Museums in Mysore: ಮೈಸೂರಿಗೆ ಶೈಕ್ಷಣಿಕ ಪ್ರವಾಸ ಹೋಗುವ ವಿದ್ಯಾರ್ಥಿಗಳೇ ಗಮನಿಸಿ; ಅರಮನೆ, ಝೂ ಜೊತೆಗೆ ಈ ಮ್ಯೂಸಿಯಂಗಳನ್ನು ಮಿಸ್ ಮಾಡಬೇಡಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅರಮನೆ, ಝೂ ಜೊತೆಗೆ ಹಲವಾರು ಪ್ರಸಿದ್ಧ ಮ್ಯೂಸಿಯಂಗಳಿವೆ. ವಿದ್ಯಾರ್ಥಿಗಳು ಈ ವಸ್ತುಸಂಗ್ರಹಾಲಯಗಳಿಂದ ಸಾಕಷ್ಟು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಶೈಕ್ಷಣಿಕ ಪ್ರವಾಸದ ಭಾಗವಾಗಿ ಮೈಸೂರಿಗೆ ಭೇಟಿ ನೀಡಿದರೆ ಈ ಮ್ಯೂಸಿಯಂಗಳಿಗೆ ಭೇಟಿ ಕೊಟ್ಟು ಬನ್ನಿ.
ಸಾಮಾನ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋದರೆ ಕರ್ನಾಟಕದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನದಲ್ಲಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಮೈಸೂರ ಅರಮನೆ, ಝೂ, ಕೆಆರ್ ಎಸ್. ಈ ಮೂರು ಪ್ರವಾಸಿ ತಾಣಗಳನ್ನು ನೋಡಲೆಂದೇ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದರೆ ಮೈಸೂರು ಪ್ರವಾಸ ಕೈಗೊಂಡಾಗ ನೀವು ಅರಮನೆ, ಝೂ, ಕೆಆರ್ ಎಸ್ ಬೃಂದಾವನದ ಜೊತೆಗೆ ಹಲವು ಪ್ರಮುಖ ಮ್ಯೂಸಿಯಂಗಳನ್ನು ಕಣ್ತುಂಬಿಕೊಳ್ಳಬಹುದು. ಶೈಕ್ಷಣಿಕವಾಗಿ ಈ ವಸ್ತುಸಂಗ್ರಹಾಲಯಗಳು ನಿಮಗೆ ಪ್ರಯೋಜನಕಾರವಾಗಿವೆ.
1. ಮೈಸೂರು ಮರಳು ಶಿಲ್ಪ ಸಂಗ್ರಹಾಲಯ
ಮೈಸೂರಿನಲ್ಲಿರುವ ಮರಳು ಶಿಲ್ಪ ಸಂಗ್ರಹಾಲಯದಲ್ಲಿ ಕಣ್ಮನ ಸಳೆಯುವ ಪ್ರತಿಮೆಗಳಿವೆ. 15 ಎಡಿ ಎತ್ತರದ ಗಣೇಶ ಪ್ರತಿಮೆ ಆಕರ್ಷಣೆಯಾಗಿದೆ. ಲಾಫಿಂಗ್ ಬುದ್ಧ, ಅಧಿದೇವತೆ ಚಾಮುಂಡಿ, ಮೈಸೂರು ರಾಜ ನರಸಿಂಹ ರಾಜ ಒಡೆಯರ್ ಅವರು ಸಿಂಹಾಸನದಲ್ಲಿ ಕುಳಿತಿರುವುದು, ಜಂಬೂ ಸವಾರಿ ಮೆರವಣಿಗೆ, ಸಂತಾ ಕ್ಲಾಸ್, ಕ್ರಿಸ್ಮಸ್ ಮರ ಹೀಗೆ ವಿವಿಧ ಬಗೆಯ ಕಲಾಕೃತಿಗಳನ್ನು ಕಾಣಬಹುದು. 150ಕ್ಕೂ ಹೆಚ್ಚು ಮಣ್ಣಿನ ಕಲಾಕೃತಿಗಳು ಇಲ್ಲಿವೆ. ಈ ಮ್ಯೂಸಿಯಂ ಬೆಳಗ್ಗೆ 8.30 ರಿಂದ ಸಂಜೆ 6.30 ರವರಿಗೆ ತೆರೆದಿರುತ್ತದೆ.
2. ರೈಲ್ವೆ ಮ್ಯೂಸಿಯಂ
ಮೈಸೂರಿನ ಯಾದವಗಿರಿಯ ಮೆದಾರ್ ಬ್ಲಾಕ್ ನಲ್ಲಿರುವ ರೈಲ್ವೆ ಮ್ಯೂಸಿಯಂ ಮಕ್ಕಳಿಗೆ ಹೇಳಿ ಮಾಡಿಸಿದಂತಿದೆ. ಮ್ಯೂಸಿಯಂ ಒಳಗೆ ಟಾಯ್ ರೈಲಿನಲ್ಲಿ ಸುತ್ತವುದು ಮಕ್ಕಳ ಖುಷಿಯನ್ನು ಹೆಚ್ಚಿಸುತ್ತದೆ. ಈ ರೈಲ್ವೆ ಮ್ಯೂಸಿಯಂ ಅನ್ನು 1979 ರಲ್ಲಿ ಭಾರತೀಯ ರೈಲ್ವೆ ನಿರ್ಮಿಸಿದೆ. ದೆಹಲಿಯ ರಾಷ್ಟ್ರೀಯ ರೈಲ್ವೆ ಮ್ಯೂಸಿಯಂ ನಂತರ ಇದು ಎರಡನೇ ರೈಲ್ವೆ ಮ್ಯೂಸಿಯಂ ಎನಿಸಿದೆ. ಬೆಳಗ್ಗೆ 10 ರಿಂದ ಸಂಜೆ 5.30 ರವರಿಗೆ ಮ್ಯೂಸಿಯಂ ಕಾರ್ಯ ನಿರ್ವಹಿಸುತ್ತದೆ.
3. ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿ ಮತ್ತು ಆಡಿಟೋರಿಯಂ
ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಈ ಹಿಂದೆ ಜಗನ್ಮೋಹನ ಅರಮನೆ ಎಂದು ಕರೆಯಲಾಗುತ್ತಿತ್ತು. ರಾಜಮನೆತನ, ಕಲಾ ವಸ್ತುಸಂಗ್ರಹಾಲಯ ಮತ್ತು ಸಂಭಾಣವನ್ನು ಇಲ್ಲಿ ಕಾಣಬಹುದು. ರಾಜರ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಇಲ್ಲಿ ಕಾಣಬಹುದು.
4. ಸೀ ಶೆಲ್ ಮ್ಯೂಸಿಯಂ
ಮೈಸೂರಿನಲ್ಲಿರುವ ಆಕರ್ಷಕ ಮ್ಯೂಸಿಯಂಗಳಲ್ಲಿ ಸೀ ಶೆಲ್ ಮ್ಯೂಸಿಯಂ ಕೂಡ ಒಂದು. ಇದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೀ ಶೆಲ್ ಮ್ಯೂಸಿಯಂ ಅಂತಲೂ ಕರೆಯಲಾಗುತ್ತದೆ. ಮೈಸೂರು ಅರಮನೆಯಿಂದ 3.5 ಕಿಲೋ ಮೀಟರ್ ದೂರದಲ್ಲಿದೆ. ಚಾಮುಂಡಿ ಬೆಟ್ಟದಿಂದ ಕೆಳಗಿಳಿಯುತ್ತಲೇ ಸಿಗುವ ಈ ಸೀ ಶೆಲ್ ಮ್ಯೂಸಿಯಂನಲ್ಲಿ ಸಮುದ್ರ ಚಿಪ್ಪಿನ ವಿವಿಧ ಬಗೆಯ ಕಲಾಕೃತಿಗಳನ್ನು ಕಾಣಬಹುದು.
5. ರಿಜಿನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ
ಮೈಸೂರಿನಲ್ಲಿರುವ ನೈಸರ್ಗಿಕ ಇತಿಹಾಸದ ಪ್ರಾದೇಶಿಕ ವಸ್ತುಸಂಗ್ರಹಾಲಯ ಇದಾಗಿದ್ದು, 1995 ರಲ್ಲಿ ಇದನ್ನು ಲೋಕಾರ್ಪಣೆ ಮಾಡಲಾಗಿತ್ತು. ಈ ಮ್ಯೂಸಿಯಂ ಕಾರಂಜಿ ಕೆರೆಯ ಸಮೀಪದಲ್ಲಿದೆ. ಇಲ್ಲಿ ವಿವಿಧ ಬಗೆಯ ಸಸ್ಯಗಳು, ಪ್ರಾಣಿಗಳು ಹಾಗೂ ಭೂವಿಜ್ಞಾನಕ್ಕೆ ಸಂಬಂಧಿಸಿದ ನೈಜ ವಸ್ತುಗಳನ್ನು ಕಾಣಬಹುದು. ಸಸ್ಯಗಳು ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ಚಿತ್ರಗಳ ಮೂಲಕ ವರ್ಣಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರಿಗೆ ಮ್ಯೂಸಿಯಂ ತೆರೆದಿರುತ್ತದೆ. ಇವುಗಳ ಜೊತೆಗೆ ಮೈಸೂರಿನಲ್ಲಿರುವ ಆರ್ ಕೆ ನಾರಾಯಣ್ ಹೌಸ್, ಜಿಆರ್ ಎಸ್ ಅಪ್ ಡೌನ್ ಮ್ಯೂಸಿಯಂ ಹಾಗೂ ಮೆಲೊಡಿ ವರ್ಲ್ಡ್ ವ್ಯಾಕ್ಸ್ ಮ್ಯೂಸಿಯಂಗೂ ಭೇಟಿ ಕೊಟ್ಟು ಬನ್ನಿ.