logo
ಕನ್ನಡ ಸುದ್ದಿ  /  ಕರ್ನಾಟಕ  /  ನಾವು ಎಲ್ಲೇ ಇದ್ದರೂ ಕಣ್ಣೆಂಬ ಕ್ಯಾಮೆರಾಗೆ ಕನ್ನಡವೇ ಕಂಡಂತೆ: ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ

ನಾವು ಎಲ್ಲೇ ಇದ್ದರೂ ಕಣ್ಣೆಂಬ ಕ್ಯಾಮೆರಾಗೆ ಕನ್ನಡವೇ ಕಂಡಂತೆ: ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ

Rakshitha Sowmya HT Kannada

Oct 31, 2024 01:41 PM IST

google News

ಕನ್ನಡ, ಬೆಂಗಳೂರು ಬಗ್ಗೆ ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ

  • ಪ್ರತಿಯೊಬ್ಬರಿಗೂ ತಮ್ಮ ಮಾತೃಭಾಷೆ ಬಗ್ಗೆ ಪ್ರೀತಿ ಇರುತ್ತದೆ. ನೈಜೀರಿಯಾದಲ್ಲಿ ವಾಸಿಸುತ್ತಿರುವ ಕನ್ನಡಿಗ ಶ್ರೀ ಹರ್ಷ ದ್ವಾರಕನಾಥ್‌ ಕನ್ನಡ, ಬೆಂಗಳೂರಿನ ಬಗ್ಗೆ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. ನೈಜೀರಿಯಾದಲ್ಲಿ ಓಶೋಡಿ ಎಂಬಲ್ಲಿರುವ ಬಸ್‌ ಟರ್ಮಿನಲ್‌, ಬೆಂಗಳೂರು ಕೆಂಗೇರಿ ಬಸ್‌ ಟರ್ಮಿನಲ್‌ನ್ನು ನೆನಪಿಸುತ್ತದೆ ಎಂದು ಹರ್ಷ ಹೇಳಿದ್ದಾರೆ.  

ಕನ್ನಡ, ಬೆಂಗಳೂರು ಬಗ್ಗೆ ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ
ಕನ್ನಡ, ಬೆಂಗಳೂರು ಬಗ್ಗೆ ನೈಜೀರಿಯಾ ಕನ್ನಡಿಗ ಶ್ರೀಹರ್ಷ ದ್ವಾರಕನಾಥ್ ಬರಹ (PC: Sri Harsha Dwarakanath)

ಎಲ್ಲಾದರು ಇರು; ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು.. ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಹಾಡಿನ ಸಾಲಿನಂತೆ ಕನ್ನಡಿಗರು ಯಾವ ರಾಜ್ಯದಲ್ಲೇ ಇರಲಿ, ಯಾವ ದೇಶದಲ್ಲೇ ಇರಲಿ ಕನ್ನಡವನ್ನು ಮರೆಯಬಾರದು. ನಮ್ಮ ಮಗುವನ್ನು ನಾವೇ ಕಾಳಜಿ ಮಾಡಿ, ಬೆಳೆಸದಿದ್ದರೆ ಹೇಗೆ? ಅದೇ ರೀತಿ ನಮ್ಮ ಮಾತೃಭಾಷೆಯನ್ನು ಮರೆತೆರೆ ಹೆತ್ತ ತಾಯಿಯನ್ನು ಮರೆತಂತೆ.

ಹೊರ ರಾಜ್ಯಕ್ಕೋ, ಹೊರ ದೇಶಕ್ಕೋ ಹೋದಾಗ ಅಲ್ಲಿನ ಯಾವುದಾದರೂ ಸ್ಥಳ ನಮ್ಮ ಸ್ವಂತ ಊರನ್ನು ಹೋಲುತ್ತಿದ್ದರೆ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಹಾಗೇ ನೈಜೀರಿಯಾದ ಲಾಗೋಸ್‌ನಲ್ಲಿ ವಾಸಿಸುತ್ತಿರುವ ಶ್ರೀ ಹರ್ಷ ದ್ವಾರಕಾನಾಥ್ ಅಲ್ಲಿನ ಬಸ್ ಟರ್ಮಿನಲನ್ನು ಬೆಂಗಳೂರು ಕೆಂಗೇರಿಯ ಬಸ್‌ ಟರ್ಮಿನಲ್‌ಗೆ ಹೋಲಿಸಿದ್ದಾರೆ.

ಒಂದೇ ರೀತಿ ಕಾಣುವ ನೈಜೀರಿಯಾ ಓಶೋಡಿ ಬಸ್ ಟರ್ಮಿನಲ್‌-ಕೆಂಗೇರಿ ಬಸ್ ಟರ್ಮಿನಲ್‌

ಎಲ್ಲಾ ಕನ್ನಡಿಗರಿಗೂ ವಂದನೆ, ಅಭಿನಂದನೆ. ಜಗತ್ತಿನಲ್ಲಿ ಎಲ್ಲೇ ಇದ್ದರೂ ನಾವು ಹುಟ್ಟಿ- ಬೆಳೆದ ಸ್ಥಳ ಅಷ್ಟು ಸುಲಭಕ್ಕೆ ನಮ್ಮನ್ನು ಬಿಡುವುದಿಲ್ಲ. ನೈಜೀರಿಯಾದಲ್ಲಿ ಓಶೋಡಿ ಅನ್ನೋ ಕಡೆ ಒಂದು ಬಸ್ ಟರ್ಮಿನಲ್ ಇದೆ. ಅದನ್ನು ನೋಡಿದಾಗೆಲ್ಲ ಕೆಂಗೇರಿಯ ಬಸ್ ಟರ್ಮಿನಲ್ ಕಣ್ಣೆದುರು ಬಂದಂತಾಗುತ್ತದೆ. ಇನ್ನು ಇಲ್ಲಿನ ಬ್ಲ್ಯೂ ಲೈನ್ ಮೆಟ್ರೋ ಒಂದು ಸ್ಥಳದಲ್ಲಿ ಥೇಟ್ ಗೊರಗುಂಟೆಪಾಳ್ಯದ ನೆನಪನ್ನು ಒಳಗಿಂದ ತಂದುಬಿಡುತ್ತದೆ. ಕಣ್ಣನ್ನೇ ಮೋಸ ಮಾಡುವಂತೆ ಕನ್ನಡದ ದೊಡ್ಡ ಅಕ್ಷರಗಳು ಕಾಣಿಸಿಕೊಂಡಂತಾಗುತ್ತದೆ. ಹಾಗೇ ಅಲ್ಲವಾ?

ನಾವು ಎಲ್ಲೇ ಇದ್ದರೂ ಕಣ್ಣೆಂಬ ಕ್ಯಾಮೆರಾಗೆ ಕನ್ನಡವೇ ಕಂಡಂತೆ, ಕಿವಿಯೊಳಗೆ ಕನ್ನಡದ ಪದಗಳೋ ಪದಗಳು. ಅದು ಕೂಡ ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದದ್ದಕ್ಕಿಂತ ಹೆಚ್ಚಾಗಿ ದೇಶ ಬಿಟ್ಟು ಮತ್ತೊಂದು ದೇಶಕ್ಕೆ ಬಂದಾಗ ಕನ್ನಡವು ಅಯಸ್ಕಾಂತ, ಕನ್ನಡವು ಕೈ ಬೀಸಿ ಕರೆಯುವ ಅಮ್ಮನಂತೆ ಅನಿಸುತ್ತದೆ. ನೈಜೀರಿಯಾದ ಲಾಗೋಸ್‌ ನಲ್ಲಿ ತುಂಬ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ನನಗಿಂತ ಬಹಳ ಮುಂಚೆಯೇ ನೈಜೀರಿಯಾಗೆ ಬಂದಿದ್ದರೂ ಇಲ್ಲಿನ ವಿಚಾರಗಳು ಅವರಿಗೆ ಹೆಚ್ಚಿಗೆ ಗೊತ್ತಿದ್ದರೂ ಕನ್ನಡದಲ್ಲಿ ಈ ದೇಶದ ಬಗ್ಗೆ ಏನೇ ಬರೆದರೂ ಕಣ್ಣರಳಿಸಿ ನೋಡುತ್ತಾರೆ, ಗೊತ್ತಿದ್ದೇ ಮಾಹಿತಿ ಇದ್ದರೂ “ಎಷ್ಟು ಚಂದಕ್ಕೆ ಹೇಳಿದ್ದೀರಿ” ಅಂತ ಮೆಚ್ಚುಗೆಯ ಮಾತನಾಡುತ್ತಾರೆ.

ನೈಜೀರಿಯಾ ಜನರ ಕಾರು ಪ್ರೇಮ

ಇಲ್ಲಿನ ಜನರ ಕಾರಿನ ಮೇಲಿನ ಪ್ರೀತಿ ನನ್ನನ್ನು ಬಹಳ ಅಚ್ಚರಿಗೆ ದೂಡಿದೆ. ಹೇಗೆ ಕಡುಬಡತನ ಇಲ್ಲಿದೆಯೋ ಅದೇ ರೀತಿ ಭಾರೀ ಶ್ರೀಮಂತರೇ ಇರುವ ಪ್ರದೇಶಗಳು ಕೆಲವು ಇವೆ. ವಿಕ್ಟೋರಿಯಾ ಐಲ್ಯಾಂಡ್, ಬನಾನಾ ಐಲ್ಯಾಂಡ್ ಇಲ್ಲೆಲ್ಲ ಓಡಾಡಿ ಬರುವಾಗ ವಿಲಾಸಿ ಬಂಗಲೆಗಳು, ದುಬಾರಿ ಕಾರುಗಳು, ಅವರ ದಿರಿಸು ಇವೆಲ್ಲ ನೋಡುವುದಕ್ಕೆ ಖುಷಿಯಾಗುತ್ತದೆ. ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್ ನೆನಪಿಸುವಂತೆಯೇ ಇಲ್ಲಿ ಒಂದು ಸ್ಥಳವಿದೆ. ಈ ಜನರಿಗೆ ಸಿನಿಮಾಗಿಂತ ಸಂಗೀತ ಹೆಚ್ಚು ಪ್ರಿಯವಾದದ್ದು. ಸಂಗೀತದ ಆಲ್ಬಮ್‌ಗಳನ್ನು ಹೆಚ್ಚೆಚ್ಚು ಕೇಳುತ್ತಾರೆ. ಇಲ್ಲೊಂದು ಝೂ ಸಹ ಇದೆ. ಲಾಗೋಸ್‌ಗೆ ಬಂದಾಗ ಅಲ್ಲಿಗೆ ಒಮ್ಮೆ ಹೋಗಬಹುದು.

ಇಲ್ಲಿನ ಸಾಮಾಜಿಕ, ಆರ್ಥಿಕ ಬದುಕು ಬಹಳ ವಿಚಿತ್ರವಾದದ್ದು. ಮೈ ಮುರಿಯುವಂತೆ ದುಡಿದರೂ ಹೆಚ್ಚಿನ ದುಡಿಮೆ ಅಥವಾ ಆದಾಯ ಎಂಬುದು ನಿರೀಕ್ಷೆ ಮಾಡುವುದಕ್ಕೆ ಆಗಲ್ಲ. ಡಾಲರ್ ವಿರುದ್ಧ ಸ್ಥಳೀಯ ಕರೆನ್ಸಿ ನೆಲ ಕಚ್ಚಿ ಹೋಗುತ್ತಾ ಇದೆ. ಬ್ಯಾಂಕ್‌ಗಳಲ್ಲಿ ಹಣ ವಿನಿಮಯ ಮಾಡಿಕೊಳ್ಳುವುದಕ್ಕಿಂತ ಖಾಸಗಿ ವ್ಯಕ್ತಿಗಳ ಬಳಿ ಕರೆನ್ಸಿ ವಿನಿಮಯ ಮಾಡಿಕೊಳ್ಳುವವರೇ ಹೆಚ್ಚು. ಇಲ್ಲಿನ ಪತ್ರಿಕೆಗಳಲ್ಲಿ ಹೀಗೆ ಬ್ಲ್ಯಾಕ್ ಮಾರ್ಕೆಟ್‌ನಲ್ಲಿನ ಕರೆನ್ಸಿ ವಿನಿಮಯ ದರ ಎಷ್ಟಿದೆ ಅಂತಲೂ ಮಾಹಿತಿ ಇರುತ್ತದೆ. ಇನ್ನು ಚಿತ್ರದುರ್ಗ ಹೈವೇಯನ್ನು ನೆನಪಿಸುವಂತೆಯೇ ತುಂಬ ಚಂದದ ಹೈವೇ ಇದೆ. ಹೊರ ದೇಶಗಳಿಂದ ಬಂದವರು ಈ ಹೈವೇಗಳಲ್ಲಿ ದೀರ್ಘ ಸಮಯ ಅಥವಾ ತುಂಬ ದೂರಕ್ಕೆ ಪ್ರಯಾಣ ಮಾಡುವುದಕ್ಕೆ ಇಷ್ಟಪಡಲ್ಲ. ಭದ್ರತೆಯೇ ಕಾರಣ ಎಂದು ಹೇಳುತ್ತಾರೆ.

ನೈಜೀರಿಯಾದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಇಲ್ಲಿ ಕೆಲವು ಸೇನಾ ಸೂಕ್ಷ್ಮ ವಲಯಗಳಿವೆ. ಅಲ್ಲಿ ಓಡಾಡುವಾಗ ನನಗೇ ಆದ ಅನುಭವವೊಂದಿದೆ. “ಏಯ್ ವೈಟ್ ಮ್ಯಾನ್ ನೀನೇನು ಮಾಡ್ತಾ ಇದ್ದೀಯಾ ಇಲ್ಲಿ?” ಅಂತ ಕೇಳಿದ್ದರು. ಒಂದು ಕ್ಷಣ ಅಕ್ಕಪಕ್ಕ ನೋಡಿದ್ದೆ; ಯಾರದು ವೈಟ್ ಮ್ಯಾನ್ ಅಂತ. ನನಗೇ ಆ ಪ್ರಶ್ನೆ ಕೇಳಿದ್ದು ಅಂತ ಗೊತ್ತಾದ ಮೇಲೆ ಸಂಬಂಧಪಟ್ಟವರ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಯಿತು, ಹೇಳಿದೆ. ಅಲ್ಲಿಗೆ ಆ ಪ್ರಕರಣ ಮುಗಿಯಿತು. ಇಂಥ ಸನ್ನಿವೇಶಗಳು ಸೇನಾ ಸೂಕ್ಷ್ಮ ವಲಯಗಳಲ್ಲಿ ಆಗುತ್ತವೆ ಅನ್ನೋದು ಅಂಥ ಕೆಲವು ಪ್ರದೇಶಗಳಲ್ಲಿ ನನಗೇ ಆದ ಅನುಭವ. ಜತೆಗೆ ಈ ರೀತಿಯಾಗಿ ಜಗತ್ತಿನ ಯಾವ ಭಾಗದಲ್ಲಾದರೂ ಆಗಬಹುದು ಕೂಡ. ಮಿಲಿಟರಿ ಅಥವಾ ಪೊಲೀಸರಿಗೆ ಅಥವಾ ಕೆಲವೊಮ್ಮೆ ಖಾಸಗಿ ಭದ್ರತಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅವರದೇ ಜವಾಬ್ದಾರಿಯ ಭಾಗ ಇವೆಲ್ಲ. ನನ್ನ ಸ್ನೇಹಿತರಿಗೆ ಈ ಘಟನೆ ಹೇಳಿದ ಮೇಲೆ, “ಏನಪ್ಪಾ ವೈಟ್ ಮ್ಯಾನ್?” ಅಂತ ರೇಗಿಸುವುದು ಕೂಡ ಉಂಟು.

ಅಂದ ಹಾಗೆ ಮುಂದಿನ ತಿಂಗಳು ಇಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವದ ಸಡಗರ ಇದೆ. ಹಾಡು- ಹಸೆ ಸೇರಿದಂತೆ ಪ್ರತಿಭಾ ಪ್ರದರ್ಶನಕ್ಕಾಗಿ ಒಂದು ವೇದಿಕೆ ಸಿದ್ಧವಾಗುತ್ತದೆ. ಕಳೆದ ವರ್ಷ ನಾನು ಕೆಲಸ ಮಾಡುವ ಹೋಟೆಲ್‌ನಲ್ಲಿಯೇ ರಾಜ್ಯೋತ್ಸವ ಆಚರಿಸಲಾಯಿತು. ಈ ಸಲ ಬೇರೆ ಜಾಗದಲ್ಲಿದೆ. ನೆನಪುಗಳು, ವಿಷಯಗಳು ಹೆಕ್ಕಿದಷ್ಟೂ ಸಿಗುತ್ತವೆ. ಮತ್ತೆ ನಾವು ಸಿಗೋಣ, ಇನ್ನಷ್ಟು ವಿಷಯಗಳೊಂದಿಗೆ.

ಲೇಖನ: ಶ್ರೀಹರ್ಷ ದ್ವಾರಕಾನಾಥ್, ಲಾಗೋಸ್, ನೈಜೀರಿಯಾ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ