logo
ಕನ್ನಡ ಸುದ್ದಿ  /  ಕರ್ನಾಟಕ  /  ನಂಜನಗೂಡಿನಲ್ಲಿ ಜಾತ್ರೆಯ ವೈಭವ; ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ -Nanjangud Rathotsava

ನಂಜನಗೂಡಿನಲ್ಲಿ ಜಾತ್ರೆಯ ವೈಭವ; ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ -Nanjangud Rathotsava

Raghavendra M Y HT Kannada

Mar 22, 2024 11:46 AM IST

google News

ನಂಜನಗೂಡಿನಲ್ಲಿ ಜಾತ್ರೆಯ ವೈಭವ; ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ

    • ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನಂಜುಂಡೇಶ್ವರ ಸ್ವಾಮಿಯ ದೊಡ್ಡ ಜಾತ್ರೆಯ ಪಂಚ ಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿದೆ. (ವರದಿ: ರಂಗಸ್ವಾಮಿ ಪಿ)
ನಂಜನಗೂಡಿನಲ್ಲಿ ಜಾತ್ರೆಯ ವೈಭವ; ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ
ನಂಜನಗೂಡಿನಲ್ಲಿ ಜಾತ್ರೆಯ ವೈಭವ; ಅದ್ಧೂರಿಯಾಗಿ ನಡೆದ ನಂಜುಂಡೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವ

ನಂಜನಗೂಡು (ಮೈಸೂರು): ರಾಜ್ಯದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿಯ ಸನ್ನಿಧಿಯಲ್ಲಿಂದು (ಮಾರ್ಚ್ 22, ಶುಕ್ರವಾರ) ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪಂಚಮಹಾರಥೋತ್ಸವ ಲಕ್ಷಾಂತರ ಮಂದಿ ಭಕ್ತರ ಹರ್ಷೋದ್ಗಾರಗಳ ನಡುವೆ ಶ್ರದ್ದಾ ಭಕ್ತಿಯಿಂದ ನೆರವೇರಿತು. ಬೆಳಿಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ದಕ್ಷಿಣಕಾಶಿ ನಂಜನಗೂಡು ಪಂಚ ಮಹಾರಥೋತ್ಸವ ನಡೆಯುವ ಏಕೈಕ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ಪಂಚಮಹಾರಥೋತ್ಸವದ ವೇಳೆ ಎಲ್ಲಾ ವಿಘ್ನಗಳ ನಿವಾರಕ ಗಪಣತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದ ರಥ ಮುಂಚೂಣಿಯಲ್ಲಿ ಸಾಗಿತು. ಇದನ್ನು ಹಿಂಬಾಲಿಸಿಕೊಂಡು ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮ, ಸುಬ್ರಹ್ಮಣ್ಯಸ್ವಾಮಿ, ಚಂಡಿಕೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ರಥಗಳು ಒಂದಾದ ಮೇಲೆ ಒಂದರಂತೆ ಸಾಲು ಸಾಲಾಗಿ ಸಾಗಿದ ದೃಶ್ಯ ನಯನ ಮನೋಹರವೆನಿಸಿತಲ್ಲದೇ, ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.

ಈ ವೇಳೆ ಜಮಾಯಿಸಿದ್ದ ಲಕ್ಷಾಂತರ ಜನರು ರಥಗಳ ಮೇಲೆ ಹಣ್ಣು ಜವನವನ್ನು (ದವನ) ಎಸೆದು ಭಕ್ತಿಭಾವ ಮೆರೆದರು. ಪಂಚ ಮಹಾರಥೋತ್ಸವ ವೀಕ್ಷಣೆಗಾಗಿ ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಪಂಚ ರಥಗಳಿಗೂ ವಿವಿಧ ಬಣ್ಣದ ಬಾವುಟಗಳನ್ನು ಕಟ್ಟಿ, ವಿವಿಧ ಬಗೆಯ ಹೂವುಗಳು, ತಳಿರು ತೋರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಬೃಹತ್ ರಥ ಸುಮಾರು 108 ಅಡಿ ಎತ್ತರವಿದ್ದು 110 ಟನ್ ತೂಕವಿದೆ. ಈ ಬೃಹತ್ ರಥವನ್ನು ಹರ್ಷೋದ್ಗಾರಗಳ ನಡುವೆ ಭಕ್ತರು ಎಳೆದು ಸಾಗುವ ಮೂಲಕ ಸಂಭ್ರಮಿಸಿದರು. ನಂಜುಂಡೇಶ್ವರನ ದೇಗುಲದ ಮುಂಭಾಗದಿಂದ ಹೊರಟ ರಥಗಳು ರಥ ಬೀದಿಯಲ್ಲಿ ಸಾಗಿದ ನಂತರ ಮತ್ತೆ ನಂಜುಂಡೇಶ್ವರನ ದೇಗುಲದ ಬಳಿಗೆ ಬಂದು ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಕಪಿಲಾ ನದಿ ತೀರದಲ್ಲಿ ಪುಣ್ಯ ಸ್ನಾನ ಮಾಡಿ ಮಿಂದೆದ್ದ ಭಕ್ತ ಸಾಗರ

ಇನ್ನೂ ಕಪಿಲಾ ನದಿ ತೀರದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಕಪಿಲಾ ನದಿಯಲ್ಲಿ ಮಿಂದೆದ್ದು ಪುಣ್ಯ ಸ್ನಾನ ಮಾಡಿದ ಬಳಿಕ ಶ್ರೀಕಂಠೇಶ್ವರ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಪುನೀತರಾದರು. ಕೆಲವರು ತಲೆಕೂದಲು ಮುಡಿಕೊಟ್ಟು ಹರಕೆ ತೀರಿಸಿದರು. ಮುನ್ನೆಚ್ಚರಿಕೆಯಾಗಿ ಕಪಿಲಾ ನದಿ ತೀರದಲ್ಲಿ ನುರಿತ ಈಜುಗಾರರ ತಂಡವನ್ನು ನಿಯೋಜನೆ ಮಾಡಲಾಗಿತ್ತು. ಪಂಚಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಲಕ್ಷಾಂತರ ಭಕ್ತರು ಎಲ್ಲೆಡೆ ಕಿಕ್ಕಿರಿದು ನೆರೆದಿದ್ದರು. ಪರಿಣಾಮ ನಂಜನಗೂಡಿನ ಹಲವೆಡೆ ಭಾರೀ ಜನಜಂಗುಳಿ ಉಂಟಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ