ಕರ್ನಾಟಕ ಬಜೆಟ್ 2024; ಪುತ್ತೂರು ಪಶುವೈದ್ಯ ಕಾಲೇಜು, ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿ, ಪಶುಸಂಗೋಪನೆಗೆ 5 ಕೊಡುಗೆ
ಕರ್ನಾಟಕ ಬಜೆಟ್ 2024ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ತೂರು ಪಶುವೈದ್ಯ ಕಾಲೇಜು ಈ ಜೂನ್‌ನಲ್ಲೇ ಶುರುವಾಗಲಿದೆ ಎಂದು ಹೇಳಿದರು. ಇದಲ್ಲದೆ, ಅವರು ಘೋಷಿಸಿದ ಕರ್ನಾಟಕ ರೈತ ಸಮೃದ್ಧಿ ಯೋಜನೆಗಳು ಈ ವರ್ಷ ಜಾರಿಯಾಗಲಿದ್ದು, ಪಶುಸಂಗೋಪನೆಗೆ ನೀಡಿದ 5 ಕೊಡುಗೆಗಳ ವಿವರ ಇಲ್ಲಿದೆ.
ಬೆಂಗಳೂರು: ಪುತ್ತೂರು ಪಶುವೈದ್ಯ ಕಾಲೇಜು ಈ ವರ್ಷ (2024-25)ವೇ ಶುರುವಾಗಲಿದೆ. ಇದೇ ರೀತಿ ಈ ವರ್ಷ ಜಾರಿಯಾಗಲಿರುವ ಕರ್ನಾಟಕ ರೈತ ಸಮೃದ್ದಿ ಯೋಜನೆಯಲ್ಲಿ ಕೆಲವು ಹಳೆಯ ಯೋಜನೆಗಳನ್ನೂ ಸೇರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅವರು ವಿಧಾನಸಭೆಯಲ್ಲಿ ಶುಕ್ರವಾರ (ಫೆ.16) ಮುಂದಿನ ಹಣಕಾಸು ವರ್ಷದ ರಾಜ್ಯ ಬಜೆಟ್ (ಕರ್ನಾಟಕ ಬಜೆಟ್ 2024) ಮಂಡಿಸುವಾಗ ಈ ವಿಚಾರ ತಿಳಿಸಿದರು. ಪಶುಸಂಗೋಪನೆ ಕ್ಷೇತ್ರಕ್ಕೆ ಕೆಲವು ಯೋಜನೆಗಳನ್ನು ಘೋಷಿಸಿದ ಅವರು, ಈ ಆಯವ್ಯಯದಲ್ಲಿ ಘೋಷಿಸಲಾದ ಕರ್ನಾಟಕ ರೈತ ಸಮೃದ್ಧಿ ಯೋಜನೆಯೊಂದಿಗೆ ಸಂಯೋಜಿಸಿ ಈ ಕೆಳಕಂಡ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರೈತ ಸಮೃದ್ಧಿ ಯೋಜನೆ
ಇದರಂತೆ, ಕರ್ನಾಟಕ ರೈತ ಸಮೃದ್ಧಿ ಯೋಜನೆಯೊಂದಿಗೆ ಸಂಯೋಜನೆಯಾಗಲಿರುವ ಯೋಜನೆಗಳಿವು.
1) ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಿ 10,000 ಫಲಾನುಭವಿಗಳಿಗೆ ಸಹಾಯಧನ
2) ಅಮೃತ ಮಹಲ್/ ಹಳ್ಳಿಕಾರ್/ ಖಿಲಾರಿ ರಾಸುಗಳನ್ನು ಸಂವರ್ಧನೆ ಮಾಡಿ ಉತ್ಕೃಷ್ಟ ಕರುಗಳ ಪೂರೈಕೆ
3) ರೈತ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಸು/ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದಲೇ ಶೇ.6ರ ಬಡ್ಡಿ ಸಹಾಯಧನ
4) ಹಂದಿ ಮತ್ತು ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಆಸಕ್ತ ರೈತರಿಗೆ ತರಬೇತಿ ನೀಡುವ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಕ್ರಮ
ಪರಂಪರಾಗತ ಕುರಿ/ ಮೇಕೆ ಸಾಕಾಣಿಕೆಯ ಕುರಿಗಾರರ ಹಿತರಕ್ಷಣೆಯ ಯೋಜನೆ
ಕರ್ನಾಟಕದಲ್ಲಿ ಪರಂಪರಾಗತವಾಗಿ ಕುರಿ/ ಮೇಕೆ ಸಾಕಾಣಿಕೆಯನ್ನು ವಲಸೆ ಮುಖಾಂತರ ಕೈಗೊಳ್ಳುತ್ತಿರುವ ಕುರಿಗಾರರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರವು ಕೈಗೊಳ್ಳಲಿರುವ ಕ್ರಮಗಳಿವು.
1) ವಲಸೆ ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಲಾಗುವುದು.
2) ಸಂಚಾರಿ ಕುರಿಗಾಹಿಗಳು ಇರುವ ಜಾಗದಲ್ಲೇ ಅವರ ಕುರಿ, ಮೇಕೆಗಳಿಗೆ ಸರ್ಕಾರಿ ವೈದ್ಯರಿಂದ ಲಸಿಕೆ ಹಾಕಲಾಗುವುದು.
3) ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
4) ಸಂಚಾರಿ ಕುರಿಗಾಹಿಗಳ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿ ವೇತನ ನೀಡಲಾಗುವುದು.
ಪಶುಸಂಗೋಪನೆಗೆ ಸಂಬಂಧಿಸಿದ ಇತರೆ ಕೊಡುಗೆಗಳು
1) ಜಿಲ್ಲಾ ಹಂತದಲ್ಲಿರುವ ತಜ್ಞ ಪಶುವೈದ್ಯಕೀಯ ಪಾಲಿಕ್ಲಿನಿಕ್‌ಗಳನ್ನು ತಾಲೂಕು ಹಂತಕ್ಕೆ ವಿಸ್ತರಿಸುವುದು. ಪ್ರಥಮ ಹಂತದಲ್ಲಿ ರಾಜ್ಯದ ಆಯ್ದ 20 ತಾಲೂಕುಗಳ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್‌ಗಳನ್ನಾಗಿ ಮೇಲ್ದರ್ಜೆಗೇರಿಸಲು 10 ಕೋಟಿ ರೂಪಾಯಿ ಅನುದಾನ.
2) ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಪಶುವೈದ್ಯ ಸಂಸ್ಥೆಗಳಿಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡಗಳನ್ನು ನಿರ್ಮಾಣ.
3) ಪುತ್ತೂರು ಪಶುವೈದ್ಯಕೀಯ ಕಾಲೇಜಿನ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಕಾಲೇಜು ಕಾರ್ಯಾರಂಭ ಮಾಡಲಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)