ಕಾಡಿನ ಕಥೆಗಳು: ಗಜಾನನ ಮತ್ತು ತಂತ್ರಜ್ಞಾನ: ರೈಲು ಹಳಿ ದಾಟುವಾಗ ಎದುರಾಗುವ ಸಾವಿನ ದವಡೆಯಿಂದ ಆನೆ ಪಾರು ಮಾಡಲು ಬಂದಿವೆ AI ಅಂಕುಶ !-forest tales real gajanan facing many troubles in india railway track deaths now ai technology saving elephants kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಾಡಿನ ಕಥೆಗಳು: ಗಜಾನನ ಮತ್ತು ತಂತ್ರಜ್ಞಾನ: ರೈಲು ಹಳಿ ದಾಟುವಾಗ ಎದುರಾಗುವ ಸಾವಿನ ದವಡೆಯಿಂದ ಆನೆ ಪಾರು ಮಾಡಲು ಬಂದಿವೆ Ai ಅಂಕುಶ !

ಕಾಡಿನ ಕಥೆಗಳು: ಗಜಾನನ ಮತ್ತು ತಂತ್ರಜ್ಞಾನ: ರೈಲು ಹಳಿ ದಾಟುವಾಗ ಎದುರಾಗುವ ಸಾವಿನ ದವಡೆಯಿಂದ ಆನೆ ಪಾರು ಮಾಡಲು ಬಂದಿವೆ AI ಅಂಕುಶ !

ಆನೆಯನ್ನು ಉಳಿಸಿಕೊ್ಳ್ಳಲು( Elephant Protection) ಈಗ ಅತ್ಯಾಧುನಿಕ ಅಂಕುಶ ಬಂದಿದೆ.ನಿಜ ಗಜಾನನನ ಸಂಕಟ ತಂತ್ರಜ್ಞಾನವನ್ನೂ ತಲುಪಿದೆ. ಈ ವಾರದ ಕಾಡಿನ ಕಥೆಗಳು( Forest Tales) ಗಜಾನನ ಮತ್ತು ತಂತ್ರಜ್ಞಾನ.

ಗಜಾನನ್ನು ಉಳಿಸಿಕೊಳ್ಳಲು ತಮಿಳುನಾಡು ಮಾತ್ರವಲ್ಲದೇ ಹಲವೆಡೆ ಶುರುವಾಗಿದೆ AI ತಂತ್ರಜ್ಞಾನದ ಸಹಕಾರ.
ಗಜಾನನ್ನು ಉಳಿಸಿಕೊಳ್ಳಲು ತಮಿಳುನಾಡು ಮಾತ್ರವಲ್ಲದೇ ಹಲವೆಡೆ ಶುರುವಾಗಿದೆ AI ತಂತ್ರಜ್ಞಾನದ ಸಹಕಾರ.

ಕೆಲ ದಿನಗಳ ಹಿಂದೆ ವಿಡಿಯೋವೊಂದು ವೈರಲ್‌ ಆಗಿತ್ತು. ಅಸ್ಸಾಂನಲ್ಲಿಆನೆ ಹಳಿ ದಾಟುತ್ತಿತ್ತು. ರೈಲು ವೇಗವಾಗಿ ಬಂದಿದ್ದೇ ಡಿಕ್ಕಿ ಹೊಡೆದೇ ಬಿಟ್ಟಿತು. ಭಾರೀ ಗಾತ್ರದ ಆನೆ ನಿಧಾನಕ್ಕೆ ನೆಲಕ್ಕೆ ಉರುಳಿ ಹಳಿ ಮೇಲೆಯೇ ಜೀವ ಬಿಟ್ಟಿತು. ಅದನ್ನು ನೋಡಿದ ಎಂತವರ ಮನ ಕಲಕದೇ ಇರದು. ಪಶ್ಚಿಮ ಬಂಗಾಲದಲ್ಲೂ ಹಳಿ ದಾಟುತ್ತಿದ್ದ ಆನೆಗಳ ಹಿಂಡಿನ ಮೇಲೆ ರೈಲು ಎರಗಿತು. ಆಹಾರ ಅರಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಟಿದ್ದ ಕರಿಪಡೆ ಜೀವ ಬಿಟ್ಟಿತು.

ತಮಿಳುನಾಡಿನಲ್ಲೂ ಭಾರೀ ಮಳೆ, ಪ್ರವಾಹದ ಸನ್ನಿವೇಶದಿಂದ ತಪ್ಪಿಸಿಕೊಳ್ಳಲು ಆನೆಗಳು ಹೊರಟವು. ಮಧ್ಯೆ ರೈಲ್ವೆ ಹಳಿ. ಕಷ್ಟವಾದರೂ ದಾಟಲೇಬೇಕು. ಹೀಗೆ ಮಾಡುವಾಗ ರೈಲು ಬರಬೇಕೇ. ವೇಗದಲ್ಲಿದ್ದ ರೈಲು ಡಿಕ್ಕಿಯಾಗಿ ಆನೆ ಜೀವ ಕಳೆದುಕೊಳ್ಳಬೇಕಾಯಿತು.

ಮೈಸೂರು ಜಿಲ್ಲೆ ಕೇರಳ ಗಡಿಯಂಚಿನ ಗ್ರಾಮದಲ್ಲಿ ಆಹಾರ ಅರಸಿ ಬಂದ ಆನೆ ಸೊಂಡಿಲು ವಿದ್ಯುತ್‌ ತಂತಿಗೆ ಸಿಲುಕಿ ಕುಳಿತ ಹಾಗೆಯೇ ಮೃತಪಟ್ಟಿತು. ಕೊಡಗಿನ ಕುಶಾಲನಗರ ಬಳಿ ಕಾಡಾನೆ ಆಹಾರ ಅರಸಿ ಎಸ್ಟೇಟ್‌ಗೆ ನುಗ್ಗಿತು. ಭಯದಿಂದ ಎಸ್ಟೇಟ್‌ ಮಾಲೀಕರು ಗುಂಡು ಹಾರಿಸಿದರು. ಆನೆ ಸತ್ತೇ ಹೋಗಿತ್ತು. ಗರ್ಭಿಣಿಯಾಗಿದ್ದ ಆನೆಯೊಂದಿಗೆ ಮರಿಯೂ ಹುಟ್ಟುವ ಮುನ್ನವೇ ಕಣ್ಣು ಮುಚ್ಚಿತು.

ಭಾರತದಲ್ಲಿ ಈ ರೀತಿ ಆನೆಗಳ ಸಾವು ಒಂದಿಲ್ಲೊಂದು ರೀತಿಯಲ್ಲಿ ಆಗುತ್ತಲೇ ಇವೆ. ಗಜಾನನನನ್ನು ಪೂಜಿಸಿ ಆರಾಧಿಸುವ ನಾವು ನಿಜ ಗಜಾನನನ ವಿಚಾರದಲ್ಲಿ ಕೊಂಚ ಹೆಚ್ಚೇ ಉಪೇಕ್ಷೆ ತೋರಿದ್ದೇವೆ. ಸರ್ಕಾರಗಳು ಆನೆಗಳು ಹಾಗೂ ಅವುಗಳ ಆವಾಸ ಸ್ಥಾನವನ್ನು ಉಳಿಸಿಕೊಳ್ಳಲು ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡುತ್ತಿವೆ. ಜನರಿಗೂ ಆನೆ ಉಳಿಸಿಕೊಳ್ಳಬೇಕು ಎನ್ನುವ ಬಯಕೆಯಿದ್ದರೂ ತಮ್ಮ ತೊಂದರೆಗೆ ಬಂದಾಗ ಮಾತ್ರ ಅವುಗಳನ್ನು ಸುಮ್ಮನೇ ಬಿಡುವುದಿಲ್ಲ ಎನ್ನುವ ಮನೋಭಾವವೂ ಇದೆ. ಈ ಕಾರಣದಿಂದ ನಿಜ ಗಜಮುಖನಿಗೆ ಸಂಕಷ್ಟ ತಪ್ಪುತ್ತಿಲ್ಲ.

ಆನೆ ಸಂಘರ್ಷದ ಭಿನ್ನ ಮುಖ

ಭಾರತದಲ್ಲಿ ಆನೆಗಳು ಹಾಗೂ ಮಾನವ ಸಂಘರ್ಷ ಹೊಸದಲ್ಲ. ಈಗ ಅದು ಹೆಚ್ಚಾಗಿದೆ. ಆನೆಗಳ ಸಂಘರ್ಷ ಅಧಿಕಗೊಂಡಿರುವ ಹಿಂದೆ ಹಲವಾರು ಸಾಮಾಜಿಕ, ಆರ್ಥಿಕ ಸಮಸ್ಯೆಗಳೂ ಎದುರಾಗಿವೆ. ಮುಖ್ಯವಾಗಿ ಮನುಷ್ಯನ ಸಾವಿನ ಆನೆ ದಾಳಿಯಿಂದ ಅಧಿಕವಾಗಿದೆ. ಮಾನವ-ಆನೆ ಸಂಘರ್ಷದಿಂದಾಗಿ ಕಳೆದ ಐದು ವರ್ಷಗಳಲ್ಲಿ 2,853 ಮಾನವ ಸಾವುಗಳು ಸಂಭವಿಸಿವೆ. 2023 ರಲ್ಲಿ ಸಾವಿನ ಸಂಖ್ಯೆಯು ಐದು ವರ್ಷಗಳ ಗರಿಷ್ಠ 628 ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತವೆ.

ಆನೆಗಳ ದಾಳಿಯಿಂದ 2019 ರಲ್ಲಿ 587, 2020 ರಲ್ಲಿ 471, 2021 ರಲ್ಲಿ 557, 2022 ರಲ್ಲಿ 610 ಮತ್ತು 2023 ರಲ್ಲಿ 628 ಮಾನವ ಸಾವು ಸಂಭವಿಸಿವೆ. ಈ ಅವಧಿಯಲ್ಲಿ ಒಡಿಶಾ 624 ಸಾವುಗಳನ್ನು ದಾಖಲಿಸಿದೆ. ನಂತರ ಜಾರ್ಖಂಡ್ 474, ಪಶ್ಚಿಮ ಬಂಗಾಳ 436, ಅಸ್ಸಾಂ 383, ಛತ್ತೀಸ್‌ಗಢ 303, ತಮಿಳುನಾಡು 256, ಕರ್ನಾಟಕ 160 ಮತ್ತು ಕೇರಳ 124 ಮನುಷ್ಯನ ಜೀವ ಹರಣವಾಗಿದೆ.
ಮನುಷ್ಯನ ಸಾವು ಒಂದು ರೀತಿ ಕುಟುಂಬಗಳ ಮೇಲೂ ಪರಿಣಾಮ ಬೀರಿದರೆ, ಇದಕ್ಕೆ ನೀಡುವ ತಲಾ 15 ಲಕ್ಷ ರೂ.ವರೆಗಿನ ಪರಿಹಾರವೂ ಆರ್ಥಿಕ ಲೆಕ್ಕಾಚಾರಕ್ಕೂ ದಾರಿ ಮಾಡಿಕೊಡುತ್ತದೆ.ಮತ್ತೊಂದು ಕಡೆ ಆನೆಗಳ ದಾಳಿಯಿಂದ ಬೆಳೆ ಪರಿಹಾರವನ್ನೂ ಕೂಡ ನೀಡಲಾಗುತ್ತಿದ್ದು. ಲಕ್ಷಾಂತರ ರೂ. ಪರಿಹಾರವನ್ನು ಪ್ರತಿ ವರ್ಷ ಆಯಾ ರಾಜ್ಯ ಸರ್ಕಾರಗಳು ನೀಡುತ್ತಿವೆ.

ರೈಲಿಗೆ ಸಿಲುಕಿ ದುರ್ಮರಣ

ಇದು ಮನುಷ್ಯ ಸಾವಿನ ಕಥೆಯಾದರೂ ಆನೆಗಳೂ ಹೀಗೆಯೆ ಜೀವ ಬಿಡುತ್ತಿರುವ ಸನ್ನಿವೇಶ ಅಧಿಕವಾಗಿದೆ. 2009 ಮತ್ತು 2024 ರ ನಡುವೆ ಭಾರತದಲ್ಲಿ 6 ಸಾವಿರಕ್ಕೂ ಹೆಚ್ಚಿನ ಆನೆಗಳ ಸಾವುಗಳು ಸಂಭವಿಸಿವೆ. ಅಂದರೆ ವರ್ಷಕ್ಕೆ ಸರಾಸರಿ 450 ಸಾವು. ಇದರಲ್ಲಿ ಶೇ. 70ರಷ್ಟು ಸಾವುಗಳು ಸ್ವಾಭಾವಿಕ. ಅದೂ ವಯೋ ಸಹಜ ಸಾವು.

ಆದರೆ ಶೇ 30 ರಷ್ಟು ಆನೆಗಳು ಅಸ್ವಾಭಾವಿಕವಾಗಿ ಸಾಯುತ್ತಿವೆ. ಬೇಟೆ, ವಿಷಪ್ರಾಶನ, ವಿದ್ಯುದಾಘಾತ ಮತ್ತು ರೈಲು ಅಪಘಾತಗಳು ಸೇರಿದಂತೆ ಅಸ್ವಾಭಾವಿಕ ಕಾರಣಗಳಿಂದ ಕಳೆದ ಐದು ವರ್ಷಗಳಲ್ಲಿ ಭಾರತವು 528 ಆನೆಗಳನ್ನು ಕಳೆದುಕೊಂಡಿದೆ. ಈ ಅವಧಿಯಲ್ಲಿ 392 ಆನೆಗಳು ವಿದ್ಯುದಾಘಾತದಿಂದ, 73 ಆನೆಗಳು ರೈಲು ಅಪಘಾತದಲ್ಲಿ ಸಾವನ್ನಪ್ಪಿವೆ. ಐವತ್ತು ಆನೆಗಳು ಕಳ್ಳ ಬೇಟೆಗಾರರ ದಾಳಿಗೆ ಬಲಿಯಾಗಿವೆ. 13 ಆನೆಗಳು ವಿಷಪ್ರಾಶನದಿಂದ ಜೀವ ಕಳೆದುಕೊಂಡಿವೆ.

ಒಡಿಶಾದಲ್ಲಿ 71, ಅಸ್ಸಾಂನಲ್ಲಿ 55, ಕರ್ನಾಟಕದಲ್ಲಿ 52, ತಮಿಳುನಾಡಿನಲ್ಲಿ 49, ಛತ್ತೀಸ್‌ಗಢದಲ್ಲಿ 32, ಜಾರ್ಖಂಡ್‌ನಲ್ಲಿ 30 ಮತ್ತು ಕೇರಳದಲ್ಲಿ 29 ಆನೆಗಳು ವಿದ್ಯುತ್ ಆಘಾತದಿಂದ ಸಾವನ್ನಪ್ಪಿವೆ.

ಅಸ್ಸಾಂ 22 ಮತ್ತು ಒಡಿಶಾದಲ್ಲಿ 16 ಆನೆಗಳು ರೈಲು ಅಪಘಾತದಲ್ಲಿ ಸಾವನ್ನಪ್ಪಿವೆ. ಕಳ್ಳ ಬೇಟೆಗಾರರು ಒಡಿಶಾದಲ್ಲಿ 17, ಮೇಘಾಲಯದಲ್ಲಿ 14 ಮತ್ತು ತಮಿಳುನಾಡಿನಲ್ಲಿ 10 ಆನೆಗಳನ್ನು ಕೊಂದಿದ್ದಾರೆ. ಅಸ್ಸಾಂನಲ್ಲಿ 10 ಆನೆಗಳು, ಛತ್ತೀಸ್‌ಗಢದಲ್ಲಿ ಎರಡು ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದು ಆನೆಗಳು ವಿಷ ಪ್ರಾಷನದಿಂದ ಪ್ರಾಣ ಬಿಟ್ಟಿವೆ. ವಿದ್ಯುತ್‌ ಆಘಾತ ಹಾಗೂ ರೈಲು ಅಪಘಾತ ಗಂಭೀರ ಪ್ರಕರಣಗಳೇ ಆನೆಗಳ ಬದುಕಿಗೆ ಅಡ್ಡಿ ಎನ್ನಿಸಿವೆ.

ಬಂದಿತು ಎಐ ತಂತ್ರಜ್ಞಾನ

ಗಜರಾಜರನ್ನು ಉಳಿಸಿಕೊಳ್ಳಲು ಮನುಷ್ಯನ ಎಲ್ಲ ಪ್ರಯತ್ನಗಳು ಫಲ ನೀಡುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಆನೆಗಳ ಸಾವಿನ ಪ್ರಕರಣಗೂ ಹೆಚ್ಚುತ್ತಿವೆ. ಸಂಘರ್ಷದಿಂದ ಮನುಷ್ಯನ ಸಾವಿನ ಪ್ರಕರಣಗಳೂ ಏರಿಕೆ ಕಾಣುತ್ತಿವೆ. ಬೆಳೆ ಹಾನಿ ಪರಿಹಾರ ನೀಡುವ ಮೊತ್ತವೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಮನುಷ್ಯದಿಂದ ಆನೆಗಳನ್ನು ಉಳಿಸಿಕೊಳ್ಳಲು ಆಗದ್ದು ತಂತ್ರಜ್ಞಾನದಿಂದ ಆಗಬಹುದೇ ಎನ್ನುವ ಪ್ರಶ್ನೆ ಎದುರಾಗಬಹುದು. ತಮಿಳುನಾಡು ಅರಣ್ಯ ಇಲಾಖೆ ಕೆಲ ದಿನಗಳ ಹಿಂದೆಯೇ ತಂತ್ರಜ್ಞಾನ ಆಧರಿತವಾಗಿಯೇ ಆನೆ ಸಂತತಿ ಉಳಿಸಲು ಮುಂದಾಗಿದೆ. ಅದು ಅತ್ಯಾಧುನಿಕ ಕೃತಿಕ ಬುದ್ದಿಮತ್ತೆ( Artificial Inteligence). ತಮಿಳುನಾಡಿನ ಅರಣ್ಯ ಇಲಾಖೆಯು ರೈಲ್ವೆ ಹಳಿಗಳ ಬಳಿ ಆನೆಗಳ ಚಲನವಲನವನ್ನು ಪತ್ತೆಹಚ್ಚಲು AI ಕಣ್ಗಾವಲು ವ್ಯವಸ್ಥೆಯನ್ನು ಪ್ರಾರಂಭಿಸಿ ಭಾರತದಲ್ಲೇ ಮುಂಚೂಣಿಯಲ್ಲಿದೆ. ತಮಿಳುನಾಡು ಒಂದರಲ್ಲೇ ಒಂದು ದಶಕದ ಅವಧಿಯಲ್ಲಿ ರೈಲು ಡಿಕ್ಕಿಯಿಂದ 36 ಆನೆ ಸಾವು ದಾಖಲಾಗಿದ್ದವು.

ಅಧಿಕೃತ ಅಂಕಿಅಂಶಗಳ ಪ್ರಕಾರ, ರಾಜ್ಯದ ರೈಲ್ವೆ ಹಳಿಗಳ ಮೇಲೆ ಮತ್ತು ಸಮೀಪದಲ್ಲಿ ಆನೆಗಳ ಸಾವುಗಳು ಹೆಚ್ಚಿದ್ದವು. ಅದರಲ್ಲೂ ತಮಿಳುನಾಡಿನಲ್ಲಿ ಹನ್ನೊಂದು ಆನೆಗಳ ಸಾವುಗಳು ಕೇರಳ ರಾಜ್ಯದ ಗಡಿಯಲ್ಲಿರುವ ಮಧುಕ್ಕರೈ ಬಳಿಯ ಎರಡು ರೈಲು ಹಳಿಗಳಲ್ಲಿ ಸಂಭವಿಸಿದ್ದವು. ಈ ಟ್ರ್ಯಾಕ್‌ಗಳು ಆನೆಗಳು ನೆರೆಯ ಕಾಡುಗಳಿಗೆ ವಲಸೆ ಹೋಗುವ ಮಾರ್ಗದೊಂದಿಗೆ ಛೇದಿಸುವುದನ್ನು ತಜ್ಞರ ಸಮಿತಿ ಪತ್ತೆ ಮಾಡಿತ್ತು. 2021 ರಲ್ಲಿ ಮದ್ರಾಸ್‌ ಹೈಕೋರ್ಟ್ ಕೂಡ ಈ ಹಳಿಗಳಲ್ಲಿ ಆನೆಗಳ ಸಾವುಗಳನ್ನು ತಡೆಯಲು ಅರಣ್ಯ ಇಲಾಖೆ ಮತ್ತು ರೈಲ್ವೆಗೆ ಆದೇಶ ನೀಡಿತ್ತು.

ಅರಣ್ಯ ಇಲಾಖೆಯು ಮೊರೆ ಹೋಗಿದ್ದು AI ತಂತ್ರಜ್ಞಾನಕ್ಕೆ. ಮಧುಕ್ಕರೈನ ಎರಡು ರೈಲು ಹಳಿಗಳ ಉದ್ದಕ್ಕೂ 12 ಟವರ್‌ಗಳನ್ನು ಸ್ಥಾಪಿಸಿತು. ಪ್ರತಿಯೊಂದೂ ಥರ್ಮಲ್ ಮತ್ತು ಪ್ರಖರ ಬೆಳಕಿನ ಇಮೇಜಿಂಗ್ ಸಾಮರ್ಥ್ಯದ AI ಕ್ಯಾಮೆರಾವನ್ನು ಹೊಂದಿದ್ದು, ನೇರ ವೀಕ್ಷಣೆಯೊಂದಿಗೆ ನಿಖರ ಮಾಹಿತಿಯನ್ನು ರವಾನಿಸಲಿದೆ. ದೇಶದ ಗಡಿಯಲ್ಲಿ ಭಾರತೀಯ ಸೇನೆಯು ಬಳಸುತ್ತಿರುವ AI ಸಿಸ್ಟಂನ ಕ್ಯಾಮೆರಾಗಳಿಗೆ ಹೋಲಿಸಬಹುದಾದ ಯೋಜನೆಯಿದು. ನಾಲ್ವರು ಇದರ ಮೇಲುಸ್ತುವಾರಿ ಮಾಡುತ್ತಿದ್ದಾರೆ. ಹತ್ತು ತಿಂಗಳಿನಿಂದ ಇದು ನಡೆದಿದೆ.

ರೈಲು ಹಳಿಯಿಂದ 100 ಅಡಿ ಅಂತರದಲ್ಲಿ ಆನೆಗಳು ಪತ್ತೆಯಾದಾಗ, ಅರಣ್ಯ ಮತ್ತು ರೈಲ್ವೆ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಆಗ ರೈಲುಗಳನ್ನು ನಿಧಾನಗೊಳಿಸಿ ಅಪಘಾತವಾಗುವುದನ್ನು ತಪ್ಪಿಸಲು AI ತಂತ್ರಜ್ಞಾನ ನೆರವಾಗುತ್ತಿದೆ. ಯೋಜನೆ ಅನುಷ್ಠಾನದ ತಿಂಗಳೊಳಗೆ, AI ವ್ಯವಸ್ಥೆಯು ಸುಮಾರು 400 ಆನೆಗಳು ರೈಲ್ವೆ ಹಳಿಗಳಿಗೆ ಸಮೀಪಿಸುತ್ತಿರುವುದನ್ನು ಪತ್ತೆಹಚ್ಚಿ ತಕ್ಷಣವೇ ರೈಲ್ವೇ ಅಧಿಕಾರಿಗಳಿಗೆ ವರದಿ ಮಾಡಿದೆ. ಹೀಗಾಗಿ ಸಂಭಾವ್ಯ ಅಪಘಾತಗಳನ್ನು ತಡೆದಿವೆ ಎನ್ನುತ್ತವೆ ವರದಿಗಳು.

ಇದರ ಯಶಸ್ಸಿನಿಂದ ಕೊಯಮತ್ತೂರು, ಧರ್ಮಪುರಿ, ಹೊಸೂರು ಮತ್ತು ಗುಡಲೂರು ಸೇರಿದಂತೆ ತಮಿಳುನಾಡಿನ ಸಮಸ್ಯಾತ್ಮಕ ಪ್ರದೇಶಗಳಲ್ಲಿ AI ಆಧರಿತ ವ್ಯವಸ್ಥೆಯನ್ನು ವಿಸ್ತರಿಸಲು ಅಲ್ಲಿನ ಅರಣ್ಯ ಇಲಾಖೆ ಮುಂದಾಗಿದೆ.

ಭಾರತೀಯ ರೈಲ್ವೆ ಪ್ರಯತ್ನ

ಭಾರತದಲ್ಲಿ ವನ್ಯಜೀವಿಗಳನ್ನು ರಕ್ಷಿಸಲು AI ಅನ್ನು ಇತರೆಡೆಗೂ ಬಳಸಲಾಗುತ್ತಿದೆ. ರೈಲ್ವೇ ಸಚಿವಾಲಯವು( Indian Railways) ದೇಶದ ಹಲವಾರು ರಾಜ್ಯಗಳಾದ್ಯಂತ ಆನೆ ಕಾರಿಡಾರ್‌ಗಳಲ್ಲಿ ಗಜರಾಜ್ ಎಂದು ಕರೆಯಲ್ಪಡುವ AI ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಈ ಯೋಜನೆಯಡಿ, ಅಧಿಕಾರಿಗಳು ರೈಲ್ವೆ ಹಳಿಗಳ ಬಳಿ AI ತಂತ್ರಜ್ಞಾನವನ್ನು ಬಳಸಿಕೊಂಡು ಸಂವೇದಕಗಳನ್ನು ಸ್ಥಾಪಿಸುತ್ತಿದ್ದಾರೆ, ಇದು ಅಪಘಾತಗಳನ್ನು ತಡೆಗಟ್ಟಲು ಆನೆಗಳು, ಇತರ ಪ್ರಾಣಿಗಳು ಮತ್ತು ಮನುಷ್ಯರ ಚಲನವಲನದ ಬಗ್ಗೆ ರೈಲ್ವೆ ಆಡಳಿತ ಮತ್ತು ಅರಣ್ಯ ಇಲಾಖೆಗೆ ಸೂಚನೆಗಳನ್ನು ಕಳುಹಿಸುತ್ತದೆ. ಇದರಿಂದ ಆನೆಗಳ ಸಾವಿನ ಸಂಖ್ಯೆ ತಗ್ಗಿಸಬಹುದು. ರೈಲು ಪೈಲಟ್‌ಗಳು ಈಗ ರಾತ್ರಿಯಲ್ಲಿಯೂ ಟ್ರ್ಯಾಕ್‌ಗಳಲ್ಲಿ ಪ್ರಾಣಿಗಳ ಚಲನೆಯ ಬಗ್ಗೆ ನೈಜ-ಸಮಯದ ಎಚ್ಚರಿಕೆಗಳನ್ನು ಪಡೆಯುವಷ್ಟರ ಮಟ್ಟಿಗೆ ತಂತ್ರಜ್ಞಾನ ಬಳಕೆಯಾಗುತ್ತಿದೆ.

ಗಜಾನನಿಗೂ ಗೊತ್ತಾಗಿದೆ. ಸಾಯಿಸುವವನು ಒಬ್ಬನಿದ್ದರೆ ಕಾಯುವವನು ಮತ್ತೊಬ್ಬನಿರುತ್ತಾರೆ ಎಂದು. ಈಗ ಭಾರತದಲ್ಲಿ AI ಆನೆ ರಕ್ಷಕನ ಕೆಲಸಕ್ಕೆ ಬಂದಿದ್ದು ಈ ಗಣೇಶನ ಹಬ್ಬಕ್ಕೆ ನಿರಾಳತೆಯನ್ನೂ ತಂದಿದೆ.

-ಕುಂದೂರು ಉಮೇಶಭಟ್ಟ, ಮೈಸೂರು

mysore-dasara_Entry_Point