Phulwari Sharif case: ಪುಲ್ವಾರಿ ಶರೀಫ್‌ ಪ್ರಕರಣದ ಆರೋಪಿಗಳು ಪ್ರವೀಣ್‌ ನೆಟ್ಟಾರು ಹಂತಕರಿಗೂ ಹಣ ಸಂದಾಯ ಮಾಡಿದ್ರಂತೆ!
ಕನ್ನಡ ಸುದ್ದಿ  /  ಕರ್ನಾಟಕ  /  Phulwari Sharif Case: ಪುಲ್ವಾರಿ ಶರೀಫ್‌ ಪ್ರಕರಣದ ಆರೋಪಿಗಳು ಪ್ರವೀಣ್‌ ನೆಟ್ಟಾರು ಹಂತಕರಿಗೂ ಹಣ ಸಂದಾಯ ಮಾಡಿದ್ರಂತೆ!

Phulwari Sharif case: ಪುಲ್ವಾರಿ ಶರೀಫ್‌ ಪ್ರಕರಣದ ಆರೋಪಿಗಳು ಪ್ರವೀಣ್‌ ನೆಟ್ಟಾರು ಹಂತಕರಿಗೂ ಹಣ ಸಂದಾಯ ಮಾಡಿದ್ರಂತೆ!

ಪುಲ್ವಾರಿ ಶರೀಫ್‌ ಪ್ರಕರಣದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೀಡಿ ಬಂಧನಕ್ಕೆ ಒಳಗಾಗಿರುವವರು ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಗೈದ ಆರೋಪಿಗಳಿಗೂ ಹಣ ಸಂದಾಯ ಮಾಡಿದ್ದರು.

 ಪ್ರವೀಣ್‌ ನೆಟ್ಟಾರು
ಪ್ರವೀಣ್‌ ನೆಟ್ಟಾರು

ಮಂಗಳೂರು: ಪಟನಾದ ಪುಲ್ವಾರಿ ಶರೀಫ್‌ನಲ್ಲಿ ನಡೆದ ಭಯೋತ್ಪಾದಕ ಚಟುವಟಿಎಕಗಳಿಗೆ ಹಲವು ರಾಜ್ಯಗಳ ಹವಾಲಾ ಜಾಲದ ಮೂಲಕ ಹಣಕಾಸು ನೆರವು ನೀಡಲಾಗಿದೆ. ಈ ಕುರಿತು ಎನ್‌ಐಎ ತನಿಖೆ ನಡೆಸಿದ್ದು, ಆರೋಪಿಗಳು ದೇಶದ ವಿವಿಧೆಡೆ ನಡೆದ ಭಯೋತ್ಪಾದಕ ಚಟುವಟಿಕೆಗಳಿಗೂ ಹಣ ಸಂದಾಯ ಮಾಡಿದ್ದಾರೆ ಎನ್ನಲಾಗಿದೆ.

ಪುಲ್ವಾರಿ ಶರೀಫ್‌ ಪ್ರಕರಣದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೀಡಿ ಬಂಧನಕ್ಕೆ ಒಳಗಾಗಿರುವವರು ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಗೈದ ಆರೋಪಿಗಳಿಗೂ ಹಣ ಸಂದಾಯ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪುಲ್ವಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ರಾಜ್ಯಗಳಲ್ಲಿ ಜಾಲ ಇರುವುದು ಎನ್‌ಐಎಗೆ ತನಿಖೆಯಿಂದ ತಿಳಿದುಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ವಿವಿಧೆಡೆಯಿಂದಲೂ ಹಣಕಾಸು ನೆರವು ನೀಡಿರುವುದು ಬೆಳಕಿಗೆ ಬಂದಿತ್ತು.

ಪುಲ್ವಾರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರು, ಬಂಟ್ವಾಳದ ಮೆಲ್ಕಾರ್‌ನಿಂದ ಐವರು ಆರೋಪಿಗಳನ್ನು ಎನ್‌ಐಎ ಇತ್ತೀಚೆಗೆ ಬಂಧಿಸಿತ್ತು. ಪ್ರವೀಣ್‌ ನೆಟ್ಟಾರು ಹಂತಕರಿಗೂ ಇವರು ಹಣಕಾಸು ನೆರವು ನೀಡಿರುವುದು ತನಿಖೆಯಿಂದ ತಿಳಿದುಬಂದಿತ್ತು.

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಅಂಕತಡ್ಕದ ರಿಯಾಜ್‌ನ ಮೊಬೈಲ್‌ ಪರಿಶೀಲನೆವೇಳೆ ಆತನ ಬ್ಯಾಂಕ್‌ ಖಾತೆಗೆ ಇವರಿಂದ ಹಣ ಸಂದಾಯವಾಗಿರುವುದು ಬೆಳಕಿಗೆ ಬಂದಿತ್ತು .

ಉಗ್ರ ಚಟುವಟಿಕೆಗಳಿಗೆ ಹಣ ಕಳುಹಿಸುವಾಗ ಇವರು ಆದಷ್ಟು ನಗದು ವ್ಯವಹಾರವನ್ನೇ ನಡೆಸುತ್ತಿದ್ದರು. ಆದರೆ, ಕೆಲವೊಮ್ಮೆ ಬೇರೆಯವರ ಹೆಸರಿನಲ್ಲಿ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದರು.

ಪಟನಾದ ಪುಲ್ವಾರಿ ಶರೀಫ್‌ನಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳನ್ನು ತನಿಖೆ ಮಾಡಿದಾಗ ಆ ಉಗ್ರ ಚಟುವಟಿಕೆಗಳಿಗೆ ಕರ್ನಾಟಕದ ಬಂಟ್ವಾಳ ಭಾಗದಿಂದ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿತ್ತು.

ಈಗ ಬಂಟ್ವಾಳದ ನಂದಾವರ ಮೂಲದ ಮಹಮ್ಮದ್‌ ಸಿನಾನ್‌ ಮತ್ತು ನವಾಜ್‌ ಅವರನ್ನು ಬಂಧಿಸಲಾಗಿದೆ. ಇವರು ತಮ್ಮ ಹೆಸರು ಬಳಸದೆ ಬ್ಯಾಂಕ್‌ ಶಾಖೆಯ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದರು. ಬಿಹಾರದ ಉಗ್ರ ಚಟುವಟಿಕೆಗೆ ಕರ್ನಾಟಕದಿಂದ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿರುವ ಎನ್‌ಐಎ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿತ್ತು.

ದಕ್ಷಿಣ ಕನ್ನಡ ಬಿಜೆಪಿ ಯುವ ನೇತಾರ ಪ್ರವೀಣ್ ನೆಟ್ಟಾರು ಅವರನ್ನು ಜುಲೈ 26 ರಂದು ಬೆಳ್ಳಾರೆಯ ಅವರ ಕೋಳಿ ಅಂಗಡಿ ಸಮೀಪವೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಬಿಜೆಪಿ ಯುವಮೋರ್ಚಾ ಸಿಡಿದೆದ್ದಿತ್ತು.

ಪ್ರವೀಣ್ ನೆಟ್ಟಾರು ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್‌ ಬಳಿ ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್‌ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಾಕಿ ದಾಳಿ ನಡೆಸಿದ್ದರು.

ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸಾಕಷ್ಟು ಆಕ್ರೋಶಗೊಂಡಿದ್ದರು. ಈ ಘಟನೆಗೆ ಪೂರಕವಾಗಿ ಬಳಿಕ ಪಿಎಫ್‌ಐ ಸಂಘಟನೆಯನ್ನೂ ನಿಷೇಧಿಸಲಾಗಿತ್ತು.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಅದರ ಸಹ ಸಂಘಟನೆಗಳು, ಅಧೀನ ಸಂಸ್ಥೆಗಳಿಗೆ ಐದು ವರ್ಷ ನಿಷೇಧ ಹೇರಲಾಗಿದೆ. ಪಿಎಫ್‌ಐನ ಕೆಲವೊಂದು ಸ್ಥಾಪಕ ಸದಸ್ಯರು ನಿಷೇಧಿತ ಸ್ಟುಡೆಂಟ್‌ ಇಸ್ಲಾಮಿಕ್‌ ಮೂವ್ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಮತ್ತು ಜಮತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌ (ಜೆಎಂಬಿ)ಯಂತಹ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವುದು ಸಾಬೀತುಗೊಂಡಿರುವುದರಿಂದ ಪಿಎಫ್‌ಐಗೆ ನಿಷೇಧ ಹೇರಿರುವುದಾಗಿ ಕೇಂದ್ರ ಸರಕಾರ ತಿಳಿಸಿತ್ತು.

Whats_app_banner