತ್ತೇಜಿತವಾಗಲಿದೆ.

ಆದರೆ ಇಂತಹ ಮಹೋತ್ಸವ ಪ್ರೋತ್ಸಾಹದ ಕೊರತೆಯಿಂದ ಸಾಂಕೇತಿಕವಾಗಿ ನಡೆಯುತ್ತಾ ಬಂದಿದೆ. ನಾಡಿನ ಇತರ ದೇವಾಲಯಗಳಂತೆ ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲೂ ನವರಾತ್ರಿ ಮಹೋತ್ಸವ ಆಚರಣೆಗೆ ಜನಪ್ರತಿನಿಧಿಗಳು ಅಧಿಕಾರಿಗಳು ಮುಂದಾಗಬೇಕು ಎಂಬುದು ಭಕ್ತರ ಆಶಯವಾಗಿದೆ.

(ಮಾಹಿತಿ: ಸೌಮ್ಯ ಸಂತಾನಂ,ಮೇಲುಕೋಟೆ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ