NIA Raid In Karnataka: ದಕ್ಷಿಣ ಕನ್ನಡ, ಕೊಡಗಿನಲ್ಲಿ ಎನ್‌ಐಎ ದಾಳಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಚುರುಕು
Dec 05, 2024 02:17 PM IST
ಎನ್‌ಐಎ ತಂಡಗಳು ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿವೆ.
- NIA Raid In Karnataka: ರಾಷ್ಟ್ರೀಯ ತನಿಖಾ ಸಂಸ್ಥೆ( NIA) ಅಧಿಕಾರಿಗಳ ತಂಡ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.
- ವರದಿ: ಹರೀಶ ಮಾಂಬಾಡಿ.ಮಂಗಳೂರು
ಮಂಗಳೂರು : ಬೆಳ್ಳಾರೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ನಾಪತ್ತೆಯಾಗಿರುವ ನೌಷದ್ (27) ಗಾಗಿ ಎರಡನೇ ಭಾರಿ ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಪತ್ನಿ, ತಂಗಿ, ತಾಯಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು.ಬಳಿಕ ತಂಗಿ, ತಾಯಿ ವಶಕ್ಕೆ ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಕಾಲನಿಯಲ್ಲಿರುವ ನೌಷದ್ ಮನೆಗೆ ಡಿ.5 ರಂದು ಬೆಳಗ್ಗೆ 5:30 ಗಂಟೆಗೆ ಬೆಂಗಳೂರಿನಿಂದ ಬಂದ ಎನ್.ಐ.ಎ ಅಧಿಕಾರಿಗಳು ತಂಡ ದಾಳಿ ಮಾಡಿತ್ತು. ಈ ದಾಳಿ ವೇಳೆ ಮನೆಗೆ ಬೀಗ ಹಾಕಿ ನೌಷದ್ ತಂಗಿ ತಸ್ರಿಫಾ ಮತ್ತು ತಾಯಿ ತುಲೈಕಾ ಪರಾರಿಯಾಗಿದ್ದರು.
ಸತತ ಐದು ಗಂಟೆಗಳ ಬಳಿಕ ಎನ್.ಐ.ಎ ಅಧಿಕಾರಿಗಳು ತಂಗಿ ಮತ್ತು ತಾಯಿಯನ್ನು 12 ಗಂಟೆ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ಮನೆಯೊಂದರಲ್ಲಿರುವ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಇನೋವಾ ಕಾರಿನಲ್ಲಿ ನೌಷದ್ ಪೊಯ್ಯಗುಡ್ಡೆ ಮನೆಗೆ ಕರೆತಂದು ಬೀಗ ತೆರೆಸಿ ಮನೆಯೊಳಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನೂ ನೌಷದ್ ಪತ್ನಿ ಸೈನಾಝ್ ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕೊಡಗಿನಲ್ಲೂ ದಾಳಿ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬೆಳ್ಳಂಬೆಳಿಗ್ಗೆ ಕೊಡಗಿನ ಹಲವು ಕಡೆ ಎನ್ ಐ ಎ ದಾಳಿ ನಡೆದಿದೆ.
ಮಡಿಕೇರಿಯ ಮುಸ್ತಾಫಾ (ಚಿಲ್ಲಿ) ಹಾಗು ಸೋಮವಾರಪೇಟೆಯ ಹೊಸತೋಟ ನಿವಾಸಿ ಸೋಮವಾರಪೇಟೆಯ ಕರಿಮೆಣಸು ಕಾಫಿ ವ್ಯಾಪಾರೀ ಜುನೈದ್ ಹಾಗು ಚೌಡ್ಲು ಗ್ರಾಮದ ತೌಶಿಕ್ ಮನೆ ಬೆಲೆ ದಾಳಿ ಮಾಡಿದ ಮಾಹಿತಿ ಲಭ್ಯವಾಗಿದೆ.
ಸುಂಟಿಕೊಪ್ಪದ ಮಾದಾಪುರ ರಸ್ತೆಯ ಮನೆಯೊಂದರ ಮೇಲೂ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇಂದು ಮುಂಜಾನೆ ಏಕ ಕಾಲಕ್ಕೆ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಗಂಟೆಗಟ್ಟಲೆ ಕಾಲ ಮನೆಯಲ್ಲಿ ದಾಖಲೆಗಳ ಶೋಧ ಹಾಗೂ ವಿಚಾರಣೆ ನಡೆಸಿದ್ದಾರೆ. ಸಂಜೆವರೆಗೂ ವಿಚಾರಣೆ ಮುಂದುವರಿಯುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ರಾತ್ರಿ 8 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಪ್ರಕರಣದ ತನಿಖೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ವಿಶೇಷ ತಂಡಗಳನ್ನು ರಚಿಸಿತ್ತು.
ಆನಂತರ ಇಡೀ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 19 ಆರೋಪಿಗಳ ಬಂಧನ ಕೂಡಾ ಆಗಿದೆ. ಅಲ್ಲದೇ ತನಿಖೆಯೂ ಮುಂದುವರಿದಿದೆ. ಇದರ ಭಾಗವಾಗಿಯೇ ಗುರುವಾರವೂ ದಾಳಿ ನಡೆಸಲಾಗಿದೆ.
(ವರದಿ: ಹರೀಶ ಮಾಂಬಾಡಿ.ಮಂಗಳೂರು)