Doctors Protest; ತುಮಕೂರು ಜಿಲ್ಲೆಯಲ್ಲೂ ವೈದ್ಯರ ಮುಷ್ಕರ ಯಶಸ್ವಿ, ಹೊರ ರೋಗಿ ಸೇವೆ ಸಿಗದೆ ಪರದಾಡಿದ ರೋಗಿಗಳು
Aug 17, 2024 08:58 PM IST
ವೈದ್ಯರ ಮುಷ್ಕರದ ಕಾರಣ ತುಮಕೂರಿನಲ್ಲಿ ಆಸ್ಪತ್ರೆಯ ಹೊರ ರೋಗಿ ವಿಭಾಗ ಮುಚ್ಚಲ್ಪಟ್ಟಿದ್ದು, ಒಪಿಡಿ ಸೇವೆ ಲಭ್ಯವಿಲ್ಲದಿರುವುದು ಕಂಡುಬಂತು.
Tumakuru Doctors Protest; ಕೋಲ್ಕತ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಹತ್ಯೆ ಖಂಡಿಸಿ ಇಂದು ದೇಶಾದ್ಯಂತ ವೈದ್ಯರು ಮುಷ್ಕರ ನಡೆಸಿದರು. ಇದರ ಭಾಗವಾಗಿ ತುಮಕೂರು ಜಿಲ್ಲೆಯಲ್ಲೂ ವೈದ್ಯರು ನಡೆಸಿದ ಮುಷ್ಕರ ಯಶ್ವಸ್ವಿಯಾಗಿದೆ. ಹೊರ ರೋಗಿ ಸೇವೆ ಸಿಗದೆ ರೋಗಿಗಳು ಪರದಾಡಿದರು. (ವರದಿ- ಈಶ್ವರ್, ತುಮಕೂರು)
ತುಮಕೂರು: ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯ ಅಮಾನುಷ ಹತ್ಯೆ ಮತ್ತು ಪ್ರತಿಭಟನೆ ನಿರತ ವೈದ್ಯರನ್ನು ಗುರಿಯಾಗಿಸಿಕೊಂಡು ಗುಂಪೊಂದು ಹಲ್ಲೆ ಮಾಡಿ ಅರಾಜಕತೆ ಮೆರೆದಿರುವುದನ್ನು ಖಂಡಿಸಿ ಇಂದು (ಆಗಸ್ಟ್ 17) ತುಮಕೂರು ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಿತು.
ತುರ್ತು ಸೇವೆ ವಿಭಾಗ ಹೊರತು ಪಡಿಸಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಹೊರ ರೋಗಿ (ಓಪಿಡಿ) ವೈದ್ಯಕೀಯ ಸೇವೆ ಬಂದ್ ಮಾಡಿ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪರಿಣಾಮ, ಶನಿವಾರ ಬೆಳಗ್ಗೆ 6 ಗಂಟೆಯಿಂದ ಜಿಲ್ಲೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಕ್ಲಿನಿಕ್‌ಗಳು ಓಪಿಡಿ ಬಂದ್ ಆಗಿದ್ದವು. ವೈದ್ಯರ ಮುಷ್ಕರದ ಕಾರಣ ಭಾನುವಾರ ಬೆಳಗ್ಗೆ 6 ಗಂಟೆವರೆಗೆ ಯಾವುದೇ ರೀತಿಯ ಓಪಿಡಿ ಸೇವೆಗಳು ಜಿಲ್ಲೆಯಾದ್ಯಂತ ಲಭ್ಯ ಇರುವುದಿಲ್ಲ.
ಒಪಿಡಿ ಬಂದ್ ಆದ ಕಾರಣ ರೋಗಿಗಳ ಪರದಾಟ
ತುಮಕೂರು ಜಿಲ್ಲಾ ಆಸ್ಪತ್ರೆಯ ಹೊರ ರೋಗಿ ವಿಭಾಗ, ನಗರದ ಸಿದ್ದಗಂಗಾ ಆಸ್ಪತ್ರೆ, ಸಿದ್ದಾರ್ಥ ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿರುವುದರಿಂದ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಇನ್ನಿತರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡುವಂತಾಯಿತು. ಮೊದಲೇ ಘೋಷಿಸಲ್ಪಟ್ಟ ಮುಷ್ಕರವಾದ ಕಾರಣ ಇಂದು ಹೊರ ರೋಗಿಗಳ ಸಂಖ್ಯೆಯೂ ಕಡಿಮೆ ಇತ್ತು. ಅನಿವಾರ್ಯವಾಗಿ ವೈದ್ಯರನ್ನು ಕಾಣಬೇಕಾದವರು ಆಸ್ಪತ್ರೆ ಬಾಗಿಲಿಗೆ ಬಂದಿದ್ದರು. ಆದರೆ ವೈದ್ಯರು ಇಲ್ಲದ ಕಾರಣ ನಿರಾಸೆಗೊಳಗಾಗಿ ಹಿಂದಿರುಗಿದರು.
ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ಸಿಬ್ಬಂದಿ ಅತಿ ಸೂಕ್ಷ್ಮ ಪರಿಸ್ಥಿತಿಯಲ್ಲಿ ಆತಂಕದಿಂದ ತಮ್ಮ ಸೇವಾ ಕ್ಷೇತ್ರದಲ್ಲಿ ಅಭದ್ರತೆಯೊಂದಿಗೆ ಕರ್ತವ್ಯ ನಿರ್ವಹಿಸುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ. ಆದ್ದರಿಂದ ಮಾನವೀಯ ಕಾಳಜಿಯ ಸೇವಾ ಕ್ಷೇತ್ರವನ್ನು ಕಲುಷಿತಗೊಳಿಸುವ ಈ ಪ್ರಯತ್ನಗಳನ್ನು ಮೊಳೆಕೆಯಲ್ಲೆ ನಿಷ್ಟ್ರಿಯಗೊಳಿಸದಿದ್ದಲ್ಲಿ ಮುಂದೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಹೆಚ್.ವಿ.ರಂಗಸ್ವಾಮಿ ಹೇಳಿದರು.
ಈ ನಿಟ್ಟಿನಲ್ಲಿ ಅಗತ್ಯ ಎಲ್ಲಾ ಕ್ರಮಗಳನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಲು ನಮ್ಮ ಹಕ್ಕೊತ್ತಾಯ ದಾಖಲಿಸಲು ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವ ಸಲುವಾಗಿ ಎಲ್ಲ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಸ್ಥಗಿತಗೊಳಿಸಲಾಗಿದೆ, ಈ ಅವಧಿಯಲ್ಲಿ ತುರ್ತು ಮತ್ತು ಅಗತ್ಯ ಸೇವೆ ಲಭ್ಯ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.
ಸಿದ್ಧಗಂಗಾ ಆಸ್ಪತ್ರೆ ಓಪಿಡಿ ಬಂದ್
ತುಮಕೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿರುವ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಕೂಡ ಬಂದ್ ಆಗಿದ್ದವು. ಮೆಡಿಕಲ್‌ಗಳು ಕೂಡ ಬಂದ್ ಆಗಿದ್ದು ವೈದ್ಯರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಕಂಡುಬಂತು.
ಕೊಲ್ಕತ್ತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆಯ ಮೇಲೆ ನಡೆದ ಅತಿಕ್ರೂರ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಒಂದು ದಿನದ ಆರೋಗ್ಯ ಸೇವೆಗಳ ಬಂದ್‌ಗೆ ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನ ಸಂಸ್ಥೆ (ಡಾ.ಶಿವಕುಮಾರ ಸ್ವಾಮೀಜಿ ಆಸ್ಪತ್ರೆ ಮತ್ತು ಸಿದ್ಧಗಂಗಾ ಆಸ್ಪತ್ರೆ) ಬೆಂಬಲ ವ್ಯಕ್ತಪಡಿಸಿದೆ. ಆದಾಗ್ಯೂ, ಎಂದಿನಂತೆ ತುರ್ತು ಸೇವೆಗಳ ಲಭ್ಯವಿದ್ದು, ದೇಶಾದ್ಯಂತ ನಡೆಯುತ್ತಿರುವ ವೈದ್ಯರ ಮುಷ್ಕರ ಬೆಂಬಲಿಸಲು ಸಹಕರಿಸುವಂತೆ ಆಸ್ಪತ್ರೆಯ ವೈದ್ಯರು ಮನವಿ ಮಾಡಿದ್ದಾರೆ.
(ವರದಿ- ಈಶ್ವರ್, ತುಮಕೂರು)