ಭೂಮಿ ತಾಯಿಗೆ ಹಸಿರು ಹೊದಿಕೆ ಹೊದಿಸುತ್ತ ಬದುಕು ಕಟ್ಟಿಕೊಂಡ ವೃಕ್ಷಮಾತೆ ತುಳಸಿಗೌಡ ಇನ್ನಿಲ್ಲ
Tulsi Gowda: ಪದ್ಮ ಶ್ರೀ ಪುರಸ್ಕೃತ ವೃಕ್ಷ ಮಾತೆ ಪದ್ಮಶ್ರೀ ತುಳಸಿ ಗೌಡ ಅವರು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ನಿವಾಸಿ.
ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃಕ್ಷ ಮಾತೆ ಪದ್ಮಶ್ರೀ ತುಳಸಿ ಗೌಡ (Padma Shri Tulsi Gowda) ಅವರು ಆಸ್ಪತ್ರೆಯೊಂದರಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಕಾಳಜಿ ಹೊಂದಿದ್ದ ತುಳಸಿ ಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ನಿವಾಸಿ. ಹೊನ್ನಳ್ಳಿ ಗ್ರಾಮದ ನಾರಾಯಣ ಮತ್ತು ನೀಲಿ ದಂಪತಿಯ ಪುತ್ರಿಯಾಗಿರುವ ತುಳಸಿ ಗೌಡ 1944ರಲ್ಲಿ ಜನಿಸಿದರು. ಸಾಲು ಸಾಲು ಗಿಡ ನೆಟ್ಟು ಪೋಷಿಸಿ ಬೆಳಸಿದ್ದರು. ಪರಿಸರ ಕಾಳಜಿ ಹಿನ್ನಲೆ 2020 ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. ತುಳಸಿ ಗೌಡ ನಿಧನಕ್ಕೆ ಶಾಸಕ ಸತೀಶ್ ಸೈಲ್, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಟ್ಟಿಗೆ ಮಾರಿ ಜೀವನ
ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದ ತುಳಸಿ ಗೌಡ ಅವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ತುಳಸಿ ಗೌಡ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದವರು. ಕಳೆದ 6 ದಶಕಗಳಿಂದ ಯುವ ತಲೆಮಾರಿಗೆ ಮಾರ್ಗದರ್ಶನ, ತರಬೇತಿ ನೀಡುತ್ತಿದ್ದ ತುಳಸಿ ಗೌಡ, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು. 14 ವರ್ಷಗಳ ನಂತರ ಅವರು ಸೇವೆಯಿಂದ ನಿವೃತ್ತರಾಗಿದ್ದು, ನಂತರ ಪಿಂಚಣಿ ಪಡೆದು ಜೀವನ ಸಾಗಿಸುತ್ತಿದ್ದರು.
ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ತುಳಸಿ ಗೌಡ ಅವರು ತೀವ್ರ ಬಡತನ ಅನುಭವಿಸಿದವರು. ಎರಡು ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡ ತುಳಸಿ ಅವರಿಗೆ ಔಪಚಾರಿಕ ಶಿಕ್ಷಣ ಸಿಕ್ಕಿರಲಿಲ್ಲ. ತಾಯಿಯೊಂದಿಗೆ ಕೂಲಿಗೆ ಹೋಗಿದ್ದ ತುಳಸಿ ಗೌಡ ಬಾಲ್ಯದಲ್ಲೇ ಗೋವಿಂದ ಗೌಡ ಎಂಬುವವರನ್ನು ವಿವಾಹವಾದರು. ಈ ದಾಂಪತ್ಯ ಬಹುಕಾಲ ಬಾಳಲಿಲ್ಲ. ಎಲ್ಲ ಕಷ್ಟ, ಸಂಕಷ್ಟಗಳನ್ನು ಸಹಿಸಿಕೊಂಡ ಅವರು, ಇಡೀ ರಾಷ್ಟ್ರಕ್ಕೆ ಮಾದರಿಯಾಗುವ ಜೀವನ ನಡೆಸಿದರು. ಕೇಂದ್ರ ಸರ್ಕಾರವೂ ಅವರ ಸಾಧನೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಪ್ರಶಸ್ತಿ ಪುರಸ್ಕಾರಗಳು
ತುಳಸಿ ಗೌಡ ಅವರಿಗೆ 1986ರಲ್ಲಿ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ ಸಿಕ್ಕಿದೆ. ಇದು ಅರಣ್ಯ ಸಂರಕ್ಷಣೆ, ಬಂಜರು ಭೂಮಿಯನ್ನು ಅಭಿವೃದ್ಧಿ ಪಡಿಸುವ ವ್ಯಕ್ತಿಗಳಿಗೆ ಸಂಸ್ಥೆಗಳಿಗೆ ಕೊಡ ಮಾಡುವ ಗೌರವ ಪ್ರಶಸ್ತಿ. ಇದಲ್ಲದೆ, 1999ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗೌರವವೂ ತುಳಸಿ ಗೌಡ ಅವರಿಗೆ ಸಿಕ್ಕಿದೆ. 2020ರ ನವೆಂಬರ್ 8 ರಂದು ಭಾರತ ಸರ್ಕಾರ ಪದ್ಮಶ್ರೀ ಗೌರವ ಸಲ್ಲಿಸಿದೆ.
ತುಳಸಿಗೌಡ ಅವರು ಇದೇ ವರ್ಷ ಏಪ್ರಿಲ್ನಲ್ಲಿ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡು ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಅವರು ಪ್ರತಿ ವರ್ಷ 30,000ಕ್ಕೂ ಅಧಿಕ ಸಸಿಗಳನ್ನು ನೆಟ್ಟಿದ್ದು, 4 ಲಕ್ಷ ಗಿಡ ನೆಟ್ಟಿದ್ದಾರೆ. ಯಾವುದೇ ಜಾತಿಯ ಮರಗಳ ತಾಯಿ ಮರವನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದರು. ಹಾಗಾಗಿ ತುಳಸಿ ಗೌಡ ಅವರನ್ನು ಎನ್ಸೈಕ್ಲೋಪೀಡಿಯಾ ಆಫ್ ದಿ ಫಾರೆಸ್ಟ್ ಎಂದೂ ಕರೆಯಲಾಗುತ್ತದೆ. ಪರಿಸರ ಬಗೆಗಿನ ನಿಷ್ಠೆಯನ್ನು ಪರಿಗಣಿಸಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.
ಹಾಲಕ್ಕಿ ಸಮುದಾಯದವರ ವೃಕ್ಷ ದೇವತೆ, ಪರಿಸರ ಪ್ರಿಯರ ನಡೆದಾಡುವ ಅರಣ್ಯ ವಿಶ್ವಕೋಶ
ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರು ಅವರದ್ದೇ ಆದ ಹಾಲಕ್ಕಿ ಸಮುದಾಯದವರ ಪಾಲಿಗೆ ವೃಕ್ಷದೇವತೆ. ಇನ್ನು ಪರಿಸರ ಪ್ರಿಯರಿಗೆ “ನಡೆದಾಡುವ ಅರಣ್ಯ ವಿಶ್ವಕೋಶ. ಅವರಿಗೆ ಕಾಡು ಮತ್ತು ಅಲ್ಲಿರುವ ಗಿಡ ಮರಗಳು ಎಲ್ಲರೂ ಚಿರಪರಿಚಿತ. ಅವುಗಳ ಕುರಿತ ತಿಳಿವಳಿಕೆ ಇತರರ, ಯುವ ತಲೆಮಾರಿನ ಜ್ಞಾನ ದಾಹ ತೀರಿಸುವಷ್ಟಿತ್ತು. ಕಾಡಿನ ಮರಗಳನ್ನು ಗುರುತಿಸುವ ಅವರ ಸಾಮರ್ಥ್ಯ ಕಂಡು ಬೆರಗಾಗದವರು ಇಲ್ಲ. ಗಿಡ ಮರಗಳ ಗಾತ್ರ ನೋಡಿ ಅವುಗಳ ವಯಸ್ಸು ಲೆಕ್ಕ ಹಾಕಿ ಹೇಳಬಲ್ಲವರಾಗಿದ್ದರು ತುಳಸಿ ಗೌಡ. ಕಾಡು ಮರಗಳ ಬೀಜ ಸಂಗ್ರಹಣೆಯಲ್ಲಿ ಪಳಗಿದವರಾಗಿದ್ದರು ಅವರು. ಹಾಲಕ್ಕಿ, ಒಕ್ಕಲಿಗ ಸಮುದಾಯದವರು ಮಣ್ಣಿನ ಮಕ್ಕಳು ಎಂಬುದನ್ನು ಅಚ್ಚುಕಟ್ಟಾಗಿ ನಿರೂಪಿಸಿದವರು ತುಳಸಿಗೌಡ.