Karnataka Nature Trip:ಕರ್ನಾಟಕದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಒಂದು ದಿನದ ನೇಚರ್ ಟೂರ್ ಮಾಡಬೇಕೆ; ಇಲ್ಲಿವೆ ಬೆಸ್ಟ್ ತಾಣಗಳು
Nov 22, 2024 08:15 PM IST
ಕರ್ನಾಟಕದಲ್ಲಿ ನೇಚರ್ ಪ್ರವಾಸಕ್ಕೆ ವಿದ್ಯಾರ್ಥಿಗಳಿಗೆ ಪ್ರಮುಖ ಹತ್ತು ತಾಣಗಳ ಪಟ್ಟಿ ನೀಡಲಾಗಿದೆ.
- Karnataka Nature School Trip: ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನೇಚರ್ ಪ್ರವಾಸಕ್ಕೆ ಹೇಳಿ ಮಾಡಿಸಿದ ಅರಣ್ಯ, ವನ್ಯಜೀವಿಗಳು, ಪ್ರಕೃತಿ ಸೊಬಗಿನ ತಾಣಗಳಿವೆ. ಅವುಗಳ ಪಟ್ಟಿ ಇಲ್ಲಿ ನೀಡಲಾಗಿದೆ.
Karnataka Nature School Trip: ಕರ್ನಾಟಕವೂ ಪ್ರಾಕೃತಿಕ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಬೆಂಗಳೂರು, ಮೈಸೂರು, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ಮಂಡ್ಯ, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳಲ್ಲಿ ನೇಚರ್ ಟೂರ್ ಮಾಡುವ ಹಲವು ತಾಣಗಳಿವೆ. ಒಂದು ದಿನ ಉಳಿಯಲು ಕೆಲವು ಕಡೆ ವ್ಯವಸ್ಥೆಗಳಿವೆ. ಇಂತಹ ತಾಣಗಳ ವಿವರ ಇಲ್ಲಿದೆ.
1.ಬೆಂಗಳೂರಿನ ಬನ್ನೇರಘಟ್ಟ ಅತ್ಯುತ್ತಮ ನೇಚರ್ ಟೂರ್‌ಗೆ ಹೇಳಿ ಮಾಡಿಸಿದ ತಾಣ. ಮೃಗಾಲಯದಲ್ಲಿ ಪ್ರಕೃತಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುತ್ತದೆ. ಅಲ್ಲಿನ ಪ್ರಾಣಿ, ಪಕ್ಷಿಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಪ್ರಾಣಿಗಳ ಬದುಕಿನ ದಿನಚರಿಯನ್ನೂ ವೀಕ್ಷಿಸಬಹುದು. ಜತೆಗೆ ಸಫಾರಿಯನ್ನು ಮಾಡಿ ಹತ್ತಿರದಿಂದ ಸಿಂಹ, ಚಿರತೆ, ಹುಲಿಗಳನ್ನು ನೋಡಬಹುದು. ಬನ್ನೇರಘಟ್ಟವು ಬೆಂಗಳೂರು ನಗರ ಕೇಂದ್ರದಿಂದ 24 ಕಿ. ಮೀ ದೂರದಲ್ಲಿದೆ.
2. ಕೊಡಗು ಜಿಲ್ಲೆಯ ಕುಶಾಲನಗರ ಕೇಂದ್ರಿತವಾಗಿ ನೇಚರ್ ಪ್ರವಾಸ ಹಮ್ಮಿಕೊಳ್ಳಬಹುದು. ಕುಶಾಲನಗರ ಪಟ್ಟಣದಿಂದ 20 ಕಿ.ಮೀ. ಹರಿಯುವ ಕಾವೇರಿ ನದಿ ತೀರದ ದುಬಾರೆಯಂತೂ ಹೇಳಿ ಮಾಡಿಸಿದ ತಾಣ. ಇಲ್ಲಿ ಕಾವೇರಿ ನದಿ ಪ್ರಕೃತಿದತ್ತ ವಾತಾವರಣ ಸೃಷ್ಟಿಸಿದೆ. ಇದರ ಸೊಬಗೇ ಬೇರೆ. ಪಕ್ಕದಲ್ಲಿಯೇ ಆನೆ ಶಿಬಿರವೂ ಇದೆ. ಇಲ್ಲಿ ಆನೆಗಳ ದಿನಚರಿ, ಅವುಗಳು ನೀರಿನಲ್ಲಿ ಆಟವಾಡುವ ಸನ್ನಿವೇಶವನ್ನೂ ಗಮನಿಸಬಹುದು. ದುಬಾರೆಯಲ್ಲಿ ದೋಣಿ ವಿಹಾರ ಕೂಡ ಚೆನ್ನಾಗಿದೆ. ಕುಶಾಲನಗರದ ಪಕ್ಕದಲ್ಲಿಯೇ ಕಾವೇರಿ ನಿಸರ್ಗಧಾಮವೂ ಬೆಸ್ಟ್ ತಾಣವೇ. ಮಡಿಕೇರಿ, ಸೋಮವಾರಪೇಟೆ ಸುತ್ತಮುತ್ತಲಿನ ತಾಣಕ್ಕೂ ಹೋಗಬಹುದು
3. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯೂ ಅತ್ಯುತ್ತಮ ನೇಚರ್ ಪ್ರವಾಸದ ತಾಣ. ಧಾರವಾಡದಿಂದ 80 ಕಿ. ಮೀ ದೂರ ಇರುವ ದಾಂಡೇಲಿ ಬಳಿ ಅರಣ್ಯ ಇಲಾಖೆಯ ಕುಳಗಿ ಶಿಬಿರವಿದೆ. ಇದು ಪ್ರಾಕೃತಿಕ ಸೊಬಗಿನಿಂದ ಕೂಡಿದೆ. ದಾಂಡೇಲಿ ಹತ್ತಿರವೇ ಕಾಳಿ ನದಿ ಇರುವುದರಿಂದ ಇಲ್ಲಿಯೂ ವಿಹಾರಕ್ಕೆ ಅವಕಾಶವಿದೆ. ದಾಂಡೇಲಿ ನಗರದಲ್ಲಿಯೇ ಹಾರ್ನ್ ಬಿಲ್ ಹಕ್ಕಿಗಳ ಆವಾಸಸ್ಥಾನ. ಇಲ್ಲಿಯೂ ಸುತ್ತು ಹಾಕಬಹುದು. ಉತ್ತರ ಕರ್ನಾಟಕದ ಯಲ್ಲಾಪುರ, ಕಾರವಾರ, ಕುಮಟಾ, ಶಿರಸಿ ತಾಲ್ಲೂಕಿನ ಹಲವು ಕಡೆಯೂ ಭೇಟಿ ನೀಡಬಹುದು. ಶಿರಸಿ ಸಮೀಪದ ಕಾನ್‌ಮನೆಯೂ ನಿಸರ್ಗದ ಮಾಹಿತಿ ನೀಡುವ ಕೇಂದ್ರ.
ಇದನ್ನೂ ಓದಿರಿ: Museums in Bengaluru: ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ನೋಡಬಹುದಾದ ಬೆಂಗಳೂರಿನ ಮ್ಯೂಸಿಯಂಗಳಿವು
4. ಚಾಮರಾಜನಗರ ಜಿಲ್ಲೆಯ ಬಂಡೀಪುರ ಕೂಡ ನಿಸರ್ಗದ ಮಾಹಿತಿ ಪಡೆಯುವ ಕೇಂದ್ರ. ಇಲ್ಲಿ ವಿದ್ಯಾರ್ಥಿಗಳಿಗಾಗಿಯೇ ಚಿಣ್ಣರ ವನ್ಯದರ್ಶನ ಕಾರ್ಯಕ್ರಮವೂ ಇದೆ. ಅಲ್ಲಿ ವನ್ಯಜೀವಿ, ಕಾಡು, ಹಸಿರಿನ ಕುರಿತಾಗಿ ಪಾಠ ಇರುತ್ತದೆ. ಆನಂತರ ಕ್ಷೇತ್ರ ಭೇಟಿ. ಎರಡು ಗಂಟೆಯೂ ಹೆಚ್ಚು ಕಾಲ ಸಫಾರಿ ಸಮಯ. ಒಳಗಡೆಯೂ ನಿಲ್ಲಿಸಿ ಮರಗಳು, ಪಕ್ಷಿ, ಪ್ರಾಣಿಗಳ ದರ್ಶನ ಮಾಡಿಸಲಾಗುತ್ತದೆ. ಭರಪೂರ ಮಾಹಿತಿ ನೀಡಲಾಗುತ್ತದೆ, ಮೈಸೂರಿನಿಂದ 80 ಕಿ. ಮೀದಲ್ಲಿದೆ ಬಂಡೀಪುರ
5. ಶಿವಮೊಗ್ಗ ನಗರದಿಂದ ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿ ಸಿಗುವ ತುಂಗಾ ನದಿ ತೀರ ಹಾಗೂ ಹಿನ್ನೀರಿನ ಸಕ್ರೆಬೈಲ್ ಕೂಡ ಬೆಸ್ಟ್ ನೇಚರ್ ಶಿಬಿರವೇ. ಕಾಡಿನ ವಾತಾವರಣ, ಸಾಕಾನೆಗಳ ಹಿಂಡು, ಅವುಗಳ ಬದುಕಿನ ಕ್ರಮವನ್ನು ಅಲ್ಲಿ ನೋಡಿ ಖುಷಿಪಡಬಹುದು. ಸಕ್ರೆಬೈಲ್‌ನಲ್ಲಿ ಕಳೆಯುವ ಪ್ರತಿ ಕ್ಷಣವೂ ಪರಿಸರ ಪಾಠವೇ. ಇದು ಶಿವಮೊಗ್ಗದಿಂದ 30 ಕಿ.ಮಿ ದೂರದಲ್ಲಿದೆ. ಶಿವಮೊಗ್ಗ ಸಮೀಪವೇ ಇರುವ ತ್ಯಾವರೇಕೊಪ್ಪದ ಹುಲಿ ಆನೆ ಸಫಾರಿಯೂ ಪ್ರಾಕೃತಿಕ ಸೊಬಗಿನ ತಾಣ
6. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಕೂಡ ಬೆಸ್ಟ್ ನೇಚರ್ ಸ್ಪಾಟ್. ಇದು ದೇಶದ ಪ್ರಮುಖ ಪಕ್ಷಿಧಾಮ. ಒಂದು ನೂರಕ್ಕೂ ಹೆಚ್ಚು ಜಾತಿಯ ಎರಡು ಸಾವಿರಕ್ಕೂ ಅಧಿಕ ಪಕ್ಷಿಗಳು ದೇಶ ವಿದೇಶದಿಂದ ಇಲ್ಲಿಗೆ ಬರುತ್ತವೆ. ಬೋಟಿಂಗ್ ಮೂಲಕ ಹಕ್ಕಿಗಳನ್ನು ಹತ್ತಿರದಿಂದ ನೋಡಿ ಅವುಗಳ ಮಾಹಿತಿಯನ್ನು ಪಡೆಯಬಹುದು. ಬೋಟಿಂಗ್ ಹೋದಾಗಲೇ ಇದರ ಮಾಹಿತಿಯನ್ನು ಹುಟ್ಟು ಹಾಕುವವರು ನೀಡುತ್ತಾರೆ. ಹಕ್ಕಿಗಳನ್ನು ನೋಡಲು ವಿವಿಧ ರೀತಿಯ ತಾಣಗಳನ್ನು ರೂಪಿಸಲಾಗಿದೆ. ಪಕ್ಕದಲ್ಲಿಯೇ ಶ್ರೀರಂಗಪಟ್ಟಣ ಕಾವೇರಿ ಹೊಳೆಯಲ್ಲೂ ಸುತ್ತಾಡಿ ನದಿ ಕುರಿತೂ ತಿಳಿದುಕೊಳ್ಳಬಹುದು.
7. ಚಿತ್ರದುರ್ಗದಲ್ಲಿ ಜೋಗಿಮಟ್ಟಿ ಬೆಟ್ಟ ಗುಡ್ಡಗಳು, ಅಲ್ಲಿನ ಹಸಿರು ವಾತಾವರಣೂ ಪ್ರಾಕೃತಿಕ ಪ್ರವಾಸದ ಭಾಗವೇ. ಕರ್ನಾಟಕ ಅರಣ್ಯ ಇಲಾಖೆಯು ಇದಕ್ಕೆ ಪೂರಕವಾಗಿ ಇಲ್ಲಿ ಸೂಕ್ತ ವಾತಾವರಣವನ್ನು ಸೃಷ್ಟಿಸಿದೆ. ಇದರೊಂದಿಗೆ ಚಿತ್ರದುರ್ಗ ನಗರದ ಕೋಟೆ ಅಲ್ಲಿನ ಮಹತ್ವವನ್ನು ಪರಿಸರದೊಂದಿಗೆ ತಿಳಿದುಕೊಳ್ಳಲು ಅವಕಾಶವಿದೆ
8. ಬಾಗಲಕೋಟೆ- ವಿಜಯಪುರ ಜಿಲ್ಲೆಯಲ್ಲಿ ಸೇರಿರುವ ಆಲಮಟ್ಟಿಯ ತಾಣವೂ ನೇಚರ್ ಟೂರ್‌ಗೆ ಹೇಳಿ ಮಾಡಿಸಿದಂತಿವೆ. ಆಲಮಟ್ಟಿ ಬೆಟ್ಟದಲ್ಲಿ ಲವ ಕುಶ ಉದ್ಯಾನ, ಜಲಾಶಯದ ಹಿನ್ನೀರು, ಕೃಷ್ಣಾ ನದಿ ಹರಿಯುವ ಮಾರ್ಗ ಹಸಿರು ಮನಸು ಸೃಷ್ಟಿಸುತ್ತವೆ. ಆಲಮಟ್ಟಿಯ ಬಗೆಬಗೆಯ ನಾಲ್ಕಕ್ಕೂ ಹೆಚ್ಚು ಗಾರ್ಡನ್‌ಗಳು ಕೂಡ ಹಸಿರಾಗಿವೆ.
9. ನಾಗರಹೊಳೆ ರಾಷ್ಟ್ರೀಯ ಉದ್ಯಾನ ಪ್ರದೇಶವೂ ಹಸಿರು ಪ್ರವಾಸಿ ತಾಣಗಳ ಪಟ್ಟಿಯಲ್ಲಿದೆ. ಮೈಸೂರು ಹಾಗೂ ಕೊಡಗಿನಿಂದ ಸುಮಾರು 80 ಕಿ. ಮೀ ದೂರ ಇರುವ ನಾಗರಹೊಳೆಯ ವಾತಾವರಣದಲ್ಲಿ ಕಾಡು, ಪ್ರಾಣಿ, ಪಕ್ಷಿಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದು. ಸಫಾರಿ ಕೂಡ ಇಲ್ಲಿನ ಸ್ಮರಣೀಯ ಚಟುವಟಿಕೆಗಳಲ್ಲಿ ಒಂದು. ಮೈಸೂರಿನಿಂದ ಹೋಗುವ ಮಾರ್ಗದುದ್ದಕ್ಕೂ ಕಾಡಿನ ಯಾನವೂ ವಿಭಿನ್ನ ಅನುಭೂತಿ ಉಂಟು ಮಾಡುತ್ತದೆ.
10. ಚಿಕ್ಕಮಗಳೂರು ಜಿಲ್ಲೆಯೂ ಇಂತಹ ಹಸಿರು ಜಿಲ್ಲೆಗಳ ಪಟ್ಟಿಯಲ್ಲಿದೆ. ಚಿಕ್ಕಮಗಳೂರಿನ ಮುತ್ತೋಡಿಯು ನೇಚರ್ ಶಿಬಿರದ ಬೆಸ್ಟ್ ತಾಣ. ಇಲ್ಲಿನ ಅರಣ್ಯ, ಬೆಟ್ಟದ ಸಾಲುಗಳು ಎಂತಹವ ಮನಸನ್ನೂ ಪ್ರಫುಲ್ಲವಾಗಿಸಬಲ್ಲವು. ಮುತ್ತೋಡಿಯಲ್ಲಿ ಸಫಾರಿ ಕೂಡ ಕಾಡಿನ ದಟ್ಟ ಅನುಭವ ನೀಡುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಮುತ್ತೋಡಿಯ ಭದ್ರಾ ಅಭಯಾರಣ್ಯಕ್ಕೆ ಹೋಗುವ ಮಾರ್ಗದ ಕಿರು ಜಲಪಾತ, ಕುಳಿರ್ಗಾಳಿಯೂ ಆಹಾ ಎನ್ನುರ ಉದ್ಘಾರವನ್ನು ಹುಟ್ಟಿ ಹಾಕುತ್ತದೆ.