ಅಮರನ್ ಸಿನಿಮಾ ರಿಯಲ್ ಹೀರೋ ಮೇಜರ್ ಮುಕುಂದ್ ವರದರಾಜನ್ ಯಾರು, ಭಯೋತ್ಪಾದಕ ದಾಳಿಯಲ್ಲಿ ನಡೆದ ಘಟನೆ ಏನು?
Major Mukund Varadarajan: ಶಿವಕಾರ್ತಿಕೇಯನ್ ಮೇಜರ್ ಪಾತ್ರದಲ್ಲಿ ನಟಿಸಿರುವ ಅಮರನ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್, ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ನಟಿಸಿದ್ದಾರೆ? ರಿಯಲ್ ಹೀರೋ ವರದರಾಜನ್ ಯಾರು? ಚಿತ್ರದಲ್ಲಿ ಸಾಯಿ ಪಲ್ಲವಿ ಪಾತ್ರವೇನು? ಇಲ್ಲಿದೆ ಮಾಹಿತಿ.
Major Mukund Varadarajan: ಶಿವಕಾರ್ತಿಕೇಯನ್ , ಸಾಯಿ ಪಲ್ಲವಿ ಅಭಿನಯದ ಅಮರನ್ ಸಿನಿಮಾ ರಿಲೀಸ್ ಅಗಿದೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಧಾರಿತ ಸಿನಿಮಾ. ಶಿವ ಅರೂರ್ ಮತ್ತು ರಾಹುಲ್ ಸಿಂಗ್ ಅವರ ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ ಹೀರೋಸ್ ಎಂಬ ಪುಸ್ತಕ ಸರಣಿಯಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಬಗ್ಗೆ ಉಲ್ಲೇಖಿಸಲಾಗಿದೆ .
ಯಾರು ಮೇಜರ್ ಮುಕುಂದ್ ವರದರಾಜನ್?
ಮೇಜರ್ ಮುಕುಂದ್ ವರದರಾಜನ್ ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅಶೋಕ ಚಕ್ರ ಪದಕ ಪಡೆದ ಹೆಮ್ಮೆಯ ಸೈನಿಕ. ಜಮ್ಮು ಮತ್ತು ಕಾಶ್ಮೀರದ 44 ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿ ಅವರು ಮಾಡಿದ ಕೆಲಸಗಳಿಗಾಗಿ ಕೇಂದ್ರ ಸರ್ಕಾರ ಮರಣೋತ್ತರ ಅಶೋಕ ಚಕ್ರವನ್ನು ನೀಡಿದೆ. ವರದರಾಜನ್, ರಜಪೂತ್ ರೆಜಿಮೆಂಟ್‌ನಲ್ಲಿ 18 ಮಾರ್ಚ್ 2006 ರಂದು ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡರು. 18 ಅಕ್ಟೋಬರ್ 2008 ರಿಂದ ಕ್ಯಾಪ್ಟನ್ ಆಗಿ ಪ್ರಮೋಷನ್ ಪಡೆದರು. ನಂತರ 18 ಅಕ್ಟೋಬರ್ , 2012 ರಂದು ಮೇಜರ್ ಆಗಿ ಬಡ್ತಿ ನೀಡಿ ಅದೇ ವರ್ಷ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ರೈಫಲ್ಸ್‌ನ 44 ನೇ ಬೆಟಾಲಿಯನ್‌ಗೆ ನಿಯೋಜಿಸಲಾಯಿತು.
ಉಗ್ರರ ಜೊತೆಗಿನ ಹೋರಾಟದಲ್ಲಿ ಆ ದಿನ ನಡೆದದ್ದೇನು?
25 ಏಪ್ರಿಲ್ 2014 ರಂದು ವರದರಾಜನ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ನಡೆಸಿದರು. ಕ್ರಾಸ್‌ಫೈರ್‌ನಲ್ಲಿ ಅವರು ಗಂಭೀರವಾಗಿ ಗಾಯಗೊಂಡರೂ ಭಯೋತ್ಪಾದಕರನ್ನು ನಿಗ್ರಹಿಸುವುದರಿಂದ ಹಿಂದೆ ಸರಿಯಲಿಲ್ಲ. ಕಾರ್ಯಾಚರಣೆ ಮುಗಿಸಿ ಹೊರ ಬಂದಾಗ ಅವರಿಗೆ ಯಾವುದೇ ಅಪಾಯವಾಗಿಲ್ಲ ಎಂಬಂತೆ ಕಂಡುಬಂದರು. ಆದರೆ ಸ್ವಲ್ಪ ಸಮಯದ ನಂತರ ಅವರು ಕುಸಿದುಬಿದ್ದರು. ನಂತರವಷ್ಟೇ ಅವರಿಗೆ 3 ಗುಂಡೇಟು ಬಿದ್ದಿದೆ ಎಂಬುದು ಗೊತ್ತಾಯ್ತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಮುಂಕುಂದ್ ಸಹೋದ್ಯೋಗಿ ಅಂದಿನ ಘಟನೆಯನ್ನು ನೆನೆದಿದ್ದಾರೆ.
ಚಿತ್ರದಲ್ಲಿ ಸಾಯಿ ಪಲ್ಲವಿ ಪಾತ್ರವೇನು?
ಅಮರನ್ ಚಿತ್ರದಲ್ಲಿ ಸಾಯಿ ಪಲ್ಲವಿ ಮುಕುಂದ್ ವರದರಾಜನ್ ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ 2009 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಕ್ಕೂ ಮುನ್ನ ಇಬ್ಬರೂ ಪ್ರೀತಿಯಲ್ಲಿದ್ದರು. 2011 ರಲ್ಲಿ ದಂಪತಿಗೆ ಮಗಳು ಜನಿಸಿದಳು. ಅಮರನ್ ಸಿನಿಮಾದಲ್ಲಿ ನಟಿಸುವ ಮುನ್ನ ಇಂದು ರೆಬೆಕಾ ಅವರನ್ನು ಭೇಟಿಯಾಗಿದ್ದ ಸಾಯಿ ಪಲ್ಲವಿ ಅವರೊಂದಿಗೆ ಕೆಲವು ದಿನ ಕಾಲ ಕಳೆದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ಸೇರಿ ಅಮರನ್ ಸಿನಿಮಾವನ್ನು ನಿರ್ಮಾಣ ಮಾಡಿದೆ. ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.