Mysore Dasara 2024: ಮೈಸೂರು ದಸರಾ ಜಂಬೂ ಸವಾರಿಗೆ ಮೂರು ದಿನ ಮೊದಲೇ ಪೂರ್ವ ತಾಲೀಮು, ಗಜ ಪಡೆ ವಂದನೆ, ಪೊಲೀಸ್ ತಂಡದ ಪಥ ಸಂಚಲನ
Oct 09, 2024 12:00 PM IST
ಮೈಸೂರು ದಸರಾ ಜಂಬೂ ಸವಾರಿ ಪೂರ್ವ ತಾಲೀಮಿನಲ್ಲಿ ಅಭಿಮನ್ಯು ಗೌರವ ವಂದನೆ ಸ್ವೀಕರಿಸಿದ್ದು ಹೀಗೆ. (ಚಿತ್ರ: ಅನುರಾಗ್ ಬಸವರಾಜ್)
- ಮೈಸೂರು ದಸರಾ ಅಂಗವಾಗಿ ನಡೆಯುವ ಜಂಬೂ ಸವಾರಿಗೆ ಇನ್ನು ಮೂರು ದಿನ ಬಾಕಿ ಇರುವಾಗ ಪೂರ್ವ ತಾಲೀಮು ಅರಮನೆ ಅಂಗಳದಲ್ಲಿ ಯಶಸ್ವಿಯಾಗಿ ನಡೆಯಿತು.
ಮೈಸೂರು: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ದಿನಗಣನೆ ಶುರುವಾಗಿದೆ. ಶನಿವಾರದಂದು ವಿಜಯದಶಮಿ ಜಂಬೂ ಸವಾರಿ ಮೈಸೂರು ಅರಮನೆಯಿಂದ ಆರಂಭಗೊಂಡು ಐದು ಕಿ.ಮಿ ಸಂಚರಿಸಲಿದೆ. ಲಕ್ಷಾಂತರ ಮಂದಿ ಇದಕ್ಕೆ ಅರಮನೆ ಆವರಣ, ರಸ್ತೆಯುದ್ದಕ್ಕೂ ಜಮಾಯಿಸುತ್ತಾರೆ. ಇದಕ್ಕಾಗಿ ಎರಡು ತಿಂಗಳಿನಿಂದ ತಯಾರಿ ನಡೆದಿದ್ದು, ಜಂಬೂ ಸವಾರಿ ಅಂತಿಮ ತಾಲೀಮು ಬುಧವಾರ ಅರಮನೆ ಆವರಣದಲ್ಲಿ ನಡೆಯಿತು ಪೊಲೀಸ್ ಪಡೆಗಳು, ಅಶ್ವಾರೋಹಿ ಪಡೆಯ ಜತೆಗೆ ಗಜಪಡೆಯೂ ಪೂರ್ವತಾಲೀಮಿನಲ್ಲಿ ಭಾಗಿಯಾದವು. ಎರಡು ಗಂಟೆಗೂ ಹೆಚ್ಚು ಕಾಲ ಮೊದಲನೇ ದಿನದ ಪೂರ್ವ ತಾಲೀಮು ಯಶಸ್ವಿಯಾಗಿ ನಡೆಯಿತು. ವಿಶೇಷವಾಗಿ ಗಜಪಡೆ ಯಾವುದೇ ಆತಂಕವಿಲ್ಲದೇ ಹೆಜ್ಜೆ ಹಾಕಿದವು.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕೇವಲ ಮೂರು ದಿನ ಬಾಕಿ ಇರುವಾಗ ಅರಮನೆ ಆವರಣದಲ್ಲಿ ಪುಷ್ಪಾರ್ಚನೆ ರಿಹರ್ಸಲ್ ಆರಂಭಗೊಂಡಿತು.
ಪೊಲೀಸ್ ಪೇದೆಗಳಿಂದ ಆಕರ್ಷಕ ಪಥಸಂಚಲನದೊಂದಿಗೆ ಪೂರ್ವ ತಾಲೀಮು ಆರಂಭಿಸಲಾಯಿತು. ಬಳಿಕ ಅಶ್ವಾರೋಹಿದಳ ಪಡೆಯೂ ಕೂಡ ಭಾಗಿಯಾಯಿತು.
ರಿಹರ್ಸಲ್ ನಲ್ಲಿ ನಿಶಾನೆ ಆನೆಯಾಗಿ ಮುಂಚೂಣಿಯಲ್ಲಿ ಸಾಗಿದ ಧನಂಜಯ. ಧನಂಜಯನನ್ನು ಹಿಂಬಾಲಿಸುತ್ತಾ ಸಾಗಿದ ನೌಫತ್ ಆನೆ ಗೋಪಿ ಸಾಗಿತು.
ಅದರ ಹಿಂದೆ ಸಾಗಿದ ಸಾಲಾನೆಗಳು ಬಂದವು. ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿಗೆ ವೇದಿಕೆ ಮೇಲಿದ್ದ ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ಅಭಿಮನ್ಯುವಿನ ಎಡಬಲದಲ್ಲಿ ಲಕ್ಷ್ಮಿ ಹಾಗು ಹಿರಣ್ಯ ಕುಮ್ಕಿ ಆನೆಗಳಾಗಿ ಹೆಜ್ಜೆ ಹಾಕಿದವು.
ಶಾಸಕ ಟಿ.ಎಸ್.ಶ್ರೀವತ್ಸ, ಮೈಸೂರು ನಗರ ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಡಿಸಿಎಫ್ ಡಾ ಪ್ರಭುಗೌಡ, ಸಿಎಆರ್ ಡಿಸಿಪಿ ಎಚ್ ಪಿ ಸತೀಶ್ ರಿಂದ ಪುಷ್ಪಾರ್ಚನೆ ನೆರವೇರಿಸಿದರು.
ಅಂಬಾರಿ ಹೊತ್ತ ಆನೆಗೆ ಗಣ್ಯರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ರಾಷ್ಟ್ರಗೀತೆ ನುಡಿಸಲಾಯಿತು. ಈ ವೇಳೆ ಅರಮನೆಯ ಹೊರ ಆವರಣದಲ್ಲಿ ಫಿರಂಗಿಗಳಿಂದ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಲಾಯಿತು.
ಜಂಬೂಸವಾರಿ ಪುಷ್ಪಾರ್ಚನೆ ರಿಹರ್ಸಲ್ ಕುರಿತು ಮಾಹಿತಿ ನೀಡಿದ ಡಿಸಿಎಫ್ ಡಾ ಪ್ರಭುಗೌಡ ಬಿರಾದಾರ, ಜಂಬೂಸವಾರಿ ಮೆರವಣಿಗೆ ವೇಳೆ ಪುಷ್ಪಾರ್ಚನೆ ಮಾಡುವ ಮಾದರಿಯಲ್ಲಿ ಇಂದು ತಾಲೀಮು ನಡೆಸಿದ್ದೇವೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆತ ಸಂಯುಕ್ತಾಶ್ರಯದಲ್ಲಿ ತಾಲೀಮು ನಡೆದಿದೆ. ಮೊದಲ ದಿನ ಯಶಸ್ವಿಯಾಗಿ ಮುಗಿಸಿದ್ದೇವೆ ಎಂದರು.
ಧನಂಜಯ ನಿಶಾನೆ ಆನೆಯಾಗಿ, ಗೋಪಿ ನೌಫತ್ ಆನೆಯಾಗಿ ಭಾಗಿಯಾಗಿವೆ. ಅಭಿಮನ್ಯು ಅಂಬಾರಿ ಆನೆಯಾಗಿ, ಲಕ್ಷ್ಮಿ, ಹಿರಣ್ಯ ಕುಮ್ಕಿ ಆನೆಗಳಾಗಿ, ಉಳಿದ ಆನೆಗಳು ಸಾಲಾನೆಗಳಾಗಿ ಭಾಗಿಯಾಗಿವೆ. ವರಲಕ್ಷ್ಮಿ ಹೊರತುಪಡಿಸಿ 13 ಆನೆಗಳು ಪುಷ್ಪಾರ್ಚನೆ ರಿಹರ್ಸಲ್ ನಲ್ಲಿ ಭಾಗಿಯಾಗಿವೆ. ಜಂಬೂಸವಾರಿ ಮೆರವಣಿಗೆಯಲ್ಲಿ ಒಂಬತ್ತು ಆನೆಗಳು ಮಾತ್ರ ಭಾಗಿಯಾಗಲಿದ್ದು, ಪಟ್ಟಿ ಅಂತಿಮಗೊಳಿಸಲಾಗಿದೆ. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಸದ್ದಿಗೆ ಎಲ್ಲಾ ಆನೆಗಳು ಹೊಂದಿಕೊಂಡಿವೆ. ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ಆನೆಗಳು ಸಿದ್ದಗೊಂಡಿವೆ ಎಂದು ವಿವರಿಸಿದರು.