ಸಂಡೂರು ಕಾಂಗ್ರೆಸ್ ಗೆಲುವಿನ ಖುಷಿ, 2 ಸಾವಿರ ಮನೆ, ಬಳ್ಳಾರಿ ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ರೂ.
Dec 08, 2024 03:59 PM IST
ಸಂಡೂರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಮತ್ತಿತರು ಭಾಗಿಯಾದರು.
- ಬಳ್ಳಾರಿಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟ ಬಾಣಂತಿ ಮಹಿಳೆಯರ ಕುಟುಂಬ ಪರಿಹಾರ ನೀಡುವ ಘೋಷಣೆ ಸಂಡೂರಿನಲ್ಲಿ ನಡೆದ ಕಾಂಗ್ರೆಸ್ ಅಭಿನಂದನಾ ಸಮಾವೇಶದಲ್ಲಿ ಮಾಡಲಾಗಿದೆ.
ಬಳ್ಳಾರಿ: ಬಳ್ಳಾರಿಯಲ್ಲಿ ಕೆಲವು ದಿನಗಳಿಂದ ಔಷಧದಲ್ಲಿ ಆಗಿರುವ ವ್ಯತ್ಯಯದಿಂದ ಬಾಣಂತಿಯರು ಸಾಯುತ್ತಿದ್ದರೆ, ಅತ್ತ ಕಡೆ ಬಂದು ನೋಡುವವರೂ ಇರಲಿಲ್ಲ. ಸಿಎಂ, ಉಸ್ತುವಾರಿ ಸಚಿವ, ಆರೋಗ್ಯ ಸಚಿವ ಯಾರೂ ಸುಳಿದಿರಲಿಲ್ಲ. ಈಗ ಆರೋಗ್ಯ ಸಚಿವರು ಬಂದು ಹೋದರೆ, ಸಂಡೂರಿನಲ್ಲಿ ಕಳೆದ ತಿಂಗಳು ಉಪ ಚುನಾವಣೆಯಲ್ಲಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಬಂದಿದ್ದರು. ಸಂಡೂರಿನಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಸಮಾರಂಭದಲ್ಲಿ ಬಳ್ಳಾರಿಯ ಬಾಣಂತಿಯರ ಸಾವಿನ ನೆನಪಾಯಿತು. ಮೃತ ಬಾಣಂತಿಯರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವ ಪ್ರಕಟಣೆ ಹೊರ ಬಿದ್ದರೆ, ಕೈ ಹಿಡಿದ ಸಂಡೂರಿನ ಎರಡು ಸಾವಿರ ಮತದಾರರಿಗೆ ಮನೆ ನಿರ್ಮಿಸಿ ಕೊಡುವ ಘೋಷಣೆಯನ್ನು ಮಾಡಲಾಯಿತು.
ಸಂಡೂರಿನಲ್ಲಿ ಭಾನುವಾರ ನಡೆದ ನೂತನ ಶಾಸಕಿ ಅನ್ನಪೂರ್ಣ ತುಕಾರಾಂ ಅಭಿನಂದನಾ ಸಮಾರಂಭದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಜನತೆಗೆ ಅಭಿನಂದಿಸಿ ಭಾಷಣ ಮಾಡುವ ವೇಳೆ ಸಂಡೂರು ಕ್ಷೇತ್ರಕ್ಕೆ ವಸತಿ ಇಲಾಖೆಯಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡುವುದಾಗಿ ಘೋಷಿಸಿದರು. ಈಗಾಗಲೇ 2172 ಮನೆಗಳನ್ನು ನೀಡಲಾಗಿದೆ. ಸಂಡೂರಿನಲ್ಲಿ ಬಡವರು ಹೆಚ್ಚಾಗಿರುವುದರಿಂದ ಮತ್ತು ನಂಜುಂಡಪ್ಪ ಅವರ ವರದಿಯಲ್ಲಿ ಹಿಂದುಳಿದ ತಾಲ್ಲೂಕಿನ ಪಟ್ಟಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ 2000 ಮನೆಗಳನ್ನು ನೀಡಲಾಗುವುದು ಎಂದು ಘೋಷಿಸಿದರು.
ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರಿಗೆ ಸರ್ಕಾರ ಪರಿಹಾರದ ಮೊತ್ತವನ್ನು ಐದು ಲಕ್ಷಕ್ಕೆ ಏರಿಸಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಪ್ರಧಾನಿ ವಿರುದ್ದ ಟೀಕೆ
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುವ ಬೃಹತ್ ಮತದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರು ಅವರು ಹೇಳಿದ ಸುಳ್ಳಿಗೆ ಪ್ರತಿಯಾಗಿ ನಾನು ಹಾಕಿದ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದು ಅವರು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಬಿಜೆಪಿಯ ಲೋಕಲ್ ಲೀಡರ್ ಗಳಿಂದ ಪ್ರಧಾನಿ ಮೋದಿಯವರರೆಗೂ ಸರಣಿ ಸುಳ್ಳು ಗಳನ್ನು ಹೇಳಿದರು. ನೀವು ಆರೋಪ ಸಾಬೀತಿಪಡಿಸಿ, ನಾನು ರಾಜಕೀಯ ನಿವೃತ್ತಿ ತಗೊತೀನಿ ಎಂದು ಮೋದಿಯವರಿಗೆ ಸವಾಲು ಹಾಕಿದ್ದೆ. ಅವರು ಸವಾಲು ಸ್ವೀಕರಿಸುವ ಧೈರ್ಯ ತೋರಿಸಲಿಲ್ಲ ಎಂದರು.
ನಾನು ಮೂರು ದಿನಗಳ ಕಾಲ ಸಂಡೂರಿನಲ್ಲಿ ಪ್ರಚಾರ ಮಾಡಿದೆ. ಈ ವೇಳೆ ತುಕಾರಾಮ್ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಿದ್ದೇನೆ. ತುಕಾರಾಮ್ ಅವರಿಗೂ ಮೊದಲು ಸಂಡೂರು ಹೇಗಿತ್ತು ಎನ್ನುವುದೂ ನನಗೂ ಗೊತ್ತು. ಈಗ ತುಕಾರಾಮ್ ಅವರು ಒಳ್ಳೆ ಕೆಲಸಗಳನ್ನು ಮಾಡಿರುವುದನ್ನು ನಾನು ನೋಡಿದ್ದೇನೆ ಎಂದರು.
ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ನಾಡಿನ ಜನತೆ ಎದುರಿಗೆ ಕೊಟ್ಟ ಎಲ್ಲಾ ಭರವಸೆಗಳನ್ನೂ ಹಂತ ಹಂತವಾಗಿ ಈಡೇರಿಸುತ್ತಿದ್ದೇವೆ. ನಮ್ಮ ಜನರ ಆರ್ಥಿಕ ಶಕ್ತಿ ಮತ್ತು ಕೊಳ್ಳುವ ಸಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸಿ ಜಾರಿ ಮಾಡುವುದರ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದರು.
ರಿಪಬ್ಲಿಕ್ ಬಳ್ಳಾರಿ ಮಾಡಿದ ರೆಡ್ಡಿ
ಬಳ್ಳಾರಿ ಜಿಲ್ಲೆಯ ಜನತೆಯನ್ನು ಭಯದಲ್ಲಿಟ್ಟು ರಿಪಬ್ಲಿಕ್ ಬಳ್ಳಾರಿ ಮಾಡಿದ್ದ ಜನಾರ್ದನರೆಡ್ಡಿಯವರಿಗೆ ಬಿಜೆಪಿ ಈ ಚುನಾವಣೆಯ ಉಸ್ತುವಾರಿ ವಹಿಸಿತ್ತು. ಆದರೆ, ಸಂಡೂರಿನ ಜನತೆ ರೆಡ್ಡಿಯವರ ಹಣಕ್ಕೆ, ಭಯಕ್ಕೆ, ಆಮಿಷಕ್ಕೆ, ಸುಳ್ಳುಗಳಿಗೆ, ಅಪಪ್ರಚಾರಕ್ಕೆ ಸೋಲಲಿಲ್ಲ. ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ರಾಜಕಾರಣ ಮತ್ತು ಸತ್ಯದ ರಾಜಕಾರಣವನ್ನು ಗೆಲ್ಲಿಸಿದ್ದೀರಿ. ಇದು ಸಂಡೂರಿನ ಘನತೆಯನ್ನು ಹೆಚ್ಚಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇವತ್ತಿನವರೆಗೂ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದೇ ಇಲ್ಲ. ಕೇವಲ ಆಪರೇಷನ್ ಕಮಲದ ಮೂಲಕವೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಆಪರೇಷನ್ ಕಮಲಕ್ಕೆ ಬಳಸಿದ ಹಣ ಕೂಡ ಕಪ್ಪು ಹಣ ಅಲ್ಲವೇ ಎಂದು ಪ್ರಶ್ನಿಸಿದರು.
ನಿಮ್ಮ ಆಶೀರ್ವಾದ ಇರುವವರೆಗೂ ಬಗ್ಗಲ್ಲ-ಜಗ್ಗಲ್ಲ
ಮೂರು ಉಪ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ರಾಜ್ಯದ ಜನತೆ ನಮ್ಮ ಸರ್ಕಾರಕ್ಕೆ ದೊಡ್ಡ ಆಶೀರ್ವಾದ ಮಾಡಿದ್ದಾರೆ. ನನ್ನ ವಿರುದ್ಧ ಸುಳ್ಳು ಕೇಸು, ಸುಳ್ಳು ಆರೋಪಗಳ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದಾರೆ. ನಿಮ್ಮ ಆಶೀರ್ವಾದ ಇರುವವರೆಗೂ ಈ ಸಿದ್ದರಾಮಯ್ಯ ಯಾವುದೇ ಷಡ್ಯಂತ್ರ, ಸುಳ್ಳು ಕೇಸುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು.
ನಾಚಿಕೆ ಇಲ್ಲದೆ ಸುಳ್ಳು ಹೇಳ್ತಾರೆ
ವಕ್ಫ್ ವಿಚಾರದಲ್ಲೂ ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ಲೋಕಲ್ ಲೀಡರ್ ಗಳ ವರೆಗೂ ಎಲ್ಲರೂ ಸರಣಿ ಸುಳ್ಳು ಅಪಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಚುನಾವಣೆಯಲ್ಲಿ 700 ಕೋಟಿ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡಿದರು. ನಾನು ಪ್ರಧಾನಿಗೆ ಸವಾಲು ಹಾಕಿದೆ, ನಿಮ್ಮ ಆರೋಪ ಸಾಬೀತು ಮಾಡಿ. ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎನ್ನುವ ನನ್ನ ಸವಾಲು ಸ್ವೀಕರಿಸಲು ಪ್ರಧಾನಿ ಮೋದಿ ಧೈರ್ಯ ಮಾಡಲಿಲ್ಲ. ಅವರಿಗೆ ಸುಳ್ಳು ಹೇಳುವುದಕ್ಕೆ ಮಾತ್ರ ಧೈರ್ಯ ಬರುತ್ತದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.