logo
ಕನ್ನಡ ಸುದ್ದಿ  /  ಕರ್ನಾಟಕ  /  Mangalore Dasara 2024: ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ; 9 ದಿನಗಳ ಉತ್ಸವಕ್ಕೆ ನವದುರ್ಗೆಯರು, ಶಾರದಾದೇವಿ ಮೂರ್ತಿ ಸ್ಥಾಪನೆ

Mangalore Dasara 2024: ಮಂಗಳೂರು ದಸರಾಕ್ಕೆ ವಿಧ್ಯುಕ್ತ ಚಾಲನೆ; 9 ದಿನಗಳ ಉತ್ಸವಕ್ಕೆ ನವದುರ್ಗೆಯರು, ಶಾರದಾದೇವಿ ಮೂರ್ತಿ ಸ್ಥಾಪನೆ

Umesha Bhatta P H HT Kannada

Oct 04, 2024 10:46 AM IST

google News

ಮಂಗಳೂರು ದಸರಾಕ್ಕೆ ಗೋಕರ್ಣನಾಥ ದೇಗುಲಲ್ಲಿ ಶಾರದಾದೇವಿ ಮೂರ್ತಿ ಸ್ಥಾಪನೆ ಹಾಗೂ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.

    • ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇಗುಲದಲ್ಲಿ ನವದುರ್ಗೆಯರ ಸ್ಥಾಪನೆಯೊಂದಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದೆ. ಏನೇನು ವಿಶೇಷಗಳು ಈ ವರ್ಷದ ದಸರಾದಲ್ಲಿವೆ ಎನ್ನುವ ವಿವರ ಇಲ್ಲಿದೆ
    • ವರದಿ: ಹರೀಶ ಮಾಂಬಾಡಿ.ಮಂಗಳೂರು
ಮಂಗಳೂರು ದಸರಾಕ್ಕೆ ಗೋಕರ್ಣನಾಥ ದೇಗುಲಲ್ಲಿ ಶಾರದಾದೇವಿ ಮೂರ್ತಿ ಸ್ಥಾಪನೆ ಹಾಗೂ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.
ಮಂಗಳೂರು ದಸರಾಕ್ಕೆ ಗೋಕರ್ಣನಾಥ ದೇಗುಲಲ್ಲಿ ಶಾರದಾದೇವಿ ಮೂರ್ತಿ ಸ್ಥಾಪನೆ ಹಾಗೂ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.

ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಇಂದು ಚಾಲನೆ ದೊರೆಯಿತು. ನವರಾತ್ರಿಯ ಒಂಬತ್ತು ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.ಈ ಬಾರಿಯ ದಸರಾಕ್ಕೆ ಕೇಂದ್ರದ ಮಾಜಿ ಸಚಿವ‌ ಬಿ.ಜನಾರ್ದನ ಪೂಜಾರಿ ಚಾಲನೆ ನೀಡಿದರು.ಮಂಗಳೂರು ದಸರಾ ಸಂಭ್ರಮದ ಡಿಟೈಲ್ ಇಲ್ಲಿದೆ.

ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಮಹೋತ್ಸವ 'ಮಂಗಳೂರು ದಸರಾ'ಕ್ಕೆ ಇಂದು ವಿದ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಎಲ್ಲಾ ದೇವರುಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು ಒಂಬತ್ತು ದಿನಗಳ ಕಾಲ ಪೂಜೆಗೊಳ್ಳಲಿದೆ. ಕುದ್ರೋಳಿ‌ ಕ್ಷೇತ್ರದ ಅಭಿವೃದ್ಧಿಯ ರೂವಾರಿ,ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಈ ಬಾರಿಯ ಮಂಗಳೂರು ದಸರಾಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸುಂದರ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ,ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ,ಬ್ರಹ್ಮಚಾರಿಣಿ, ಚಂದ್ರಘಂಟ,ಕೂಷ್ಮಾಂಡಿನಿ, ಸಿದ್ದಿದಾತ್ರಿ,ಮಹಾಕಾಳಿ,ಕಾತ್ಯಾಯಿನಿ,ಸ್ಕಂದಮಾತೆ ಮಹಾಗೌರಿಯರನ್ನು ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸ ಲಾಗಿದೆ.ಭೂಲೋಕದ ಸ್ವರ್ಗದಂತಿರುವ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ 12 ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ.ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ ಎಂದು ಈ ಸಂದರ್ಭ ಟ್ರಸ್ಟಿ ಪದ್ಮರಾಜ್ ತಿಳಿಸಿದರು.

ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಪೂಜೆಗೊಳ್ಳುವ ಈ ಎಲ್ಲಾ ಮೂರ್ತಿಗಳನ್ನು ಅಕ್ಟೋಬರ್ 13 ರಂದು ದೇವಸ್ಥಾನದಲ್ಲೇ ವಿಸರ್ಜನಾ ಪೂಜೆ ನಡೆಸಿ ಕ್ಷೇತ್ರಕ್ಕೆ ಪ್ರದಕ್ಷಿಣೆ ಹಾಕಿ,ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಗುವುದು.ಸಂಭ್ರಮದ ಮಂಗಳೂರು ದಸರಾ ಈ ವರ್ಷ ಮತ್ತೂ ಅದ್ದೂರಿಯಾಗಿ ನಡೆಯುತ್ತಿದ್ದು, ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಸುಪ್ರಸಿದ್ಧ ಮಂಗಳೂರು ದಸರಾ ಆಚರಣೆಗಳು ಅದರ ಹೊಳೆಯುವ ಮೆರವಣಿಗೆಗೆ ಹೆಸರುವಾಸಿ. ವಿಜಯದಶಮಿಯ ದಿನದಂದು ಮಂಗಳೂರು ದಸರಾದ ಗ್ರ್ಯಾಂಡ್ ಫಿನಾಲೆಯನ್ನು ವೀಕ್ಷಿಸಲು ಮಂಗಳೂರಿನ ನಾಗರಿಕರು ಮತ್ತು ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ನಗರದಲ್ಲಿ ಸೇರುತ್ತಾರೆ.ಜನರು ತಮ್ಮ ಮನೆ ಮತ್ತು ವ್ಯಾಪಾರ ಕಟ್ಟಡ, ಅಂಗಡಿಗಳು, ಹೋಟೆಲ್‌ಗಳು ಇತ್ಯಾದಿಗಳನ್ನು ಅಲಂಕರಿಸುತ್ತಾರೆ. ಮೆರವಣಿಗೆಯನ್ನು ಸ್ವಾಗತಿಸಲು ನಗರದ ಇಡೀ ಬೀದಿಗಳನ್ನು ವಿದ್ಯುತ್ ಬಲ್ಬ್‌ಗಳಿಂದ ಅಲಂಕರಿಸುವುದು ಮಂಗಳೂರು ದಸರಾ ವಿಶೇಷ. ಈ ಬಾರಿಯೂ ಹಬ್ಬದ ಸಡಗರ ಮಂಗಳೂರಿನಲ್ಲಿ ಶುರುವಾಗಿದೆ.

ಮಂಗಳೂರು ದಸರಾದಲ್ಲಿ ನವದುರ್ಗೆಯರ ವಿಗ್ರಹಗಳು ಹಾಗೂ ಮಹಾಗಣಪತಿ, ಶಾರದೆಯರ ಮೂರ್ತಿಗಳನ್ನು ಪುಷ್ಪಾರ್ಚನೆ ಮಾಡಿ, ಅಲಂಕಾರಿಕ ಛತ್ರಿ, ಪಟಲ, ವಾದ್ಯ, ಚೆಂಡೆ, ಸಾಂಪ್ರದಾಯಿಕ ನೃತ್ಯ, ಜಾನಪದ ನೃತ್ಯ, ಸಂಗೀತ, ಯಕ್ಷಗಾನ ಪಾತ್ರಧಾರಿಗಳು, ಡೊಳ್ಳು ಕುಣಿತ, ಗೊಂಬೆಗಳ ಮೆರವಣಿಗೆ ನಡೆಸಲಾಗುತ್ತದೆ. ಕರಗ, ಹುಲಿವೇಷ (ಹುಲಿ ನೃತ್ಯ) ಮತ್ತು ಇತರ ಸಾಂಪ್ರದಾಯಿಕ ಕಲಾ ಪ್ರಕಾರಗಳು ಮೆರವಣಿಗೆಯನ್ನು ಹೆಚ್ಚು ವರ್ಣರಂಜಿತವಾಗಿರಲಿದೆ. ಈ ಎಲ್ಲಾ ಚಟುವಟಿಕೆಗಳಿಂದ ಮಂಗಳೂರು ದಸರಾ ಈ ಬಾರಿಯೂ ಕಳೆಗಟ್ಟಲಿದೆ.

(ವರದಿ: ಹರೀಶ ಮಾಂಬಾಡಿ.ಮಂಗಳೂರು)

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ