logo
ಕನ್ನಡ ಸುದ್ದಿ  /  ಕರ್ನಾಟಕ  /  Amit Shah In Mysore: ಮೈಸೂರಲ್ಲಿ ಅಮಿತ್‌ ಶಾ; ದೇಗುಲ, ಧರ್ಮ, ರಾಜಕಾರಣ, ಹೀಗಿದೆ ಪ್ರವಾಸ ಕಾರ್ಯಕ್ರಮ

Amit Shah in Mysore: ಮೈಸೂರಲ್ಲಿ ಅಮಿತ್‌ ಶಾ; ದೇಗುಲ, ಧರ್ಮ, ರಾಜಕಾರಣ, ಹೀಗಿದೆ ಪ್ರವಾಸ ಕಾರ್ಯಕ್ರಮ

Umesha Bhatta P H HT Kannada

Feb 11, 2024 09:55 AM IST

google News

ಮೈಸೂರಿಗೆ ಆಗಮಿಸಿದ ಅಮಿತ್‌ ಶಾ ಅವರನ್ನು ಬಿ.ವೈ.ವಿಜಯೇಂದ್ರ ಸ್ವಾಗತಿಸಿದರು.

    • ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕ ಪ್ರವಾಸ ಶುರುವಾಗಿದೆ. ಭಾನುವಾರ ಇಡೀ ದಿನ ಮೈಸೂರಿನಲ್ಲಿಯೇ ಇದ್ದು ನಾನಾ ಚಟುವಟಿಕೆಗಳಲ್ಲಿ ಭಾಗಿಯಾಗುವರು. ಚಾಮುಂಡಿಬೆಟ್ಟದಲ್ಲಿ ಪೂಜೆ. ಸುತ್ತೂರು ಮಠದ ಕಾರ್ಯಕ್ರಮ, ಆನಂತರ ಲೋಕಸಭೆ ಚುನಾವಣೆ ತಯಾರಿಗೆ ಸರಣಿ ರಾಜಕೀಯ ಸಭೆ ನಡೆಸುವುದು ಅವರ ದಿನಚರಿ.
ಮೈಸೂರಿಗೆ ಆಗಮಿಸಿದ ಅಮಿತ್‌ ಶಾ ಅವರನ್ನು ಬಿ.ವೈ.ವಿಜಯೇಂದ್ರ ಸ್ವಾಗತಿಸಿದರು.
ಮೈಸೂರಿಗೆ ಆಗಮಿಸಿದ ಅಮಿತ್‌ ಶಾ ಅವರನ್ನು ಬಿ.ವೈ.ವಿಜಯೇಂದ್ರ ಸ್ವಾಗತಿಸಿದರು.

ಮೈಸೂರು: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ನಡುವೆ ಕೇಂದ್ರ ಗೃಹ ಸಚಿವ ಹಾಗೂ ಚುನಾವಣಾ ಚಾಣಾಕ್ಷ ಅಮಿತ್‌ ಶಾ ಹಳೆ ಮೈಸೂರು ಭಾಗದ ಪ್ರವಾಸ ಮಹತ್ವ ಪಡೆದಿದೆ. ಅದರಲ್ಲೂ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಎದುರಿಸಲು ಸಜ್ಜಾಗುತ್ತಿವೆ. ಈ ವೇಳೆ ಅಮಿತ್‌ ಶಾ ಅವರ ಈ ಪ್ರವಾಸ ಮೈತ್ರಿ ಮಹತ್ವವನ್ನು ಸ್ಥಳೀಯ ಹಂತದ ನಾಯಕರಲ್ಲಿ ಮನದಟ್ಟು ಮಾಡಿಕೊಡುವ ಪ್ರಯತ್ನವೂ ಆಗಬಹುದು. ಖುದ್ದು ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಜಕ್ಷ ಬಿ.ವೈ.ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿಯೇ ಹೊಂದಾಣಿಕೆ ಗೊಂದಲಗಳನ್ನು ಬಗೆಹರಿಸುವ ಚರ್ಚೆಗಳು ಆಗಬಹುದು.

ಬೆಟ್ಟದಲ್ಲಿ ಪೂಜೆ

ಮೈಸೂರಿಗೆ ಭಾನುವಾರ ಬೆಳಿಗ್ಗೆಯೇ ವಿಶೇಷ ವಿಮಾನದಲ್ಲಿ ಆಗಮಿಸಿದ ಅಮಿತ್‌ ಶಾ ಖಾಸಗಿ ಹೊಟೇಲ್‌ನಲ್ಲಿ ತಂಗಿದರು. ಭಾನುವಾರ ಬೆಳಿಗ್ಗೆ ಪಕ್ಷದ ಪ್ರಮುಖರು, ಸ್ಥಳೀಯ ನಾಯಕರನ್ನು ಭೇಟಿಯಾದರು. ಬೆಳಿಗ್ಗೆ11 ಕ್ಕೆ ಚಾಮುಂಡಿಬೆಟ್ಟಕ್ಕೆ ತೆರಳಿದ್ದು, ಅಲ್ಲಿ ವಿಶೇಷ ಪೂಜೆ ಸಲ್ಲಿಸುವರು. 45 ನಿಮಿಷ ಬೆಟ್ಟದಲ್ಲಿ ಇರುವ ಅಮಿತ್‌ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ. ಬೆಟ್ಟದಿಂದ ತಪ್ಪಲಿನ ಹೆಲಿಪ್ಯಾಡ್‌ಗೆ ಆಗಮಿಸಿ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಅಮಿತ್‌ ಶಾ ತೆರಳುವರು.

ಸುತ್ತೂರು ಜಾತ್ರೆಯಲ್ಲಿ ಅತಿಥಿಗೃಹ ಉದ್ಘಾಟನೆ

ಸುತ್ತೂರಿನಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ದಾವಣಗೆರೆ ಬಾಪೂಜಿ ಶಿಕ್ಷಣ ಸಂಸ್ಥೆಗ್ ಮುಖ್ಯಸ್ಥ ಡಾ.ಶಾಮನೂರು ಶಿವಶಂಕರಪ್ಪ ಅವರು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್‌ ಅತಿಥಿಗೃಹವನ್ನು ಮಧ್ಯಾಹ್ನ 12.30ಕ್ಕೆಅಮಿತ್‌ ಶಾ ಉದ್ಘಾಟಿಸುವರು. ಶಿವಮೊಗ್ಗದಲ್ಲಿ ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಗೆಲ್ಲಿಸಿ ಎಂದು ಹೇಳಿಕೆ ನೀಡಿ ರಾಜಕೀಯವಾಗಿ ಗಮನ ಸೆಳೆದಿದ್ದಾರೆ ಶಾಮನೂರು ಶಿವಶಂಕರಪ್ಪ. ಈಗ ಸುತ್ತೂರಿನಲ್ಲೂ ಅಮಿತ್‌ ಶಾ ಅವರೊಂದಿಗೆ ಬಹುತೇಕ ಬಿಜೆಪಿ ನಾಯಕರನ್ನೇ ಹೆಚ್ಚು ಆಹ್ವಾನಿಸಲಾಗಿದೆ. ಇಲ್ಲಿ ಅಮಿತ್‌ ಶಾ ಅವರು ಶಿವಶಂಕರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು, ಪರಸ್ಪರ ಹೊಗಳುವುದು ಇಲ್ಲವೇ ಅಭಿಪ್ರಾಯ ಹಂಚಿಕೊಳ್ಳುವುದು ರಾಜಕೀಯ ಮಹತ್ವ ಪಡೆಯಬಹುದು ಎನ್ನಲಾಗುತ್ತಿದೆ.

ಮಧ್ಯಾಹ್ನ ಪ್ರಮುಖರ ಸಭೆ

ಅಮಿತ್‌ ಶಾ ಅವರು ಸುತ್ತೂರು ಜಾತ್ರೆ ಮುಗಿಸಿ ಮೈಸೂರಿಗೆ ವಾಪಾಸಾಗಲಿದ್ದು, ಸುಮಾರು ಮೂರು ಗಂಟೆ ಕಾಲ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಗೆ ಕೈಗೊಳ್ಳಬೇಕಾದ ತಂತ್ರಗಳ ಕುರಿತು ಅಭಿಪ್ರಾಯ ಪಡೆಯುವ ಸಾಧ್ಯತೆಗಳಿವೆ.

ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಮೈಸೂರು ಕ್ಷೇತ್ರದಿಂದ ಅವರ ಪ್ರವಾಸ ಶುರುವಾಗಿದೆ. ಮೈಸೂರು. ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ ಸಹಿತ ಹಲವು ಕ್ಷೇತ್ರಗಳಲ್ಲ ಬಿಜೆಪಿ ಜೆಡಿಎಸ್‌ ಮೈತ್ರಿ, ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಬಿಟ್ಟುಕೊಡಬೇಕು. ಪರಸ್ಪರ ನಾಯಕರು ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಸಮಸ್ಯೆಗಳು ಏನಿವೆ. ಅವುಗಳನ್ನು ಬಗೆಹರಿಸಲು ಕಾರ್ಯತಂತ್ರ ರೂಪಿಸುವ ಕುರಿತು ಬಿಜೆಪಿ ಸ್ಥಳೀಯ ನಾಯಕರ ಅಭಿಪ್ರಾಯ ಆಲಿಸಲಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಮಂಡ್ಯ ಕ್ಷೇತ್ರದ ವಿಚಾರದಲ್ಲಿ ಸಮಸ್ಯೆಗಳು ಆಗುತ್ತಿವೆ. ಈ ಕ್ಷೇತ್ರ ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ಪಟ್ಟು ಹಿಡಿದಿದ್ದರೆ, ಹಾಲಿ ಸಂಸದೆ ಸುಮಲತಾ ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇದೇ ರೀತಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಪ್ರತಿಷ್ಠೆ ಏರ್ಪಟ್ಟು ಪಕ್ಷೇತರರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್‌ ಗೆದ್ದಿದ್ದರು. ಈ ಬಾರಿಯೂ ಇಂತಹ ಗೊಂದಲ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಮಿತ್‌ ಶಾ ಉದ್ದೇಶ ಎನ್ನಲಾಗುತ್ತಿದೆ.

ಎಚ್‌ಡಿಕೆ ಭಾಗಿ ನಿರೀಕ್ಷೆ

ಮೈಸೂರಿನಲ್ಲಿ ಸಂಜೆ ನಡೆಯುವ ಬಿಜೆಪಿ ಪ್ರಮುಖ ನಾಯಕರ ಸಭೆಯಲ್ಲಿ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮೀ ಅವರೂ ಭಾಗಿಯಾಗುವ ಸಾಧ್ಯತೆಗಳಿವೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಮೈತ್ರಿ ವಿಚಾರದಲ್ಲಿ ಇರುವ ಗೊಂದಲಗಳನ್ನು ಬಗೆಹರಿಸಿ ತಂಡವಾಗಿ ಕಾಂಗ್ರೆಸ್‌ ಅನ್ನು ಎದುರಿಸುವ ನಿಟ್ಟಿನಲ್ಲಿ ಅಮಿತ್‌ ಶಾ ಹಾಗೂ ಕುಮಾರಸ್ವಾಮಿ ಅವರು ಚರ್ಚಿಸಲಿದ್ದಾರೆ. ಜತೆಗೆ ಸ್ಥಳೀಯ ಬಿಜೆಪಿ ನಾಯಕರಿಗೂ ಅಮಿತ್‌ ಶಾ ಹೊಂದಾಣಿಕೆ ಗೊಂದಲಕ್ಕೆ ಆಸ್ಪದ ನೀಡದಂತೆ ಸ್ಪಷ್ಟ ಸೂಚನೆ ನೀಡಬಹುದು ಎನ್ನಲಾಗುತ್ತಿದೆ.

ಒಡೆಯರ್‌ ಮೇಲೆ ನಿರೀಕ್ಷೆ

ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಬಿಜೆಪಿಗೆ ಕರೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಖುದ್ದು ಆಸಕ್ತಿ ವಹಿಸಿದ್ದಾರೆ. ಕಳೆದ ವರ್ಷ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಮೈಸೂರು ಅರಮನೆಗೂ ಭೇಟಿ ನೀಡಿದ್ದರು. ಆನಂತರ ಅಮಿತ್‌ ಶಾ ಕೂಡ ಈ ವಿಚಾರದಲ್ಲಿ ಪ್ರಯತ್ನ ನಡೆಸಿದ್ಧಾರೆ. ಆದರೆ ಯದುವೀರ್‌ ಈವರೆಗೂ ಬಿಜೆಪಿಗೆ ಸೇರುವ ಇಲ್ಲವೇ ಸಕ್ರಿಯವಾಗಿ ರಾಜಕೀಯಕ್ಕೆ ಬರುವ ಬಗ್ಗೆ ಒಪ್ಪಿಗೆ ನೀಡಿಲ್ಲ. ಕೊನೆ ಪ್ರಯತ್ನವನ್ನು ಭಾನುವಾರ ಅಮಿತ್‌ ಶಾ ಮಾಡಬಹುದು. ಸ್ಥಳೀಯ ನಾಯಕರ ಮೂಲಕ ಅವರನ್ನು ಸಂಪರ್ಕಿಸಿ ಚರ್ಚಿಸಬಹುದು. ಅವರು ಬಂದರೆ ಇಲ್ಲಿ ಬಿಜೆಪಿ ಟಿಕೆಟ್‌ ನೀಡುವ ಚರ್ಚೆಗಳು ಆಗಬಹುದು ಎಂದು ಹೇಳಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ