ಪೊಲೀಸ್ ನೇಮಕಾತಿ ಹಗರಣದ ಹೆಚ್ಚಿನ ತನಿಖೆಗೆ ಎಸ್‌ಐಟಿ ರಚನೆ, ಮೆಟ್ರೋ 3 ನೇ ಹಂತ ಯೋಜನೆ ಸೇರಿ ರಾಜ್ಯ ಸಚಿವ ಸಂಪುಟದ ನಿರ್ಣಯಗಳಿವು
Mar 15, 2024 09:53 AM IST
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಸಿಎಂ ಜಿ ಪರಮೇಶ್ವರಂ.
- ಗುರುವಾರ (ಮಾರ್ಚ್ 14) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿದೆ. ಬೆಂಗಳೂರಿಗೆ ಮೆಟ್ರೋ 3 ನೇ ಹಂತ ಯೋಜನೆ ಹಾಗೂ ಪೊಲೀಸ್ ನೇಮಕಾತಿ ಹಗರಣದ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ವಿಧಾನಸೌಧ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ, ಬೆಂಗಳೂರಿಗೆ ಮೆಟ್ರೋ 3 ನೇ ಹಂತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ, ರೈತರ ಉತ್ಪಾದನೆ ಹೆಚ್ಚಿಸಲು ಆಗ್ರಿ ಇನ್ನೋವೇಷನ್ ಸೆಂಟರ್, ಪೊಲೀಸ್ ನೇಮಕಾತಿ ಹಗರಣ ಕುರಿತ ಹೆಚ್ಚಿನ ತನಿಖೆಗೆ ಎಸ್‌ಐಟಿ ರಚನೆ ಮತ್ತು ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೇ ಅನುಮೋದನೆ ನೀಡಲಾಗಿದೆ.
1. ವಿಧಾನಸೌಧ ಆವರಣದಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ
ಕನ್ನಡ ನಾಡು, ನುಡಿ ಸಂಸ್ಕೃತಿಯ ಸಂಕೇತವಾದ ತಾಯಿ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸುಮಾರು 23 ಕೋಟಿ ರೂ ವೆಚ್ಚದಲ್ಲಿ ಸ್ಥಾಪನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಆದಷ್ಟು ಬೇಗ ಈ ಕಾಮಗಾರಿಯನ್ನು ಪ್ರಾರಂಭಿಸುವ ಇಚ್ಛೆಯನ್ನು ಸಂಪುಟ ವ್ಯಕ್ತಪಡಿಸಿದೆ. ಕನ್ನಡ ನಾಡು ಏಕೀಕರಣಗೊಂಡು, ಕರ್ನಾಟಕ ಎಂಬ ಹೆಸರು ನಾಮಕರಣವಾಗಿ 50 ವರ್ಷ ಸಂದಿರುವ ಸಂದರ್ಭದಲ್ಲಿ ಕನ್ನಡದ ಪ್ರತೀಕದ ಗುರುತು ಸರ್ಕಾರದ ಆವರಣದಲ್ಲಿರಬೇಕೆಂಬ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಾಗಿದೆ.
2. ಬೆಂಗಳೂರಿಗೆ ಮೆಟ್ರೋ 3 ನೇ ಹಂತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
ಬೆಂಗಳೂರಿನ ವಾಹನ ದಟ್ಟಣೆ ನಿವಾರಿಸಲು ಮೆಟ್ರೋ ಮಾತ್ರ ಪರಿಹಾರ. ಈಗಾಗಲೇ ಮೆಟ್ರೋ ಹಂತ 2 ಎ ಮತ್ತು 2 ಬಿ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದೆ. ಭವಿಷ್ಯದ ಅವಶ್ಯಕತೆಯನ್ನು ಗಮನದಲ್ಲಿರಿಸಿ ಮೆಟ್ರೋ ರೈಲು ಹಂತ-3 ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆಯನ್ನು ನೀಡಿದೆ. 44.65 ಕಿ.ಮೀ ಉದ್ದದ ಎರಡು ಕಾರಿಡಾರ್‌ಗಳನ್ನು ( ಕಾರಿಡಾರ್-1 ಜೆಪಿನಗರ 4 ನೇ ಹಂತದಿಂದ ಪಶ್ಚಿಮ ಹೊರವರ್ತುಲ ರಸ್ತೆಯುದ್ದಕ್ಕೂ ಕೆಂಪಾಪುರದವರೆಗೆ 32.15 ಕಿ.ಮೀ. ಹಾಗೂ ಕಾರಿಡಾರ್ -2 ಹೊಸಹಳ್ಳಿಯಿಂದ ಮಾಗಡಿ ರಸ್ತೆಯುದ್ದಕ್ಕೂ ಕಡಬಗೆರೆವರೆಗೆ 12.50 ಕಿ.ಮೀ.) ಒಟ್ಟು ಅಂದಾಜು ವೆಚ್ಚ ರೂ.15,611 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೆಟ್ರೋ 3 ಹಂತಕ್ಕೆ 2028ರಲ್ಲಿ ಚಾಲನೆ ನೀಡುವ ಗುರಿಯನ್ನು ಬಿಎಂಆರ್ ಸಿ ಎಲ್ ಸಂಸ್ಥೆ ತಿಳಿಸಿದೆ. ಈ ಯೋಜನೆಯ ಶೇ.85 ರಷ್ಟು ವೆಚ್ಚವನ್ನು ರಾಜ್ಯಸರ್ಕಾರವೇ ಭರಿಸಲಿದ್ದು, ಉಳಿದ ಅನುದಾನವನ್ನು ಕೇಂದ್ರ ನೀಡಲಿದೆ.
3. ಬೆಂಗಳೂರಿನ ಪೂರ್ವ ಭಾಗದಲ್ಲಿ ಟ್ರೀ ಪಾರ್ಕ್ ಸ್ಥಾಪನೆ
ಬೆಂಗಳೂರಿನ ಪೂರ್ವ ಭಾಗದ ಕೆ.ಆರ್ ಪುರ ತಾಲ್ಲೂಕಿನಲ್ಲಿ ಎನ್‌ಜಿಇಎಫ್ ಬೆಂಗಳೂರು ಸಂಸ್ಥೆಯ 65 ಎಕರೆ ಜಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ತೀರ್ಮಾನಿಸಿದೆ. ವಾಕಿಂಗ್ ಹಾಗೂ ಸೈಕ್ಲಿಂಗ್‌ಗೆ ಪ್ರತ್ಯೇಕ ಟ್ರ್ಯಾಕ್, ಆಟದ ಮೈದಾನ ಸೇರಿದಂತೆ ಹಲವು ಸೌಕರ್ಯಗಳನ್ನು ಪಾರ್ಕ್‌ನಲ್ಲಿ ಒದಗಿಸಲಾಗುವುದು. ಲಾಲ್‌ಬಾಗ್, ಕಬ್ಬನ್ ಪಾರ್ಕ್ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕೋಟ್ಯಾಂತರ ರೂ.ಗಳ ಬೆಲೆ ಬಾಳುವ ಜಮೀನನ್ನು ಯಾವುದೇ ಕೈಗಾರಿಕೆಗಳಿಗೆ ನೀಡದೇ, ಸಾರ್ವಜನಿಕರ ಬಳಕೆಗಾಗಿ ಟ್ರೀ ಪಾರ್ಕ್‌ನ್ನು ಅಂದಾಜು ವೆಚ್ಚ 11 ಕೋಟಿ ರೂ.ಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ.
4. 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ 132 ಕೋಟಿ ರೂ. ಅಂದಾಜು ವೆಚ್ಚ
ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿನ 7 ಜಿಲ್ಲೆಗಳಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು 132 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲು ಸಚಿವ ಸಂಪುಟ ತೀರ್ಮಾನಿಸಿದೆ.
5. ಅಗ್ರಿ ಇನ್ನೋವೇಷನ್ ಸೆಂಟರ್ ಸ್ಥಾಪನೆ
ಕೃಷಿ ಕ್ಷೇತ್ರದಲ್ಲಿ ರೈತರ ಉತ್ಪಾದನೆ ಹೆಚ್ಚಳಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು 67.50 ಕೋಟಿ ರೂ.ಗಳ ವೆಚ್ಚದಲ್ಲಿ ಅಗ್ರಿ ಇನ್ನೋವೇಷನ್ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ. ಕೃಷಿ ಉತ್ಪಾದನೆ ಮತ್ತು ಬೆಳೆ ಸಂರಕ್ಷಣೆಗಾಗಿ ಹೊಸ ನವೋದ್ಯಮಗಳನ್ನು ಪ್ರೋತ್ಸಾಹಿಸಲು ಈ ಕೇಂದ್ರ ಸಹಕಾರಿಯಾಗಲಿದೆ.
6. ಪೋಲೀಸ್ ನೇಮಕಾತಿ ಹಗರಣ: ಹೆಚ್ಚಿನ ತನಿಖೆಗೆ ಎಸ್.ಐ.ಟಿ ರಚನೆ
ಪೊಲೀಸ್ ನೇಮಕಾತಿ ಹಗರಣ ಕುರಿತು ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ಸಮಿತಿ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಈ ಹಗರಣದಲ್ಲಿ ಸರ್ಕಾರಿ ನೌಕರರು, ಖಾಸಗಿ ಮತ್ತು ಮಧ್ಯವರ್ತಿಗಳು ಸೇರಿ 113 ಮಂದಿ ಶಾಮೀಲಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಿಐಡಿ ತಂಡ 17 ಪ್ರಕರಣಗಳ ತನಿಖೆಯನ್ನು ಮಾಡುತ್ತಿದೆ. ಆಯೋಗದ ಮುಂದೆ ಕೆಲವರು ಮಾಹಿತಿ ನೀಡಿಲ್ಲ. ಅಂಥವರ ಬಳಿ ಮಾಹಿತಿಯನ್ನು ಅನ್ಯ ತನಿಖೆ ಮೂಲಕ ಪಡೆಯಬೇಕಿದ್ದು, ಇನ್ನಷ್ಟು ವಿಸ್ತೃತ ತನಿಖೆ ಕೈಗೊಳ್ಳಲು ಎಸ್.ಐ.ಟಿಗೆ ವಹಿಸಬೇಕೆಂಬ ನ್ಯಾಯಮೂರ್ತಿಗಳ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಎಸ್.ಐ.ಟಿ ರಚನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
7. ನಿವೇಶನ ಹಂಚಿಕೆಯಾದವರಿಗೆ ಕಂತು ಕಟ್ಟಲು 3 ತಿಂಗಳ ಅವಕಾಶ
ಬೆಂಗಳೂರಿನಲ್ಲಿ ಕೆಂಪೇಗೌಡ ಬಡಾವಣೆ ಹಾಗೂ ಇತರೆ ಬಡಾವಣೆಗಳಲ್ಲಿ 2016 -2018 ರ ಅವಧಿಯಲ್ಲಿ. ಲೀಸ್ ಕಂ ಸೇಲ್ ಆಧಾರದ ಮೇಲೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆಲವರು ಕಂತು ಕಟ್ಟಲು ಸಾಧ್ಯವಾಗದೇ ಇನ್ನೊಂದು ಅವಕಾಶಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅವರಿಗೆ ಹಣ ಕಟ್ಟಲು ಮೂರು ತಿಂಗಳ ಅವಕಾಶವನ್ನು ಕೊಟ್ಟು ಬಾಕಿ ಹಣ ಹಾಗೂ 12 ರಷ್ಟು ಬಡ್ಡಿಯೊಂದಿಗೆ ಪಾವತಿಸಿ ಲೀಸ್ ಕಂ ಸೇಲ್ ಡೀಡ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲು ಸಚಿವ ಸಂಪುಟ ತೀರ್ಮಾನ ಮಾಡಿದೆ.
8. ರಸ್ತೆ ಅಗಲೀಕರಣ: ಟಿ.ಡಿ.ಆರ್ ಕೊಡಲು ತೀರ್ಮಾನ
ಬೆಂಗಳೂರು ಅರಮನೆಯ ಒಳಗೆ ಕಾಂಪೌಂಡ್ ಹಾಕಲಾಗಿದೆ. ಅರಮನೆ ಹೊರಗಿನ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ನಡೆಯುತ್ತಿದ್ದು ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಆಯುಕ್ತರು ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯಲಿದ್ದು, ಸರ್ವೋಚ್ಛ ನ್ಯಾಯಾಲಯವು ರಸ್ತೆ ಅಗಲೀಕರಣ ಮಾಡುವುದಾದರೆ ಟಿ.ಡಿ.ಆರ್ ಕೊಟ್ಟು ಸ್ವಾಧೀನ ಮಾಡಿಕೊಳ್ಳಬೇಕೆಂದು ಸೂಚಿಸಿದೆ. ಹಿಂದಿನ ಸರ್ಕಾರ ರಸ್ತೆ ಅಗಲೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ತೀರ್ಮಾನಿಸಿತ್ತು. ಈಗ ರಸ್ತೆ ಅಗಲೀಕರಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚಿಸಿ ಅರಮನೆಯ ಜಾಗ ರಸ್ತೆ ಅಗಲೀಕರಣಕ್ಕೆ ಅಗತ್ಯವಿದೆ ಎಂಬ ತೀರ್ಮಾನಕ್ಕೆ ಸಚಿವ ಸಂಪುಟ ಬಂದಿದೆ. ಟಿ.ಡಿ.ಆರ್ ಕೊಡಲೂ ಕೂಡ ಸಂಪುಟ ತೀರ್ಮಾನಿಸಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )