ಮುದ್ದೆ-ಹುಳಿಸೊಪ್ಪು ಸಾಂಬಾರ್ ಸೂಪರ್, ಸಾಲಿನಲ್ಲಿ ನಿಂತು ಮುದ್ದೆ ಸವಿದ ಜನ; ಪುರದ ಮಠದ ಮುದ್ದೆ ಜಾತ್ರೆಗೆ ಭಕ್ತರ ದಂಡು
Dec 16, 2024 10:47 PM IST
ಮುದ್ದೆ-ಹುಳಿಸೊಪ್ಪು ಸಾಂಬಾರ್ ಸೂಪರ್, ಸಾಲಿನಲ್ಲಿ ನಿಂತು ಮುದ್ದೆ ಸವಿದ ಜನ; ಪುರದ ಮಠದ ಮುದ್ದೆ ಜಾತ್ರೆಗೆ ಭಕ್ತರ ದಂಡು
- Purada Math Jatra: ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಕೃತಿಕೋತ್ಸವವು ಮುದ್ದೆ ಜಾತ್ರೆ ಎಂದೆ ಪ್ರಸಿದ್ದಿ.
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಪುರದಮಠದ ಕೃತಿಕೋತ್ಸವ ಎಂದರೆ ಮುದ್ದೆ ಜಾತ್ರೆ ಎಂದೆ ಪ್ರಸಿದ್ದಿ. ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಮುದ್ದೆ ದಾಸೋಹಕ್ಕೆ ಹಳ್ಳಿ ಹಳ್ಳಿಗಳಿಂದ ಜನರು ಆಗಮಿಸುತ್ತಾರೆ. ಬಡವ ಶ್ರೀಮಂತ, ಮೇಲು ಕೀಳು ಎನ್ನುವ ಭೇದವಿಲ್ಲದೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮುದ್ದೆ ಹುಳಿಸೊಪ್ಪು ಸವಿಯುತ್ತಾರೆ. ಪ್ರತಿ ವರ್ಷದಂತೆ ಈ ಸಲವೂ ಪುರದ ಮಠದಲ್ಲಿ ಪುರಾಣ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ಕೃತಿಕೋತ್ಸವ ಸೋಮವಾರ (ಡಿಸೆಂಬರ್ 16) ನಡೆಯಿತು. ಸಹಸ್ರಾರು ಭಕ್ತರು ನೆರೆದಿದ್ದರು.
ಕೃತಿಕೋತ್ಸವದ ಮುದ್ದೆ ಊಟ ಈ ಭಾಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವುದರಿಂದ ಮುದ್ದೆ ಊಟ ಮಾಡಲೆಂದೇ ಅನೇಕರು ಬಂದಿದ್ದರು ಒಬ್ಬೊಬ್ಬರು ಎರಡೆರಡು, ಮೂರ್ಮೂರು ಮುದ್ದೆ ತಿಂದು ಸಂಭ್ರಮಿಸಿದರು. ಮುದ್ದೆಯ ಜೊತೆಗೆ ಇಲ್ಲಿನ ಸಾರೂ ಕೂಡ ಬಾರಿ ಖ್ಯಾತಿ ಪಡೆದಿದೆ. ಎಲ್ಲಾ ರೀತಿಯ ತರಕಾರಿ, ಕಾಳು, ಕಾಯಿ ಹಾಕಿ ಮಾಡುವ ಸಾರಿಗೆ ಹುಳಿಸೊಪ್ಪು ಎನ್ನುತ್ತಾರೆ. ಯಾರೊಬ್ಬರೂ ವೃತ್ತಿಪರ ಬಾಣಸಿಗರಲ್ಲದಿದ್ದರೂ ಇವರು ಮಾಡುವ ಈ ಹುಳಿಸೊಪ್ಪು ರುಚಿಗೆ ಭಕ್ತರು ಮನಸೋತರು. ತಟ್ಟೆತುಂಬ ಸಾರು ಹಾಕಿಸಿಕೊಂಡು ಭರ್ಜರಿ ಭೋಜನ ಸವಿದರು.
ಸರತಿ ಸಾಲಿನಲ್ಲಿ ನಿಂತು ಮನೆಗೂ ಕೂಡ ಸಾರನ್ನು ಕೊಂಡೊಯ್ದರು. ಕೆಲವರಂತೂ ಮುಂಜಾನೆ ಈ ಸಾರಿಗೆ ರೊಟ್ಟಿ, ಚಪಾತಿ ಮಾಡಿಸಿಕೊಂಡು ತಿಂದಿದ್ದೂ ಇದೆ. ಕೃತಿಕೋತ್ಸವಕ್ಕೆ ಮುದ್ದೆ ಊಟ ನೀಡುವುದು ಕಳೆದ ಐದಾರು ದಶಕಗಳಿಂದಲೂ ನಡೆದುಕೊಂಡು ಬಂದ ಪ್ರತೀತಿ, ದೇವಸ್ಥಾನ ಸಮಿತಿಯಿಂದ ಕೃತಿಕೋತ್ಸವದ ದಿನ ಘೋಷಿಸಿದರೆ ಸಾಕು ಭಕ್ತರು ಸ್ವಯಂ ಪ್ರೇರಣೆಯಿಂದ ತಾವು ಬೆಳೆದ ದವಸ ಧಾನ್ಯ, ತರಕಾರಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತಂದು ದೇವಸ್ಥಾನಕ್ಕೆ ಕೊಡುತ್ತಾರೆ. ಕೆಲವರು ಅಕ್ಕಿ, ಬೇಳೆಕಾಳು, ರಾಗಿ, ಎಣ್ಣೆ ಸೇರಿದಂತೆ ಮುದ್ದೆ ಸಾರಿಗೆ ಬೇಕಾದ ಎಲ್ಲಾ ಪದಾರ್ಥಗಳನ್ನೂ ಕೊಡಿಸಿರುತ್ತಾರೆ.
ಐದಾರು ಸಾವಿರ ಮುದ್ದೆ, ಏಳೆಂಟು ಕೊಳಗ ಸಾಂಬಾರ್
ಇದನ್ನೆಲ್ಲ ಉಪಯೋಗಿಸಿ ಗ್ರಾಮದ ಜನರೆಲ್ಲಾ ಸೇರಿ ರಾಗಿಮುದ್ದೆ ಹಾಗೂ ಹುಳಿಸೊಪ್ಪು ತಯಾರಿಸಲಾಗಿತ್ತು. ಆದರೆ ಈ ಅಡುಗೆ ತಯಾರಿಕೆಗೆ ಒಬ್ಬರ ಮೇಲುಸ್ತುವಾರಿ ಇಲ್ಲ. ಎಲ್ಲರೂ ತಮ್ಮ ತಮ್ಮ ಜಾವಾಬ್ದಾರಿಯೆಂದು ಭಾವಿಸಿ ಸೇವೆ ಸಲ್ಲಿಸಿದರು. ಕಾಯಿ, ತರಕಾರಿ ಹೆಚ್ಚಿ ಕೊಡಲೊಂದು ತಂಡ, ಸಾರು, ಅನ್ನ, ಮುದ್ದೆ ಮಾಡುವವರದೊಂದು ತಂಡ, ಮುದ್ದೆ ಕಟ್ಟುವವರು, ಊಟಕ್ಕೆ ಬಡಿಸುವವರು ಹೀಗೆ ಎಲ್ಲರೂ ಒಬ್ಬರಾದ ಮೇಲೊಬ್ಬರಂತೆ ಬಂದು ತಮ್ಮ ತಮ್ಮ ಸೇವೆ ಸಲ್ಲಿಸಿದರು. ಸುತ್ತಳ್ಳಿಯಲ್ಲಿ ಮುದ್ದೆ ಜಾತ್ರೆಯೆಂದೇ ಪ್ರಸಿದ್ಧಿಯಾಗಿರುವುದರಿಂದ ಎರಡ್ಮೂರು ಕ್ವಿಂಟಾಲ್ ರಾಗಿ ಬಳಸಿ ಐದಾರು ಸಾವಿರ ಮುದ್ದೆ, ಏಳೆಂಟು ಕೊಳಗದಷ್ಟು ಸಾಂಬಾರ್ ತಯಾರಿಸಿದರು.
ಒಟ್ಟಿನಲ್ಲಿ ಬಂದ ಭಕ್ತರಲ್ಲಿ ಯಾರೊಬ್ಬರೂ ಊಟ ಇಲ್ಲದೆ ಹಿಂದಿರುಗದಂತೆ ಹೊಟ್ಟೆ ತುಂಬ ಊಟ ಹಾಕುವಷ್ಟು ಅಡುಗೆ ಸಿದ್ಧವಾಗುತ್ತದೆ, ಎಷ್ಟೇ ಜನ ಬಂದರೂ, ಎಷ್ಟೇ ನೂಕು ನುಗ್ಗಲು ಇದ್ದರೂ, ಕೋಪಗೊಳ್ಳದೆ ಪ್ರೀತಿಯಿಂದ ಊಟಕ್ಕಿಟ್ಟು ಕಳುಹಿಸುತ್ತಾರೆ. ಧಾರ್ಮಿಕ ಸಮಾರಂಭದಲ್ಲಿ ಸುತ್ತಲೂ ಕಾಣ ಸಿಗದ ಮುದ್ದೆ ಊಟ ಸಿಗುವುದರಿಂದ ಇದೊಂದು ಈ ಭಾಗದ ವಿಶೇಷವಾಗಿದೆ, ಹಾಗಾಗಿಯೇ ಪುರದ ಮಠದ ಕೃತಿಕೋತ್ಸವಕ್ಕೆ ಜನ ಸಾಗರವೇ ಹರಿದು ಬರುತ್ತದೆ, ಮುದ್ದೆ ಹುಳ್ಸೊಪ್ಪು ಸಾರು ತಿಂದು ಧನ್ಯತಾ ಭಾವದಲ್ಲಿ ಹಿಂದಿರುಗಿದರು.
(ವರದಿ: ಈಶ್ವರ್ ತುಮಕೂರು)
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ: ಬಂದೋಬಸ್ತ್ಗೆ 3200 ಪೊಲೀಸರ ನಿಯೋಜನೆ, ಸಹಾಯವಾಣಿ ಕೇಂದ್ರ ಸ್ಥಾಪನೆ, ಎಲ್ಲೆಡೆ ಸಿಸಿಟಿವಿ ಕಣ್ಗಾವಲು