logo
ಕನ್ನಡ ಸುದ್ದಿ  /  ಕರ್ನಾಟಕ  /  ಅಮೆರಿಕಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಕನ್ನಡಿಗ, ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿದವರು ಯಾರು

ಅಮೆರಿಕಾ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆದ್ದ ಕನ್ನಡಿಗ, ಕರ್ನಾಟಕ ಸರ್ಕಾರಿ ಶಾಲೆಯಲ್ಲಿ ಓದಿ ಈ ಸಾಧನೆ ಮಾಡಿದವರು ಯಾರು

Umesha Bhatta P H HT Kannada

Nov 08, 2024 06:07 PM IST

google News

ಅಮೆರಿಕಾದ ಮಿಚಿಗನ್‌ನಿಂದ ಚುನಾವಣೆ ಕಣದಲ್ಲಿದ್ದು ಗೆದ್ದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್‌ ಅವರು ಅಲ್ಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜತೆ.

    • ದೂರದ ಅಮೆರಿಕಾಕ್ಕೆ ಶಿಕ್ಷಣ ಪಡೆಯಲು ಹೋಗಿ ಅಲ್ಲಿಯೇ ವಿಜ್ಞಾನಿಯಾಗಿ ನಂತರ ಅಧ್ಯಾಪಕರಾಗಿ ನಿವೃತ್ತರಾದ ಕರ್ನಾಟಕದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್(‌ Srinivas Thanedar) ಅವರು  ಸತತ ಎರಡನೇ ಬಾರಿಗೆ ಅಮೆರಿಕಾದ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. 
ಅಮೆರಿಕಾದ ಮಿಚಿಗನ್‌ನಿಂದ ಚುನಾವಣೆ ಕಣದಲ್ಲಿದ್ದು ಗೆದ್ದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್‌ ಅವರು ಅಲ್ಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜತೆ.
ಅಮೆರಿಕಾದ ಮಿಚಿಗನ್‌ನಿಂದ ಚುನಾವಣೆ ಕಣದಲ್ಲಿದ್ದು ಗೆದ್ದ ಚಿಕ್ಕೋಡಿ ಮೂಲದ ಶ್ರೀನಿವಾಸ್‌ ಥಾಣೆದಾರ್‌ ಅವರು ಅಲ್ಲಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಜತೆ.

ಬೆಂಗಳೂರು: ಈಗಷ್ಟೇ ಮುಗಿದ ಪ್ರತಿಷ್ಠಿತ ಹಾಗೂ ಇಡೀ ಜಗತ್ತಿನ ಗಮನ ಸೆಳೆದ ಅಮೆರಿಕದ ಚುನಾವಣೆಯಲ್ಲಿ ಭಾರತೀಯ ಹಿನ್ನೆಲೆಯ ಕಮಲಾ ಹ್ಯಾರಿಸ್‌ ಅಧ್ಯಕ್ಷರ ಹುದ್ದೆಗೆ ಸೋಲು ಅನುಭವಿಸಿರಬಹುದು. ಆದರೆ ಅಮೆರಿಕಾದ ಚುನಾವಣೆಯಲ್ಲಿ ಕರ್ನಾಟಕ ಮೂಲದ ಶ್ರೀನಿವಾಸ ಥಾಣೇದಾರ್‌ ಸತತ ಎರಡನೇ ಬಾರಿಗೆ ಯುಎಸ್‌ ಹೌಸ್‌ ಆಫ್‌ ರೆಪ್ರಸೆಂಟಿಟಿವ್‌ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. ಅವರು ಮಿಚಿಗನ್‌ ಸ್ಟೇಟ್‌ನಿಂದ ಚುನಾಯಿತರಾಗಿ ಬಂದಿದ್ದಾರೆ. ಡೆಮಾಕ್ರಟಿಕ್‌ ಪಕ್ಷದ ಪ್ರತಿನಿಧಿಯಾಗಿ ನಾಲ್ಕು ವರ್ಷದ ಹಿಂದೆ ನಡೆದಿದ್ದ ಚುನಾವಣೆಯಲ್ಲೂ ಜಯಭೇರಿ ಬಾರಿಸಿದ್ದ ಥಾಣೇದಾರ್‌ ಈ ಬಾರಿ ತಮ್ಮ ಪಕ್ಷ ಅಧಿಕಾರಕ್ಕೆ ಬಾರದೇ ಇದ್ದರೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಐದು ದಶಕದ ಹಿಂದೆಯೇ ಅಮೆರಿಕಾಕ್ಕೆ ಹೋಗಿ ಅಲ್ಲಿ ವಿಜ್ಞಾನಿ, ಅಧ್ಯಾಪಕರಾಗಿ ಹೆಸರು ಮಾಡಿದ ಥಾಣೇದಾರ್‌ ಈಗ ರಾಜಕೀಯದಲ್ಲೂ ಸೈ ಎನ್ನಿಸಿಕೊಂಡಿದ್ದಾರೆ.

ಒಕ್ಕೂಟ ತಂದ ಬಲ

ಶ್ರೀನಿವಾಸ್‌ ಥಾಣೇದಾರ್‌ ಅವರು ಅಲ್ಲಿ ಭಾರತ ಮೂಲದ ಜನಪ್ರತಿನಿಧಿಗಳ ಕೂಟ ರಚಿಸಿಕೊಂಡು ಹಿಂದಿನ ಬಾರಿಯಂತೆ ಈ ಬಾರಿಯೂ ಚುನಾವಣೆ ಎದುರಿಸಿದರು.ಐತಿಹಾಸಿಕ ಚುನಾವಣೆಯಲ್ಲಿ, ಆರು ಭಾರತೀಯ ಅಮೆರಿಕನ್ನರು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸ್ಥಾನಗಳನ್ನು ಪಡೆದುಕೊಂಡಿರುವುದು ವಿಶೇಷ. ಅದರಲ್ಲಿ ಏಕೈಕ ಕನ್ನಡಿಗ ಶ್ರೀನಿವಾಸ ಥಾಣೇದಾರ್‌. ವಿಶೇಷ ಎಂದರೆ ಹಿಂದೆ ಇದ್ದ ಭಾರತೀಯ ಮೂಲದವರ ಪ್ರಾತಿನಿಧ್ಯ ಈ ಬಾರಿ ಐದರಿಂದ ಆರಕ್ಕೆ ಹೆಚ್ಚಿಸಿದ್ದಾರೆ.

ಸಮೋಸಾ ಕಾಕಸ್ ಎನ್ನುವ ಹೆಸರಿನಡಿ ಐವರು ಚುನಾವಣೆ ಸ್ಪರ್ಧಿಸಿದ್ದರು. ಅಮಿ ಬೇರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ, ಪ್ರಮೀಳಾ ಜಯಪಾಲ್ ಮತ್ತು ಶ್ರೀನಿವಾಸ ಥಾಣೇದಾರ್-ಯಶಸ್ವಿಯಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡರು.

ಬೆರಾ ಅವರು ತಮ್ಮ ಏಳನೇ ಅವಧಿಯನ್ನು ಪ್ರಾರಂಭಿಸುವ ಮೂಲಕ ಕಾಂಗ್ರೆಸ್‌ನಲ್ಲಿ ಅತ್ಯಂತ ಹಿರಿಯ ಭಾರತೀಯ ಅಮೆರಿಕನ್ ಆಗಿ ಮುಂದುವರಿದಿದ್ದಾರೆ.

ಹೆಚ್ಚುವರಿಯಾಗಿ, ಡಾ. ಅಮಿಶ್ ಷಾ ಅರಿಜೋನಾದ 1ನೇ ಜಿಲ್ಲೆಯಲ್ಲಿ ರಿಪಬ್ಲಿಕನ್ ಪಕ್ಷದ ಡೇವಿಡ್ ಶ್ವೇಕರ್ಟ್ ವಿರುದ್ಧ ಗೆದ್ದಿದಾರೆ.

ಈ ತಂಡಕ್ಕೆ ಹೊಸ ಸೇರ್ಪಡೆ ಸುಹಾಸ್ ಸುಬ್ರಮಣ್ಯಂ ಸುಹಾಸ್‌ ಅವರು ವರ್ಜೀನಿಯಾ ಮತ್ತು ಈಸ್ಟ್ ಕೋಸ್ಟ್‌ನಿಂದ ಚುನಾಯಿತರಾದ ಮೊದಲ ಭಾರತೀಯ ಅಮೆರಿಕನ್ ಆಗಿ ಇತಿಹಾಸ ನಿರ್ಮಿಸಿದರು.

ಅದೇ ರೀತಿ ಥಾಣೇದಾರ್‌ ಕೂಡ ರಿಪಬ್ಲಿಕನ್‌ ಅಭ್ಯರ್ಥಿ ಮಣಿಸಿ ಎರಡನೇ ಬಾರಿ ಗೆದ್ದಿರುವುದು ವಿಶೇಷ.

ಚಿಕ್ಕೋಡಿ ಮೂಲದವರು

ಚಿಕ್ಕೋಡಿ ಮೂಲದ ಥಾಣೆದಾರ್‌ ಕುಟುಂಬದ ಶ್ರೀನಿವಾಸ ಅವರು ಬೆಳಗಾವಿಯ ಮೀರಾಪುರ್‌ ಗಲ್ಲಿಯಲ್ಲಿ ಹುಟ್ಟಿ ಬೆಳದವರು. ಅವರ ತಂದೆ ಇಲ್ಲಿ ಸರ್ಕಾರಿ ನೌಕರರರಾಗಿದ್ದರು. ಆದರೆ ಶ್ರೀನಿವಾಸ್‌ ಅವರು ಭಾರತದಲ್ಲಿ ಆರಂಭಿಕ ಶಿಕ್ಷಣ ಪಡೆದರು ಹೆಚ್ಚು ಸಮಯ ಕಳೆದಿರುವುದು ಅಮೆರಿಕಾದಲ್ಲಿಯೇ.

ಬೆಳಗಾವಿಯ ಮೀರಾಪುರಗಲ್ಲಿಯಲ್ಲಿ ಬಾಲ್ಯ ಕಳೆದಿದ್ದ ಥಾಣೇಧಾರ್ ಬೆಳಗಾವಿಯ ಚಿಂತಾಮನ್ ರಾವ್ ‌ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ.

ಬಳಿಕ ಕರ್ನಾಟಕ ವಿವಿಯಲ್ಲಿ ಬಿಎಸ್‌ಸಿ ಪದವಿ, ಮುಂಬೈ ವಿವಿಯಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ. ಉನ್ನತ ವ್ಯಸಾಂಗಕ್ಕೆ 1979 ರಲ್ಲಿ ಅಮೆರಿಕಕ್ಕೆ ತೆರಳಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಅವರು ಅಮೇರಿಕದ ಮಿಚಿಗನ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಉದ್ಯಮದಿಂದ ರಾಜಕಾರಣದವರೆಗೆ

ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ ಉದ್ಯಮಿಯಾಗಿ ತಮ್ಮ ಬದುಕು ಮುಂದುವರೆಸಿದ್ದ ಥಾಣೇದಾರ್ ನಂತರ ಅಮೇರಿಕಾದ ಸಂಸತ್ ಪ್ರತಿನಿಧಿಯಾಗಿದ್ದು ತಮ್ಮ ಸೇವಾಪರತೆ ಹಾಗೂ ಸಮಾಜ ಮುಖಿ ಚಟುವಟಿಕೆಗಳಿಂದ. ಈಗಲೂ ಅವರ ಕುಟುಂಬದ ಬೇರುಗಳು ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿದ್ದರೂ ಶ್ರೀನಿವಾಸ್‌ ಅವರು ಅಮೆರಿಕಾ ಪ್ರಜೆಯಾಗಿ ಅಲ್ಲಿನ ಪ್ರತಿನಿಧಿಯಾಗಿ ಸತತವಾಗಿ ಆಯ್ಕೆಯಾಗಿರುವುದು ಈ ಭಾಗದವರಿಗೂ ಖುಷಿ ತಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ