KRS Dam: 6 ತಿಂಗಳ ಹಿಂದೆ ಖಾಲಿ ಖಾಲಿ, ಈಗ ಸತತ 100 ದಿನದಿಂದ ತುಂಬಿರುವ ಮಂಡ್ಯ ಕೆಆರ್‌ಎಸ್ ಜಲಾಶಯ; ಎಷ್ಟಿದೆ ನೀರಿನ ಪ್ರಮಾಣ
Nov 08, 2024 03:52 PM IST
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ಸತತ ನೂರು ದಿನಗಳಿಂದ ತುಂಬಿದ ಸ್ಥಿತಿಯಲ್ಲಿಯೇ ಇದೆ.
- KRS Dam Updates: ಕಳೆದ ವರ್ಷ ಮಳೆ ಕೊರತಯಿಂದ ಸೊರಗಿ ಹೋಗಿದ್ದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಈ ಬಾರಿ ಜೀವ ಕಳೆ ಬಂದಿದೆ. ಸತತ ನೂರು ದಿನದಿಂದಲೂ ಜಲಾಶಯ ಭರ್ತಿಯಾಗಿದೆ.
ಮಂಡ್ಯ: ಕಳೆದ ವರ್ಷ ಸಮರ್ಪಕ ಮಳೆಯಾಗದೇ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ ತುಂಬಲೇ ಇಲ್ಲ. ನವೆಂಬರ್ ಅನ್ನುವ ಹೊತ್ತಿಗೆ ಜಲಾಶಯದ ನೀರಿನ ಮಟ್ಟ ಬಹುತೇಕ ಕುಸಿದಿತ್ತು. ಈಗ ಪರಿಸ್ಥಿತಿ ಹಾಗಿಲ್ಲ. ಕೃಷ್ಣರಾಜಸಾಗರ ಜಲಾಶಯವು ಸತತ ನೂರು ದಿನದಿಂದಲೂ ತುಂಬಿದೆ. ಸರಿಯಾಗಿ ನೂರು ದಿನದ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತುಂಬಿದ ಕೆಆರ್‌ಎಸ್‌ಗೆ ಬಾಗಿನ ಸಲ್ಲಿಸಿದ್ದರು. ಈ ಬಾರಿ ಉತ್ತಮ ಮಳೆಯಾಗಿದ್ದು, ನವೆಂಬರ್‌ನಲ್ಲೂ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಈಗಲೂ ಉತ್ತಮ ಪ್ರಮಾಣದಲ್ಲಿಯೇ ನೀರು ಹರಿದು ಬರುತ್ತಿದೆ. ಇದರಿಂದಾಗಿ ಮುಂಬರುವ ಬೇಸಿಗೆಗೆ ಕುಡಿಯುವ ನೀರಿನ ಸಮಸ್ಯೆ ಆಗದು.ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರ, ಪಟ್ಟಣಗಳು ಯಥೇಚ್ಛ ಕಾವೇರಿ ನೀರನ್ನು ಈ ಬೇಸಿಗೆಯಲ್ಲಿ ಪಡೆಯಬಹುದು.
ತುಂಬಿದ ಸ್ಥಿತಿಯಲ್ಲಿ ಕೆಆರ್‌ಎಸ್
ಕೊಡಗಿನಲ್ಲಿ ಉತ್ತಮ ಮಳೆಯಾದರೆ ಕೃಷ್ಣರಾಜಸಾಗರಕ್ಕೆ ಹೆಚ್ಚಿನ ನೀರು ಹರಿದು ಬರುತ್ತದೆ. ಇದರೊಟ್ಟಿಗೆ ಹಾಸನ, ಮೈಸೂರು ಭಾಗದ ಮಳೆಯೂ ಕೆಆರ್‌ಎಸ್ ಜಲಾಶಯಕ್ಕೆ ಆಸರೆ. ಈ ವರ್ಷ ಕೊಡಗಿನಲ್ಲಿ ಅಕ್ಟೋಬರ್ ಕೊನೆಯ ವಾರದವರೆಗೂ ಮಳೆಯಾಗಿದೆ.
ಐದು ತಿಂಗಳ ಕಾಲ ಮಳೆಗಾಲ ಇದ್ದುದರಿಂದ ಕೊಡಗು ಭಾಗದಿಂದಲೇ ಯಥೇಚ್ಚ ನೀರು ಜಲಾಶಯಕ್ಕೆ ನಿರಂತರವಾಗಿಯೇ ಹರಿದು ಬಂದಿದೆ. ಹೇಮಾವತಿ, ಹಾರಂಗಿ ಜಲಾಶಯಗಳಿಂದಲೂ ಕೆಆರ್‌ಎಸ್ ನೀರು ಹರಿಸಲಾಗಿದೆ. ಈ ಕಾರಣದಿಂದ ಕೆಆರ್‌ಎಸ್ ಜಲಾಶಯಕ್ಕೆ ಈ ವರ್ಷ ನೀರಿನ ಕೊರತೆಯಾಗದೇ ಯಥೇಚ್ಚ ನೀರು ಲಭಿಸಿದೆ.
ಜುಲೈ ತಿಂಗಳಲ್ಲಿ ಕೊಡಗಿನಲ್ಲ ಭಾರೀ ಮಳೆಯಾದ ಪರಿಣಾಮವಾಗಿ ಅದೇ ತಿಂಗಳಿನಲ್ಲಿ ಜಲಾಶಯ ತುಂಬಿತು. ಜುಲೈ 24 ರಂದು ಜಲಾಶಯ ಭರ್ತಿಯಾಯಿತು. ಇದಾದ ಐದು ದಿನಕ್ಕೆ ಸಿಎಂ ಹಾಗೂ ಡಿಸಿಎಂ ಬಾಗಿನವನ್ನು ಅರ್ಪಿಸಿದರು. ಅಲ್ಲಿಂದಲೂ ಜಲಾಶಯ ಸತತವಾಗಿಯೇ ತುಂಬಿದ ಸ್ಥಿತಿಯಲ್ಲಿಯೇ ಇದೆ.
ಹಿಂದಿನ ವರ್ಷ ಎಷ್ಟಿತ್ತು
ಹೋದ ವರ್ಷ ಜಲಾಶಯ ತುಂಬದೇ ಕೃಷಿಗೆ ನೀರನ್ನೇ ಕೊಡಲಿಲ್ಲ. ಈ ಹೊತ್ತಿಗೆ ಸರ್ಕಾರ ಕೆಆರ್‌ಎಸ್ ಜಲಾಶಯ ನೀರು ಕುಡಿಯಲು ಬಿಟ್ಟು ಬೇರೆ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿತ್ತು. ಈ ಕಾರಣದಿಂದ ಜಲಾಶಯದಲ್ಲಿ99.40 ಅಡಿ ನೀರು ಸಂಗ್ರಹವಾಗಿತ್ತು.
ಒಳ ಹರಿವಿನ ಪ್ರಮಾಣ 1000 ಕ್ಯೂಸೆಕ್ ಇದ್ದರೆ, ಹೊರ ಹರಿವಿನ ಪ್ರಮಾಣ 300 ಕ್ಯೂಸೆಕ್ ನಷ್ಟಿತ್ತು. ಜಲಾಶಯದಲ್ಲಿ22.34 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದ ಗರಿಷ್ಠ ಮಟ್ಟವು 124.80 ಅಡಿ ಹಾಗೂ ಸಂಗ್ರಹ ಸಾಮರ್ಥ್ಯ 49.45 ಟಿಎಂಸಿ.
ಈಗ ಎಷ್ಟು ನೀರು ಸಂಗ್ರಹವಿದೆ
ಕೊಡಗಿನ ಕೆಲವು ಭಾಗಗಳಲ್ಲಿ ಮಳೆಯಾಗಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಶುಕ್ರವಾರ ಉತ್ತಮ ಒಳ ಹರಿವು ಕಂಡು ಬಂದಿತು. ಜಲಾಶಯಕ್ಕೆ ಶುಕ್ರವಾರ ಬೆಳಿಗ್ಗೆ 6988 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 6777 ಕ್ಯೂಸೆಕ್ ನೀರನ್ನು ನದಿ ಮೂಲಕ ಹರಿ ಬಿಡಲಾಗುತ್ತಿದೆ. ಇದು ನಾಲೆಗಳ ಜತೆಗೆ ಕುಡಿಯುವ ನೀರಿಗೂ ಬಿಡುತ್ತಿರುವ ನೀರು ಎನ್ನುವುದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿವರಣೆ.
ಜಲಾಶಯವು ಗರಿಷ್ಠ ಮಟ್ಟ 124.80 ಅಡಿ ತುಂಬಿದೆ. ಜಲಾಶಯದಲ್ಲಿ49.452 ಟಿಎಂಸಿ ನೀರು ಸಂಗ್ರಹವಿದೆ.ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಕೃಷ್ಣರಾಜಸಾಗರ ಜಲಾಶಯದ ನೀರಿನ ಸ್ಥಿತಿ ಅತ್ಯುತ್ತಮವಾಗಿದೆ. ಸತತ ಮಳೆ, ಒಂದು ತಿಂಗಳು ವಿಸ್ತರಣೆ ಕಾರಣದಿಂದ ಜಲಾಶಯ ನಿರಂತರವಾಗಿ ನೂರು ದಿನಕ್ಕೂ ಅಧಿಕ ದಿನಗಳಿಂದ ತುಂಬಿದೆ. ಇದರಿಂದ ಈ ಬಾರಿ ಬೇಸಿಗೆ ಪರಿಸ್ಥಿತಿ ಚೆನ್ನಾಗಿರಲಿದೆ. ಹಲವು ವರ್ಷಗಳ ನಂತರ ಜಲಾಶಯ ಸತತ ತುಂಬಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.