Vijaypura News: ಖ್ಯಾತ ಕೃಷಿ ವಿಜ್ಞಾನಿ ಅಯ್ಯಪ್ಪನ್ ಅವರಿಗೆ ಸಿಂದಗಿ ಸಾರಂಗಮಠದ ಭಾಸ್ಕರಚಾರ್ಯ ಪ್ರಶಸ್ತಿ
Oct 06, 2024 07:11 PM IST
ಸಿಂದಗಿ ಸಾರಂಗ ಮಠ ಕೊಡಮಾಡುವ ಭಾಸ್ಕರಾಚಾರ್ಯ ಪ್ರಶಸ್ತಿಗೆ ಕೃಷಿ ವಿಜ್ಞಾನಿ ಎಸ್ ಅಯ್ಯಪ್ಪನ್ ಆಯ್ಕೆಯಾಗಿದ್ದಾರೆ.
- ವಿಜಯಪುರ ಜಿಲ್ಲೆ ಸಿಂದಗಿಯ ಸಾರಂಗಮಠವು ವಿಜ್ಞಾನ ಹಾಗೂ ಕೃಷಿ ಕ್ಷೇತ್ರದ ಸಾಧಕರಿಗೆ ಭಾಸ್ಕರಾಚಾರ್ಯ ಪ್ರಶಸ್ತಿ ನೀಡುತ್ತಾ ಬಂದಿದ್ದು. ಈ ಬಾರಿ ಕೃಷಿ ವಿಜ್ಞಾನಿ ಡಾ.ಎಸ್.ಅಯ್ಯಪ್ಪನ್ ಅವರನ್ನು ಆಯ್ಕೆ ಮಾಡಿದೆ.
ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗಮಠ ಪ್ರತಿ ವರ್ಷ ನೀಡುವ ಖ್ಯಾತ ಖಗೋಳಶಾಸ್ತ್ರಜ್ಞ ಭಾಸ್ಕರಾಚಾರ್ಯ 2 ಅವರ ಹೆಸರಿನ ಮೇಲೆ ಕೊಡ ಮಾಡುವ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಈ ಬಾರಿ ಅಂತರಾಷ್ಟ್ರೀಯ ಖ್ಯಾತ ಕೃಷಿ ತಜ್ಞ ಡಾ. ಎಸ್. ಅಯ್ಯಪ್ಪನ್ ಅವರಿಗೆ ಲಭಿಸಿದೆ. ಮೈಸೂರು ಸಮೀಪದ ಚಾಮರಾಜನಗರ ಜಿಲ್ಲೆ ಯಳಂದೂರು ಮೂಲದವರಾದ ಸುಬ್ಬಣ್ಣ ಅಯ್ಯಪ್ಪನ್ ಅಂತರಾಷ್ಟ್ರೀಯ ಖ್ಯಾತ ಕೃಷಿ ತಜ್ಞರಲ್ಲಿ ಒಬ್ಬರು. ಕೃಷಿ ಸಂಶೋಧನಾ ಮತ್ತು ಶಿಕ್ಷಣ ಇಲಾಖೆ (ಡೇರ್ ) ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನ ಮಹಾನಿರ್ದೇಶಕರಾಗಿ ಭಾರತ ಸರ್ಕಾರದಲ್ಲಿ ಸೇವೆ ಸಲ್ಲಿಸಿದವರು.
ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್ ನವದೆಹಲಿಯ ಅಧ್ಯಕ್ಷರಾಗಿ, ಅಟಲ್ ಬಿಹಾರಿ ವಾಜಪೇಯಿ ಚೇರ್ ಆನ್ ಟೆಕ್ನಾಲಜಿ ದೂರ ದೃಷ್ಟಿ ಮತ್ತು ನೀತಿ ಯೋಜನೆ, ನವಾಡ್ ಚೇರ್ ಪ್ರೊಫೆಸರ್, ಇಂಪಾಲದ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾಗಿ, ಹೈದರಾಬಾದಿನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಾಗಿ, ಕೇಂದ್ರ ಒಳನಾಡಿನ ಮೀನುಗಾರಿಕೆ, ರಿಸರ್ಚ್ ಇನ್ಸ್ಟಿಟ್ಯೂಟ್ ಬ್ಯಾರಕಪುರ್ ನ ಹಿರಿಯ ವಿಜ್ಞಾನಿಯಾಗಿ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕೃಷಿ ಸಂಸ್ಥೆಗಳ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸುಮಾರು 125ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳನ್ನು, 23 ಪಿಎಚ್ಡಿಗಾಗಿ ಮಾರ್ಗದರ್ಶನ ನೀಡಿದ ಅಯ್ಯಪ್ಪನ್ ಅವರಿಗೆ ಅವರ ವೃತ್ತಿಪರ ಸಾಧನೆಗಾಗಿ ಐಸಿಎಆರ್ ಪ್ರಶಸ್ತಿ, ಅನಿಮಲ್ ಸೈನ್ಸ್ ಪ್ರಶಸ್ತಿ, ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸ್ ಪ್ರಶಸ್ತಿ, ಏಷ್ಯನ್ ಫಿಶರೀಸ್ ಸೊಸೈಟಿ ಕೊಡಮಾಡುವ ಇಂಡಿಯನ್ ಬ್ರಾಂಚ್ ಪ್ರಶಸ್ತಿ, ಭಾರತ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಸಾಫ್ಟಿ ಪ್ರಶಸ್ತಿ, ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರ್ ಬಯೋಕೆಮಿಸ್ಟ್ರಿ ಪ್ರಶಸ್ತಿ ಹೀಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡ ಕೀರ್ತಿ ಇವರಿಗಿದೆ.
ಸುಮಾರು 45ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಮೀನುಗಾರಿಕೆ ಮತ್ತು ಕೃಷಿ ತಂತ್ರಜ್ಞಾನದ ಕುರಿತಾದ ಹಲವು ಅನುಭವಗಳನ್ನು ಹೊಂದಿದ್ದಾರೆ.
ಈ ಶ್ರೇಷ್ಠ ಅಂತರಾಷ್ಟ್ರೀಯ ವಿಜ್ಞಾನಿಗೆ ಸಾರಂಗಮಠದಿಂದ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆ ತರುವ ವಿಚಾರವಾಗಿದೆ ಎಂದು ಸಾರಂಗ ಮಠದ ಪ್ರಭು ಶ್ರಿ ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಅಡಿಯಲ್ಲಿ ಪೂಜ್ಯ ಸ್ವಾಮೀಜಿಯವರ ಮಹೋನ್ನತ ದರ್ಶನ, ವಿಜಯಪುರ ಜಿಲ್ಲೆಯ ಮಹಾನ್ ಗಣಿತಜ್ಞ ಭಾಸ್ಕರಾಚಾರ್ಯ-II ಅವರ ಸ್ಮರಣಾರ್ಥ ಪ್ರತಿ ವರ್ಷ ವಿಜ್ಞಾನ ಕ್ಷೇತ್ರದ ಖ್ಯಾತ ವಿಜ್ಞಾನಿಗಳಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಪ್ರಮಾಣಪತ್ರವನ್ನು ನೀಡಲಾಗುತ್ತದೆ.
2016 ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಸಿಎನ್‌ಆರ್ ರಾವ್, 2017 ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ: ಯುಆರ್ ರಾವ್, 2018 ರಲ್ಲಿ ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಎಸ್ ಎ ಪಾಟೀಲ್, 2019ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ: ಕಸ್ತೂರಿ ರಂಗನ್ ಮತ್ತು 2023 ರಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.