ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಶಿಕ್ಷಕನ ಹವ್ಯಾಸ, ಇವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡಿದ್ರೆ ನೀವು ನಿಬ್ಬೆರಗಾಗುವುದು ಖಂಡಿತ
Dec 22, 2024 02:24 PM IST
ಹವ್ಯಾಸಿ ಪತ್ರಿಕಾ ಸಂಗ್ರಹಕಾರ (ವೃತ್ತಿಯಲ್ಲಿ ಶಿಕ್ಷಕರು) ಕೆಎಸ್ ಕಲ್ಯಾಣ ಕುಮಾರ್
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ನಡುವೆ ಕೆಎಸ್ ಕಲ್ಯಾಣ ಕುಮಾರ್ ಅವರ ಸುದ್ದಿಪತ್ರಿಕೆಗಳ ಸಂಗ್ರಹ ನೋಡುಗರನ್ನು ನಿಬ್ಬೆರಗು ಮಾಡುವಂತೆ ಇತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹಳ್ಳಿಯೊಂದರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಇವರ ಹವ್ಯಾಸದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳ ನಡುವೆ ಒಂದು ಕೌಂಟರ್ ಎಲ್ಲರನ್ನೂ ಗಮನ ಸೆಳೆಯುವಂತೆ ಇತ್ತು. ಆ ಕೌಂಟರ್ ತುಂಬಾ ಸಾಲಾಗಿ ಹಳೆಯ ದಿನಪತ್ರಿಕೆಗಳು, ವಾರಪತ್ರಿಕೆಗಳನ್ನು ಜೋಡಿಸಲಾಗಿತ್ತು. ಒಂದಲ್ಲ, ಎರಡಲ್ಲ ನೂರಾರು ಸಾವಿರಾರು ಪತ್ರಿಕೆಗಳು ಇರುವಂತೆ ಕಾಣಿಸುತ್ತಿತ್ತು. ಆ ಕೌಂಟರ್‌ನೊಳಗೆ ಪತ್ರಿಕೋದ್ಯಮದ ಕುರಿತು ಆಸಕ್ತಿ ಇರುವವರು ತಮ್ಮ ಊರಿನ ಹಳೆಯ ಪತ್ರಿಕೆಗಳನ್ನು ನೋಡಿ ಖುಷಿ ಪಡುತ್ತಿದ್ದರು. ‘ಮೊದಲ ಮಹಿಳಾ ಪತ್ರಕರ್ತೆ ನಂಜನಗೂಡು ತಿರುಮಲಮ್ಮ ಆರಂಭಿಸಿದ ಸುದ್ದಿ ಪತ್ರಿಕೆ ಇದೆಯಾ? ಬೆಂಗಳೂರಿನ ಡಾನ್‌ಗಳು ಭಯಪಡುತ್ತಿದ್ದ ಕಿಡಿ ಪತ್ರಿಕೆ ಇದೆಯಾ?‘ ಹೀಗೆ ಯಾರಾದರೂ ಕೇಳಿದರೆ ತಕ್ಷಣ ತನ್ನ ಸಂಗ್ರಹದಿಂದ ಅಲ್ಲಿದ್ದ ವ್ಯಕ್ತಿ ಹುಡುಕಿ ತೋರಿಸುತ್ತಿದ್ದರು. ಹವ್ಯಾಸಿ ಕನ್ನಡ ಪತ್ರಿಕಾ ಸಂಗ್ರಹಕಾರ (ವೃತ್ತಿಯಲ್ಲಿ ಶಿಕ್ಷಕರು) ಕೆಎಸ್ ಕಲ್ಯಾಣ ಕುಮಾರ್ ಅವರಿಟ್ಟ ಮಳಿಗೆಯೊಳಗೆ ಒಂದಿಷ್ಟು ಹೊತ್ತು ಇದ್ದು ಹೊರಬಂದಾಗ ಕರ್ನಾಟಕ ಮಾತ್ರವಲ್ಲದೆ ಜಗತ್ತಿನ ಪತ್ರಿಕೋದ್ಯಮದ ಇತಿಹಾಸವೇ ಕಣ್ಣ ಮುಂದೆ ಕಾಣಿಸುವುದು ಸುಳ್ಳಲ್ಲ.
ಸುದ್ದಿಪತ್ರಿಕೆಗಳ ಅಪರೂಪದ ಸಂಗ್ರಾಹಕ
ಹಿಂದೂಸ್ತಾನ್ ಟೈಮ್ಸ್ ಕನ್ನಡ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಆ ಮಳಿಗೆಯಲ್ಲಿ ಸಂಯುಕ್ತ ಕರ್ನಾಟಕದ ಹಿರಿಯ ಪತ್ರಕರ್ತರಾದ ಎಚ್‌ಎಸ್ ಪ್ರಭಾಕರ ಮತ್ತು ಟೈಮ್ಸ್ ಆಫ್ ಇಂಡಿಯಾದ ರಾಜೀವ್ ಕಲ್ಕೋಡ್ ಕೂಡ ಇದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಚ್‌ಎಸ್ ಪ್ರಭಾಕರರಿಗೆ ತಾವು ಒಂದು ಕಾಲದಲ್ಲಿ ಆರಂಭಿಸಿದ ಜನಹಿತ ಪತ್ರಿಕೆಯನ್ನು ನೋಡಿ ಖುಷಿಯೋ ಖುಷಿ. ಅಲ್ಲಿ ಬಂದ ಕೆಲವರು "ಇದು ನಮ್ಮ ಊರಿನ ಹಳೆಯ ಪತ್ರಿಕೆ" ಎಂದು ಖುಷಿಪಡುತ್ತಿದ್ದರು.
"1947ರ ನವೆಂಬರ್ ಪತ್ರಿಕೆ ಇದು. ಗಳಗನಾಥರು ಸಂಪಾದಕರಾಗಿದ್ದರು. ಸದ್ಬೋಧ ಚಂದ್ರಿಕೆ ಎಂಬ ಪತ್ರಿಕೆಯಿದು. ಹಾವೇರಿಯಿಂದ ಬರುತ್ತಿತ್ತು. ನನ್ನಲ್ಲಿ ಇರುವ ಅತ್ಯಂತ ಹಳೆಯ ಪತ್ರಿಕೆಯೆಂದರೆ ಕಾಟೇವಾಡ ಟೈಮ್ಸ್. ಗುಜರಾತಿನದ್ದು. 1891 ಕಾಲದ ಆ ಪತ್ರಿಕೆ ಇದು. 1941ರ ಪತ್ರಿಕೆ ಇದು. ಸ್ವತಂತ್ರ್ಯ ಅಂತ. ಬಸವರಾಜ ಕಟ್ಟಿಮನಿ ಅವರದು" ಎಂದು ಅವರು ತಮ್ಮ ಸಂಗ್ರಹದಲ್ಲಿರುವ ಪತ್ರಿಕೆಗಳನ್ನು ತೋರಿಸುತ್ತಿದ್ದರು. ಸಾಧ್ವಿ, ವೀರಕೇಸರಿ, ತಾಯಿ ನಾಡು, ವೃತ್ತಾಂತ ಪತ್ರಿಕೆ, ಭಕ್ತ ಬಂಧು, ಜೀವನ ಶಿಕ್ಷಣ, ಸುಭೋದ ಚಂದ್ರಿಕೆ, ಅರ್ಥ ಸಾಧಕ, ಸಂಪದಾಭ್ಯುದಯ, ರಾಷ್ಟ್ರಮತ, ಮಹಾಭಾರತ ಸೇರಿದಂತೆ ಸ್ವಾತಂತ್ರ್ಯ ಪೂರ್ವದ ಸಾಕಷ್ಟು ಪತ್ರಿಕೆಗಳು ಇವರ ಸಂಗ್ರಹದಲ್ಲಿವೆ.
"ಎಲ್ಲಾ ಭಾಷೆಯ ಎಲ್ಲಾ ದೇಶಗಳ ಪತ್ರಿಕೆಗಳನ್ನು ನಾನು ಸಂಗ್ರಹಿಸುವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಶ್ರೀನಿವಾಸಪುರ ಅಂತ ಒಂದು ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ಎಲ್ಲಾ ದೇಶಗಳದ್ದು ಸೇರಿ ಹದಿನೇಳು ಸಾವಿರ ಪತ್ರಿಕೆಗಳ ಸಂಗ್ರಹ ಇದೆ. ಅದರಲ್ಲಿ ಕನ್ನಡದ್ದು ಸುಮಾರು ಆರು ಸಾವಿರ ಇವೆ. ಟ್ಯಾಬ್ಲೆಯ್ಡ್, ಮ್ಯಾಗಜಿನ್, ಡೈಲಿ ಪತ್ರಿಕೆಗಳು ಸೇರಿದಂತೆ ಎಲ್ಲವೂ ಇವೆ. ನನ್ನ ಸಂಗ್ರಹದಲ್ಲಿ ಸ್ವಾತಂತ್ರ್ಯಪೂರ್ವದ್ದು ಬೇಕಾದಷ್ಟಿದೆ. ಈಗ ಬಂದು ನಿಂತು ಹೋಗಿರುವುದು ಸಾಕಷ್ಟಿವೆ" ಎಂದು ಕೆಎಸ್ ಕಲ್ಯಾಣ ಕುಮಾರ್ ಮಾಹಿತಿ ನೀಡಿದ್ದಾರೆ.
ಓದುವ ಸಂಸ್ಕೃತಿಗೆ ಪ್ರೋತ್ಸಾಹ ನೀಡಿ
ಈ ರೀತಿ ಪತ್ರಿಕೆಗಳನ್ನು ಸಂಗ್ರಹಿಸುವ ಉದ್ದೇಶ ಏನು ಎಂಬ ಪ್ರಶ್ನೆಗೆ "ಪತ್ರಿಕಾ ಸಂಸ್ಕೃತಿ ಈಗ ತುಂಬಾ ಕೆಳಮಟ್ಟಿಗೆ ಹೋಗುತ್ತಿದೆ. ಈಗ ಡಿಜಿಟಲ್ ಮಾಧ್ಯಮಗಳೂ ಬಂದಿವೆ. ಆದರೆ, ಪತ್ರಿಕೆಗಳನ್ನು ಓದುವ ಅಭ್ಯಾಸ ನಿಲ್ಲಿಸಬೇಡಿ. 1 ರೂನಿಂದ 5 ರೂಗೆ ಪತ್ರಿಕೆ ಸಿಗುತ್ತದೆ. ಅದನ್ನು ಖರೀದಿಸಿ ಓದಿ. ಇದರಿಂದ ಜ್ಞಾನ ಉತ್ತಮಗೊಳ್ಳುತ್ತದೆ. ಮುಂದಿನ ಪೀಳಿಗೆಗೆ ಇದು ಮಾದರಿಯಾಗಲಿ. ಓದುವ ಸಂಸ್ಕೃತಿಗೆ ಪ್ರಾಶಸ್ತ್ಯ ಇರಲಿ. ಪತ್ರಿಕೆಗಳನ್ನು ಓದುವುದರಿಂದ ನಮ್ಮ ಆರೋಗ್ಯಕ್ಕೆ ತೊಂದರೆ ಇಲ್ಲ. ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಆರೋಗ್ಯಕ್ಕೂ ಹಾನಿ. ಈಗ ಪುಸ್ತಕ ಓದುವುದು ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಜನರಲ್ಲಿ ಪತ್ರಿಕೆ, ಓದಿನ ಕುರಿತು ಎಚ್ಚರಿಸುವ ಕೆಲಸ ಮಾಡುತ್ತಿದ್ದೇನೆ. ಇದರೊಂದಿಗೆ ನನ್ನ ಕನ್ನಡ ಪತ್ರಿಕೆಗಳನ್ನು ಇಡೀ ವಿಶ್ವ ನೋಡಬೇಕೆಂಬ ಉದ್ದೇಶ ನನ್ನದು. ಇದಕ್ಕಾಗಿ ಸಾಕಷ್ಟು ವಿದೇಶಿಗರ ಜತೆಯೂ ಸಂಪರ್ಕದಲ್ಲಿದ್ದೇನೆ. ನಮ್ಮ ದೇಶದ ಪತ್ರಿಕೆಯನ್ನು ಬೇರೆ ದೇಶದವರಿಗೆ ಕಳುಹಿಸಿದ್ದೇನೆ. ಆ ದೇಶದ ಪತ್ರಿಕೆಯನ್ನು ತರಿಸಿಕೊಂಡಿದ್ದೇನೆ. ಕೆಲವು ದೇಶಗಳಲ್ಲಿ ಬೆರಳೆಣಿಕೆಯ ಪತ್ರಿಕೆಗಳು ಇರುತ್ತವೆ. ಆದರೆ, ನಮ್ಮ ದೇಶದಲ್ಲಿ ಒಂದು ಜಿಲ್ಲೆಯಲ್ಲಿ ಹತ್ತು ಹಲವು ಪತ್ರಿಕೆ ಇರುತ್ತವೆ" ಎಂದು ಅವರು ತಮ್ಮ ಪ್ರತಿಕಾ ಸಂಗ್ರಹದ ಹವ್ಯಾಸ ಬಿಚ್ಚಿಡುತ್ತಾರೆ.
"ಕಳೆದ ಹಲವು ವರ್ಷಗಳಿಂದ ನಾನು ಸಾಹಿತ್ಯ ಸಮ್ಮೇಳನಗಳಿಗೆ ಬರುತ್ತಿದ್ದೇನೆ. ಇತ್ತೀಚೆಗೆ ಅಕ್ಕಾ ಸಮ್ಮೇಳನಕ್ಕೂ ಹೋಗಿದ್ದೆ. ನನ್ನ ಸ್ವಂತ ಖರ್ಚಿನಲ್ಲಿಯೇ ಹೋಗುತ್ತಿದ್ದೇನೆ. ನನಗೆ ಸರಿಯಾಗಿ ಸಪೋರ್ಟ್ ಸಿಗುತ್ತಿಲ್ಲ. ಕಷ್ಟ ಆಗುತ್ತದೆ. ಆದರೂ, ಹವ್ಯಾಸದಿಂದಾಗಿ ಇದನ್ನು ಮುಂದುವರೆಸುತ್ತಿದ್ದೇನೆ. ವಿವಿಧ ಕಾರ್ಯಕ್ರಮಗಳ ಆಯೋಜಕರು ನನ್ನ ಈ ಪ್ರಯತ್ನಕ್ಕೆ ಬೆಂಬಲ ನೀಡಿದರೆ ಉತ್ತಮವಾಗುತ್ತಿತ್ತು" ಎಂದು ಅವರು ಹೇಳುತ್ತಾರೆ.
ನಿಮ್ಮಲ್ಲಿ ಹಳೆಯ ಪತ್ರಿಕೆಗಳಿದ್ದರೆ ಕಳುಹಿಸಿ
"ನಾನು ಸಾಕಷ್ಟು ಜನರಲ್ಲಿ ಪತ್ರಿಕೆಗಳನ್ನು ಕಳುಹಿಸಿಕೊಡಿ ಎಂದು ಕೇಳಿಕೊಳ್ಳುತ್ತೇನೆ. ಆದರೆ, ಸಾಕಷ್ಟು ಜನರು ನಿನಗೇನೂ ಲಾಭ ಎಂದು ಕೇಳುತ್ತಾರೆ. ಈ ಮಳಿಗೆಗೂ ನಾನೇ ಸ್ವಂತ ಹಣ ಕಟ್ಟಿದ್ದೇನೆ. ನನಗೆ ಗೊತ್ತಿರುವವರೇ ಈ ರೀತಿ ಮಾಡಿದರೆ ನಿನಗೇನೂ ಲಾಭ ಎಂದು ಹಂಗಿಸುತ್ತಾರೆ. ಇಂತಹ ಕೆಲಸವನ್ನು ವ್ಯಾಪಾರಿ ಉದ್ದೇಶದಿಂದ ನೋಡಬಾರದು. ಈ ರೀತಿಯ ಕಾರ್ಯಕ್ರಮಗಳಲ್ಲಿ ನನ್ನ ಈ ಹವ್ಯಾಸ ನೋಡಿ ನನಗೆ ಸಾಕಷ್ಟು ಜನರು ಹಳೆಯ ಪತ್ರಿಕೆಗಳನ್ನು ಕಳುಹಿಸುತ್ತಿದ್ದಾರೆ. ದಸರಾದಲ್ಲಿ ನನ್ನ ಸ್ಟಾಲ್ ನೋಡಿದವರೊಬ್ಬರು ನನ್ನಲ್ಲಿ ಹಳೆಯ ಜನವಾಹಿನಿ ಪತ್ರಿಕೆ ಇದೆ ಎಂದು ಕಳುಹಿಸಿಕೊಟ್ರು. ಈ ರೀತಿ ಸಂತೋಷ ನೀಡುವ ಗಳಿಗೆಯೂ ಇದೆ. ನಿಮ್ಮಲ್ಲಿ ಯಾವುದಾದರೂ ಹಳೆಯ ಪತ್ರಿಕೆ ಇದ್ದರೆ ದಯವಿಟ್ಟು ಕಳುಹಿಸಿಕೊಡಿ. ನನ್ನ ವಿಳಾಸ: ಕೆಎಲ್ ಕಲ್ಯಾಣ್ ಕುಮಾರ್, ಮನೆ ವಿಳಾಸ: s/o ಎ ನರಸಿಂಹಮೂರ್ತಿ, ಹಿರೇಕಟ್ಟಿಗೇನಹಳ್ಳಿ, ಚಿಂತಾಮಣಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. 536128. ದೂರವಾಣಿ ಸಂಖ್ಯೆ: 9901072166.
- ಲೇಖನ: ಪ್ರವೀಣ್ ಚಂದ್ರ ಪುತ್ತೂರು
ಇದನ್ನೂ ಓದಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮನಸೆಳೆದ ಅಕ್ಷರ ಭಂಡಾರ, ಇಂದಿನ ಕನ್ನಡದ ಮೂಲಕ ಪ್ರಾಚೀನ ಕನ್ನಡ ಲಿಪಿ ಓದುವ ಖುಷಿ