Lok Sabha Elections2024: ಲೋಕ ಚುನಾವಣೆಗೆ ಕರ್ನಾಟಕದ ಬಿಜೆಪಿಯ 10 ಕ್ಕೂ ಹೆಚ್ಚು ಸಂಸದರಿಗೆ ಕೊಕ್, ಯಾವೆಲ್ಲಾ ಹೊಸಬರಿಗೆ ಸಿಗಬಹುದು ಅವಕಾಶ
Karnataka Politics ಲೋಕಸಭೆ ಚುನಾವಣೆಗೆ ಸಿದ್ದತೆಗಳು ನಡೆದಿರುವಾಗ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲು ಯೋಜನೆ ಹಾಕಿಕೊಂಡಿದೆ.
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹಚ್ಚಿನ ಸ್ಥಾನಗಳನ್ನು ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ಕೆಲವು ಬದಲಾವಣೆಗಳನ್ನು ಮಾಡಬಹುದು. ನಾಲ್ಕೈದು ಹಾಲಿ ಸದಸ್ಯರು ವಯಸ್ಸಿನ ಕಾರಣಕ್ಕೆ ಟಿಕೆಟ್ ಕಳೆದುಕೊಂಡರೆ, ಕೆಲವರು ನಿರೀಕ್ಷೆಯಷ್ಟು ಸರಿಯಾಗಿ ಕೆಲಸ ಮಾಡ ಕಾರಣದಿಂದಲೂ ಹೊಸಬರಿಗೆ ದಾರಿ ಮಾಡಿಕೊಡಬೇಕಾಗಿ ಬರಬಹುದು. ರಾಜಕೀಯ ಹೊಂದಾಣಿಕೆ ಕಾರಣಕ್ಕೆ ಕೆಲವು ಕ್ಷೇತ್ರಗಳಲ್ಲಿ ಬದಲಾವಣೆಯೂ ಆಗಬಹುದು. ಸದ್ಯದ ಲೆಕ್ಕಾಚಾರದ ಪ್ರಕಾರ ರಾಜ್ಯದ ಕನಿಷ್ಠ 10 ಸಂಸದರಿಗಾದರೂ ಟಿಕೆಟ್ ತಪ್ಪಿ ಹೊಸಬರಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳು ದಟ್ಟವಾಗಿವೆ.
ಯಾವ ಕ್ಷೇತ್ರದಲ್ಲಿ ಹೇಗಿದೆ
- ಬೀದರ್‌ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿ ಅವರನ್ನು ಬದಲಾಯಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ಧಾರೆ. ಇದರಿಂದ ಅವರೂ ಕೂಡ ಬಿಸಿ ಎದುರಿಸುತ್ತಿದ್ದಾರೆ.
- ಕಲಬುರಗಿಯಲ್ಲೂ ಸಂಸದ ಉಮೇಶ್ ಜಾಧವ್ ಬದಲಿಸಿ ಹೊಸಬರಿಗೆ ಅವಕಾಶ ಮಾಡಿಕೊಡಿ. ಈಗಾಗಲೇ ಮಗನಿಗೂ ಶಾಸಕ ಸ್ಥಾನ ನೀಡಲಾಗಿದೆ ಎನ್ನುವ ಬೇಡಿಕೆ ಸಲ್ಲಿಸಲಾಗಿದೆ
- ಆರು ಬಾರಿ ಸಂಸದರಾಗಿರುವ ವಿಜಯಪುರದ ರಮೇಶ್ ಜಿಗಜಿಣಗಿ ಬದಲಿಸುವ ಒತ್ತಡವೂ ಜೋರಾಗಿದೆ. ಇಲ್ಲಿ ಹೊಸಬರಿಗೆ ಇಲ್ಲವೇ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪುತ್ರಗೆ ಟಿಕೆಟ್ ಬೇಡಿಕೆ ಸಲ್ಲಿಸಲಾಗಿದೆ.
- ಬಾಗಲಕೋಟೆಯಲ್ಲೂ ಪಿ.ಸಿ.ಗದ್ದಿಗೌಡರ ಬದಲಿಗೆ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆಯಿದ್ದು. ಮುರುಗೇಶ್‌ನಿರಾಣಿ ಸ್ಪರ್ಧಿಸುವ ಸಾಧ್ಯತೆಗಳೂ ಇವೆ
ಇದನ್ನೂ ಓದಿರಿ: ‘ಕಾಲೆಳೆದವರೇ ಈಗ ಕಾಲ್‌ಶೀಟ್ ಕೇಳುತ್ತಿದ್ದಾರೆ, ಉಪಾಧ್ಯಕ್ಷನನ್ನು ಹೊತ್ತು ಮೆರೆಸಿದ್ದಕ್ಕೆ ಧನ್ಯವಾದ’; ಚಿಕ್ಕಣ್ಣ
- ಕೊಪ್ಪಳದಲ್ಲಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿರುವ ಕರಡಿ ಸಂಗಣ್ಣ ಅವರನ್ನು ಬದಲಿಸುವ ಚರ್ಚೆಗಳು ನಡದಿವೆ. ಇಲ್ಲಿಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಇಲ್ಲವೇ ಪಕ್ಷದ ಮುಖಂಡ ಚಂದ್ರಶೇಖರ್ ಗೆ ಅವಕಾಶ ಮಾಡಿಕೊಡಬಹುದು.
- ಬಳ್ಳಾರಿಯಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಬದಲಿಗೆ ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪರ್ಧಿಸಬಹುದು.
- ಹಾವೇರಿ- ಗದಗ ಕ್ಷೇತ್ರದ ಸದಸ್ಯ ಶಿವಕುಮಾರ ಉದಾಸಿ ಅವರೇ ಈ ಬಾರಿ ಸ್ಪರ್ಧಿಸುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಇದರಿಂದ ಇಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಇಲ್ಲವೇ ಹೊಸಬರು ಸ್ಪರ್ಧಿಸಬಹುದು.
- ಬೆಳಗಾವಿಯಲ್ಲೂ ಕೇಂದ್ರ ಸಚಿವರಾಗಿದ್ದ ಚನ್ನಬಸಪ್ಪ ಅಂಗಡಿ ನಿಧನ ನಂತರ ಅವರ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಲಾಗಿತ್ತು. ಇಲ್ಲಿ ಈ ಬಾರಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸುವ ಚರ್ಚೆಗಳು ನಡೆದಿವೆ.
- ದಾವಣಗೆರೆಯಲ್ಲೂ ಜಿ.ಎಂ.ಸಿದ್ದೇಶ್ವರ್ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಲು ಪಕ್ಷದಲ್ಲಿಯೇ ಪ್ರಬಲ ವಿರೋಧವಿದೆ. ಸಿದ್ದೇಶ್ವರ್ ಪುತ್ರ ಇಲ್ಲವೇ ಸಹೋದರಿಗೆ ಇಲ್ಲಿ ಅವಕಾಶ ಸಿಗಬಹುದು
ಇದನ್ನೂ ಓದಿರಿ: BHIM App Cash Back: 750 ರೂವರೆಗೆ ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದ ಭೀಮ್ ಆ್ಯಪ್, ಹಣ ಪಡೆಯಲು ಹೀಗೆ ಮಾಡಿ
- ಕೆನರಾ ಲೋಕಸಭಾ ಕ್ಷೇತ್ರದಲ್ಲೂ ಅನಂತಕುಮಾರ್ ಹೆಗಡೆಗೆ ಕೊಕ್ ಕೊಡುವ ಲಕ್ಷಣಗಳೂ ಕಾಣುತ್ತಿವೆ. ಇಲ್ಲಿ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇಲ್ಲವೇ ಇತ್ತೀಚಿಗಷ್ಟೇ ಬಿಜೆಪಿ ಸೇರಿ ವಕ್ತಾರರಾಗಿರುವ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರ ಹೆಸರು ಮುಂಚೂಣಿಯಲ್ಲಿವೆ
- ದಕ್ಷಿಣ ಕನ್ನಡದಲ್ಲೂ ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಬದಲಿಸಲು ಒತ್ತಡ ಜೋರಾಗಿದೆ. ಇವರ ಬದಲು ಪಕ್ಷದ ಕಾರ್ಯಕರ್ತರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯಿದೆ.
- ಚಾಮರಾಜನಗರದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ವಯಸ್ಸಿನ ಕಾರಣದಿಂದ ಈಗಾಗಲೇ ಅವರು ನಿವೃತ್ತಿಯಾಗುವುದಾಗಿ ಹೇಳಿದ್ದು. ಅವರ ಅಳಿಯ ಡಾ.ಮೋಹನ್ ಅವರಿಗೆ ಟಿಕೆಟ್ ಸಿಗಬಹುದು
- ಮೈಸೂರಿನಲ್ಲಿ ಪ್ರತಾಪಸಿಂಹ ವಿರುದ್ದ ಬಿಜೆಪಿಯಲ್ಲಿ ಕೊಂಚ ವಿರೋಧವಿದೆ. ರಾಜವಂಶಸ್ಥ ಯದುವೀರ್ ಒಡೆಯರ್ ಬಿಜೆಪಿಗೆ ಬಂದರೆ ಅವರನ್ನೇ ಅಭ್ಯರ್ಥಿಯಾಗಿಸಿದರೆ ಪ್ರತಾಪಸಿಂಹ ಅವರನ್ನು ಮಂಗಳೂರು ಇಲ್ಲವೇ ಉಡುಪಿ ಕ್ಷೇತ್ರಕ್ಕೆ ಬದಲಾಯಿಸುವ ಚರ್ಚೆಗಳೂ ನಡೆದಿವೆ. ಆದರೆ ಯದುವೀರ್ ರಾಜಕೀಯಕ್ಕೆ ಬರುವ ಆಸಕ್ತಿ ತೋರಿಲ್ಲ. ಇದರಿಂದ ಪ್ರತಾಪಸಿಂಹ ಇಲ್ಲಿಯೇ ಉಳಿಯಬಹುದು ಎನ್ನಲಾಗುತ್ತಿದೆ
ಇದನ್ನೂ ಓದಿರಿ:ಟೆಸ್ಟ್, ಏಕದಿನ, ಟಿ20ಐ; ಮೂರು ಸ್ವರೂಪದಲ್ಲೂ ನಂ 1 ಆಗಿದ್ದು ಐವರು ಮಾತ್ರ, ಅದರಲ್ಲಿ ಭಾರತೀಯರೇ ಇಬ್ಬರು
- ತುಮಕೂರಿನಲ್ಲೂ ಜಿ.ಎಸ್.ಬಸವರಾಜು ಹಿಂದೆ ಸರಿಯುವ ಸಾಧ್ಯತೆಯಿದೆ. ಇಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣ ಇಲ್ಲವೇ ಜೆ.ಸಿ.ಮಾಧುಸ್ವಾಮಿ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು
- ಚಿಕ್ಕಬಳ್ಳಾಪುರದಲ್ಲಿ ಬಿ.ಎನ್.ಬಚ್ಛೇಗೌಡರಿಗೆ ಈ ಬಾರಿ ವಯಸ್ಸಿನ ಕಾರಣಕ್ಕೆ ಅವಕಾಶ ಸಿಗೋಲ್ಲ. ಅಲ್ಲದೇ ಅವರ ಮಗ ಶರತ್ ಹಾಗೂ ಸಂಬಂಧಿ ಪುಟ್ಟಸ್ವಾಮಿಗೌಡ ಅವರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿರುವುದು ಕಾರಣವಿರಬಹುದು.
- ಬೆಂಗಳೂರು ಉತ್ತರದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಬದಲು ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಅವಕಾಶ ಮಾಡಿಕೊಡುವ ಚರ್ಚೆಗಳು ನಡೆದಿವೆ.
- ಬೆಂಗಳೂರು ಕೇಂದ್ರದಲ್ಲಿ ಪಿ.ಸಿ.ಮೋಹನ್ ಸುರಕ್ಷಿತ. ಮಂಡ್ಯದಲ್ಲಿ ಸುಮಲತಾಗೆ ಮೈತ್ರಿ ಕಾರಣಕ್ಕೆ ಅವಕಾಶ ತಪ್ಪಿ. ಟಿಕೆಟ್ ನೀಡಲೇಬೇಕು ಎನ್ನುವ ಪಟ್ಟು ಹಿಡಿದರೆ ಬೆಂಗಳೂರು ಕೇಂದ್ರಕ್ಕೆ ಸುಮಲತಾ ಅವರಿಗೆ ಅವಕಾಶ ಮಾಡಿಕೊಡಬಹುದು.ಪಿ.ಸಿ.ಮೋಹನ್ ಮುಂದೆ ರಾಜ್ಯ ರಾಜಕಾರಣಕ್ಕೆ ಮರಳಬಹುದು.