logo
ಕನ್ನಡ ಸುದ್ದಿ  /  ಕರ್ನಾಟಕ  /  ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು

ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು

Umesh Kumar S HT Kannada

Feb 17, 2024 07:07 AM IST

google News

ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು ಎಂಬುದರ ವಿವರಣೆ ಇದರಲ್ಲಿದೆ.

  • ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷದವರ ಟೀಕೆ ವ್ಯಾಪಕವಾಗಿದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ದಕ್ಕಿ ಲಕ್ಕಮನ ವಚನವನ್ನೇ ಉತ್ತರವಾಗಿ ಬಜೆಟ್ ಭಾಷಣದಲ್ಲಿ ನೀಡಿದ್ದರು. ಹಾಗಾದರೆ, ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು.

ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು ಎಂಬುದರ ವಿವರಣೆ ಇದರಲ್ಲಿದೆ.
ಆಯ್ದಕ್ಕಿ ಲಕ್ಕಮ್ಮ ಯಾರು; ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು ಎಂಬುದರ ವಿವರಣೆ ಇದರಲ್ಲಿದೆ. (Honalu / Karnataka CM Office)

ಬೆಂಗಳೂರು: ಕರ್ನಾಟಕ ಸರ್ಕಾರ ಜಾರಿಗೊಳಿಸಿದ 5 ಗ್ಯಾರೆಂಟಿ ಯೋಜನೆಗಳ ವಿಚಾರವನ್ನು ರಾಜ್ಯ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟೀಕೆಗಳಿಗೆ ಉತ್ತರವಾಗಿ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವಚನವನ್ನು ಉಲ್ಲೇಖಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆ.16) ಬಜೆಟ್ ಮಂಡಿಸುತ್ತ, "ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕನ್ನು ಮುಚ್ಚಿಹಾಕಲು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿರುವುದು ವಿಪರ್ಯಾಸ. ಇಂತಹ ಟೀಕೆಗಳಿಗೆ ನಾನಲ್ಲ; ಶರಣರೇ ಉತ್ತರ ನೀಡಿದ್ದಾರೆ ನೋಡಿ ಎಂದು ಆಯ್ದಕ್ಕಿ ಲಕ್ಕಮ್ಮ ಅವರ ವಚನವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

ಮನ ಶುದ್ಧವಿಲ್ಲದವಂಗೆ

ದ್ರವ್ಯದ ಬಡತನವಲ್ಲದೆ

ಚಿತ್ತಶುದ್ಧದಲ್ಲಿ ಕಾಯಕವ

ಮಾಡುವಲ್ಲಿ ಸದ್ಭಕ್ತಂಗೆ ಎತ್ತ

ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ

- ಆಯ್ದಕ್ಕಿ ಲಕ್ಕಮ್ಮ

ಯಾರು ಈ ಆಯ್ದಕ್ಕಿ ಲಕ್ಕಮ್ಮ, ಇಲ್ಲಿದೆ ಕಿರುಪರಿಚಯ

ಸಾಹಿತ್ಯ ಚರಿತ್ರಕಾರರು ದಾಖಲಿಸಿದ ವಿವರಗಳ ಪ್ರಕಾರ ಆಯ್ದಕ್ಕಿ ಲಕ್ಕಮ್ಮ ಕನ್ನಡ ನಾಡಿನ ಶಿವಶರಣೆ. ಹನ್ನೆರಡನೇ ಶತಮಾನದಲ್ಲಿದ್ದವರು. ಅವರ ಊರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಅಮರೇಶ್ವರ ಗ್ರಾಮ. ಪತಿ ಆಯ್ದಕ್ಕಿ ಮಾರಯ್ಯ.

ಅವರ ಹೆಸರಿನಲ್ಲಿರುವ ಆಯ್ದಕ್ಕಿ ಎಂಬುದು ಅವರ ವೃತ್ತಿಯನ್ನು ಸೂಚಿಸುತ್ತದೆ. ಆಯ್ದಕ್ಕಿ ಮಾರಯ್ಯ ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯ ಅಂಗಳದಲ್ಲಿ ಬಿದ್ದ ಅಕ್ಕಿಯನ್ನು ಆಯ್ದುಕೊಂಡು ಬಂದು ಅದರಿಂದ ತಿನಿಸುಗಳನ್ನು ತಯಾರಿಸಿ ಶಿವ ಶರಣ ಶರಣೆಯರಿಗೆ ದಾಸೋಹ ಪೂರೈಸುತ್ತಿದ್ದರು.

ಇಲ್ಲಿ ದಾಸೋಹ ಎಂದರೆ ಜಂಗಮರ ಸೇವೆ ಅರ್ಥಾತ್‌ ಹಸಿದು ಬಂದವರಿಗೆ ಅನ್ನದಾನ ಮಾಡುವುದು ಎಂದರ್ಥ. ಮಹಾಮನೆಯ ಅಂಗಳದಲ್ಲಿ ಬಿದ್ದ ಅಕ್ಕಿ ಎಂಬುದು ಸಾಂಕೇತಿಕವಾಗಿ ಬಳಕೆಯಾಗುತ್ತಿದೆ. ಭತ್ತ/ರಾಗಿ ಮುಂತಾದ ಬೆಳೆ ಕೊಯ್ಲಿನ ಬಳಿಕ ಒಣಗಿಸಿ ಹೊರೆಗಳನ್ನು ಕಟ್ಟುವಾಗ, ಅದರಿಂದ ಬಿದ್ದ ತೆನೆಯನ್ನು ಅಕ್ಕಲು ಎನ್ನುತ್ತಾರೆ. ಊರಿನ ಬಡವರು ಈ ಅಕ್ಕಲನ್ನು ಆಯ್ದುಕೊಂಡು ಬಂದು ಹೊಟ್ಟೆಪಾಡು ನೀಗಿಸುತ್ತಾರೆ. ಈ ರೀತಿ ಬಿದ್ದ ಅಕ್ಕಲನ್ನು ಆಯ್ದುಕೊಳ್ಳುವುದಕ್ಕೆ ಅಕ್ಕಲಾಯವುದು ಎನ್ನುತ್ತಾರೆ. ಅಕ್ಕಿ ಆಯುವವರನ್ನು ಆಯ್ದಕ್ಕಿ ತರುವವರು ಎನ್ನುವ ಕಾರಣಕ್ಕೆ ಅವರ ಹೆಸರಿನ ಮುಂದೆ ಅದನ್ನು ಸೇರಿಸುವ ಪದ್ಧತಿ ಚಾಲ್ತಿಗೆ ಬಂದಿರಬಹುದು ಎನ್ನುತ್ತಾರೆ ಚರಿತ್ರೆಕಾರರು.

ಆಯ್ದಕ್ಕಿ ಎಂಬ ಹೆಸರು ಮಾರಯ್ಯ ಮತ್ತು ಲಕ್ಕಮ್ಮಗೆ ಹೇಗೆ ಬಂತು

ಬಸವಣ್ಣನವರ ಮಹಾಮನೆಗೆ ನಿತ್ಯವೂ ಶಿವಶರಣ, ಶಿವಶರಣೆಯರು ಬರುತ್ತಿದ್ದರು. ಅವರಿಗೆ ದಾಸೋಹವೂ ನಡೆಯುತ್ತಿತ್ತು. ಆಗ ಅಲ್ಲಿ ಹರಡಿಕೊಂಡಂತೆ ನೆಲದ ಮೇಲೆ ಬಿದ್ದ ಅಕ್ಕಿಯನ್ನು ಆಯ್ದು ತರುತ್ತಿದ್ದ ಮಾರಯ್ಯನಿಗೆ ಆಯ್ದಕ್ಕಿ ಮಾರಯ್ಯ ಎಂಬ ಹೆಸರು ಕಾಯಂ ಆಯಿತು. ಲಕ್ಕಮ್ಮ ಕೂಡ ಅಕ್ಕಿ ಆಯುತ್ತಿದ್ದ ಕಾರಣ ಆಯ್ದಕ್ಕಿ ಲಕ್ಕಮ ಆದರು.

ಮೂಲತಃ ಅಮರೇಶ್ವರ ಗ್ರಾಮದವರಾದರೂ ಈ ದಂಪತಿಗೆ ಬಸವಣ್ಣವರ ಸಾಮಾಜಿಕ ಕಾರ್ಯಗಳು ಇಷ್ಟವಾಗಿದ್ದವು. ಹೀಗಾಗಿ ತಮ್ಮಿಂದಾದ ಸೇವೆ ಮಾಡುವುದಕ್ಕಾಗಿ ಅವರೂ ಕಲ್ಯಾಣಪಟ್ಟಣಕ್ಕೆ ಬಂದು ಉಳಿದಿದ್ದರು. ಆಯ್ದಕ್ಕಿ ಲಕ್ಕಮ್ಮ ರಚಿಸಿರುವ ವಚನಗಳ ನಿಖರ ಸಂಖ್ಯೆ ಸಿಕ್ಕಿಲ್ಲ. ಆದರೆ ಲಭ್ಯವಿರುವ ವಚನಗಳ ಸಂಖ್ಯೆ 25. ಅವರ ವಚನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಕಿತ ನಾಮ ಮಾರಯ್ಯ ಪ್ರಿಯ ಅಮರೇಶ್ವರಲಿಂಗ.

ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿದ ವಚನದ ನಿಜಾರ್ಥವೇನು

‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ಚಿತ್ತ ಶುದ್ಧದಲ್ಲಿ ಕಾಯಕವ ಮಾಡುವಲ್ಲಿ

ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ.’

ಈ ವಚನದಲ್ಲಿ ಆಯ್ದಕ್ಕಿ ಲಕ್ಕಮ್ಮನು ‘ಕಾಯಕಯುಕ್ತ ಭಕ್ತಿ’ ಸಿದ್ಧಾಂತದ ವಿವರಣೆ ನೀಡಿದ್ದಾರೆ. ಭಕ್ತಿಯಿಲ್ಲದ ಕಾಯಕ ಮತ್ತು ಕಾಯಕವಿಲ್ಲದ ಭಕ್ತಿಅರ್ಥಹೀನ ಎಂದು ಭಾವಿಸಿದ್ದವರು ಆಯ್ದಕ್ಕಿ ಲಕ್ಕಮ್ಮ. ಕಾಯಕದಿಂದ ಮಾತ್ರವೇ ಭಕ್ತಿಗೆ ಶಕ್ತಿ ಪ್ರಾಪ್ತವಾಗುತ್ತದೆ. ಕಾಯಕವಿಲ್ಲದವನ ಭಕ್ತಿ ವ್ಯರ್ಥ ಎಂಬುದನ್ನು ಲಕ್ಕಮ್ಮ ಪ್ರತಿಪಾದಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ