ಕರ್ನಾಟಕ ಬಜೆಟ್ 2024; ಅನ್ನಭಾಗ್ಯ ಪ್ರಶಂಸಿಸುತ್ತ ಅನ್ನ ಸುವಿಧಾ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ; ಏನಿದು ಹೊಸ ಯೋಜನೆ
ಕರ್ನಾಟಕ ಬಜೆಟ್ 2024: ಹಿಂದಿನ ಅವಧಿಯಲ್ಲಿ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಮುಂದುವರಿಸಲಾಗಿದೆ ಎಂದು ಪ್ರಶಂಸಿಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ಸುವಿಧಾ ಯೋಜನೆ ಘೋಷಿಸಿದರು. ಏನಿದು ಹೊಸ ಯೋಜನೆ. ಇಲ್ಲಿದೆ ವಿವರ.
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತ, ಅನ್ನ ಸುವಿಧಾ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ (ಫೆ.16) ಘೋಷಣೆ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಕರ್ನಾಟಕ ಬಜೆಟ್ 2024 ಮಂಡಿಸುತ್ತ ಈ ವಿಚಾರ ಪ್ರಕಟಿಸಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಕುರಿತಾದ ವಿವರ ನೀಡುತ್ತ, ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಕನಸಿನೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಉಚಿತ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿತ್ತು. ಈ ಬಾರಿ ನಾವು ನೀಡಿದ್ದ ಭರವಸೆಯಂತೆ ಹೆಚ್ಚುವರಿಯಾಗಿ ಐದು ಕೆ.ಜಿ. ಆಹಾರ ಧಾನ್ಯ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಆದಾಗ್ಯೂ ಕೇಂದ್ರ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಅಕ್ಕಿ ಲಭ್ಯವಾಗದ ಕಾರಣ, ನಮ್ಮ ಸರ್ಕಾರವು ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿ ರೀತಿ ಪ್ರತಿ ತಿಂಗಳು 170 ರೂಪಾಯಿಯನ್ನು ನೇರ ನಗದು ವರ್ಗಾವಣೆ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಜನವರಿ 2024ರ ಅಂತ್ಯದವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅನ್ನ ಸುವಿಧಾ ಎಂಬ ಹೊಸ ಯೋಜನೆ ಘೋಷಣೆ
ಅನ್ನಭಾಗ್ಯ ಯೋಜನೆಯನ್ನು ಪ್ರಶಂಸಿಸುತ್ತ ಅನ್ನಸುವಿಧಾ ಎಂಬ ಹೊಸ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಅನ್ನ ಸುವಿಧಾ ಎಂಬ ಹೊಸ ಯೋಜನೆಯು ಹೋಮ್ ಡೆಲಿವರಿ ಆಪ್ ಮೂಲಕ 80 ವರ್ಷದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ವ್ಯವಸ್ಥೆಯಾಗಿದೆ. ಇದು ಸಾಮಾಜಿಕ ಭದ್ರತಾ ವ್ಯವಸ್ಥೆಯ ರೂಪದಲ್ಲಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದ ವೇಳೆ ತಿಳಿಸಿದರು.
ಡಾ. ಮನ್ಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿ 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರ ಆಶಯದ ಪ್ರಕಾರವೇ ಈಗ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಹೊಸದಾಗಿ ಅನ್ನ ಸುವಿಧಾ ಯೋಜನೆಯನ್ನೂ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಇದರಿಂದ ಆಹಾರ ಭದ್ರತಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ, ಹಾಗೂ ಹಸಿವು ಮುಕ್ತ ಕರ್ನಾಟಕದ ನಮ್ಮ ಆಶಯವನ್ನು ಈಡೇರಿಸಲು ನೆರವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಿಧಾನದ ಆಶಯದಂತೆ ಕರ್ನಾಟಕ ಮಾದರಿ ಅಭಿವೃದ್ಧಿ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಆಶಯದಂತೆ ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವದ ತಳಹದಿಯ ಮೇಲೆ ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತವನ್ನು ರೂಪಿಸಲು ನಾವು ಹೆಜ್ಜೆಯಿಟ್ಟಿದ್ದೇವೆ ಎನ್ನುತ್ತ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣ ಆರಂಭಿಸಿದ್ದರು.
ಸಾಮಾಜಿಕ ನ್ಯಾಯ ಎನ್ನುವುದು ನಮ್ಮ ನಂಬಿಕೆ ಮಾತ್ರವಲ್ಲ; ಅದು ಉದಾತ್ತ ಜೀವನ ದೃಷ್ಟಿಕೋನ. ಸಮ ಸಮಾಜ ನಿರ್ಮಾಣದಲ್ಲಿ ಬಸವಾದಿ ಶರಣರ ಕಾಯಕ ಮತ್ತು ದಾಸೋಹ ತತ್ವಗಳು ನಮಗೆ ಪ್ರೇರಣೆಯಾಗಿದೆ. ದುಡಿಮೆಯ ಒಂದು ಭಾಗವನ್ನು ದಾಸೋಹಕ್ಕೆ ಬಳಸಬೇಕೆಂಬ ಶರಣರ ಚಿಂತನೆ, ಸಮಾಜದಲ್ಲಿ ಸಂಪತ್ತಿನ ನ್ಯಾಯಯುತ ಹಂಚಿಕೆ ಮಾಡುವ ನಮ್ಮ ಆಶಯಕ್ಕೆ ಆಧಾರವಾಗಿದೆ ಎಂದು ಹೇಳಿ, ಬಜೆಟ್‌ನ ಒಂದೊಂದೇ ಅಂಶಗಳನ್ನು ವಿವರಿಸುತ್ತ ಹೋದರು.
(This copy first appeared in Hindustan Times Kannada website. To read more like this please logon to kannada.hindustantimes.com)