ಸಂಡೂರು ಉಪಚುನಾವಣೆ: ಬಂಗಾರು ಹನುಮಂತು ವಿರುದ್ಧ ಅನ್ನಪೂರ್ಣ ತುಕಾರಾಂಗೆ ಗೆಲುವು, 5ನೇ ಬಾರಿಗೆ 'ಕೈ' ಹಿಡಿದ ಸಂಡೂರು ಜನತೆ
ಸಂಡೂರು ಉಪಚುನಾವಣೆ: ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಗೆಲುವು ಸಾಧಿಸಿದ್ದಾರೆ. ಆದರೆ, ಅಧಿಕೃತ ಘೋಷಣೆ ಬಾಕಿಯೊಂದೇ ಬಾಕಿ ಉಳಿದಿದೆ.
ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಆದರೆ, ಅಧಿಕೃತ ಘೋಷಣೆ ಬಾಕಿಯೊಂದೇ ಬಾಕಿಯಿದೆ. ಆರಂಭದಲ್ಲಿ ನೆಕ್ ಟು ನೆಕ್ ಪೈಪೋಟಿ ಉಂಟಾಗಿದ್ದ ಸಂಡೂರಿನಲ್ಲಿ ಅನ್ನಪೂರ್ಣ 9,568 ಮತಗಳಿಂದ ಗೆದ್ದು ಬೀಗಿದ್ದಾರೆ. ಇದರೊಂದಿಗೆ ಸಂಡೂರಿನಲ್ಲಿ ಕಾಂಗ್ರೆಸ್‌ಗೆ ಸತತ 5ನೇ ಬಾರಿ ಜಯದ ನಗೆ ಬೀರಿದೆ. ಅನ್ನಪೂರ್ಣ ಪಡೆದ ಮತಗಳು - 93,051, ಬಂಗಾರು ಹನುಮಂತು ಪಡೆದ ಮತಗಳು 83,483. ಅನ್ನಪೂರ್ಣ ಗೆಲುವಿನ ಅಂತರ - 9,568.
ಕಾಂಗ್ರೆಸ್ ಗೆಲುವು ಸಾಧಿಸಿ ರಾಜ್ಯದಲ್ಲಿ ತನ್ನ ಪ್ರಭಾವ ಕಡಿಮೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸಿದ್ದ ಬಿಜೆಪಿ ತೀವ್ರ ಪೈಪೋಟಿ ನೀಡಿತ್ತು. ಜನಾರ್ಧನ ರೆಡ್ಡಿಯ ಪ್ರಭಾವವೂ ಪ್ರಭಾವ ಬೀರುವ ನಿರೀಕ್ಷೆ ಇತ್ತು. ಆದರೆ, ಕಾಂಗ್ರೆಸ್ ಭದ್ರಕೋಟೆಯನ್ನು ಉರುಳಿಸಲು ವಿಫಲವಾಯಿತು. ಮುಡಾ ಪ್ರಕರಣ, ವಕ್ಫ್ ವಿವಾದ, ಶಕ್ತಿ ಯೋಜನೆ, ಜಮೀರ್ ಅಹ್ಮದ್ ಎಡವಟ್ಟು ಸೇರಿದಂತೆ ಹಲವು ವಿಚಾರಗಳು ಕಾಂಗ್ರೆಸ್ ಮತ ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ ಎಂಬುದಕ್ಕೆ ಈ ಗೆಲುವು ಸಾಕ್ಷಿಯಾಗಿದೆ.
ಎರಡು ಸುತ್ತಿಗಳಲ್ಲಷ್ಟೆ ಬಿಜೆಪಿ ಮುನ್ನಡೆ
ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಹಿನ್ನೆಲೆ ಇ ತುಕಾರಾಂ ಅವರಿಂದ ತೆರವಾದ ಸ್ಥಾನಕ್ಕೆ ಸ್ಪರ್ಧಿಸಿದ್ದ ಪತ್ನಿ ಅನ್ನಪೂರ್ಣ ತುಕಾರಾಂ ಅವರು ಸಂಡೂರು ಉಪಚುನಾವಣೆಯಲ್ಲಿ ಸ್ಪರ್ಧಿಸಿ ಬೊಂಬಾಟ್ ಗೆಲುವು ಸಾಧಿಸಿದ್ದಾರೆ. ಸಂಡೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಸೋಲಿನ ಬೆನ್ನಲ್ಲೇ ಅವರ ಸಹೋದರ ಕಣ್ಣೀರು ಹಾಕಿದ್ದಾರೆ. ಆರಂಭದಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಆರನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಪಡೆದರು. ಏಳನೆ ಸುತ್ತಿನಲ್ಲಿ 1000 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದರು.
ಆರು ಮತ್ತು ಏಳನೇ ಸುತ್ತನ್ನು ಹೊರತುಪಡಿಸಿದರೆ ಉಳಿದೆಲ್ಲಾ ಸುತ್ತುಗಳಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು. ಆದರೆ, ಬಿಜೆಪಿ ತೀವ್ರ ಪೈಪೋಟಿ ನೀಡಲು ವಿಫಲವಾಯಿತು. ಪ್ರತಿ ಸುತ್ತಿನಲ್ಲೂ ಹಿನ್ನಡೆ ಅನುಭವಿಸಿತು. ಸಂಡೂರು ಉಪಚುನಾವಣೆಗೆ ಕಾಂಗ್ರೆಸ್‌ನಿಂದ ಅನ್ನಪೂರ್ಣ ತುಕಾರಾಂ, ಬಿಜೆಪಿಯಿಂದ ಬಂಗಾರ ಹನುಮಂತು, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಎನ್. ಅಂಜಿನಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಟಿಎಂ ಮಾರುತಿ, ಎನ್ ವೆಂಕಣ್ಣ, ಟಿ ಎರಿಸ್ವಾಮಿ ಸ್ಪರ್ಧಿಸಿದ್ದರು.
ಬಂಗಾರು ಹನುಮಂತು ಪ್ರತಿಕ್ರಿಯೆ
ಸಂಡೂರು ಬೈ ಎಲೆಕ್ಷನ್ನಲ್ಲಿ ಹಣಬಲ ಕೆಲಸ ಮಾಡಿದೆ. ಅಧರ್ಮ ಗೆದ್ದಿದೆ. ನಾನು ಗೆಲ್ಲುವುದು ಖಚಿತ ಎಂದು ನಮ್ಮ ಪಕ್ಷದ ನಾಯಕರಿಗೆ ಭರವೆ ಕೊಟ್ಟಿದ್ದೆ. ಆದರೆ, ನನ್ನ ಮಾತು ಹುಸಿಯಾಗಿದೆ. ಈ ಸೋಲಿಗೆ ನಾನೇ ಹೊರುತ್ತೇನೆ. ಕ್ಷೇತ್ರದಲ್ಲಿ 3 ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಅವರು ಬಂದು ಕೆಲಸ ಮಾಡಿದ್ದಾರೆ. ಎಲೆಕ್ಷನ್ ಹಿಂದಿನ ದಿನ ಗ್ಯಾರಂಟಿ ಯೋಜನೆಯ ಹಣವನ್ನು ಜನರ ಖಾತೆಗೆ ಜಮೆ ಮಾಡಿದ್ರು. ಶಿವರಾಜ್ ತಂಗಡಗಿ ಹಣದ ಹೊಳೆ ಹರಿಸಿದ್ದಾರೆ. ಹಗಲಿರುಳು ಶ್ರಮಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದಗಳು. 2028ರಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹೇಳಿದ್ದಾರೆ.