logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara 2024: ತೆರೆದುಕೊಳ್ಳಲಿದೆ ಮೈಸೂರು ದಸರಾ ವೈಭವ; ಇಂದಿನಿಂದ 10 ದಿನ ನವರಾತ್ರಿ ಸಡಗರ, ಚಾಮುಂಡಿಬೆಟ್ಟದಲ್ಲಿ ಚಾಲನೆಗೆ ಕ್ಷಣಗಣನೆ

Mysore Dasara 2024: ತೆರೆದುಕೊಳ್ಳಲಿದೆ ಮೈಸೂರು ದಸರಾ ವೈಭವ; ಇಂದಿನಿಂದ 10 ದಿನ ನವರಾತ್ರಿ ಸಡಗರ, ಚಾಮುಂಡಿಬೆಟ್ಟದಲ್ಲಿ ಚಾಲನೆಗೆ ಕ್ಷಣಗಣನೆ

Umesha Bhatta P H HT Kannada

Oct 03, 2024 08:43 AM IST

google News

ಮೈಸೂರಿನ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದತೆ ಆಗಿದ್ದರೆ, ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಶಶಿಶೇಖರ್‌ ದೀಕ್ಷಿತ್‌ ಅವರಿಂದ ಪೂಜೆ ನಡೆದಿದೆ.

    • ಮೈಸೂರಿನಲ್ಲಿ ನಾಡಹಬ್ಬ ದಸರಾ ಆರಂಭಕ್ಕೆ ಕ್ಷಣಗಣನೆ. ಗುರುವಾರ ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಹತ್ತು ದಿನದ ಹಬ್ಬಕ್ಕೆ ಚಾಲನೆ ಸಿಗಲಿದೆ. ಇದರ ವಿವರ ಇಲ್ಲಿದೆ.
ಮೈಸೂರಿನ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದತೆ ಆಗಿದ್ದರೆ, ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಶಶಿಶೇಖರ್‌ ದೀಕ್ಷಿತ್‌ ಅವರಿಂದ ಪೂಜೆ ನಡೆದಿದೆ.
ಮೈಸೂರಿನ ಅರಮನೆಯ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದತೆ ಆಗಿದ್ದರೆ, ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಶಶಿಶೇಖರ್‌ ದೀಕ್ಷಿತ್‌ ಅವರಿಂದ ಪೂಜೆ ನಡೆದಿದೆ.

ಮೈಸೂರು: ನವನವೋನ್ಮೇಷಿ ನವರಾತ್ರಿ ವೈಭವಕ್ಕೆ ಐತಿಹಾಸಿಕ ಹಾಗೂ ಪಾರಂಪರಿಕ ನಗರಿ ಮೈಸೂರು ನಗರ ಅಣಿಯಾಗಿದೆ. ಗುರುವಾರದಿಂದ ಸತತ ಹತ್ತು ದಿನಗಳ ಕಾಲ ಮೈಸೂರು ನಗರದಲ್ಲಿ ದಸರಾದ್ದೇ ಸಡಗರ, ಸಂಭ್ರಮ. ಮೈಸೂರಿನ ಮುಕುಟುದಂತಿರುವ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೆ ಕ್ಷಣಗಣನೇ ಶುರುವಾಗಿದ್ದರೆ, ದೀಪಗಳಿಂದ ಬೆಳಗುತ್ತಿರುವ ಮೈಸೂರಿನ ರಸ್ತೆಗಳು, ವೃತ್ತಗಳು ದೀಪಧಾರಿಣಿಯಂತೆ ಕಂಗೊಳಿಸುತ್ತಿವೆ. ರಸ್ತೆಗಳು ಡಾಂಬರೀಕರಣಗೊಂಡು. ಹಲವಾರು ಕಟ್ಟಡಗಳು ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡಿವೆ. ಮೈಸೂರು ಅರಮನೆ ಕೇಂದ್ರಬಿಂದುವಾಗಿ ಪ್ರವಾಸಿ ಚಟುವಟಿಕೆಗಳು ಸುತ್ತಮುತ್ತಲೂ ತೆರೆದುಕೊಳ್ಳಲಿವೆ. ಹತ್ತು ದಿನದ ಈ ಉತ್ಸವ ಪ್ರವಾಸಿಗರನ್ನು ಸೆಳೆಯುತ್ತಿದೆ.

ಹಂಪನಾ ಚಾಲನೆ

ದಸರಾವನ್ನು ಚಾಮುಂಡಿಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಮೊದಲೆಲ್ಲಾ ಪೂಜೆ ಸಲ್ಲಿಸಿದರೆ ದಸರಾ ಶುರುವಾಗಿದೆ ಎನ್ನಲಾಗುತ್ತಿತ್ತು. ಮೂರು ದಶಕದಿಂದೀಚೆಗೆ ಗಣ್ಯರೊಬ್ಬರಿಂದ ದಸರಾ ಉದ್ಘಾಟನೆ ಮಾಡಿಸಲಾಗುತ್ತಿದೆ. ಈ ಬಾರಿ ನಾಡಿನ ಹಿರಿಯ ಸಾಹಿತಿ, ಚಿಂತಕ ಪ್ರೊ.ಹಂಪನಾಗರಾಜಯ್ಯ ಅವರು ದಸರೆಗೆ ಚಾಲನೆ ನೀಡುವರು. ದಸರಾ ಉದ್ಘಾಟಿಸಿ ನಾಡಿಗೆ ಸಂದೇಶವನ್ನೂ ನೀಡಲಿದ್ದಾರೆ. ಗುರುವಾರ ಬೆಳಿಗ್ಗೆ 9.15ರಿಂದ 9.45 ಕ್ಕೆ ದಸರಾಗೆ ಚಾಲನೆ ದೊರೆಯಲಿದೆ.

ಈಗಾಗಲೇ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಎದುರು ರೂಪಿಸಿರುವ ವಿಶಾಲ ವೇದಿಕೆಯಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಅಲಂಕಾರನ್ನೂ ಮಾಡಲಾಗಿದೆ.

ಮೊದಲೆಲ್ಲಾ ಸಿಎಂ ಕೂಡ ದಸರಾ ಉದ್ಘಾಟನೆಯಲ್ಲಿ ಭಾಗಿಯಾಗುತ್ತಿರಿಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದಸರಾ ಉದ್ಘಾಟನೆಗೆ ಆಗಮಿಸುವ ಪರಂಪರೆಗೆ ನಾಂದಿ ಹಾಡಿದರು. ಆನಂತರ ಬಂದ ಎಲ್ಲಾ ಸಿಎಂಗಳು ಉದ್ಘಾಟನೆಯಲ್ಲಿ ಭಾಗಿಯಾಗುತ್ತಿದ್ದು, ಈ ಬಾರಿ ಸಿಎಂ ಸಿದ್ದರಾಮಯ್ಯ ಕೂಡ ಹಿಂದಿನ ವರ್ಷಗಳಂತೆಯೇ ಭಾಗಿಯಾಗುವರು.

ದರ್ಬಾರ್‌ ಶುರು

ಇದೇ ದಿನ ಮೈಸೂರಿನ ಅರಮನೆ ಆವರಣದ ದರ್ಬಾರ್‌ ಹಾಲ್‌ನಲ್ಲಿ ಮೈಸೂರು-ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರ ಒಂಬತ್ತು ದಿನಗಳ ಖಾಸಗಿ ದರ್ಬಾರ್‌ ಕೂಡ ಶುರುವಾಗಲಿದೆ. ಸಿಂಹಾಸನ ಏರುವ ಮೂಲಕ ಯದುವೀರ್‌ ಖಾಸಗಿ ದರ್ಬಾರ್‌ ಆರಂಭಿಸುವರು. ಸಂಜೆ ನಂತರ ನಂತರ ಖಾಸಗಿ ದರ್ಬಾರ್‌ ನಡೆಯಲಿದ್ದು. ಹಳೆಯ ರಾಜವೈಭವದ ಕ್ಷಣಗಳನ್ನು ಮರಳಿಸಲಿದೆ.

ಹಲವು ಚಟುವಟಿಕೆಗಳ ಆರಂಭ

ಮೊದಲನೇ ದಿನವೇ ಹತ್ತಾರು ದಸರಾ ಚಟುವಟಿಕೆಗಳಿಗೆ ಚಾಲನೆ ದೊರಕಲಿದೆ. ಮೈಸೂರಿನ ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಚಲನ ಚಿತ್ರೋತ್ಸವ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಪುಸ್ತಕ ಮೇಳ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಯೊಂದಿಗೆ ಸಿಎಂ ಕಪ್‌ ಪಂದ್ಯಾವಳಿಗಳು, ದೇವರಾಜ ಅರಸ್‌ ಕುಸ್ತಿ ಅಖಾಡದಲ್ಲಿ ಕುಸ್ತಿ ಪಂದ್ಯಾಟಗಳು, ಕುಪ್ಪಣ್ಣ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನ, ಜೆಕೆಮೈದಾನದ ಸಭಾಂಗಣದಲ್ಲಿ ಯೋಗ ದಸರಾ, ಕಾವಾದಲ್ಲಿ ಶಿಲ್ಪ ಕಲಾ ಮೇಳ, ಸಂಜೆ ನಂತರ ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಯ್ಯಾಜಿರಾವ್‌ ರಸ್ತೆಯ ಹಸಿರು ಚಪ್ಪರದಲ್ಲಿ ದೀಪಾಲಂಕಾರಕ್ಕೆ ಚಾಲನೆ, ರಾತ್ರಿ ದಸರಾ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿವೆ. ಹತ್ತಕ್ಕೂ ಹೆಚ್ಚು ಸಚಿವರು, ಸಂಸದರು, ಶಾಸಕರು ಹಾಗು ವಿವಿಧ ಕ್ಷೇತ್ರಗಳ ಸಾಧಕರು ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಪ್ರತಿ ನಿತ್ಯ ಚಟುವಟಿಕೆ

ಮೈಸೂರಿನ ಹದಿನೈದಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲೂ ಸಾಂಸ್ಕೃತಿಕ ಚಟುವಟಿಕೆಗಳು ಅರಮನೆ, ಕಲಾಮಂದಿರ, ಪುರಭವನ ಸಹಿತ ಹಲವೆಡೆ ಇರಲಿವೆ. ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಕೂಡ ಶುರುವಾಗಲಿದೆ.

ಇನ್ನು ಒಂಬತ್ತು ದಿನಗಳ ಕಾಲ ಮಹಿಳಾ, ಯುವ ದಸರಾ, ವಿಭಿನ್ನ ಪರಿಕಲ್ಪನೆಯೊಂದಿಗೆ ನಾಲ್ಕು ದಿನ ಕವಿಗೋಷ್ಠಿ ಕೂಡ ಇರಲಿವೆ. ಕೊನೆಯ ದಿನ ಜಂಬೂ ಸವಾರಿಯೊಂದಿಗೆ ದಸರಾಕ್ಕೆ ತೆರೆ ಬೀಳಲಿದೆ. ಅಲ್ಲಿಯವರೆಗೂ ಪ್ರತಿನಿತ್ಯ ಚಟುವಟಿಕೆಗಳು ಹಾಗೂ ಪ್ರವಾಸಿಗರಿಂದ ತುಂಬಿರಲಿದೆ.

ಲಿದೆ ಮೈಸೂರಿನ ರಸ್ತೆಗಳು.

 

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ