ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗೋಕಾಕ್ ಮಾದರಿಯಲ್ಲಿಯೇ ಜನಾಂದೋಲನ ರೂಪಿಸಿ: ಸಾಹಿತ್ಯ ಸಮ್ಮೇಳನದಲ್ಲಿ ಬಂದ ಸಲಹೆಗಳಿವು
Dec 22, 2024 06:03 PM IST
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ "ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು" ಗೋಷ್ಠಿಯಲ್ಲಿ ಪಾಲ್ಗೊಂಡ ತಜ್ಞರು.
- ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಹೇಗಿರಬೇಕು ಎನ್ನುವ ಕುರಿತು ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಜ್ಞರು ವಿಸ್ತೃತವಾಗಿ ಚರ್ಚಿಸಿದರು.
ಮಂಡ್ಯ: ಕರ್ನಾಟಕದಲ್ಲಿನ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಗಟ್ಟಿಯಾದ ಜನಾಂದೋಲನ, ಹೋರಾಟ ರೂಪಿಸುವ ಸಮಯ ಮತ್ತೊಮ್ಮೆ ಬಂದಿದೆ. ಇದಕ್ಕಾಗಿ ಅಂತಿಂಥ ಹೋರಾಟ ಬೇಕಿಲ್ಲ. ಅದು ಐದು ದಶಕದ ಹಿಂದೆ ರೂಪಿಸಿದ್ದ ಗೋಕಾಕ್ ಮಾದರಿಯ ಚಳವಳಿಯೇ ಆಗಬೇಕಿದೆ. ಸಂಘಸಂಸ್ಥೆಗಳು, ಸಾರ್ವಜನಿಕರು ಗೋಕಾಕ್ ಮಾದರಿಯಲ್ಲಿ ಜನಾಂದೋಲನ ರೂಪಿಸಿದರೆ ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿಯಲು ಸಾಧ್ಯ. ಇಲ್ಲದೇ ಇದ್ದರೆ ಮುಂದಿನ ಪೀಳಿಗೆ ಕನ್ನಡ ಶಾಲೆಗಳನ್ನು ಹುಡುಕಬೇಕಾದ ಸನ್ನಿವೇಶವೂ ಬರಬಹುದು. ಇದಕ್ಕಾಗಿ ಈಗಿನಿಂದಲೇ ಎಚ್ಚರಗೊಳ್ಳುವುದು ಅನಿವಾರ್ಯವೂ ಹೌದು. ಇದು ಮಂಡ್ಯದಲ್ಲಿ ನಡೆದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದ ಕಳಕಳಿ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ "ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣ: ಸಾಧ್ಯತೆ ಮತ್ತು ಸವಾಲುಗಳು" ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಜನಾಂದೋಲನ ಆಗಬೇಕು. ಇದರ ಜೊತೆಗೆ ಸರ್ಕಾರಿ ಶಾಲೆಗಳ ಜಮೀನು ಅತಿಕ್ರಮಣದ ವಿರುದ್ಧ ಧ್ವನಿ ಎತ್ತಬೇಕು. ಸರ್ಕಾರಿ ಶಾಲೆಗಳ ಆಟದ ಮೈದಾನ, ಶಾಲೆಗಳ ಜಮೀನು ಒತ್ತುವರಿ ಆಗುತ್ತಿದ್ದು ಶಾಲೆಗಳ ಜಾಗದ ಸಂರಕ್ಷಣೆ ಮಾಡುವ ಕೆಲಸ ಜನಾಂದೋಲನದ ರೂಪದಲ್ಲಿ ಆಗಬೇಕಾದ್ದು ತುರ್ತು ಹೌದು ಎನ್ನುವ ಸಲಹೆ ನೀಡಿದರು.
ನೂರು ವರ್ಷಗಳು ಕಳೆದರೂ ಎಷ್ಟೋ ಶಾಲೆಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಕನ್ನಡವನ್ನು ಪುನರ್ ಕಟ್ಟುವ ಶಾಲೆ ಉಳಿಸುವ ಭಾಷೆ ರಕ್ಷಿಸುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಜನಸಂಖ್ಯೆ ಇಳಿಮುಖವಾಗುತ್ತಾ ಸಾಗುತ್ತಿರುವುದು ಕೂಡ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಇಳಿಕೆಗೆ ಕಾರಣ. ಜನಸಂಖ್ಯೆ ಹೆಚ್ವಿರುವ ರಾಜ್ಯದ ಜನರು ಕರ್ನಾಟಕದತ್ತ ಬರುತ್ತಿದ್ದು ವಲಸೆ ನಿಯಂತ್ರಿಸುವುದು ಕರ್ನಾಟಕದ ಪ್ರಮುಖ ಸವಾಲಾಗಿದೆ ಎನ್ನುವುದು ಅವರ ಪ್ರತಿಪಾದನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ 2017ರಲ್ಲಿ ಸಲ್ಲಿಕೆ ಮಾಡಿದ್ದ ಸರ್ಕಾರಿ ಶಾಲೆಗಳ ಸಬಲೀಕರಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಸಲ್ಲಿಸುವುದರ ಜೊತೆಗೆ ವರದಿಯಲ್ಲಿನ 21 ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಅವರು ಒತ್ತಾಯಿಸಿದರು.
ಕೆಲಸದ ಗ್ರಹಿಕೆ ಸರಿಪಡಿಸಲಿ
ಆಶಯ ನುಡಿಗಳನ್ನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಎಲ್. ಎನ್. ಮುಕುಂದರಾಜ್, ಕನ್ನಡದ ಶಾಲೆ, ಸಂಸ್ಕೃತಿಯನ್ನು ಕನ್ನಡಿಗರೇ ಕೊಲ್ಲುತ್ತಿದ್ದಾರೆ. ಸಾವಿರಾರು ವರ್ಷಗಳಿಂದ ಇರುವ ಕನ್ನಡ, ಅನ್ನದ ಭಾಷೆಯಲ್ಲ ಅನ್ನೋದು ತಪ್ಪು ಗ್ರಹಿಕೆ. ಕನ್ನಡ ಶಾಲೆಯಲ್ಲಿ ಓದಿದವರು ಮೆಟ್ರೋ ರೂಪಿಸಿದರು. ಬುಲೆಟ್ ರೈಲು ತಯಾರಿ ಮಾಡುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಕೆಲಸ ಸಿಗುತ್ತದೆ ಅನ್ನೋದು ತಪ್ಪು ಗ್ರಹಿಕೆ. ನಾವು ಬದುಕಬೇಕೆಂದರೆ ಕನ್ನಡ ಉಳಿಯಬೇಕು. ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದಾಗ ವ್ಯವಸ್ಥೆ ಸರಿಹೋಗುತ್ತದೆ ಎಂಬ ಗಂಭೀರ ಸಲಹೆ ನೀಡಿದರು.
ನಿರ್ಣಯ ಜಾರಿಯಾಗಲಿ
ಸರ್ಕಾರಿ ಕನ್ನಡ ಶಾಲೆಗಳ ಇಂದಿನ ಸ್ಥಿತಿಗತಿಯ ಅವಲೋಕನ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದ ಡಾ. ನಿರಂಜನಾರಾಧ್ಯ ಅವರು, ಕನ್ನಡ ಶಾಲೆಗಳ ಸಬಲೀಕರಣದ ಕೂಗು ಹೆಚ್ಚಾದಂತೆಲ್ಲಾ ಕನ್ನಡ ಶಾಲೆಗಳು ದುರ್ಬಲವಾಗುತ್ತಿವೆ. ಎಲ್ಲಾ ಸಮೇಳನದಲ್ಲೂ ಶಾಲೆಗಳ ಸಬಲೀಕರಣದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾ ಬರಲಾಗಿದೆ ಎಂದರು.
ಸರ್ಕಾರಿ ಶಾಲೆಗಳು ಮೂಲ ಸೌಕರ್ಯದಿಂದ ವಂಚಿತವಾಗುತ್ತಿವೆ. ಸರ್ಕಾರ ಕೂಡಲೆ ಖಾಲಿಯಿರುವ 43 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಶಿಕ್ಷಕರ ಮೇಲಿನ ಹೊರೆ ತಗ್ಗಿಸಬೇಕು ಎಂಬುದು ಅವರ ಸಲಹೆ.
ಸರ್ಕಾರಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಸವಾಲುಗಳು ಕುರಿತು ಮಾತನಾಡಿದ ಎಫ್. ಸಿ. ಚೇಗರಡ್ಡಿ, ಗುಣಮಟ್ಟ ಸುಧಾರಣೆ ಬಗ್ಗೆ ಸರ್ಕಾರ ಶಿಕ್ಷಕರನ್ನು ಕೇಳದಿರುವುದು ವಿಷಾದ. ಶಿಕ್ಷಕರಿಗೆ ಬೋದನೇತರ ಕೆಲಸಗಳನ್ನು ವಹಿಸುತ್ತಿರುವುದರಿಂದ ಮಕ್ಕಳಲ್ಲಿ ಸಂವಿಧಾನದ ಮೌಲ್ಯ ತುಂಬುವ ಕೆಲಸ ಆಗುತ್ತಿಲ್ಲ. ಎಸ್ ಎಸ್ ಎಲ್ ಸಿ ಫಲಿತಾಂಶದಿಂದ ಶಿಕ್ಷಣದ ಗುಣಮಟ್ಟ ಅಳೆಯಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳಿಗೆ ವೃತ್ತಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ಬಗ್ಗೆ ಮಾತನಾಡಿದ ಆನಂದ್ ಜಿ. ಅವರು ನೀಟ್ ಪರೀಕ್ಷೆಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎದುರಿಸುವುದು ಸವಾಲಾಗಿದೆ. ರಾಷ್ಟ್ರ ಮಟ್ಟದ ಪೈಪೋಟಿ ಎದುರಿಸಬೇಕಿದೆ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಅವಕಾಶ ಕಡಿಮೆ ಎಂದು ಹೇಳಿದರು.
ಗಡಿ ಭಾಗದ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಿದ ಸೋಮಣ್ಣ ಬೇವಿನ ಮರದ ಅವರು ಗಡಿ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಗಡಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಉದ್ಯೋಗ ಭದ್ರತೆ ನೀಡಬೇಕು ಎಂಬ ಸಲಹೆ ನೀಡಿದರು.