ಶ್ರೀರಂಗಪಟ್ಟಣ ದಸರಾದಲ್ಲಿ ಬೆದರಿ ಓಡಿದ ಲಕ್ಷ್ಮಿ ಆನೆ, ನಿಯಂತ್ರಣಕ್ಕೆ ಮಾವುತನ ಹರ ಸಾಹಸ, ತಪ್ಪಿದ ಭಾರೀ ಅನಾಹುತ
Oct 04, 2024 08:36 PM IST
ಶ್ರೀರಂಗಪಟ್ಟಣ ದಸರಾದಲ್ಲಿ ಆತಂಕ ಸೃಷ್ಟಿಸಿದ ಲಕ್ಷ್ಮಿ ಆನೆ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಂಬೂ ಸವಾರಿಗೆ ಆಗಮಿಸಿದ್ದ ಲಕ್ಷ್ಮಿ ಆನೆ ದಿಕ್ಕಾಪಾಲಾಗಿ ನೋಡಿ ಆತಂಕ ಸೃಷ್ಟಿಸಿದ ಸನ್ನಿವೇಶ ನಿರ್ಮಾಣವಾಗಿತ್ತು. ಕೂಡಲೇ ಆನೆ ನಿಯಂತ್ರಣಕ್ಕೆ ತಂದರು ಮಾವುತ ಹಾಗೂ ಕವಾಡಿ.
ಮಂಡ್ಯ: ಮೈಸೂರು ದಸರಾಗೆಂದು ಬಂದು ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಎರಡು ಆನೆಗಳು ಕಾದಾಟಕ್ಕೆ ಮುಂದಾಗಿ ಕಂಜನ್ ಆನೆ ಆತಂಕ ಸೃಷ್ಟಿಸಿದ್ದು ಮರೆಯುವ ಮುನ್ನವೇ ಶ್ರೀರಂಗಪಟ್ಟಣದಲ್ಲೂ ದಸರಾಗೆ ಬಂದ ಆನೆಯೊಂದು ದಿಕ್ಕಾಪಾಲಾಗಿ ಓಡಿದೆ.ಲಕ್ಷ್ಮಿ ಎಂಬ ಹೆಣ್ಣಾನೆ ಏಕಾಏಕಿ ಓಡಿದ್ದರಿಂದ ಕೆಲ ಕ್ಷಣ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಆನೆ ಮಾವುತ ಕೆಲವೇ ನಿಮಿಷಗಳಲ್ಲಿ ಆನೆಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರಲ್ಲದೇ ಯಾವುದೇ ಅನಾಹುತ ಆಗದಂತೆ ನೋಡಿಕೊಂಡರು. ಆದರೂ ಜನ ಆತಂಕದಿಂದಲೇ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗುವ ಸನ್ನಿವೇಶ ಶುಕ್ರವಾರ ನಿರ್ಮಾಣವಾಗಿತ್ತು.
ಶ್ರೀರಂಗಪಟ್ಟಣ ದಸರಾಕ್ಕೆ ಮಹೇಂದ್ರ, ಲಕ್ಷ್ಮಿ ಹಾಗೂ ಹಿರಣ್ಯ ಆನೆಗಳನ್ನು ತರಲಾಗಿತ್ತು. ಗುರುವಾರ ರಾತ್ರಿಯೇ ಮೂರೂ ಆನೆಗಳು ಮಾವುತ ಹಾಗೂ ಕವಾಡಿಗರೊಂದಿಗೆ ಆಗಮಿಸಿದ್ದವು. ಅಧಿಕಾರಿಗಳು ಆನೆಗಳನ್ನು ಬರ ಮಾಡಿಕೊಂಡಿದ್ದರು. ಬೆಳಿಗ್ಗೆಯಿಂದಲೇ ಆನೆಗಳಿಗೆ ತಯಾರಿ ನಡೆದಿತ್ತು.ಅಲಂಕಾರವನ್ನೂ ಮಾಡಲಾಗಿತ್ತು.
ಇನ್ನೇನು ಆನೆ ಜಂಬೂಸವಾರಿ ಕಾರ್ಯಕ್ರಮಕ್ಕೆ ಹೊರಡಬೇಕು ಎನ್ನುವಾಗ ಲಕ್ಷ್ಮಿ ಆನೆ ಏಕಾಏಕಿ ಓಡತೊಡಗಿತು. ಮಾವುತ ಅಲ್ಲೇ ಇದ್ದರೂ ಅದು ನಿಯಂತ್ರಣಕ್ಕೆ ಸಿಗಲಿಲ್ಲ. ನಗರದ ಪ್ರಮುಖ ಭಾಗದಲ್ಲೇ ನಡೆಯುವ ವ್ಯಾಪಾರದ ಸ್ಥಳಗಳಲ್ಲಿ ಅತ್ತಿಂದಿತ್ತ ಓಡಿತು. ಆಗ ಅಲ್ಲಿಯೇ ಹೊರಟಿದ್ದ ಜನ, ವ್ಯಾಪಾರದಲ್ಲಿ ತೊಡಗಿದ್ದವರು, ವ್ಯಾಪಾರಿಗಳು ಭಯಭೀತರಾದರು. ಆನೆ ಓಡುವಾಗ ಕೆಲ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಯಾರೂ ಎದುರು ಬಾರದಂತೆ ಮಾವುತ ಹಾಗೂ ಕವಾಡಿ ಮನವಿ ಮಾಡುತ್ತಲೇ ಇದ್ದರು. ಆದರೂ ಆನೆಯನ್ನು ನಿಯಂತ್ರಿಸಲು ಆಗಲೇ ಇಲ್ಲ. ನಾಲ್ಕೈದು ಬಾರಿ ಅಲ್ಲಿಯೇ ಸುತ್ತಿದ ಆನೆಯನ್ನ ಮಾವುತ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ. ಸುಮಾರು ಹತ್ತು ನಿಮಿಷ ಕಾಲ ಆನೆ ಗದ್ದಲ ಮೂಡಿಸಿತು.
ಇನ್ನೇನು ದಸರಾಗೆ ಚಾಲನೆ ನೀಡುವ ಮುನ್ನವೇ ಲಕ್ಷ್ಮೀ ಆನೆ ಗಾಬರಿಗೊಂಡಿದ್ದರಿಂದ ದಸರಾ ಸಮಿತಿಗೂ ಆತಂಕ ಎದುರಾಗಿತ್ತು. ಮಾವುತ ಹಾಗೂ ಕವಾಡಿಗರು ಕೂಡಲೇ ಆನೆಗೆ ಕಬ್ಬು ನೀಡಿ ದಸರಾ ಮೆರವಣಿಗೆಗೆ ಕರೆ ತಂದರು. ಆನಂತರ ಸಾಂಗವಾಗಿ ದಸರಾ ನೆರವೇರಿತು.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಕುಶಾಲುತೋಪು ಸಿಡಿಸುವಾಗ ಹಿರಣ್ಯ ಆನೆ ಭಯಭೀತವಾಗಿತ್ತು. ಶಬ್ದಕ್ಕೆ ಹೆದರಿ ಹೆಜ್ಜೆ ಹಾಕಿತ್ತು. ಆಗಲೂ ಮಾವುತ ನಿಯಂತ್ರಿಸಿದ್ದರು. ಈಗ ದಸರೆ ವೇಳೆಯೆ ಆನೆ ಆತಂಕ ಸೃಷ್ಟಿಸಿದೆ.
ಈ ದಿನ ಶ್ರೀರಂಗಪಟ್ಟಣದ ದಸರಾ ಮಹೋತ್ಸವವನ್ನು ಮಹೇಂದ್ರ ಹಿರಣ್ಯ ಮತ್ತು ಲಕ್ಷ್ಮಿ ಆನೆಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಆರಂಭದಲ್ಲಿ ಲಕ್ಷ್ಮಿ ಆನೆಯು ಲಾರಿ ಹತ್ತಲು ಹಠ ಮಾಡಿದ್ದರಿಂದ ಆನೆ ಮಾವುತರು ಕಾವಾಡಿಗರು ಮತ್ತು ಸಿಬ್ಬಂದಿಗಳು ಲಾರಿ ಹತ್ತಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀರಂಗಪಟ್ಟಣದ ಜಂಬೂಸವಾರಿ ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಯಾಗಿ ನೆರವೇರಿತು ಎಂದು ವನ್ಯಜೀವಿ ಡಿಸಿಎಫ್ ಡಾ.ಪ್ರಭುಗೌಡ ಬಿರಾದಾರ್ ಹೇಳಿದ್ದಾರೆ.
ವಾರದ ಹಿಂದೆ ಅರಮನೆ ಆವರಣದಲ್ಲಿ ಧನಂಜಯ ಎಂಬ ಆನೆ ಮದವೇರಿತ್ತು. ಊಟ ಮಾಡುವ ವೇಳೆ ಕಂಜನ್ ಎಂಬ ಆನೆಯನ್ನು ಓಡಿಸಿಕೊಂಡು ಹೋಗಿತ್ತು. ಕೊನೆಗೆ ಅರಮನೆ ಜಯಮಾರ್ತಾಂಡ ಗೇಟ್ ದಾಟಿಕೊಂಡು ಊಟಿ ಹೆದ್ದಾರಿವರೆಗೂ ಹೋಗಿತ್ತು.ಅಲ್ಲಿಯೂ ಭಾರೀ ಅನಾಹುತ ತಪ್ಪಿತ್ತು. ಈಗ ಎರಡನೇ ಬಾರಿ ಇಂತಹ ಘಟನೆ ನಡೆದಿರುವುದರಿಂದ ಮೈಸೂರು ದಸರಾಗೆ ಎಚ್ಚರ ವಹಿಸುವ ಸ್ಥಿತಿ ನಿರ್ಮಾಣವಾಗಿದೆ.