ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಲು ಅವಕಾಶ ಕೊಡಬೇಡಿ: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಒಕ್ಕೊರಲ ಆಗ್ರಹ
Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಚಳಿವಳಿಗಳು, ಅಸ್ಮಿತೆಯ ಕುರಿತು ಚರ್ಚೆ ನಡೆದು ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಎಂದಿಗೂ ಆಗದಿರಲಿ ಎನ್ನುವ ಒತ್ತಾಯವೂ ಕೇಳಿ ಬಂದಿತು.
ಮಂಡ್ಯ: ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಇಲ್ಲಿ ಬೇರೆ ಭಾಷೆಯ ಆಡಳಿತಕ್ಕೆ ಅವಕಾಶವೇ ಇಲ್ಲ. ಅದರಲ್ಲೂ ಹಿಂದಿಯನ್ನು ಹೇರುವ ಪ್ರಯತ್ನ ಆಗಾಗ ನಡೆಯುತ್ತಲೇ ಇರುತ್ತದೆ. ಕೇಂದ್ರ ಸರ್ಕಾರಿ ಕಚೇರಿಗಳು, ಬ್ಯಾಂಕ್ ಗಳು ಮೂಲಕ ನಡೆಯುವ ಇಂತಹ ಪ್ರಯತ್ನಗಳಿಗೆ ಸರಕಾರ ಎಂದೂ ಅವಕಾಶವನ್ನೂ ನೀಡಬಾರದು. ಇದು ಕನ್ನಡಿಗರಿಗೆ ಮಾಡುವ ಅವಮಾನವೇ. ಇಂತಹ ಹೇರುವಿಕೆಯನ್ನು ಕನ್ನಡಿಗರು ಹಿಂದಿನಿಂದಲೂ ಹೇರಿಕೊಂಡು ಬಂದಿದ್ದಾರೆ. ಕರ್ನಾಟಕ ಚಳವಳಿಗಳ ನಾಡು ಹೌದು. ಅದೆಷ್ಟೋ ಚಳಿವಳಿಗಳ ಮೂಲಕವೇ ಕನ್ನಡದ ಅಸ್ಮಿತೆ ಈಗಲೂ ಉಳಿದಿದೆ. ಇದು ಮುಂದೆಯೂ ಉಳಿಯಬೇಕು ಎನ್ನುವ ಕಳಕಳಿಯಿಂದಲೇ ಕರ್ನಾಟಕದಲ್ಲಿ ಕನ್ನಡದ ಆಡಳಿತಕ್ಕೆ ಮಾತ್ರ ಅವಕಾಶ ಇರಬೇಕು. ಭಾಷೆಯಾಗಿ ಎಲ್ಲವನ್ನೂ ಕಲಿಯೋಣವೇ ಹೊರತು ಇತರೆ ಭಾಷೆ ಆಡಳಿತಕ್ಕೆ ಅವಕಾಶ ಬೇಡವೇ ಬೇಡ.
ಇದು ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದ ಒಕ್ಕೊರಲ ಆಗ್ರಹ. ಪಾಂಡವಪುರ ಶಾಸಕರಾಗಿರುವ ದರ್ಶನ್ ಪುಟ್ಟಣ್ಣಯ್ಯ ಅವರು ಮಾತನಾಡುತ್ತಿರುವಾಗ ಹಿಂದಿ ಹೇರಿಕೆ ವಿಚಾರ ಪ್ರಸ್ತಾಪವಾಯಿತು. ಬ್ಯಾಂಕ್, ಅಂಚೆ, ವಿಮೆ ಕಚೇರಿಗಳ ಮೂಲಕ ಹಿಂದಿ ಭಾಷೆ ಹೇರಿಕೆ ಬೇಡ ಎಂದು ಸಾರ್ವಜನಿಕರು ಆಗ್ರಹಿಸಿದರು. ಶಾಲಾ ಪಠ್ಯದಲ್ಲಿ ಹಿಂದಿ ಭಾಷೆ ಕಡ್ಡಾಯ ಕಲಿಕೆ ರದ್ದಾಗಲಿ, ತ್ರಿಭಾಷ ಶಿಕ್ಷಣ ನೀತಿ ಬದಲಾಗಿ, ದ್ವೀಭಾಷ ಶಿಕ್ಷಣ ನೀತಿ ಜಾರಿಯಾಗಲಿ ಎಂದು ಮನವಿ ಮಾಡಿದರು. ಹಿಂದಿ ಭಾಷೆ ಇಂಡಿಯಾ ಒಕ್ಕೂಟದ ರಾಷ್ಟ್ರ ಭಾಷೆಯಲ್ಲ, ಹಿಂದಿ ಭಾಷೆಯು ಕರ್ನಾಟಕದ ಯಜಮಾನ ಭಾಷೆಯಲ್ಲ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ಸಾರ್ವಜನಿಕರಿಂದ ಗಟ್ಟಿ ದನಿಯೇ ಮೊಳಗಿತು.
ಪ್ರತಿಕ್ರಿಯೆ ಹೇಗಿತ್ತು
ದರ್ಶನ್ ಪುಟ್ಟಣ್ಣಯ್ಯಇದಕ್ಕೆ ಪ್ರತಿಕ್ರಿಯಿಸಿದರು. 70 ಮತ್ತು 80 ರ ದಶಕದಲ್ಲಿ ರೈತ, ಕನ್ನಡ ಪರ , ಹಾಗೂ ದಲಿತ ಚಳವಳಿಗಲೂ ಪ್ರಬಲವಾಗಿದ್ದವು, ಜಾಗತೀಕರಣ ಪ್ರಭಾವದಿಂದಾಗಿ ಚಳವಳಿಗಳೂ ಕಡಿಮೆಯಾಗಿದೆ. ಆದರೆ ಯಾವುದೇ ಕ್ಷೇತ್ರದಲ್ಲಿ ಹೋರಾಟದ ಮನೋಭಾವ ಇರಬೇಕು. ಸಮಾಜದಲ್ಲಿ ಪರಿವರ್ತನೆ ಮತ್ತು ಸುಧಾರಣೆ ಆಗಬೇಕಿದ್ದಲ್ಲಿ ಹೋರಾಟದ ಪಾತ್ರ ಅವಶ್ಯಕ, ಆದರೆ ಸ್ವಾರ್ಥ ಇರಬಾರದು. ಹಿಂದಿ ಭಾಷೆ ಹೇರಿಕೆ ನಿಯಂತ್ರಣ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಸರ್ಕಾರ ನೌಕರಿಯಲ್ಲಿ ಶೇ. 80 ರಷ್ಟು ಕನ್ನಡಿಗರಿಗೆ ನೌಕರಿ ದೊರೆಯಬೇಕು. ಹಿಂದಿ ಭಾಷೆ ಹೇರಿಕೆ ಮಾಡಬಾರದು. ಕರ್ನಾಟಕಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿದೆ. ಸಮಾಜದಲ್ಲಿ ಹಿಂದಿ ಭಾಷೆ ಹೇರಿಕೆ ಯಾವುದೇ ಕಾರಣಕ್ಕೂ ಮಾಡಬಾರದು. ಹಿಂದಿ ಭಾಷೆ ಹೇರಿಕೆ ಮಾಡಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ. ಗೋವಿಂದು ಎಚ್ಚರಿಸಿದರು.'
ಕರ್ನಾಟಕದ ಚಿತ್ರಣ ಬದಲಿಸುವಲ್ಲಿ ಚಳವಳಿಗಳ ಪಾತ್ರ ಮಹತ್ತರ
ಇದಕ್ಕೂ ಮುನ್ನ ವಿಚಾರ ಮಂಡಿಸಿದ ಸಾ.ರಾ. ಗೋವಿಂದು, ಕರ್ನಾಟಕದ ಚಿತ್ರಣ ಬದಲಿಸುವಲ್ಲಿ ರೈತ ಚಳವಳಿ, ಕನ್ನಡಪರ ಚಳವಳಿ ಹಾಗೂ ದಲಿತ ಚಳವಳಿ ಪ್ರಮುಖ ಪಾತ್ರ ವಹಿಸಿವೆ. ರಾಜ್ಯದಲ್ಲಿ ಗೋಕಾಕ್ ಚಳವಳಿ ಮೂಲಕ ಹೊಸ ಅಲೆ ಸೃಷ್ಟಿ ಮಾಡಿದವರು ಡಾ. ರಾಜ್ ಕುಮಾರ್. ರಾಜ್ಯದಲ್ಲಿ ಮೂರು, ನಾಲ್ಕು ದಶಕಗಳ ಕಾಲ ಒಂದೇ ಆಡಳಿತ ಇದ್ದ ಸಂದರ್ಭದಲ್ಲಿ ಬದಲಾವಣೆಗೆ ರೈತ, ಕನ್ನಡಪರ ಹಾಗೂ ದಲಿತ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಸ್ಮರಿಸಿದರು.
ಭಾಷಾ ವಿಷಯ ಕುರಿತು ಸತತ ಒಂದು ತಿಂಗಳ ಕಾಲ ಹೋರಾಟ ಮಾಡಿ, ಹೊಸ ಅಲೆ ಸೃಷ್ಟಿಸಿದರು. 70 ಮತ್ತು 80 ರ ದಶಕದಲ್ಲಿ ಚಳವಳಿಗೆ ಶಕ್ತಿಯಿತ್ತು, ಈಗ ಆ ರೀತಿಯ ವಾತಾವರಣ ಇದೆಯೇ ಎಂದು ಪ್ರತಿಯೊಬ್ಬರೂ ಅವಲೋಕಿಸಬೇಕಿದೆ ಎಂದು ಸಾ.ರಾ.ಗೋವಿಂದು ಹೇಳಿದರು.
ಡಿ. ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಎಸ್. ಬಂಗಾರಪ್ಪ ಅವರು ಕಾವೇರಿ ವಿಚಾರವಾಗಿ ಸುಗ್ರೀವಾಜ್ಙೆ ಹೊರಡಿಸಿದರು ಎಂದು ಸಾ.ರಾ.ಗೋವಿಂದು ಅವರು ಸ್ಮರಿಸಿದರು.
ದಲಿತ, ರೈತ ಚಳಿವಳಿ ಕಾಲ
ಜನಪರ ಚಳುವಳಿ; ಮುಂದೇನು ಕುರಿತು ಇಂದಿರಾ ಕೃಷ್ಣಪ್ಪ ಅವರು ಮಾತನಾಡಿ70 ರ ದಶಕದಲ್ಲಿ ದೇವನೂರ ಮಹಾದೇವ, ಸಿದ್ದಲಿಂಗಯ್ಯ ಹಾಗೂ ಪ್ರೊ. ಬಿ. ಕೃಷ್ಣಪ್ಪ ದಲಿತ ಚಳವಳಿ ಮೂಲಕ ಜಾಗೃತಿ ಮೂಡಿಸಿದರು. ಸ್ವಾಭಿಮಾನ ಚಳವಳಿ ಆರಂಭಿಸುವ ಮೂಲಕ ಅಸಮಾನತೆ, ಅಸ್ಪ್ರಶ್ಯತೆ ಹೋಗಲಾಡಿಸಲು ಪ್ರಯತ್ನಿಸಿದರು. ಆದರೂ ಇಂದಿಗೂ ಸಹ ಅಸಮಾನತೆ ಹಾಗೂ ಅಸ್ಪೃಶ್ಯತೆ ಕಾಣುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಥಮ ದಲಿತ ಸಾಹಿತ್ಯ ಸಮ್ಮೇಳನವು ಭದ್ರಾವತಿಯಲ್ಲಿ ಪ್ರೊ. ಬಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆದಿರುವುದು ವಿಶೇಷ. 70 ರ ದಶಕದಲ್ಲಿ ದಲಿತ ಚಳವಳಿಗಳು ಹೆಂಡ, ಸಾರಾಯಿ ಬೇಡ, ವಸತಿ ಶಾಲೆಗಳು ಬೇಕು ಎಂದು ಒತ್ತಾಯಿಸಿದ ಪರಿಣಾಮ ಸಾಕಷ್ಟು ಬದಲಾವಣೆ ಕಾಣಲು ಸಾಧ್ಯವಾಯಿತು ಎಂದರು.
ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮೂಲಕ ಹಲವು ಬದಲಾವಣೆ ನಡೆದವು. ಹಾಗೇಯೇ ಕಾರ್ಮಿಕ ಚಳುವಳಿಗಳೂ ನಡೆದವು. ಆ ದಿಸೆಯಲ್ಲಿ ಆಯಾಯಾ ಕಾಲಘಟ್ಟದಲ್ಲಿ ಚಳುವಳಿಗಳು ನಿಂತನೀರಾಗದೆ, ಚಲನಶೀಲವಾಗಬೇಕು ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆ ತರಬೇಕು ಎಂದರು.
ರೈತ ಚಳವಳಿಯ ಕುರಿತು ಜಿ.ಎಸ್ ರಾಜೇಂದ್ರ ಅಸುರನಾಡು, ಗೋಕಾಕ್ ಚಳುವಳಿಯ ನಂತರ ಕರ್ನಾಟಕ ಚಿತ್ರಣ ಕುರಿತು ಬಂಕಾಪುರ ಚನ್ನಬಸಪ್ಪ ವಿಚಾರ ಮಂಡಿಸಿದರು.