ಕರ್ನಾಟಕ ಬಜೆಟ್ 2024; 5 ಗ್ಯಾರಂಟಿ ಯೋಜನೆಗಳಿಗೆ 52000 ಕೋಟಿ ರೂ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಆಯ್ದಕ್ಕಿ ಲಕ್ಕಮ್ಮನ ವಚನವೇ ಟೀಕೆಗೆ ಉತ್ತರ
ಕರ್ನಾಟಕ ಬಜೆಟ್ 2024: 5 ಗ್ಯಾರೆಂಟಿ ಯೋಜನೆಗಳಿಗೆ 52000 ಕೋಟಿ ರೂಪಾಯಿ ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ, ಆಯ್ದಕ್ಕಿ ಲಕ್ಕಮ್ಮನ ವಚನವೇ ಟೀಕೆಗೆ ಉತ್ತರ ಎಂದು ಹೇಳಿದರು. ಸಾಮಾಜಿಕ ಭದ್ರತಾ ದೃಷ್ಟಿಯಿಂದ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾಗಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಬೆಂಗಳೂರು: ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ ಎಂಬಿತ್ಯಾದಿ ಟೀಕೆಗಳನ್ನು ಎದುರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ (ಕರ್ನಾಟಕ ಬಜೆಟ್ 2024) ಮಂಡಿಸುವಾಗ ಆರಂಭದಲ್ಲೇ ಅದಕ್ಕೆ ಉತ್ತರ ನೀಡಿದ್ದರು. ಟೀಕೆಗಳಿಗೆ ಉತ್ತರಿಸಲು ಅವರು ವಚನವನ್ನು ಬಳಸಿಕೊಂಡದ್ದು ವಿಶೇಷ.
ಐದು ಗ್ಯಾರಂಟಿಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ 2024-25 ರಲ್ಲಿ 52,000 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ. ಈ ಹಣವನ್ನು ಕೋಟ್ಯಂತರ ಜನರಿಗೆ ಹಂಚಿಕೆ ಮಾಡಲಾಗುತ್ತದೆ. ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕ 50,000 ದಿಂದ 55,000 ರೂಪಾಯಿ ಹಂಚಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಸಾಮಾಜಿಕ ಭದ್ರತಾ ದೃಷ್ಟಿಯುಳ್ಳ ಗ್ಯಾರೆಂಟಿ ಯೋಜನೆಗಳು
ಸಾಮಾಜಿಕ ಭದ್ರತಾ ದೃಷ್ಟಿಯುಳ್ಳ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದಕ್ಕಾಗಿ ಇಡೀ ಜಗತ್ತು ನಮ್ಮತ್ತ ಮೆಚ್ಚುಗೆಯ ನೋಟ ಬೀರಿದೆ. ಸಮಯ ಕಳೆದಂತೆ ಇದರ ಆರ್ಥಿಕ ಮತ್ತು ಸಾಮಾಜಿಕ ಅನುಕೂಲಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸಲಿವೆ. ಹಲವು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ನಮ್ಮ ಕೆಲಸದ ಅಧ್ಯಯನ ನಡೆಸಿ, ಶ್ಲಾಘಿಸಿವೆ. ಆದರೆ ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆ ದೃಢವಾಗಲು ಕೇವಲ ಈ ಅಧ್ಯಯನಗಳಷ್ಟೇ ಕಾರಣವಲ್ಲ.
ಶಕ್ತಿ ಯೋಜನೆಯ ಫಲಾನುಭವಿಯಾಗಿ ಬಸ್ ಹತ್ತುವ ಮುನ್ನ ತಲೆಬಾಗಿ ನಮಸ್ಕರಿಸಿದ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಲಕ್ಷಾಂತರ ಮಹಿಳೆಯರ ಪ್ರಾರ್ಥನೆ, ಯುವನಿಧಿ ಯೋಜನೆಯ ಫಲಾನುಭವಿಯಾಗಿ ನೆರವು ಪಡೆದ ನಿರುದ್ಯೋಗಿ ಯುವಕನ ಆನಂದಬಾಷ್ಪ ಮುಂತಾದವು ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಅಭಿವೃದ್ಧಿಯ ಫಲವನ್ನು ಅದರ ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂತಿರುಗಿಸುವುದರಲ್ಲಿ ಅನನ್ಯವಾದ ಸಂತೃಪ್ತಿ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಗ್ಯಾರೆಂಟಿ ಯೋಜನೆಗಳು ಬಿಟ್ಟಿ ಭಾಗ್ಯಗಳಲ್ಲ ಎಂದ ಸಿಎಂ ಸಿದ್ದರಾಮಯ್ಯ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನ ಒದಗಿಸುವ ಗ್ಯಾರೆಂಟಿ ಯೋಜನೆಗಳನ್ನು ವಿರೋಧಿಗಳು ವಿನಾ ಕಾರಣ ಟೀಕಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಬಣ್ಣಿಸುತ್ತಿರುವ ವಿರೋಧಿಗಳು, ರಾಜ್ಯ ದಿವಾಳಿಯಾಗಿದೆ, ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆ ಮೂಲಕ ನಮ್ಮ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ತೋಡಿಕೊಂಡರು.
ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕನ್ನು ಮುಚ್ಚಿಹಾಕಲು ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿರುವುದು ವಿಪರ್ಯಾಸ. ಇಂತಹ ಟೀಕೆಗಳಿಗೆ ನಾನಲ್ಲ; ಶರಣರೇ ಉತ್ತರ ನೀಡಿದ್ದಾರೆ ನೋಡಿ ಎಂದು ಆಯ್ದಕ್ಕಿ ಲಕ್ಕಮ್ಮ ಅವರ ವಚನವನ್ನು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ
- ಆಯ್ದಕ್ಕಿ ಲಕ್ಕಮ್ಮ
ಈ ವಚನದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಡಿದರು. ಗ್ಯಾರೆಂಟಿ ಯೋಜನೆ ಮೇಲೆ ತಮ್ಮ ನಂಬಿಕೆ ಕಳೆದುಹೋಗಿಲ್ಲ ಎಂದು ಸ್ಪಷ್ಟಪಡಿಸುತ್ತ, ಅದಕ್ಕೆ ಅನುದಾನವನ್ನೂ ಮೀಸಲಿಟ್ಟಿರುವುದಾಗಿ ಘೋಷಿಸಿದರು.
(This copy first appeared in Hindustan Times Kannada website. To read more like this please logon to kannada.hindustantimes.com)