ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ; ಮೊಬೈಲ್ ನೆಟ್ವರ್ಕ್ ಇಲ್ಲದೇ ಜನರ ಪರದಾಟ, ಟಾಯ್ಲೆಟ್ ಕಥೆಯಂತೂ ಕೇಳ್ಲೇಬೇಡಿ
Dec 22, 2024 01:57 PM IST
ಮಂಡ್ಯ ಸಾಹಿತ್ಯ ಸಮ್ಮೇಳನವೆಂಬ ಅವ್ಯವಸ್ಥೆಯ ಅಂಗಳ
- ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯವಸ್ಥೆಗಳಷ್ಟೇ ಅವ್ಯವಸ್ಥೆಯೂ ಇತ್ತು. ಮೊಬೈಲ್ ನೆಟ್ವರ್ಕ್ ಇಲ್ಲದೇ ಜನರು ಪರದಾಡಿದ್ರು. ಕೊಂಚ ಮಳೆ ಹನಿಸಿದ್ದೇ ತಡ ಸಮ್ಮೇಳನ ನಡೆಯುತ್ತಿದ್ದ ಜಾಗವು ಕೆಸರು ಗದ್ದೆಯಂತಾಗಿತ್ತು. ಟಾಯ್ಲೆಟ್‌ಗಳ ಪರಿಸ್ಥಿತಿಯಂತೂ ಕೇಳೋದೇ ಬೇಡವಾಗಿತ್ತು. ಕುಡಿಯುವ ಎಲ್ಲಿದೆ ಎಂದು ಹುಡುಕಾಟ ನಡೆಸಬೇಕಿತ್ತು.
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು (ಡಿಸೆಂಬರ್ 22) ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾಗಿದೆ. ಈ ಬಾರಿ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು 25 ಕೋಟಿಯಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಅದ್ಧೂರಿ ವೇದಿಕೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆದರೆ ಸಮ್ಮೇಳನದಲ್ಲಿ ಹಲವು ಅವ್ಯವಸ್ಥೆಗಳು ಕಣ್ಣಿಗೆ ರಾಚುವಂತಿವೆ. ಸಾಹಿತ್ಯ ಸಮ್ಮೇಳನ ಅವ್ಯವಸ್ಥೆಗೆ ಜನರು ಕಂಗಾಲಾಗಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಅವ್ಯವಸ್ಥೆಗಳು
ಮೊಬೈಲ್ ನೆಟ್ವರ್ಕ್ ಸಮಸ್ಯೆಯಂತೂ ಜನರನ್ನು ಹೈರಾಣು ಮಾಡಿತ್ತು. ಮಂಡ್ಯದ ಬಿಸಿಲಿನ ಝಳಕ್ಕೆ ತತ್ತರಿಸಿದ್ದ ಜನರು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸಬೇಕಿತ್ತು. ಊಟದ ಮೆನುವಿನಲ್ಲಿ ಇರಬೇಕಾಗಿದ್ದು 20 ಐಟಂ ಹಲವರಿಗೆ ಸಿಕ್ಕಿದ್ದು ಮಾತ್ರ ಐದಾರು ಐಟಂ. ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಅವ್ಯವಸ್ಥೆಗಳ ಪಟ್ಟಿ ಹೀಗಿದೆ:
- ಮೊಬೈಲ್ ನೆಟವರ್ಕ್ ಸಮಸ್ಯೆ: ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ತೊಂದರೆಗೆ ಕಾರಣವಾಗಿತ್ತು. ಮೊನ್ನೆ ಸಮ್ಮೇಳನದ ಅಂಗಳ ಹೊಕ್ಕರೆ ನೆಟ್‌ವರ್ಕ್ ಪೂರ್ತಿ ಹೋಗಿ ಒಬ್ಬರ ಸಂಪರ್ಕ ಒಬ್ಬರಿಗೆ ಸಿಗದಂತಾಗಿತ್ತು. ಅಪ್ಪಿತಪ್ಪಿ ಹೆಚ್ಚು ಕ್ಯಾಷ್ ತಂದಿಲ್ಲ ಎಂದರೆ ಖಂಡಿತ ಪರದಾಡಿ ಹೋಗಬೇಕಿತ್ತು. ಗೂಗಲ್ ಪೇ, ಫೋನ್ ಪೇ ಮಾಡಲು ನೆಟ್‌ವರ್ಕ್ ಇಲ್ಲ. ತಕ್ಷಣ ಕ್ಯಾಷ್ ಬಿಡಿಸಿ ತರುವ ಎಂದರೆ ಹತ್ತಿರದಲ್ಲೆಲ್ಲೂ ಎಂಟಿಎಂ ಸೌಲಭ್ಯವಿಲ್ಲ. ಇದರಿಂದ ಜನರು ತಮ್ಮ ಮನಸ್ಸಿಗೆ ಖುಷಿ ಕೊಟ್ಟಿದ್ದನ್ನು, ಪುಸ್ತಕಗಳನ್ನು ಖರೀದಿಸಲು ಪರದಾಡುವಂತಾಗಿತ್ತು.
- ಕುಡಿಯುವ ನೀರಿಗೆ ತತ್ವಾರ: ಬಿಸಿಲಿನ ಝಳಕ್ಕೆ ಸಮ್ಮೇಳನಕ್ಕೆ ಬಂದಿದ್ದ ಜನ ತತ್ತರಿಸಿದ್ದರು. ವೇದಿಕೆಯಲ್ಲಿ ವಾಣಿಜ್ಯ, ಪುಸ್ತಕಗಳ ಮಳಿಗೆಯಲ್ಲಿ ಶಾಮಿಯಾನ ವ್ಯವಸ್ಥೆ ಇದ್ದರೂ ಹೊರಗಡೆ ನಿಂತಿರುವ ಬಿಸಿಲಿನಲ್ಲಿ ಕಂಗೆಟ್ಟಿದ್ದರು. ವಿಪರೀತ ಬಿಸಿಲಿನ ಕಾರಣಕ್ಕೆ ಡೀಹೈಡ್ರೇಷನ್ ಸಮಸ್ಯೆಯಾಗುವ ಹಾಗಿತ್ತು. ಹಾಗಂತ ನೀರು ಕುಡಿಯೋಣ ಎಂದುಕೊಂಡರೆ ತಕ್ಷಣಕ್ಕೆ ನೀರು ಸಿಗುತ್ತಿರಲಿಲ್ಲ. ನೀವು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸಬೇಕಿತ್ತು. ಇಂತಲ್ಲಿ ನೀರಿದೆ ಎನ್ನುವ ಸೂಚನಾಫಲಕವನ್ನು ಕೂಡ ಅಳವಡಿಸಿ ಇರಲಿಲ್ಲ.
ಇದನ್ನೂ ಓದಿ: ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ - ಸುಲಭಕ್ಕೆ ಸಿಗದ ಊಟದ ಜಾಗ: ಮಾರುದ್ದ ದೂರದಲ್ಲಿ ಊಟ ಸ್ಥಳ. ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಬಂದವರೆಲ್ಲರಿಗೂ ಊಟ ವ್ಯವಸ್ಥೆ ಮಾಡಲಾಗಿತ್ತು ನಿಜ. ಆದರೆ ಊಟ ಹಾಲ್ ಹುಡುಕಿ ಹೋಗುವಷ್ಟರಲ್ಲಿ ತಲೆ ತಿರುವಂತಾಗುತ್ತದೆ. ಅಷ್ಟು ದೂರದಲ್ಲಿ ಊಟದ ಹಾಲ್ ಮಾಡಲಾಗಿದೆ. ಸಮ್ಮೇಳನದ ನಡೆಯುವ ಜಾಗದಿಂದ ಊಟ ಹಾಲ್‌ಗೆ ನಡೆದು ಹೋಗಲು 10 ನಿಮಿಷ ಬೇಕು. ಊಟದ ವ್ಯವಸ್ಥೆ ಎಲ್ಲಿ ಮಾಡಲಾಗಿದೆ ಎಂಬ ಬಗ್ಗೆ ಕೂಡ ಸೂಚನಾ ಫಲಕಗಳನ್ನು ಹಾಕಿರಲಿಲ್ಲ. ಊಟದಲ್ಲಿ 20 ಬಗೆಯ ಮೆನು ಎಂದು ಹೇಳಲಾಗಿತ್ತಾದರೂ ಅಲ್ಲೂ ಕೂಡ ನೂಕುನುಗ್ಗಲಿನ ಕಾರಣ ಬಹುತೇಕರಿಗೆ ಸಿಕ್ಕಿದ್ದು ಐದಾರು ಬಗೆ ಮಾತ್ರ. ಊಟ ಮಾಡಿದ ನಂತರ ಕೈತೊಳೆಯುವ ವ್ಯವಸ್ಥೆ ಹೊರಗೆ ಮಾಡಲಾಗಿದ್ದರೂ ಜನರು ಶಾಮಿಯಾನ ಒಳಗೆ ಕೈ ತೊಳೆಯುತ್ತಿದ್ದರು. ಆದರೆ ಇದನ್ನು ಕೇಳುವವರು ಇರಲಿಲ್ಲ.
- ತಪ್ಪಿಸಿಕೊಂಡರೆ ದೇವರೇ ಗತಿ: ನಮ್ಮ ಜೊತೆಗೆ ಬಂದವರು ತಪ್ಪಿಸಿಕೊಂಡರೆ ದೇವರೇ ಗತಿ ಎಂದುಕೊಳ್ಳಬೇಕೇ ಹೊರತು ಆ ಜನಜಂಗುಳಿಯ ನಡುವೆ ಅವರನ್ನು ಹುಡುಕುವುದು ಅಸಾಧ್ಯದ ಮಾತಾಗಿತ್ತು. ತಪ್ಪಿಸಿಕೊಂಡಿದ್ದಾರೆ, ಇಂಥವರು ಇಂಥವರನ್ನು ಹುಡುಕುತ್ತಿದ್ದಾರೆ ಎಂದು ಊಟದ ವ್ಯವಸ್ಥೆ ಮಾಡಿರುವ ಜಾಗದಲ್ಲಿ ಮಾತ್ರ ಮೈಕ್‌ನಲ್ಲಿ ಕೂಗಿ ಹೇಳುವ ವ್ಯವಸ್ಥೆ ಇತ್ತು ಹೊರತು ಬೇರೆ ಜಾಗದಲ್ಲಿ ಈ ವ್ಯವಸ್ಥೆ ಇರಲಿಲ್ಲ.
- ಟಾಯ್ಲೆಟ್ ಎಂಬ ನರಕ: ಈ ಬಾರಿ ಸಾಹಿತ್ಯ ಸಮ್ಮೇಳನಕ್ಕೆ 250 ಟಾಯ್ಲೆಟ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿಕೊಂಡಿದ್ದರು. ಆದರೆ ಅಲ್ಲಿರುವ ಟಾಯ್ಲೆಟ್‌ಗಳ ವ್ಯವಸ್ಥೆ ಕಥೆ ಕೇಳುವುದೇ ಬೇಡ. ನೀರಿಲ್ಲದೇ ಟಾಯ್ಲೆಟ್‌ನಲ್ಲಿ ಜನರು ಪರದಾಡುವಂತಾಗಿತ್ತು. ಕೆಲವು ಕಡೆ ಬ್ಲಾಕ್ ಆಗಿ ಟಾಯ್ಲೆಟ್‌ನಲ್ಲಿ ಗದ್ದೆದ್ದು ನಾರುವ ವಾಸನೆ ಮೂಗಿಗೆ ಬಡಿಯುತ್ತಿತ್ತು.
ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನ: ಈ ಡಿಜಿಟಲ್ ಜಗತ್ತಿನಲ್ಲಿ ಸ್ಟಾಲ್‌ಗೆ ಬಂದು ಪುಸ್ತಕ ನೋಡ್ತಾರೆ, ಕೊಳ್ಳುವವರ ಸಂಖ್ಯೆ ಕಡಿಮೆ; ಮಾರಾಟಗಾರರ ಅಳಲು - ಸಮ್ಮೇಳನದ ಮುಖ್ಯ ವೇದಿಕೆಯ ಅಕ್ಕಪಕ್ಕದಲ್ಲೇ ಇತರ ವೇದಿಕೆಗಳೂ ಇದ್ದು ಆ ವೇದಿಕೆಯಿಂದ ಈ ವೇದಿಕೆಗೆ ಹೋಗಲು ದಾರಿ ಮಾತ್ರ ಇರಲಿಲ್ಲ. ದಾರಿ ತೋರಲು ನಿಮಗೆ ಸೂಚನಾ ಫಲಕ, ಸೂಚನೆ ನೀಡಲು ಜನರೂ ಕೂಡ ಇರಲಿಲ್ಲ.
- ಪುಸಕ್ತಗಳನ್ನ ಹೊತ್ತೇ ತರಬೇಕು: ಸಮ್ಮೇಳನ ನಡೆಯುತ್ತಿದ್ದ ಜಾಗದಿಂದ ಪಾರ್ಕಿಂಗ್ ಜಾಗಕ್ಕೆ 15 ರಿಂದ 20 ನಿಮಿಷಗಳ ಕಾಲ ನಡೆಯಬೇಕಿತ್ತು. ಪುಸ್ತಕ ಮಳಿಗೆಗಳನ್ನು ಹಾಕಿದವರಿಗೂ ಸ್ಟಾಲ್‌ವರೆಗೆ ಗಾಡಿ ತೆಗೆದುಕೊಂಡು ಹೋಗುವ ಅವಕಾಶ ಇರಲಿಲ್ಲ. ಇದರಿಂದ ಹೆಚ್ಚಿನ ಪುಸ್ತಕಗಳನ್ನು ತರಲು ಸಾಧ್ಯವಾಗಿಲ್ಲ ಎಂದು ಮಳಿಗೆಯವರು ಗೋಳು ತೋಡಿಕೊಂಡಿದ್ದಾರೆ.
- ಸೆಖೆಯಿಂದ ತತ್ತರಿಸಿದ ಜನ: ವೇದಿಕೆ ಮುಂಭಾಗ ಇದ್ದೂ ಇಲ್ಲದಂತಿರುವ ಫ್ಯಾನ್. ಸಮ್ಮೇಳನದ ವೇದಿಕೆಯನ್ನು ಸುತ್ತಲೂ ಶ್ಯಾಮಿಯಾನದಿಂದ ಕವರ್ ಮಾಡಲಾಗಿತ್ತು. ಸೆಖೆ ಆಗದಂತೆ ಮಧ್ಯ ಭಾಗದಲ್ಲಿ ದೊಡ್ಡ ಫ್ಯಾನ್ ಅಳವಡಿಸಲಾಗಿತ್ತು. ಆದರೆ ಇದು ತಿರುಗಿದರೂ ಗಾಳಿ ಬಾರದಂತೆ ತಿರುಗುತ್ತಿತ್ತು. ಇದರಿಂದ ಜನರೆಲ್ಲಾ ಸೆಖೆಯಲ್ಲಿ ಬೆಂದು ಹೋಗುವಂತಾಗಿತ್ತು. ಸ್ಟಾಲ್‌ಗಳಲ್ಲೂ ಫ್ಯಾನ್ ವ್ಯವಸ್ಥೆ ಇಲ್ಲದೇ ಮಾರಾಟಗಾರರು, ಖರೀದಿದಾರರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.
ಇದನ್ನೂ ಓದಿ: ಬಿಸಿಲಿನ ಝಳ, ಬೆಲ್ಲದ ಸವಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಜನವೋ ಜನ- ನುಡಿ ಜಾತ್ರೆಯ ಚಿತ್ರಪಟಗಳು - ಖರೀದಿಸುವವರಿಗೆ ಅವಕಾಶವಿಲ್ಲ. ಪುಸ್ತಕ ಮಳಿಗೆಗಳಲ್ಲಿ ಎಲ್ಲಿ ನೋಡಿದರೂ ಶಾಲಾ ಮಕ್ಕಳೇ ತುಂಬಿರುತ್ತಿದ್ದರು. ಇದರಿಂದ ನಿಜವಾಗಲೂ ಪುಸ್ತಕ ಖರೀದಿಗೆ ಬಂದವರಿಗೆ ನಿಂತು ಪುಸಕ್ತ ಖರೀದಿ ಮಾಡುವುದು ಅಸಾಧ್ಯದ ಮಾತಾಗಿತ್ತು.
- ಈ ಎಲ್ಲದರ ನಡುವೆ ಮಳೆ ಹನಿದ್ದಿದ್ದು ಸಮ್ಮೇಳನದ ಅಂಗಳವು ಕೆಸರುಗದ್ದೆಯಂತಾಗಿದೆ. ಇದರಿಂದ ಜನರು ಕಾಲು ಜಾರಿ ಬೀಳುವ ಪರಿಸ್ಥತಿ ಎದುರಾಗಿದೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಕಾರ್ಯಕ್ರಮ ಇದಾ? ಎಂದು ಸಂಶಯ ಪಡುವಂತೆ ಈ ಬಾರಿಯ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಜನರಿಗೆ ಭಾಸವಾಗಿರುವುದು ಸುಳ್ಳಲ್ಲ.
ದೊಡ್ಡ ದೊಡ್ಡ ಕಾರ್ಯಕ್ರಮಗಳು ಎಂದಾಗ ವ್ಯವಸ್ಥೆ ಮಾಡುವುದು ಕಷ್ಟ ಎಂದಾದರೂ ಮಾಡಿರುವುದು ಅಚ್ಚುಕಟ್ಟಾಗಿ ನಿರ್ವಹಿಸಿ, ಜನರಿಗೆ ತೊಂದರೆ ಆಗದಂತೆ ನಿರ್ವಹಿಸುವುದು ಬಹಳ ಮುಖ್ಯವಾಗುತ್ತದೆ. ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಕನ್ನಡ ಹಬ್ಬದ ಖುಷಿಯನ್ನು ಜನರು ಸವಿಯುವಂತೆ ಮಾಡಲಿ.