logo
ಕನ್ನಡ ಸುದ್ದಿ  /  ಕರ್ನಾಟಕ  /  Nanjangud Rathotsava 2024: ನಂಜನಗೂಡು ದೊಡ್ಡ ರಥೋತ್ಸವ ಮಾರ್ಚ್ 22 ರಂದು , ಪಂಚರಥೋತ್ಸವದ ವಿಶೇಷ ಏನು

Nanjangud Rathotsava 2024: ನಂಜನಗೂಡು ದೊಡ್ಡ ರಥೋತ್ಸವ ಮಾರ್ಚ್ 22 ರಂದು , ಪಂಚರಥೋತ್ಸವದ ವಿಶೇಷ ಏನು

Umesha Bhatta P H HT Kannada

Mar 05, 2024 11:29 PM IST

google News

ನಂಜನಗೂಡು ದೊಡ್ಡ ರಥೋತ್ಸವ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.

    • ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡು ಶ್ರೀಕಂಠೇಶ್ವರ ದೊಡ್ಡ ರಥೋತ್ಸವ ಮಾರ್ಚ್‌ 22ರಂದು ನಿಗದಿಯಾಗಿದ್ದು. ಸಿದ್ದತೆಗಳು ಶುರುವಾಗಿವೆ. 
ನಂಜನಗೂಡು ದೊಡ್ಡ ರಥೋತ್ಸವ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.
ನಂಜನಗೂಡು ದೊಡ್ಡ ರಥೋತ್ಸವ ಲಕ್ಷಾಂತರ ಭಕ್ತರನ್ನು ಸೆಳೆಯಲಿದೆ.

ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಐತಿಹಾಸಿಕ ದೇಗುಲ ದಕ್ಷಿಣಕಾಶಿ ಪ್ರಖ್ಯಾತಿಯ ನಂಜನಗೂಡು ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವ ಮಾರ್ಚ್‌22 ರಂದು ನಡೆಯಲಿದೆ. ನಂಜನಗೂಡು ದೊಡ್ಡ ಜಾತ್ರೆ ಎಂದೇ ಕರೆಯಲ್ಪಡುವ ಇಲ್ಲಿ ಪಂಚ ರಥಗಳನ್ನು ಎಳೆಯುವುದು ವಿಶೇಷ. ಗೌತಮ ಪಂಚ ರಥ ಎಂದೂ ಕರೆಯಲಾಗುತ್ತದೆ. ಲಕ್ಷಾಂತರ ಭಕ್ತರು ಆಗಮಿಸುವುದರಿಂದ ನಂಜನಗೂಡು ಶ್ರೀಕಂಠೇಶ್ವರ ರಥೋತ್ಸವಕ್ಕೆ ಸಿದ್ದತೆಗಳು ಈಗಿನಿಂದಲೇ ಶುರುವಾಗುತ್ತದೆ. ಭಕ್ತರಿಗೆ ನಾನಾ ಸೌಕರ್ಯಗಳನ್ನು ಒದಗಿಸಲು ಜಿಲ್ಲಾಡಳಿತವೂ ಸಿದ್ದತೆಗಳನ್ನು ಮಾಡಿಕೊಂಡು ಪೂರ್ವಭಾವಿ ಸಭೆಯನ್ನೂ ನಡೆಸಿದೆ.

ರಥೋತ್ಸವದ ವಿಶೇಷ ಏನು

ಮೈಸೂರಿನಿಂದ 20 ಕಿ.ಮಿ ದೂರದಲ್ಲಿರುವ ನಂಜನಗೂಡು ಪ್ರಮುಖ ಕೈಗಾರಿಕ ನಗರವೂ ಹೌದು. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ನಂಜನಗೂಡು ನಗರದ ಶ್ರೀಕಂಠೇಶ್ವರ ದೇಗುಲವೂ ಐತಿಹಾಸಿಕವಾದದ್ದು. ಕಪಿಲಾ ನದಿ ತೀರದ ನಂಜನಗೂಡಿನಲ್ಲಿ ಶ್ರೀಕಂಠೇಶ್ವರ ಚಿಕ್ಕ ರಥೋತ್ಸವ ಅಕ್ಟೋಬರ್‌ನಲ್ಲಿ ಜರುಗಿದರೆ ಈಗ ದೊಡ್ಡ ಜಾತ್ರಾ ಮಹೋತ್ಸವ ಇರಲಿದೆ.

ಅದರಲ್ಲೂ ಐದು ರಥಗಳನ್ನು ಎಳೆಯುವುದು ದೊಡ್ಡ ಜಾತ್ರೆಯ ವಿಶೇಷ. ಇದನ್ನು ಗೌತಮ ಮಹರ್ಷಿಗಳು ಮೊದಲು ಎಳೆದಿದ್ದರು ಎನ್ನುವ ಐತಿಹ್ಯ ಇರುವ ಕಾರಣಕ್ಕೆ ಈಗಲೂ ಗೌತಮ ಪಂಚ ರಥ ಎಂದೇ ಹೇಳಲಾಗುತ್ತದೆ.

ಶ್ರೀಕಂಠೇಶ್ವರ ರಥದ ಜತೆಯಲ್ಲಿಯೇ ಪಾರ್ವತಿ, ಗಣೇಶ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ರಥಗಳೂ ಇರಲಿವೆ. ಇದರಲ್ಲಿ ಶ್ರೀಕಂಠೇಶ್ವರ ರಥವೇ ಅತಿ ದೊಡ್ಡದು. 90 ಅಡಿ ಎತ್ತರದ 110 ಟನ್‌ ಭಾರದ ರಥವದು. ಇದಕ್ಕಾಗಿಯೇ ದೇಗುಲ ಎದುರಿನಲ್ಲಿರುವ ಸುಮಾರು ಒಂದೂವರೆ ಕಿ.ಮಿ ಉದ್ದದ ರಥಬೀದಿಯಲ್ಲಿ ರಥವನ್ನು ಎಳೆಯಲಾಗುತ್ತದೆ. ಮುಂಜಾನೆಯ ಮಹೂರ್ತದಲ್ಲಿಯೇ ರಥೋತ್ಸವವು ಪ್ರತಿ ವರ್ಷ ಬರಲಿದೆ.

ಹಿಂದಿನ ದಿನವೇ ಸಹಸ್ರಾರು ಭಕ್ತರು ನಂಜನಗೂಡಿಗೆ ಆಗಮಿಸಿ ಬೆಳಗ್ಗೆಯೇ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ರಥೋತ್ಸವದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ ಭಾಗದಿಂದಲೂ ಭಕ್ತರು ಶ್ರೀಕಂಠೇಶ್ವರ ಸನ್ನಿಧಿಗೆ ಆಗಮಿಸುವರು.

ಕರ್ನಾಟಕದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಮೊದಲ ಬಾರಿಗೆ ಶ್ರೀಕಂಠೇಶ್ವರ ರಥೋತ್ಸವ ನಡೆಯುತ್ತಿರುವುದರಿಂದ ಹೆಚ್ಚಿನ ಮಹಿಳಾ ಭಕ್ತರು ಆಗಮಿಸುವ ನಿರೀಕ್ಷೆಯೂ ಇದೆ.

ಪೂರ್ವ ಭಾವಿ ಸಭೆ

ಜಾತ್ರೆ ಹಿನ್ನೆಲೆಯಲ್ಲಿ ನಂಜನಗೂಡು ಶಾಸಕ ದರ್ಶನ್‌ ಧೃವನಾರಾಯಣ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯೂ ನಡೆದಿದೆ.

ಪ್ರತಿವರ್ಷ ನಡೆಯುವ ವೈಭವದ ಜಾತ್ರೆಗೆ ಹೊರರಾಜ್ಯ ಹಾಗೂ ಹೊರದೇಶಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿದ್ದು ಅವರಿಗೆ ಮೂಲ ಸೌಕರ್ಯ ಒದಗಿಸುವುದರೊಂದಿಗೆ ರಕ್ಷಣೆಯ ಜವಾಬ್ದಾರಿಯು ನಮ್ಮ ಮೇಲಿದೆ. ನಗರದ ರಸ್ತೆಗಳು, ವಿದ್ಯುತ್ ದೀಪಗಳು, ಜನಸಂದಣಿ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದ್ದು, ಜನ ಸ್ನಾನಕ್ಕೆ ಇಳಿಯುವಲ್ಲಿ ಜಾಗ್ರತೆ ವಹಿಸುವುದು, ಮಕ್ಕಳು ಪೋಷಕರಿಂದ ತಪ್ಪಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸಬೇಕು ಎಂದು ದರ್ಶನ್‌ ಸೂಚಿಸಿದ್ದಾರೆ.

ಡಿಸಿ ಸೂಚನೆ ಏನು

ಬಹಳ ಜನಸಂದಣಿ ಸೇರುವ ಜಾತ್ರಾ ಮಹೋತ್ಸವ ಇದಾಗಿದ್ದು, ಅನಧಿಕೃತ ವ್ಯಕ್ತಿಗಳ ಬಗೆಗೆ ಎಚ್ಚರಿಕೆಯಿಂದಿರಬೇಕು. ದೊಡ್ಡ ತೇರು ಎಳೆಯುವಾಗ ಜಾಗ್ರತೆ ಬಹಳ ಮುಖ್ಯ. ಏಳು ಗ್ರಾಮದ ಗ್ರಾಮಸ್ಥರ ಸಹಕಾರವು ಮುಖ್ಯವಾಗಿದ್ದು, ಆ ಸಂದರ್ಭದಲ್ಲಿ ಜಾಗರೂಕತೆ ಬಹಳ ಮುಖ್ಯ. ಮಹಿಳೆಯರು,ಮಕ್ಕಳು ಹಾಗೂ ಅವರ ಆಭರಣಗಳ ಬಗೆಗೆ ಎಚ್ಚರ ವಹಿಸಿ ಎಂದು ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೂಚಿಸಿದರು.

ಚೆಸ್ಕಾಂ ನವರು ಅನಿಯಂತ್ರಿತ ವಿದ್ಯುತ್ ಸರಬರಾಜಿನೊಂದಿಗೆ ವರ್ಣರಂಜಿತ ದೀಪಾಲಂಕಾರ ಮಾಡುವುದು ಮತ್ತು ವಿವಿಧ ಇಲಾಖೆಗಳವರು ತಮ್ಮ ಕಟ್ಟಡಗಳ ಮೇಲೆ ದೀಪಾಲಂಕಾರ ಮಾಡುವುದರೊಂದಿಗೆ ಜಾತ್ರಾ ರಂಗನ್ನು ಹೆಚ್ಚುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ದೇವಸ್ಥಾನದ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ಅಳವಡಿಸುವುದರೊಂದಿಗೆ ಸ್ವಚ್ಚತೆ,ಭದ್ರತಾ ಸಿಬ್ಬಂದಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದು. ಶಕ್ತಿ ಯೋಜನೆ ಹಿನ್ನೆಲೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗುವ ಕಾರಣ ಕೆ.ಎಸ್.ಆರ್.ಟಿ.ಸಿ ವತಿಯಿಂದ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಿ, ನಂಜನಗೂಡು ಡಿಪೋ ಅಷ್ಟನ್ನೆ ನೆಚ್ಚಿಕೊಳ್ಳದೆ ಅಕ್ಕಪಕ್ಕದ ಡಿಪೋಗಳಿಂದ ಬಸ್ ತರಿಸಿ. ವಾಹನ ಪಾರ್ಕಿಂಗ್, ಸೂಚನಾ ಫಲಕಗಳು ವ್ಯವಸ್ಥಿತವಾಗಿರಲಿ ಎಂದು ಸೂಚಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ