Dasara Elephents Food: ಮೈಸೂರು ದಸರಾ ವಿಐಪಿ ಆನೆಗಳ ಆಹಾರ ಎಂದರೆ ಸುಮ್ಮನೇನಾ, ಹೇಗಿರುತ್ತದೆ ಗಜಪಡೆಯ ಊಟದ ತಟ್ಟೆ
Sep 16, 2024 02:03 PM IST
ಮೈಸೂರು ದಸರಾ ಆನೆಗಳ ಆಹಾರದ ಮೆನು ಹೀಗಿರುತ್ತದೆ.
- Elephants diet ದಸರಾ ಎಂದರೆ ಆನೆಗಳು. ಆನೆಗಳ ದಿನಚರಿ ವಿಶೇಷ. ಅದರಲ್ಲೂ ಆಹಾರದ ದಿನಚರಿ ವಿಭಿನ್ನವೇ. ಕಾಡಿನಲ್ಲಿ ಸೊಪ್ಪನ್ನೇ ಆಸರಿಸುವ ಆನೆಗಳಿಗೆ ಮೈಸೂರು ಅರಮನೆ ಪ್ರವೇಶಿಸಿದ ನಂತರ ವಿಐಪಿ ಆಹಾರವೇ ಶುರುವಾಗುತ್ತದೆ. ಹೀಗಿರಲಿದೆ ಕರಿಪಡೆಯ ಆಹಾರ.
ಮೈಸೂರು: ಆನೆಗಳ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವ ಮಾತೊಂದಿದೆ. ಮೈಸೂರು ದಸರಾಕ್ಕೆ ಬರುವ ಆನೆಗಳಿಗೂ ಈ ಮಾತು ಎರಡು ಪಟ್ಟು ಅನ್ವಯಿಸುತ್ತದೆ. ಏಕೆಂದರೆ ಇವು ಎರಡು ತಿಂಗಳ ಕಾಲ ಸಾಮಾನ್ಯ ಆನೆಗಳಲ್ಲ. ದಸರಾ ಮುಗಿಯುವವರೆಗೂ ಇವುಗಳಿಗೆ ವಿವಿಐಪಿ ಆತಿಥ್ಯ. ಆನೆಗಳ ಆಹಾರ, ಆರೋಗ್ಯ, ಜಂಬೂಸವಾರಿ ದಿನದ ಉಡುಗೆ ಸಹಿತ ಎಲ್ಲಾ ವಿಚಾರದಲ್ಲೂ ವಿಶೇಷ ಕಾಳಜಿ. ಅದರಲ್ಲೂ ಆಹಾರದ ವಿಚಾರದಲ್ಲಂತೂ ತಂಡವೇ ಕೆಲಸ ಮಾಡುತ್ತದೆ. ಆನೆಗಳು ದಿನದ ಬಹುತೇಕ ಭಾಗ ತಿನ್ನುತ್ತಲೇ ಇರುತ್ತದೆ. ಹಾಗೆ ಆನೆಗಳನ್ನು ನೋಡಿಕೊಳ್ಳುವ ತಂಡದವರಿಗೂ ಆಹಾರ ತಯಾರಿಸುವುದೇ ಕಾಯಕ.
ದಸರಾಗೆ ಆನೆಗಳನ್ನು ಕಾಡಿನಿಂದ ನಾಡಿಗೆ ಎರಡು ತಿಂಗಳ ಮುಂಚೆಯೇ ಕರೆ ತರಲಾಗುತ್ತದೆ. ಮೊದಲ ತಂಡದಲ್ಲಿ ಒಂಬತ್ತು ಆನೆಗಳು, ನಂತರದ ತಂಡದಲ್ಲಿ ಐದು ಆನೆಗಳು ಬರುತ್ತವೆ. ಈ ಎಲ್ಲಾ ಆನೆಗಳಿಗೆ ಕಾಡಿನಲ್ಲಾದರೆ ನಿತ್ಯ ಮುದ್ದೆ, ಭತ್ಯವನ್ನು ನೀಡಲಾಗುತ್ತದೆ. ವಿಶೇಷವಾಗಿ ಕಾಯಿ, ಬೆಲ್ಲ ಇರುತ್ತದೆ. ಇಲ್ಲದೇ ಇದ್ದರೆ ಹೆಚ್ಚಿನ ಪಾಲು ಅವುಗಳಿಗೆ ಕಾಡಿನ ಮೇವೇ ಆಹಾರ.
ನಿತ್ಯ 200 ಕೆಜಿಯನ್ನಾದರೂ ಒಂದೊಂದು ಆನೆ ತಿನ್ನುತ್ತವೆ. 4 ರಿಂದ 5 ಸಾವಿರ ಕೆಜಿಯಷ್ಟು ಗಂಡಾನೆಗಳಿದ್ದರೆ , ಹೆಣ್ಣಾನೆಗಳ ತೂಕ 3 ಸಾವಿರ ಕೆಜಿ ಇರುತ್ತದೆ. ಗಂಡಾನೆಗಳಿಗೆ ಹೋಲಿಸಿದರೆ ಹೆಣ್ಣಾನೆಗಳಿಗೆ ಕೊಂಚ ಕಡಿಮೆ ಆಹಾರ ಬೇಕು.
ದಸರಾಗೆ ಬರುವ ಆನೆಗಳಿಗೆ ಹುಲ್ಲು, ಸೊಪ್ಪಿನ ಜತೆಗೆ ಆರೋಗ್ಯ ಪೂರ್ಣ ಆಹಾರ ನೀಡಲಾಗುತ್ತದೆ. ಚೆನ್ನಾಗಿ ಬೇಯಿಸಿದ ಆಹಾರವದು. ಭತ್ತ, ರಾಗಿ,ಗೋಧಿ, ಕುಸಲಕ್ಕಿ, ಕಾಳುಗಳು, ಮೂರ್ನಾಲ್ಕು ಬಗೆಯ ತರಕಾರಿಗಳನ್ನು ಬೇಯಿಸಿ ಆನೆಗಳಿಗೆ ನೀಡಲಾಗುತ್ತದೆ. ಇದರೊಟ್ಟಿಗೆ ಬೆಣ್ಣೆ ಕೂಡ. ಒಂದೊಂದು ದಿನ ಒಂದೊಂದು ರೀತಿಯಲ್ಲಿ ನೀಡಲಾಗುತ್ತದೆ. ಜತೆಗೆ ಕಬ್ಬು ಕೂಡ ಇರಲಿದೆ.
ದಸರಾ ವೇಳೆಆನೆಗಳಿಗೆ ಪ್ರತಿ ಆನೆಗೆ 12 ಕೆಜಿಯಷ್ಟು ಭತ್ತ, ಅರ್ಧ ಕೆಜಿ ಬೆಲ್ಲ, ಎರಡು ತೆಂಗಿನ ಕಾಯಿ ,ಅರ್ಧ ಕೆಜಿ ಬೆಣ್ಣೆಯನ್ನು ನೀಡಲಾಗುತ್ತದೆ.
ಆನೆಗಳಿಗೆ ದಸರಾ ವೇಳೆ ನಿತ್ಯ ತಾಲೀಮು ಇರಲಿದೆ. ಇದಕ್ಕೂ ಮುನ್ನ ಆನೆಗಳಿಗೆ ಆಹಾರ ನೀಡಲಾಗುತ್ತದೆ. ತಾಲೀಮು ನಡೆಸುವ ಮುನ್ನ ಕುಸುರೆ ಎಂದು ಕರೆಯುವ ಕಾಳುಗಳಿಂದ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸಲಕ್ಕಿಗಳನ್ನು ಬೇಯಿಸಿ ಉಂಡೆ ರೂಪದಲ್ಲಿ ಪ್ರತಿ ಆನೆಗೆ ಮಾವುತ ಹಾಗೂ ಕವಾಡಿಗರು ಕೊಡುತ್ತಾರೆ. ಅವುಗಳನ್ನು ಸುಮಾರು ಅರ್ಧಗಂಟೆ ಕಾಲ ಆನೆಗಳು ಮೆಲ್ಲುತ್ತವೆ. ಅದು ರುಚಿ ಆಹಾರವನ್ನು ಸವಿಯುವುದು ಮನುಷ್ಯನಿಗೆ ಮಾತ್ರವಲ್ಲ. ಆನೆಗಳಿಗೂ ಬಹು ಇಷ್ಟ. ಅಕ್ಕಪಕ್ಕದಲ್ಲೇ ಇದ್ದುಕೊಂಡು ಆನೆಗಳು ಆಹಾರ ಸೇವಿಸಿ ಮೆಲಕು ಹಾಕುವುದು ನಿತ್ಯದ ದಿನಚರಿ.
ಮಾವುತರು, ಕವಾಡಿಗರು ಆನೆಗಳ ಆಹಾರದ ವಿಚಾರದಲ್ಲಿ ವಿಶೇಷ ಮುತುವರ್ಜಿ ವಹಿಸುತ್ತಾರೆ. ಇದಾದ ನಂತರ ಹುಲ್ಲು, ಸೊಪ್ಪು ಯಥೇಚ್ಛವಾಗಿ ಇರುತ್ತದೆ. ಸಂಜೆ ನಂತರವೂ ಆನೆಗಳು ತಾಲೀಮಿಗೆ ಹೊರಡುತ್ತವೆ. ತಿಂದದ್ದು ಅರಗಲು ಆನೆಗಳಿಗೆ ತಾಲೀಮೆ ಆಸರೆ. ಆನೆಗಳು ಉಷ್ಣ ದೇಹದ ಪ್ರಾಣಿಗಳು. ಆಹಾರದ ಮೂಲಕ ಉಷ್ಣವನ್ನು ನಿಯಂತ್ರಿಸುವ ಪ್ರಯತ್ನವೂ ಆಗುತ್ತದೆ. ಅಂತಹ ಆಹಾರಗಳನ್ನು ಅವುಗಳಿಗೆ ನೀಡುವುದು ವಿಶೇಷ.
ಇದನ್ನೂ ಓದಿರಿ: ರಾಜಮನೆತನದ ವಿರೋಧದ ನಡುವೆಯೂ ಚಾಮುಂಡೇಶ್ವರಿ ಪ್ರಾಧಿಕಾರ ಉದ್ಘಾಟನೆ
ಸುಮಾರು ಎರಡು ತಿಂಗಳ ಕಾಲ ಹತ್ತಕ್ಕೂ ಹೆಚ್ಚು ಸಿಬ್ಬಂದಿಗೆ ಆಹಾರ ತಯಾರಿ ನೀಡುವುದೇ ಕಾಯಕ. ಅರಮನೆ ಆವರಣದಲ್ಲಿ ಆನೆಗಳ ಅಡುಗೆ ಮನೆಯೇ ಕೆಲಸ ಮಾಡುತ್ತದೆ. ಇದಕ್ಕಾಗಿ ಕೆಲವರನ್ನು ಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗುತ್ತದೆ. ಮೈಸೂರು ವನ್ಯಜೀವಿ ವಿಭಾಗದ ಅಧಿಕಾರಿಗಳು ಆನೆಗಳ ಆಹಾರಕ್ಕಾಗಿ ಲಕ್ಷಗಟ್ಟಲೇ ವೆಚ್ಚ ಮಾಡುತ್ತಾರೆ.
ಆನೆಗಳಿಗೆ ಆಹಾರವೆಂದರೆ ಪ್ರೀತಿ. ಅವುಗಳಿಗೆ ಇಷ್ಟವಾಗುವ ಆಹಾರ ನೀಡಿದರಂತೂ ಅವುಗಳು ಖುಷಿಯಿಂದಲೇ ಸೇವಿಸುತ್ತವೆ. ಕಾಡಿನಲ್ಲಿದ್ದಾಗ ತೂಕ ಕಡಿಮೆಯೂ ಆಗಿರುತ್ತದೆ. ಇಲ್ಲಿ ಬಂದ ತಕ್ಷಣ ಆನೆಗಳ ಆಹಾರ ಶೈಲಿ ಬದಲಾಗಿ ದಪ್ಪ ಕೂಡ ಆಗುತ್ತವೆ. ಅಂಬಾರಿ ಹೊರುವ ಜತೆಗೆ ಇತರೆ ಜವಾಬ್ದಾರಿಗಳನ್ನೂ ಹೊರಿಸುವುದರಿಂದ ಆಹಾರದ ಕುರಿತು ಎಚ್ಚರಿಕೆ ವಹಿಸಲಾಗುತ್ತದೆ. ಆನೆಗಳ ಆಹಾರ ತಯಾರಿಯೇ ನಿಜಕ್ಕೂ ಸವಾಲಿನ ಕೆಲಸವೇ. ಅದನ್ನು ಮೊದಲೇ ಯೋಜಿಸಿದಂತೆ ತಯಾರಿಸಲಾಗುತ್ತದೆ. ಕೆಲವೊಮ್ಮೆ ಆಹಾರ ಬದಲಾದಾಗ ಆನೆಗಳಿಗೆ ಭೇದಿ ಆಗಬಹುದು. ಒಂದೆರಡು ದಿನದಲ್ಲಿ ಇಲ್ಲಿನ ಆಹಾರಗಳಿಗೆ ಅವು ಒಗ್ಗಿಕೊಳ್ಳುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ.