ಬೆಳಗಾವಿ ಹೋಟೆಲ್‌ ಕ್ಲೀನರ್‌ ಆಗಿದ್ದ ವ್ಯಕ್ತಿ ಈಗ ಅಮೆರಿಕದ ರಾಜಕಾರಣಿ, ಜನಪ್ರಿಯ ಉದ್ಯಮಿ; ಥಾನೆದಾರ್‌ ಯಶೋಗಾಥೆ ಬರೆದ ರಂಗಸ್ವಾಮಿ ಮೂಕನಹಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಳಗಾವಿ ಹೋಟೆಲ್‌ ಕ್ಲೀನರ್‌ ಆಗಿದ್ದ ವ್ಯಕ್ತಿ ಈಗ ಅಮೆರಿಕದ ರಾಜಕಾರಣಿ, ಜನಪ್ರಿಯ ಉದ್ಯಮಿ; ಥಾನೆದಾರ್‌ ಯಶೋಗಾಥೆ ಬರೆದ ರಂಗಸ್ವಾಮಿ ಮೂಕನಹಳ್ಳಿ

ಬೆಳಗಾವಿ ಹೋಟೆಲ್‌ ಕ್ಲೀನರ್‌ ಆಗಿದ್ದ ವ್ಯಕ್ತಿ ಈಗ ಅಮೆರಿಕದ ರಾಜಕಾರಣಿ, ಜನಪ್ರಿಯ ಉದ್ಯಮಿ; ಥಾನೆದಾರ್‌ ಯಶೋಗಾಥೆ ಬರೆದ ರಂಗಸ್ವಾಮಿ ಮೂಕನಹಳ್ಳಿ

ಬೆಳಗಾವಿ ಮೂಲದ ಸಾಮಾನ್ಯ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಉದ್ಯಮಿಯಾಗಿ, ಅಮೆರಿಕ ಕಾಂಗ್ರೆಸ್‌ ಸದಸ್ಯನಾಗಿ ಇದೀಗ ಜಿ20ಗೆ ಅಮೆರಿಕದ ನಿಯೋಗದ ಸದಸ್ಯರಾಗಿ ಆಗಮಿಸಿದ ಚಿತ್ರಣವನ್ನು ರಂಗಸ್ವಾಮಿ ಮೂಕನಹಳ್ಳಿ ಕಟ್ಟಿಕಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷರ ಜತೆಗೆ ಶ್ರೀ ಥಾನೆದಾರ್
ಅಮೆರಿಕದ ಅಧ್ಯಕ್ಷರ ಜತೆಗೆ ಶ್ರೀ ಥಾನೆದಾರ್

ಬೆಂಗಳೂರು: ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಇಂದಿನ ಸೋಷಿಯಲ್‌ ಮೀಡಿಯಾ ರೌಂಡ್‌ಅಪ್‌ನಲ್ಲಿ ಕೆಸರಿನಲ್ಲಿ ಅರಳಿದ ಕಮಲಗಳು-1 ಲೇಖನವನ್ನು ಪ್ರಕಟಿಸಲಾಗಿದೆ. ಫೇಸ್‌ಬುಕ್‌ನಲ್ಲಿ ರಂಗಸ್ವಾಮಿ ಮೂಕನಹಳ್ಳಿ ಆರಂಭಿಸಿದ ಈ ಸರಣಿ ಲೇಖನವು ಬೆಳಗಾವಿ ಮೂಲದ ಥಾನೆದಾರ್‌ ಕುರಿತು ಸಾಕಷ್ಟು ಮಾಹಿತಿ ನೀಡುತ್ತದೆ. ಥಾನೆದಾರ್‌ ಅವರು ಬಾಲ್ಯದ ಹಲವು ಕಷ್ಟಗಳ ನಡುವೆ ಸಾಕಷ್ಟು ಸಾಧನೆ ಮಾಡಿ, ಉದ್ಯಮದಲ್ಲಿ ಯಶಸ್ಸು ಕಂಡು, ಅಮೆರಿಕಾ ಕಾಂಗ್ರೆಸ್‌ ಸದಸ್ಯರಾಗಿ, ಇದೀಗ ಭಾರತದಲ್ಲಿ ನಡೆಯುತ್ತಿರುವ ಜಿ20 ಸಭೆಗೆ ಅಮೆರಿಕದ ಅಧ್ಯಕ್ಷರ ನಿಯೋಗದ ಸದಸ್ಯರಾಗಿ ಆಗಮಿಸಿದ್ದಾರೆ.

ಕೆಸರಿನಲ್ಲಿ ಅರಳಿದ ಕಮಲಗಳು -1

ಈ ಬಾರಿಯ ಜಿ -20 ಸಭೆಯಲ್ಲಿನ ಹಣಕಾಸು ವಹಿವಾಟುಗಳ ಬಗ್ಗೆ ಬರೆಯುವುದು ಇದ್ದೆ ಇದೆ . ಆದರೆ ನನಗೆ ಅತೀವ ಖುಷಿ ಕೊಡುತ್ತಿರುವುದು ಭಾರತದ ಪುಟಾಣಿ ನಗರಗಳಲ್ಲಿ ಹುಟ್ಟಿ , ಅಮೆರಿಕಾದ ಕಾಂಗ್ರೆಸ್ ಸದಸ್ಯರಾಗುವ ಹಂತಕ್ಕೆ ಬೆಳೆದಿರುವ , ಉದ್ಯಮಿಗಳಾಗಿರುವ , ಅಲ್ಲಿನ ನೆಲಕ್ಕೆ ಬೆಂಬಲವಾಗಿ ನಿಂತಿರುವ ಸೆಲ್ಫ್ ಮೇಡ್ ವ್ಯಕ್ತಿಗಳ ಬಗ್ಗೆ . ಇವತ್ತು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಇವರೇನೋ ಭಾರತವನ್ನು ಉದ್ದಾರ ಮಾಡುತ್ತಾರೆ ಎಂದಲ್ಲ. ಆದರೆ ಅವರ ಮೂಲದ ಬಗ್ಗೆ ಮನಸ್ಸಿನಲ್ಲಿ ಒಂದಷ್ಟು ಮೃದು ಭಾವನೆ ಇದ್ದೆ ಇರುತ್ತದೆ. ಅಷ್ಟು ಸಾಕು .

ಶ್ರೀ ಥಾನೆದಾರ್ ನಮ್ಮ ಕರ್ನಾಟಕದ ಬೆಳಗಾಂನವರು . ಬದುಕು ಕಲ್ಲು ಮುಳ್ಳುಗಳ ಹಾದಿಯಾಗಿತ್ತು. ಫೆಬ್ರವರಿ 2, 1955ರಲ್ಲಿ ಜನನ. ಇವರ ತಂದೆಗೆ 55 ವರ್ಷವಿದ್ದಾಗ ಕೆಲಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಥಾನೆದಾರ್ ಹೋಟೆಲ್‌ನಲ್ಲಿ ಕ್ವೀನರ್ ಸಹಿತ ಅನೇಕ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಎಂಟು ಜನರ ಮನೆಯ ಬಂಡಿ ಎಳೆಯಲು ಪುಟಾಣಿ ಹೆಗಲನ್ನು ನೀಡುತ್ತಾರೆ.

ಬಡತನ ಓದುವ ಹಂಬಲಕ್ಕೆ ಅಡ್ಡಿಯಾಗುವುದಿಲ್ಲ. 1979ರಲ್ಲಿ ಅಮೆರಿಕಾದ ಯೂನಿವೆರ್ಸಿಟಿ ಆಫ್ ಅಕ್ರೋನ್ ನಲ್ಲಿ ಪಿಎಚ್‌ಡಿ ಪದವಿಯನ್ನು ಪಡೆಯಲು ಅಮೇರಿಕಾ ದೇಶಕ್ಕೆ ಹೋಗುತ್ತಾರೆ. ನಂತರದ್ದು ತಕ್ಷಣದ ಯಶೋಗಾಥೆಯಲ್ಲ! 82ರಲ್ಲಿ ಡಾಕ್ಟ್ರೇಟ್ ಪದವಿಯನ್ನು ಪಡೆಯುತ್ತಾರೆ. ಕೆಮಿರ್ ಎನ್ನುವ ಸಂಸ್ಥೆಯಲ್ಲಿ ಗಂಟೆಗೆ 15 ಡಾಲರ್ ವೇತನಕ್ಕೆ ಕೆಲಸ ಮಾಡಲು ಶುರು ಮಾಡುತ್ತಾರೆ. ವಾರಾಂತ್ಯದಲ್ಲಿ , ಹಲವು ರಾತ್ರಿ ಪಾಳಿಗಳಲ್ಲಿ ಇಲ್ಲಿ ಕೆಲಸ ಮಾಡುತ್ತಾರೆ. ಬಿಸಿನೆಸ್ ಹೇಗೆ ನಡೆಯುತ್ತದೆ ಎನ್ನುವುದರ ಬಗ್ಗೆ ಅವರಿಗೆ ಅರಿವು ಮೂಡುತ್ತದೆ. 1991 ರಲ್ಲಿ75 ಸಾವಿರ ಡಾಲರ್ ಸಾಲ ಪಡೆದು ತಾವು ಯಾವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೋ ಅದೇ ಸಂಸ್ಥೆಯನ್ನು ಕೆಮರ್ ಖರೀದಿಸುತ್ತಾರೆ.

ಮೊದಲ ವರ್ಷದ ಟರ್ನ್ ಓವರ್ ಒಂದೂವರೆ ಲಕ್ಷ ಡಾಲರ್. ಮೂವರು ಕೆಲಸಗಾರರ ಸಂಸ್ಥೆ 2005 ರ ವೇಳೆಗೆ 16 ಮಿಲಿಯನ್ ಡಾಲರ್ ವಹಿವಾಟು ನಡೆಸಿ , 160 ಕೆಲಸಗಾರರನ್ನು ಹೊಂದುವ ಮಟ್ಟಕ್ಕೆ ಬೆಳೆಯುತ್ತದೆ. ನಂತರದ್ದು ಇನ್ನೊಂದು ಕಥೆ 24 ಮಿಲಿಯನ್ ಹಣವನ್ನು ಸಾಲವನ್ನಾಗಿ ತೆಗೆದುಕೊಂಡು ಅಝೋ ಫಾರ್ಮ ಜೊತೆಗೆ ಏಳು ಹೊಸ ಅಕ್ವಿಸಿಷನ್ ಗೆ ಮುಂದಾಗುತ್ತಾರೆ. ಸಾವಿರಾರು ಕೆಲಸವನ್ನು ಸೃಷ್ಟಿಸುತ್ತಾರೆ. ಕೆಲವು ಬಿಸಿನೆಸ್ ಮುಚ್ಚುತ್ತಾರೆ , ಕೆಲವು ಮಾರುತ್ತಾರೆ. ಕೊನೆಗೆ 2018 ರಲ್ಲಿ ತಮ್ಮ 63 ರ ಹರಯದಲ್ಲಿ ರಾಜಕೀಯ ಪ್ರವೇಶಿಸುತ್ತಾರೆ. ಮಿಚಿಗನ್‌ನಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕೆ ಅಮೇರಿಕಾ ಅಧ್ಯಕ್ಷರ ಜೊತೆಗೆ ಜಿ-20 ಕ್ಕೆ ಬಂದಿರುವ ನಿಯೋಗದಲ್ಲಿ ಇವರು ಒಬ್ಬರು.

ಬದುಕು ಅಚ್ಚರಿಗಳ ಆಗರ. ಬಾಂಬೆ , ಬೆಳಗಾಂನಲ್ಲಿನ ಯಾವುದೋ ಅನಾಮಧೇಯ ಹೋಟೆಲ್‌ನಲ್ಲಿ ಟೇಬಲ್ ಸ್ವಚ್ಛ ಮಾಡುತ್ತಿದ್ದ ಹುಡುಗನೊಬ್ಬ ಅಮೇರಿಕಾ ಕಾಂಗ್ರೆಸ್ ಸದಸ್ಯನಾಗುವ ಮಟ್ಟಕ್ಕೆ , ಬಿಸಿನೆಸ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ಪಡೆಯುವ ಹಂತಕ್ಕೆ ಬೆಳೆಯಲು ಸಾಧ್ಯ ಎಂದರೆ , ಬದುಕಿನಲ್ಲಿ ಎಲ್ಲವೂ ಸಾಧ್ಯ. ನಮಗೇನು ಬೇಕು ? ನಾವೇನಾಗಬೇಕು ? ಈ ಬದುಕಿನಿಂದ ನನ್ನ ನಿರೀಕ್ಷೆಯೇನು ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಸಾಕು. ಪ್ರಯತ್ನ , ಛಲ , ಒಂದಷ್ಟು ಸಂಯಮ ಜೊತೆಯಾಗಿಬಿಟ್ಟರೆ ಉಳಿದದ್ದು ಸಮಯದ ಕೂಸು .

ಅಂದಹಾಗೆ ಶ್ರೀ ಥಾನೆದಾರ್ ಅಮೇರಿಕಾ ಹಿಂದೂ ಒಕ್ಕೊಟದಲ್ಲಿ ಹಿಂದೂ ಆಚರಣೆಯನ್ನು , ಹಿಂದುಗಳ ಬಗ್ಗೆ ತಾರತಮ್ಯ ಮಾಡುವುದರ ಬಗ್ಗೆ ದೊಡ್ಡ ದನಿಯಾಗಿದ್ದಾರೆ. ನಮ್ಮ ಆಚರಣೆಯನ್ನು ನಾವು ಪಾಲಿಸಲು ಸ್ವಂತಂತ್ರರು . ಅದು ಬೇಕು . ನಾವು ಬೇರೆಯವರ ನಂಬಿಕೆಯನ್ನು ಗೌರವಿಸುತ್ತೇವೆ. ಆದರೆ ನಾವು ಹಿಂದೂ ಎನ್ನುವ ಹೆಮ್ಮೆ , ಆಚರಣೆಯನ್ನು ಬಿಡಲಾಗದು. ಅಮೇರಿಕಾದಲ್ಲಿ ಹಿಂದುಗಳನ್ನು ಕೀಳಾಗಿ ಕಾಣಲು ಬಿಡುವುದಿಲ್ಲ ಎನ್ನುವುದು ಇವರ ಮಾತು. ಯಾವುದೇ ಡಿಸ್ಕ್ರಿಮಿನೇಷನ್ ಸಲ್ಲದು ಎನ್ನುವ ನಿಲುವು ಇವರದು.

ಅಯ್ಯೋ ನಾನು ಇಲ್ಲಿಯವನು , ನನ್ನ ಮೂಲ ಇಲ್ಲಿದೆ . ನಾನು ಅಲ್ಲಿಗೆ ಹೋಗಿದ್ದರೂ , ಅಲ್ಲಿಯವನಾಗಿದ್ದರೂ , ಇಲ್ಲಿನ ನೆನಪನ್ನು ಅಳಿಸಲಾಗುವುದಿಲ್ಲ ಎನ್ನುವ ಮಾತು , ನಾವೆಷ್ಟೇ ಎತ್ತರಕ್ಕೇರಲಿ ನಮ್ಮ ಮೂಲವನ್ನು ಎಂದಿಗೂ ಮರೆಯಬಾರದು ಎನ್ನುವ ಪಾಠವನ್ನು ಕಲಿಸುತ್ತದೆ.

- ರಂಗಸ್ವಾಮಿ ಮೂಕನಹಳ್ಳಿ

 

Whats_app_banner